• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ರಾಜ್ಯದಲ್ಲಿ ಟ್ರೈಟನ್ ವಿದ್ಯುತ್ ವಾಹನ ಸಂಸ್ಥೆ ಹೂಡಿಕೆಗೆ ಬೆಂಬಲ: ಬಿ.ಎಸ್.ಯಡಿಯೂರಪ್ಪ

ರಾಜ್ಯದಲ್ಲಿ ಟ್ರೈಟನ್ ವಿದ್ಯುತ್ ವಾಹನ ಸಂಸ್ಥೆ ಹೂಡಿಕೆಗೆ ಬೆಂಬಲ: ಬಿ.ಎಸ್.ಯಡಿಯೂರಪ್ಪ

ಸಿಎಂ ಬಿಎಸ್​ ಯಡಿಯೂರಪ್ಪ

ಸಿಎಂ ಬಿಎಸ್​ ಯಡಿಯೂರಪ್ಪ

ಹಿಮಾಂಶು ಪಟೇಲ್ ಅವರು ಮಾತನಾಡಿ, ಕರ್ನಾಟಕದಲ್ಲಿ ಟ್ರೈಟನ್ ಸಂಸ್ಥೆ ಹೂಡಿಕೆ ಮಾಡಲು ಉತ್ಸುಕವಾಗಿದ್ದು, ಇದರ ಸಂಭಾವ್ಯತೆಗಳನ್ನು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರಲ್ಲದೆ ಶೀಘ್ರದಲ್ಲಿಯೇ ಮತ್ತೊಂದು ಸುತ್ತಿನ ಚರ್ಚೆಗೆ ಭಾರತಕ್ಕೆ ಆಗಮಿಸುವುದಾಗಿ ತಿಳಿಸಿದರು.

  • Share this:

ಬೆಂಗಳೂರು (ಏಪ್ರಿಲ್ 9): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಮೆರಿಕಾದ ಟ್ರೈಟನ್ ಎಲೆಕ್ಟ್ರಿಕ್ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ, ಹಿಮಾಂಶು ಪಟೇಲ್ ಅವರೊಂದಿಗೆ ರಾಜ್ಯದಲ್ಲಿ ಹೂಡಿಕೆಯ ಅವಕಾಶಗಳ ಬಗ್ಗೆ ವರ್ಚುಯಲ್ ಸಭೆ ನಡೆಸಿದರು. ಟ್ರೈಟನ್ ಎಲೆಕ್ಟ್ರಿಕ್ ವಾಹನಗಳ ಸಂಸ್ಥೆಯು ರಾಜ್ಯದಲ್ಲಿ ಹೂಡಿಕೆ ಮಾಡಲು ಅಗತ್ಯವಿರುವ ಎಲ್ಲಾ ಸಹಕಾರ ಮತ್ತು ಬೆಂಬಲವನ್ನು ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು. ರಾಮನಗರದಲ್ಲಿ ಎಲೆಕ್ಟ್ರಿಕ್ ವಾಹನಗಳ ಕ್ಲಸ್ಟರ್​ಅನ್ನು 500 ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಕ್ಲಸ್ಟರ್ ಸೂಕ್ತ ವಾತಾವರಣವನ್ನು ಕಲ್ಪಿಸಲಿದೆ. ದೇಶದಲ್ಲಿ ಮೊತ್ತಮೊದಲ ಎಲೆಕ್ಟ್ರಿಕ್ ವಾಹನಗಳ ನೀತಿಯನ್ನು ಜಾರಿಗೆ ತಂದ ರಾಜ್ಯ ಕರ್ನಾಟಕ. ಪ್ರಸ್ತುತ ನೀತಿಯನ್ನು ಹೆಚ್ಚು ಹೂಡಿಕೆಸ್ನೇಹಿಯನ್ನಾಗಿಸಲು ಪರಿಷ್ಕರಿಸಲಾಗುತ್ತಿದೆ ಎಂದರು.


ಕೋವಿಡ್-19 ಸಾಂಕ್ರಾಮಿಕ ಜಗತ್ತಿನಾದ್ಯಂತ ಆರ್ಥಿಕತೆಗೆ ಪೆಟ್ಟು ನೀಡಿದ್ದರೂ, ಕರ್ನಾಟಕ ಸರ್ಕಾರ ಕೈಗಾರಿಕೆಗಳ ಬೆಳವಣಿಗೆಗೆ ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡಿದೆ. ನೂತನ ಕೈಗಾರಿಕಾ ನೀತಿಯು ಕರ್ನಾಟಕವನ್ನು ಜಾಗತಿಕ ಸರಬರಾಜು ಸರಪಳಿಯ ಬಹುಮುಖ್ಯ ಭಾಗವಾಗಿಸಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.


ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜ್‍ಕುಮಾರ್ ಖತ್ರಿ ಮಾತನಾಡಿ, ನೂತನ ಕೈಗಾರಿಕಾ ನೀತಿಯು ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ನಾವೀನ್ಯತೆಗೆ ಹೆಚ್ಚು ಒತ್ತು ನೀಡಿದ್ದು, ದೇಶದ ನಾವೀನ್ಯತಾ ಸೂಚ್ಯಂಕದಲ್ಲಿ ಪ್ರಥಮ ಸ್ಥಾನವನ್ನು ಉಳಿಸಿಕೊಳ್ಳುವ ಗುರಿ ಹೊಂದಿದೆ ಎಂದರು. ವಿದ್ಯುತ್ ವಾಹನಗಳು ರಾಜ್ಯ ಸರ್ಕಾರದ ಆಸಕ್ತಿಯ ವಲಯಗಳಲ್ಲಿ ಒಂದು ಎಂದರು.


ಆಯುಕ್ತರಾದ ಗುಂಜನ್ ಕೃಷ್ಣಾ ಮಾತನಾಡಿ, ನೂತನ ಕೈಗಾರಿಕಾ ನೀತಿಯು ಕೈಗಾರಿಕೆಗಳಿಗೆ ಭೂಮಿ ಖರೀದಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿದ್ದು, ಕಾರ್ಮಿಕ ಅನುಪಾಲನೆಯನ್ನು ಸುಲಭವಾಗಿಸಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಬಂಡವಾಳ ಆಕರ್ಷಿಸಲು ಹೆಚ್ಚಿನ ರಿಯಾಯಿತಿಗಳನ್ನು ಕರ್ನಾಟಕ ಒದಗಿಸುತ್ತಿದೆ ಎಂದು ವಿವರಿಸಿದರು.


ಇದನ್ನು ಓದಿ: ಏಪ್ರಿಲ್ ಅಂತ್ಯಕ್ಕೆ ಹೊಸ ಮರಳು ನೀತಿ, ಪ್ರತಿ ವಾರಕ್ಕೊಮ್ಮೆ ಮರಳಿನ ದರದ ಪಟ್ಟಿ ಜಿಲ್ಲಾವಾರು ಪ್ರಕಟ; ಸಚಿವ ಮುರುಗೇಶ್ ನಿರಾಣಿ


ಹಿಮಾಂಶು ಪಟೇಲ್ ಅವರು ಮಾತನಾಡಿ, ಕರ್ನಾಟಕದಲ್ಲಿ ಟ್ರೈಟನ್ ಸಂಸ್ಥೆ ಹೂಡಿಕೆ ಮಾಡಲು ಉತ್ಸುಕವಾಗಿದ್ದು, ಇದರ ಸಂಭಾವ್ಯತೆಗಳನ್ನು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರಲ್ಲದೆ ಶೀಘ್ರದಲ್ಲಿಯೇ ಮತ್ತೊಂದು ಸುತ್ತಿನ ಚರ್ಚೆಗೆ ಭಾರತಕ್ಕೆ ಆಗಮಿಸುವುದಾಗಿ ತಿಳಿಸಿದರು.


ಸಭೆಯಲ್ಲಿ ಆರೋಗ್ಯ ಸಚಿವ ಡಾ. ಕೆ.ಸುಧಾಕರ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಪಿ.ಸೆಲ್ವಕುಮಾರ್, ಉಪಸ್ಥಿತರಿದ್ದರು.

top videos
    First published: