ಬೆಂಗಳೂರು: ಸರ್ಕಾರಿ ನೌಕರರ (Government Employees Strike) ಮುಷ್ಕರ ಬೆನ್ನಲ್ಲೇ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಶೇ.17ರಷ್ಟು ವೇತನ ಹೆಚ್ಚಳ ಮಾಡೋದಾಗಿ ಮಹತ್ವದ ಘೋಷಣೆ ಮಾಡಿದ್ದಾರೆ. ಶೀಘ್ರದಲ್ಲಿಯೇ ಘೋಷಣೆ ಸಂಬಂಧ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಸರ್ಕಾರಿ ನೌಕರರ ಜೊತೆ ಮಂಗಳವಾರ ತಡರಾತ್ರಿವರೆಗೂ ಸಿಎಂ ಸುದೀರ್ಘ ಸಭೆ ನಡೆಸಿದ್ದರು. ಇಂದು ಬೆಳಗ್ಗೆ ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ವೇತನ ಹೆಚ್ಚಳದ ಬಗ್ಗೆ ಘೋಷಣೆ ಮಾಡಿದ್ದಾರೆ.
7ನೇ ವೇತನ ಆಯೋಗ ಶಿಪಾರಸ್ಸು ಅನ್ವಯ ಶೇ.17ರಷ್ಟು ವೇತನ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. ಎನ್ಸಿಎಸ್ ನೇತೃತ್ವದ ಸಮಿತಿ ರಚನೆ ಮಾಡಲಾಗಿದೆ. ವರದಿ ಕೊಟ್ಟ ನಂತರ NPS ಜಾರಿ ಮಾಡುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು. ಈ ಕುರಿತಂತೆ ಆದಷ್ಟು ಬೇಗ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.
ವೇತನ ಪರಿಷ್ಕರಣೆ ಸ್ವಾಗತಿಸಿದ ಅಮೃತ್ ರಾಜ್
ಸಿಎಂ ಬಸವರಾಜ್ ಮೊಮ್ಮಾಯಿ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್, ಮುಂದಿನ ನಿರ್ಧಾರದ ಬಗ್ಗೆ ತೀರ್ಮಾನ ಮಾಡಲಾಗುವುದು. ಮುಖ್ಯಮಂತ್ರಿಗಳು ಘೋಷಣೆ ಮಾಡಿರುವಂತಹ 17% ವೇತನ ಪರಿಷ್ಕರಣೆಯನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.
OPS ರಚನೆ ಮಾಡಬೇಕು ಅನ್ನೋದೆ ನಮ್ಮ ಪ್ರಮುಖ ಬೇಡಿಕೆ. ನಮ್ಮ ರಾಜ್ಯ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರು ಇನ್ನು ಕೆಲವೇ ಹೊತ್ತಿನಲ್ಲಿ ಇಲ್ಲಿಗೆ ಬರ್ತಾರೆ. OPS ವಿಚಾರಕ್ಕೆ ಸ್ಪಷ್ಟ ಉತ್ತರ ನೀಡಿಲ್ಲ. ಈ ಸಂಬಂಧ ನಾವು ಮುಷ್ಕರ ಮುಂದುವರೆಸುತ್ತೇವೆ ಎಂದು ಅಮೃತ್ ರಾಜ್ ಹೇಳಿದ್ದಾರೆ.
ಇನ್ನು ಅಧಿಕೃತ ಆದೇಶ ಬಂದಿಲ್ಲ ಎಂದ ಷಡಕ್ಷರಿ
ಇನ್ನು ಸಿಎಂ ಘೋಷಣೆ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ಮಾಧ್ಯಮಗಳ ಮೂಲಕ ನನಗೂ ವಿಷಯ ತಿಳಿದಿದೆ. ಅಧಿಕೃತ ಆದೇಶ ಸಿಗೋವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಶೇ.17ರಷ್ಟು ವೇತನ ಹೆಚ್ಚಳಕ್ಕೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಈ ಬಗ್ಗೆ ನಾವು ಸಹ ಪದಾಧಿಕಾರಿಗಳ ಜೊತೆ ಚರ್ಚೆ ನಡೆಸಬೇಕು. ಆನಂತರ ನಮ್ಮ ತೀರ್ಮಾನ ಪ್ರಕಟಿಸುತ್ತೇವೆ. ಸದ್ಯ ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಪ್ರಸಾದ್ ಅವರನ್ನು ಭೇಟಿಯಾಗಲು ಹೋಗುತ್ತಿದ್ದೇನೆ. ಅಲ್ಲಿಂದ ಬಂದ ನಂತರ ಮುಂದೆ ಏನಾಗುತ್ತೆ ಅಂತ ನೋಡೋಣ ಎಂದರು.
ಇದನ್ನೂ ಓದಿ: Govt Employees Strike: ಸರ್ಕಾರದ ವಿರುದ್ಧ ಸರ್ಕಾರಿ ನೌಕರರ ಸಮರ; ಏನಿರುತ್ತೆ? ಏನಿರಲ್ಲ?
ನೌಕರರಲ್ಲಿ ಅಪಸ್ವರ
ಇನ್ನು ನೌಕರರ ಒಂದು ವರ್ಗ ಶೇ.17ರಷ್ಟು ವೇತನ ಹೆಚ್ಚಳದ ನಿರ್ಧಾರ ಸ್ವಾಗತಿಸಿದ್ರೆ, ಮತ್ತೊಂದು ವರ್ಗ ಅಸಮಾಧಾನ ಹೊರ ಹಾಕಿದೆ ಎನ್ನಲಾಗುತ್ತಿದೆ. ಕನಿಷ್ಠ ಶೇ.25ರಷ್ಟು ವೇತನ ಹೆಚ್ಚಳ ಆಗಬೇಕು ಅನ್ನೋದು ಒಂದು ವರ್ಗದ ನೌಕರರ ಆಗ್ರಹವಾಗಿದೆ.
ನೌಕರರ ಬೇಡಿಕೆಗಳೇನು?
1.ಮೂಲ ವೇತನದೊಂದಿಗೆ ತುಟ್ಟಿ ಭತ್ಯೆ ಬೇಕು
2.ಮೂಲ ವೇತನದ ಶೇ. 40ರಷ್ಟು ವೇತನ ಹೆಚ್ಚಳ
3.2023ರ ಏಪ್ರಿಲ್ 1ರಿಂದ ಆರ್ಥಿಕ ಅನುಕೂಲ ಬೇಕು
4.NPS ರದ್ದು ಮಾಡಿ OPS ವ್ಯಾಪ್ತಿಗೆ ತರಬೇಕು.
ಸಿದ್ದರಾಮಯ್ಯ ಗರಂ
ವಿಧಾನಸಭಾ ಚುನಾವಣೆಗೆ (Karnataka Election) ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ (Congress) ಪಕ್ಷ ವಿವಿಧ ಕ್ಷೇತ್ರದಲ್ಲಿ ಪ್ರಚಾರವನ್ನು ಬಿರುಸಿನಿಂದ ನಡೆಸುತ್ತಿದೆ. ಇಂದು ಜಿಲ್ಲೆಯ ನವಲಗುಂದ (Navalgund) ಪಟ್ಟಣಕ್ಕೆ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಪ್ರಜಾಧ್ವನಿ ಯಾತ್ರೆ ಆಗಮಿಸಿದ್ದು, ಸಿದ್ದರಾಮಯ್ಯ ನೇತೃತ್ವದ ಯಾತ್ರೆಯ ಸಮಾವೇಶ ಪಟ್ಟಣದ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಶಾಸಕ ಜಮೀರ್ ಅಹ್ಮದ್, ಸಲೀಂ ಅಹ್ಮದ್, ಕೆ.ಎನ್ ಗಡಿ ಸೇರಿದಂತೆ ಹಲವು ನಾಯಕರು ಸಾಥ್ ನೀಡಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಭಾಷಣ ಮಾಡಲು ವೇದಿಕೆ ಮೇಲೆ ಬಂದ ಸಂದರ್ಭದಲ್ಲಿ ಕುಡುಕನೋರ್ವ ಗದ್ದಲ ಸೃಷ್ಟಿಸಿದ್ದು, ಇದರಿಂದ ಸಿದ್ದರಾಮಯ್ಯ ಅವರು ಕೆಲ ಸಮಯ ಗರಂ ಆಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ