ನವದೆಹಲಿ(ಜು. 29): ಮುಖ್ಯಮಂತ್ರಿ ಬದಲಾವಣೆಯಾದ ಬೆನ್ನಲ್ಲೇ ಸಚಿವ ಸಂಪುಟಕ್ಕೆ ಸೇರುವ ಕಸರತ್ತು ಸರ್ಕಸ್ಸುಗಳು ಜೋರಾಗಿವೆ. ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿ ದಂಡಯಾತ್ರೆಯನ್ನೂ ಆರಂಭಿಸಿದ್ದಾರೆ. ಎಂಟು ಬಾರಿ ಶಾಸಕ ಹಾಗೂ ನಾಲ್ಕು ಬಾರಿ ಸಚಿವರಾಗಿರುವ ಉಮೇಶ್ ಕತ್ತಿ ಹಿರಿತನವನ್ನು ಪರಿಗಣಿಸಿ ತಮಗೆ ಮಂತ್ರಿ ಸ್ಥಾನವನ್ನು ಕೊಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲದೆ ಸ್ನೇಹಿತರಾಗಿರುವ ಸಿಎಂ ಬಸವರಾಜ ಬೊಮ್ಮಾಯಿ ನನ್ನನ್ನು ಬಿಟ್ಟು ಮಂತ್ರಿ ಮಂಡಲ ರಚಿಸುವುದಿಲ್ಲ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ದೆಹಲಿಗೆ ಬರುತ್ತಾರೆ, ಹೈಕಮಾಂಡ್ ನಾಯಕರಾದ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡ ಮತ್ತಿತರರನ್ನು ಭೇಟಿ ಆಗಲಿದ್ದಾರೆ ಎನ್ನುವ ಮಾಹಿತಿ ಇದ್ದು, ಇದಕ್ಕೂ ಮೊದಲೇ ಉಮೇಶ್ ಕತ್ತಿ ಹೈಕಮಾಂಡ್ ಭೇಟಿಗಾಗಿ ಬುಧವಾರ ರಾತ್ರಿಯೇ ದೆಹಲಿಗೆ ಧಾವಿಸಿದ್ದಾರೆ. ಇನ್ನೂ ಕೆಲವರು ಇಂದು ರಾತ್ರಿ ಅಥವಾ ನಾಳೆ ದೆಹಲಿಗೆ ಬರುವ ಸಾಧ್ಯತೆ ಇದೆ.
ದೆಹಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಉಮೇಶ್ ಕತ್ತಿ, 'ಬೊಮ್ಮಾಯಿ ಸರಕಾರದಲ್ಲಿ ಮಂತ್ರಿ ಆಗುತ್ತೇನೆ ಎಂಬ ನಂಬಿಕೆ ಇದೆ. ಇಲ್ಲದಿದ್ದರೆ ಶಾಸಕನಾಗಿ ಮುಂದುವರೆಯುತ್ತೇನೆ. ನಮ್ಮ ಪಕ್ಷದ ವರಿಷ್ಠರ ಭೇಟಿಗೆ ಸಮಯ ಕೇಳಿದ್ದೇನೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಭೇಟಿಗೆ ಸಮಯ ಕೇಳಿದ್ದೇನೆ. ಅವಜಾಶ ಸಿಕ್ಕಿದರೆ ಹೈಕಮಾಂಡ್ ನಾಯಕರನ್ನು ಭೇಟಿ ಆಗುತ್ತೇನೆ. ಭೇಟಿ ಆಗಿ ಸಚಿವ ಸ್ಥಾನ ನೀಡುವಂತೆ ಕೇಳುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ:ಬಿಜೆಪಿ ಹೈಕಮಾಂಡ್ ಮೊದಲ ಭೇಟಿಯಲ್ಲಿ ಸಂಪುಟ ರಚನೆ ಬಗ್ಗೆ ಚರ್ಚಿಸಲ್ಲ; ಸಿಎಂ ಬಸವರಾಜ ಬೊಮ್ಮಾಯಿ
ನಾನು ಈಗಾಗಲೇ ನಾಲ್ಕು ಬಾರಿ ಮಂತ್ರಿಯಾಗಿದ್ದೇನೆ. ಮುಂದೆಯೂ ಮಂತ್ರಿ ಆಗುತ್ತೇನೆ ಎಂಬ ನಂಬಿಕೆ ಇದೆ. ನಾನು ಮಂತ್ರಿ ಆದರೆ ಅಖಂಡ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದ ಉಮೇಶ್ ಕತ್ತಿ ಅವರು ಹಿರಿಯರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂಬ ವಿಚಾರ ಮಾಧ್ಯಮಗಳಿಂದ ಗೊತ್ತಾಗಿದೆ. ಪಕ್ಷದ ನಿರ್ಧಾರದ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಸಚಿವ ಜಗದೀಶ್ ಶೆಟ್ಟರ್ 'ನೈತಿಕ ಕಾರಣಗಳಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿ ಆಗುವುದಿಲ್ಲ' ಎಂದು ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಉಮೇಶ್ ಕತ್ತಿ 'ಅದು ಅವರ ವಯಕ್ತಿಕ ಹೇಳಿಕೆ' ಎಂದು ತಿಳಿಸಿದರು. ಆ ಮೂಲಕ ತಾವು ಮಂತ್ರಿ ಸ್ಥಾನ ಕೇಳುವುದರಿಂದ ಹಿಂದೆ ಬಿದ್ದಿಲ್ಲ ಎಂದೂ ತಿಳಿಸಿದರು.
ಇನ್ನೊಂದೆಡೆ ಸಿಎಂ ಬೊಮ್ಮಾಯಿ ಸಂಪುಟದಲ್ಲಿ ಹಿರಿಯರಿಗೆ ಅವಕಾಶ ಸಿಗುವುದಿಲ್ಲ ಎಂದು ಆತಂಕಕ್ಕೆ ಒಳಗಾಗಿರುವ ಹಿರಿಯ ಸಚಿವ ಕೆ.ಎಸ್. ಈಶ್ವರಪ್ಪ ಮತ್ತೆ ಸಚಿವ ಸ್ಥಾನ ಗಿಟ್ಟಿಸಲು ಸಮಾಜದ ಸ್ವಾಮೀಜಿಗಳ ಮೂಲಕ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ. ಇದೇ ಹಿನ್ನಲೆಯಲ್ಲಿ ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕುರುಬರ ಸ್ವಾಮೀಜಿ ಪತ್ರಿಕಾಗೋಷ್ಠಿ ನಡೆಯಲಿದೆ. ಸ್ವಾಮೀಜಿಗಳ ಮೂಲಕ ಬಿಜೆಪಿ ಹೈಕಮಾಂಡ್ ನಾಯಕರಿಗೆ ಒತ್ತಡ ಹಾಕಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ:KGF 2 Adheera First Look Poster: ನಡುಕ ಹುಟ್ಟಿಸ್ತಿದ್ದಾನೆ ಅಧೀರ; ಸಂಜಯ್ ದತ್ ಬರ್ತಡೇಗೆ ಬಂಪರ್ ಪೋಸ್ಟರ್
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ