ಚಾಮರಾಜನಗರ: ಕೊಳ್ಳೇಗಾಲ (Kollegala) ಮತ್ತು ಹನೂರು ಕ್ಷೇತ್ರಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮ ನೆರವೇರಿಸಿದರು. ಇನ್ನೂ ಸಿಎಂ ಜೊತೆಗೆ ಸಚಿವರಾದ ಸೋಮಣ್ಣ, ಅಶೋಕ್ (R. Ashok) , ಶಾಸಕರಾದ ನರೇಂದ್ರ, ಎನ್. ಮಹೇಶ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ನಿಮ್ಮನ್ನೆಲ್ಲ ನೋಡಿ ಹೃದಯ ತುಂಬಿದೆ. ನಿಮ್ಮ ಪ್ರೀತಿಯಿಂದ ನನ್ನನ್ನು ಗೆದ್ದಿದ್ದೀರಾ ಎಂದು ಸಂತಸ ವ್ಯಕ್ತಪಡಿಸಿದರು. ನಂತರ 1500 ಗಡಿ ಗ್ರಾಮಗಳ ಅಭಿವೃದ್ಧಿಗೆ ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ಮಹದೇಶ್ವರ ಬೆಟ್ಟ (Male Mahadeshwara Hills) ರಸ್ತೆ ಅಭಿವೃದ್ಧಿಗೆ 100 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಘೋಷಿಸಿದರು.
ಹನೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಷಣ
ಚಾಮರಾಜನಗರದ ಹನೂರಿನಲ್ಲಿ ಸಾರ್ವಜನಿಕರನ್ನುದ್ದೇಶಿ ಭಾಷಣ ಮಾಡಿದ ಮುಖ್ಯಮಂತ್ರಿಗಳು, ನಿಮ್ಮನ್ನೆಲ್ಲ ನೋಡಿ ಹೃದಯ ತುಂಬಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಎಲ್ಲರೂ ಸೇರಿ ಅಭಿವೃದ್ಧಿಗೆ ಆಶೀರ್ವದಿಸಲು ಬಂದಿದ್ದೀರಾ. ನಿಮ್ಮ ಒಳ್ಳೆಯತನ, ಕಣ್ಣಲ್ಲಿರುವ ಭಾವನೆ ನನ್ನ ಮನ ಮುಟ್ಟಿದೆ. ಚಾಮರಾಜನಗರಕ್ಕೆ ಹೋಗಬಾರದು ಅಂತ ಬಹಳ ಜನ ಹೇಳುತ್ತಾರೆ. ಆದರೆ ಇಲ್ಲಿಗೆ ಬಾರದವರು ಜೀವನದಲ್ಲಿ ದೊಡ್ಡ ಕೊರತೆ ಅನುಭವಿಸುತ್ತಾರೆ ಎಂದು ಹೇಳುತ್ತೇನೆ. ಇಲ್ಲಿಗೆ ಬಂದಿರುವುದಕ್ಕೆ ನಾನೇ ಪುಣ್ಯವಂತ ಎಂದು ಹೇಳಿದರು.
1,500 ಗಡಿ ಗ್ರಾಮಗಳ ಅಭಿವೃದ್ಧಿಗೆ ಕಾರ್ಯಕ್ರಮ
ನಂತರ, ಗಡಿಜಿಲ್ಲೆಗಳ ಅಭಿವೃದ್ಧಿಗೆ ಪ್ರಾಶಸ್ತ್ಯವನ್ನು ನಮ್ಮ ಸರ್ಕಾರ ಕೊಟ್ಟಿದೆ. 1,500 ಗಡಿ ಗ್ರಾಮಗಳ ಅಭಿವೃದ್ಧಿಗೆ ಕಾರ್ಯಕ್ರಮ ಹಾಕಿಕೊಂಡಿದ್ದೇವೆ. 100 ಕೋಟಿ ರೂ.ಗಳನ್ನು ಗಡಿ ಗ್ರಾಮಗಳ ಅಭಿವೃದ್ಧಿ ಗೆ ಬಿಡುಗಡೆ ಮಾಡುತ್ತೇನೆ. ಪ್ರತಿ ಗ್ರಾಮದ ಅಭಿವೃದ್ಧಿಯೇ ನಮ್ಮ ಸಂಕಲ್ಪ. ರಾಜ್ಯದಲ್ಲಿರುವ ಗಡಿ ಭಾಗದ ಜನರ ಭಾವನೆಗಳ ಅರಿತು ಕೆಲಸ ಮಾಡುತ್ತಿರುವುದರಿಂದ ಗಡಿ ಆಚೆಗಿನ ಜನರು ನಮ್ಮ ಕಡೆ ನೋಡುತ್ತಿದ್ದಾರೆ. ಮಾದೇಶ್ವರನ ಆಶೀರ್ವಾದಿಂದ ನೀವು ಬದುಕುತ್ತಿರುವ ಭೂಮಿ ಪುಣ್ಯ ಭೂಮಿ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪ್ರದೇಶವಾಗಿಸಲು ನಾವು ಸಿದ್ಧರಿದ್ದೇವೆ. ಇಲ್ಲಿನ ಭೂಮಿಗೆ ನೀರಿನ ವ್ಯವಸ್ಥೆ ಮಾಡಿದರೆ, ರೈತರ ಬೆವರಿನ ಹನಿ ಅದಕ್ಕೆ ಸೇರಿದರೆ ಬಂಗಾರದ ಬೆಳೆಯನ್ನು ಭೂಮಿತಾಯಿ ಕೊಡುತ್ತಾಳೆ ಎಂದರು.
ಮಹದೇಶ್ವರ ಬೆಟ್ಟ ರಸ್ತೆಗೆ 100 ಕೋಟಿ ರೂ. ಘೋಷಣೆ
ನಿಮ್ಮ ಪ್ರೀತಿಯಿಂದ ನನ್ನ ಮನಸ್ಸನ್ನು ಗೆದ್ದಿದ್ದೀರಾ. ಅಭಿವೃದ್ಧಿಗಾಗಿ ನಾನು ಸದಾ ಬದ್ಧನಾಗಿದ್ದೇನೆ. ಚಾಮರಾಜನಗರಕ್ಕೆ ಎಷ್ಟು ಸಾರಿ ಕರೆದರೂ ಬರುತ್ತೇನೆ. ನಿಮ್ಮ ಸ್ಮೃತಿ ಪಟಲದಲ್ಲಿ ನಾನು ಇರುತ್ತೇನೆ. ಜನಸ್ಪಂದನೆಯ ಸರ್ಕಾರ ಇದೆ. ಜನ ಶಕ್ತಿಯ ಸರ್ಕಾರ ಇದೆ. ನಿಮ್ಮ ಶಕ್ತಿಯನ್ನು ಗುಲಗಂಜಿಯಷ್ಟು ಸ್ವಂತಕ್ಕೆ ಬಲಸಿಕೊಳ್ಳಲ್ಲ. ಮಹದೇಶ್ವರನ ಆಶೀರ್ವಾದ ಪಡೆಯುತ್ತೇನೆ. ದೇವರ ಅನುಗ್ರಹದಿಂದ ರಾಜ್ಯದ ಅಭಿವೃದ್ಧಿ ಮಾಡುತ್ತೇನೆ. ಮಹದೇಶ್ವರ ಬೆಟ್ಟ ರಸ್ತೆಗೆ 100 ಕೋಟಿ ರೂ. ಘೋಷಿಸುತ್ತಿದ್ದೇನೆ. ಅರವತ್ತು ತಿಂಗಳಲ್ಲಿ ಒಂದು ತಿಂಗಳು ರಾಜಕೀಯ ಮಾಡೋಣ. ಉಳಿದ ಅವಧಿಯಲ್ಲಿ ಕೆಲಸ ಮಾಡೋಣ ಎಂದು ತಿಳಿಸಿದರು.
ನಾನು ಸಿಎಂ ಆದ ನಾಲ್ಕು ಗಂಟೆಯಲ್ಲಿ ವಿದ್ಯಾನಿಧಿ ಘೋಷಣೆ ಮಾಡಿದೆ. ಎಲ್ಲ ಮಕ್ಕಳು ವಿದ್ಯಾವಂತರಾಗಬೇಕು. ರೈತ, ಕೂಲಿ, ನೇಕಾರ, ಟ್ಯಾಕ್ಸಿ ಡ್ರೈವರ್ ಮಕ್ಕಳಿಗೆ ಯೋಜನೆ ಮಾಡಿದ್ದೇವೆ. ಕಾಯಕ ಯೋಜನೆಯಡಿ 50 ಸಾವಿರ ರೂ. ಪ್ರೋತ್ಸಾಹ ಧನ ನೀಡುತ್ತಿದ್ದೇವೆ. 5 ಲಕ್ಷ ಮಹಿಳೆಯರಿಗೆ ಹಾಗೂ ಯುವಕರಿಗೆ ಉದ್ಯೋಗ ಕೊಟ್ಟಿದ್ದೇವೆ ಎಂದ ಹೇಳಿದರು.
ಇದನ್ನೂ ಓದಿ: CM Bommai: ರಾಷ್ಟ್ರೀಯ ನಾಯಕರೇ ಬಂದು ಪ್ರಚಾರ ಮಾಡ್ತಾರೆ, ಆದರೂ ಸಿಎಂ ಬೊಮ್ಮಾಯಿಗೆ ಟೆನ್ಷನ್, ಟೆನ್ಷನ್!
ನಾನೇನು ಸಿಎಂ ಆಗಬೇಕು ಅಂತ ಕನಸು ಕಂಡಿರಲಿಲ್ಲ
ಕೇವಲ ಭಾಷಣದಿಂದ ಸಾಮಾಜಿಕ ನ್ಯಾಯ ಆಗಲ್ಲ. ಕೆಲಸ ಮಾಡಿ ತೋರಿಸಬೇಕು. ಭಾಷಣದಿಂದ ಹೊಟ್ಟೆ ತುಂಬಲ್ಲ. ಎಷ್ಟು ವರ್ಷ ಅಧಿಕಾರದಲ್ಲಿ ಇರುತ್ತೇವೆ ಎಂಬುವುದು ಮುಖ್ಯವಲ್ಲ. ಸಿಎಂ ಆಗುವುದಕ್ಕೆ ಅಂತ ಹುಟ್ಟಿದವರು ಬಹಳ ಜನ ಇದ್ದಾರೆ, ಆದರೆ ನಾನೇನು ಸಿಎಂ ಆಗಬೇಕು ಅಂತ ಕನಸು ಕಂಡಿರಲಿಲ್ಲ. ದೇವರು ಕೊಟ್ಟಿರುವ ಅವಕಾಶ ಬಳಸಿಕೊಳ್ಳಬೇಕು, ಎಲ್ಲ ಟೀಕೆ ಟಿಪ್ಪಣಿಗಳನ್ನು ಯಶಸ್ಸಿನ ಮೆಟ್ಟಿಲಾಗಿ ಪರಿವರ್ತನೆ ಮಾಡಿಕೊಳ್ಳುತ್ತೇನೆ. ಯಾವುದಕ್ಕು ಅಂಜೋದಿಲ್ಲ, ಅಳಕೋದಿಲ್ಲ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ