ಸಕಾಲಕ್ಕೆ ಅಂಗಾಂಗಗಳು ಸಿಗದೇ ಅದೆಷ್ಟೋ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಅದೆಷ್ಟೋ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಂದಿ ತಮ್ಮ ಜೀವ ಉಳಿಸಿಕೊಳ್ಳಲು ಅಂಗಾಂಗಗಳ ಎದುರು ನೋಡುತ್ತಿದ್ದಾರೆ. ಈ ಕುರಿತು ಅನೇಕ ರೀತಿಯ ಪ್ರಚಾರ, ಅರಿವು ಕಾರ್ಯಕ್ರಮಗಳನ್ನು ನಡೆಸಿದರೂ ಅಂಗಾಂಗ ದಾನಕ್ಕೆ ಮುಂದಾಗುವ ಜನ ಬೆರಳೆಣಿಕೆಯಷ್ಟು. ಇದೇ ಉದ್ದೇಶದಿಂದ ಇಂದು ವಿಶ್ವ ಅಂಗಾಂಗ ದಿನ ಆಚರಣೆ ಮಾಡಲಾಗುತ್ತಿದೆ. ಈ ವಿಶೇಷ ದಿನದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅತ್ಯಂತ ಮಹತ್ವದ ನಿರ್ಧಾರ ಕೈ ಗೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ. ಮಣ್ಣಲ್ಲಿ ಮಣ್ಣಾಗಿ ಹೋಗುವ ದೇಹದ ಅಂಗಾಂಗಳಿಂದ ಇನ್ನೊಂದು ಜೀವವನ್ನು ಉಳಿಸಲು ಸಾಧ್ಯವಿದೆ ಅಂತಹ ಅಂಗಾಂಗಳ ದಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಾಗಿದ್ದಾರೆ. ವಿಶ್ವ ಅಂಗಾಂಗ ದಿನದ ಪ್ರಯುಕ್ತ ಇಂದು ಅವರು ತಮ್ಮ ಅಂಗಾಂಗಗಳ ದಾನಕ್ಕೆ ಹೆಸರು ನೊಂದಾಯಿಸುವ ಪ್ರತಿಜ್ಞೆ ಸ್ವೀಕರಿಸಿದ್ದಾರೆ . ಈ ಮೂಲಕ ರಾಜ್ಯದ ಜನರಿಗೂ ಅಂಗಾಂಗ ದಾನಕ್ಕೆ ಮುಂದಾಗುವಂತೆ ಮನವಿ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿರುವ ಅವರು, ಇಂದು ವಿಶ್ವ ಅಂಗಾಂಗ ದಿನವಾಗಿದ್ದು, ನಾನು ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದು, ಇತರರು ಈ ಬಗ್ಗೆ ಸಂಕಲ್ಪ ಹೊಂದಬೇಕು. ಈ ಮೂಲಕ ಇನ್ನೊಬ್ಬರ ಜೀವಕ್ಕೆ ಆಸರೆಯಾಗಬೇಕು. ಅಂಗಾಂಗದಾನದಿಂದ ಮತ್ತೊಂದು ಜೀವ ಉಳಿಯುತ್ತದೆ ಎಂದರೆ ಯಾಕೆ ಈ ನಿಟ್ಟಿನಲ್ಲಿ ನಾವು ಮುಂದಾಬಾರದು ಎಂದಿದ್ದಾರೆ.
ಈಗಾಗಲೇ ಅನೇಕ ಜನರಲ್ಲಿ ಈ ಬಗ್ಗೆ ಅರಿವು ಮೂಡಿದ್ದು, ಅಂಗಾಂಗ ದಾನಕ್ಕೆ ಮುಂದಾಗುತ್ತಿದ್ದಾರೆ, ಲಿವರ್, ಕಿಡ್ನಿ ಮತ್ತಿತ್ತರ ಅಂಗಾಂಗಗಳು ನಮ್ಮ ಮರಣದ ನಂತರವೂ ಮತ್ತೊಬ್ಬರಿಗೆ ಜೀವ ನೀಡುತ್ತದೆ. ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಬೇಕು. ಈ ಮೂಲಕ ಸಾವಿರಾರು ಜನರ ಪ್ರಾಣವನ್ನು ನಾವು ಉಳಿಸಬಹುದು ಎಂದು ತಿಳಿಸಿದರು.
ಇದನ್ನು ಓದಿ: ನಾನು ಶ್ರೀ ಕೃಷ್ಣನ ಭಕ್ತ; ಮಠಕ್ಕೆ ಭೇಟಿ ನೀಡಲೆಂದೇ ಉಡುಪಿಗೆ ಬರುತ್ತಿದೆ ಎಂದ ಸಿಎಂ
ಇದೇ ವೇಳೆ ಜೀವವನ್ನು ಉಳಿಸಿ, ಹೊಸ ಜೀವನ ಕಟ್ಟಿ ಕೊಡುವ ಅಂಗಾಂಗ ದಾನದ ಮಹತ್ವ ಮತ್ತು ಅಗತ್ಯತೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ಎಲ್ಲರೂ ಪ್ರಯತ್ನಿಸೋಣ. ಈ ವಿಶ್ವ ಅಂಗಾಂಗ ದಾನ ದಿನದಂದು, ಅಂಗಾಂಗ ದಾನದ ಬಗ್ಗೆ ಇರುವ ಸಂಶಯಗಳನ್ನು, ಹಿಂಜರಿಕೆಯನ್ನು ನಿವಾರಿಸುವ ದೃಢ ಸಂಕಲ್ಪ ತಾಳೋಣ ಎಂದು ಅವರು ಕರೆ ನೀಡಿದರು.
ಈ ಹಿಂದೆ ವರನಟ ಡಾ. ರಾಜ್ ಕುಮಾರ್ ಕೂಡ ತಮ್ಮ ಸಾವಿನ ಬಳಿಕ ಕಣ್ಣು ದಾನ ಮಾಡಿ ಮಾದರಿಯಾಗಿದ್ದರು. ಅವರ ಸಾವಿನ ಬಳಿಕ ಅವರ ಲಕ್ಷಾಂತರ ಮಂದಿ ಅಭಿಮಾನಿಗಳು ಕಣ್ಣು ದಾನ ಮಾಡುವ ಸಂಕಲ್ಪ ಕೈಗೊಂಡಿದ್ದರು. ಈಗ ಸಿಎಂ ಕೂಡ ಅಂಗಾಂಗ ದಾನ ಮಾಡುವ ಮೂಲಕ ಅನೇಕರಿಗೆ ಮಾದರಿಯಾಗಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ