ವಿಶ್ವದ ಅತಿದೊಡ್ಡ ಕಾಫಿ ಬೆಳೆಯುವ ಮತ್ತು ಸರಬರಾಜು ಮಾಡುವ ಬ್ರೆಜಿಲ್ ಶೀತ ವಾತಾವರಣವನ್ನು ಎದುರಿಸುತ್ತಿದೆ. ಇದರಿಂದ ಜನಪ್ರಿಯ ಪಾನೀಯಗಳಲ್ಲಿ ಒಂದಾದ ಕಾಫಿ ಬೆಳೆಯ ಸುಗ್ಗಿ ಈ ಬಾರಿ ಕುಸಿತ ಕಾಣುತ್ತಿದೆ ಎಂದು ಹೇಳಲಾಗಿದೆ. ಹಾಗೂ ಬೆಲೆಯೂ ಸಹ ತೀವ್ರ ಮಟ್ಟದಲ್ಲಿ ಹೆಚ್ಚುವ ಆತಂಕ ಈ ವೈಪರಿತ್ಯ ಉಂಟುಮಾಡಿದೆ.
ರೂರಲ್ ಕ್ಲೈಮಾ ಪ್ರಕಾರ ಬ್ರೆಜಿಲ್ನ ಕಾಫಿ ಬೆಳೆಯುವ ಪ್ರದೇಶಗಳಲ್ಲಿನ ತಾಪಮಾನವು ಮಂಗಳವಾರ ಶೂನ್ಯ ಸೆಲ್ಸಿಯಸ್ (32 ಫ್ಯಾರನ್ಹೀಟ್) ಗಿಂತ ಕಡಿಮೆ ಇತ್ತು. ದಕ್ಷಿಣ ಮಿನಾಸ್ ಗೆರೈಸ್ ಪ್ರದೇಶದಲ್ಲಿ 1994 ರಿಂದ ದಾಖಲಾದ ಅತ್ಯಂತ ಶೀತ ವಾತಾವರಣ ಅಥವಾ ಕಡಿಮೆ ತಾಪಮಾನ ಇದಾಗಿದೆ ಎಂದೂ ರೂರಲ್ ಕ್ಲೈಮಾ ಹೇಳಿದೆ. ಇದರಿಂದಾಗಿ ಕಾಫಿ ಬೆಳೆ ಮತ್ತು ಕೆಲ ಕಿತ್ತಳೆ ತೋಪುಗಳ ಹಾನಿಗೆ ಒಳಗಾಗಿವೆ ಎಂದು ವ್ಯಾಲಿನ್ಹೋಸ್ನ ಗ್ರಾಮೀಣ ಹವಾಮಾನದ ಹವಾಮಾನಶಾಸ್ತ್ರಜ್ಞ ಮಾರ್ಕೊ ಆಂಟೋನಿಯೊ ಡಾಸ್ ಸ್ಯಾಂಟೋಸ್ ಹೇಳಿದ್ದಾರೆ. ಮುಂದಿನ ವಾರ ಮತ್ತಷ್ಟು ಶೀತ ವಾತಾವರಣ ಉಂಟಾಗಲಿದೆ ಎಂದೂ ನಿರೀಕ್ಷಿಸಲಾಗಿದೆ.
ನ್ಯೂಯಾರ್ಕ್ನಲ್ಲಿ ಅರೇಬಿಕಾ ಬೀನ್ಸ್ನ ವಹಿವಾಟು ಮಂಗಳವಾರದಿಂದ 7.7% ನಷ್ಟು ಹೆಚ್ಚಾಗಿದೆ. ಇದು 2016 ರಿಂದೀಚೆಗೆ ಗರಿಷ್ಠ ಮಟ್ಟಕ್ಕೆ ತಲುಪಿದ್ದು ವಹಿವಾಟಿನ ಪ್ರಮಾಣವೂ ಹೆಚ್ಚಾಗಿದೆ. ಕಾಫಿ ಬೆಲೆ ಬುಧವಾರ 3.5% ರಷ್ಟು ಹೆಚ್ಚಾಗಿದೆ.
ತೀವ್ರ ಬರಗಾಲದಿಂದ ಈಗಾಗಲೇ ಆ ಪ್ರದೇಶದ ರೈತರು ನಲುಗಿದ್ದು, ನೀರಾವರಿಗೆ ಅಗತ್ಯವಾದ ಜಲಾಶಯವೂ ಬರಿದಾಗುತ್ತಿದ್ದು, ಹಿಮ ಆವರಿಸುತ್ತಿದೆ. ಲಾ ನೀನಾದಿಂದಾಗಿ ಈ ಪ್ರದೇಶದಲ್ಲಿ ಮಳೆ ವಿಳಂಬವಾಗುತ್ತದೆ ಎಂದು ಹವಾಮಾನ ವರದಿಗಳು ಮುನ್ಸೂಚನೆ ನೀಡಿರುವುದು ಬರಗಾಲವನ್ನು ಮತ್ತಷ್ಟು ಹೆಚ್ಚಿಸುವ ಆತಂತ ಮೂಡಿಸಿದೆ. ಇದರಿಂದಾಗಿ ಕೆಫೆಗಳಲ್ಲಿ ಮತ್ತು ಸೂಪರ್ಮಾರ್ಕೆಟ್ಗಳಲ್ಲಿ ಗ್ರಾಹಕರು ಕಾಫಿಗೆ ಹೆಚ್ಚಿನ ಬೆಲೆ ಪಾವತಿಸಬೇಕಾಗುತ್ತದೆ.
ಹಿಮವು ಸುಮಾರು 60% ಬೆಳೆಯ ಮೇಲೆ ಪರಿಣಾಮ ಬೀರಲಿದೆ. ಜಮೀನಿನ ಕೆಲವು ಪ್ರದೇಶಗಳಲ್ಲಿ, ಎಲ್ಲಾ ಬೆಳೆಯನ್ನು ಸುಟ್ಟುಹಾಕಿದೆ ಎಂದು ಮಿನಾಸ್ ಗೆರೈಸ್ನ ರೈತರೊಬ್ಬರು ಹೇಳಿದ್ದಾರೆ. ಹಿಮ ಗಿಡ - ಮರಗಳ ಎಲೆಗಳು ಮತ್ತು ಕೊಂಬೆಗಳನ್ನು ಹಾಳು ಮಾಡುತ್ತಿದೆ, ಈ ಹಿನ್ನೆಲೆ 2022ರಲ್ಲಿ ಬಂಪರ್ ಬೆಳೆಯ ಭರವಸೆಯನ್ನೂ ಕಡಿಮೆ ಮಾಡುತ್ತಿದೆ. ಏಕೆಂದರೆ ಕಾಫಿ ಗಿಡಗಳು ಎರಡು ವರ್ಷಕ್ಕೊಮ್ಮೆ ಹೆಚ್ಚು ಫಸಲು ನೀಡುತ್ತದೆ ಮತ್ತು ಮುಂದಿನ ಋತುವಿನಲ್ಲಿ ಹೆಚ್ಚಿನ ಉತ್ಪಾದನೆಯನ್ನು ಇಲ್ಲಿ ನಿರೀಕ್ಷಿಸಲಾಗಿತ್ತು.
ಯು.ಎಸ್. ಹವಾಮಾನ ಮುನ್ಸೂಚನೆ ಕೇಂದ್ರದ ಪ್ರಕಾರವೂ ಲಾ ನಿನಾ ಹಿಂದಿರುಗುವ ಸಾಧ್ಯತೆ ಹೆಚ್ಚಾಗಿದೆ. ಯು.ಎಸ್. ಕಾಫಿ ದಾಸ್ತಾನುಗಳು ಒಂದು ವರ್ಷದ ಹಿಂದಿನ ಪ್ರಮಾಣಕ್ಕಿಂತ 18% ಕಡಿಮೆಯಾಗಲಿದೆ ಎಂದೂ ಅಂದಾಜಿಸಿದೆ. ಇದರಿಂದ ಕಾಫಿ ಬೆಲೆ ದಾಖಲೆ ನಿರ್ಮಿಸಬಹುದು ಎಂದು ಸ್ಟೋನ್ಎಕ್ಸ್ ಫೈನಾನ್ಷಿಯಲ್ ಇಂಕ್ನ ಹಿರಿಯ ಉಪಾಧ್ಯಕ್ಷ ಹೆರ್ನಾಂಡೊ ಡೆ ಲಾ ರೋಚೆ ಹೇಳಿದ್ದಾರೆ.
ಹವಾಮಾನ ವೈಪರೀತ್ಯದ ಜತೆಗೆ ರಾಜಕೀಯ ಅಶಾಂತಿ ಮತ್ತು ಗಗನಕ್ಕೇರಿರುವ ಸರಕು ಸಾಗಣೆ ದರಗಳಿಂದಾಗಿ ಕೊಲಂಬಿಯಾದಿಂದ ಸಾಗಾಟ ವಿಳಂಬವಾಗಿರುವುದು ಸಹ ಇದಕ್ಕೆ ಪರೋಕ್ಷ ಕಾರಣವಾಗಿದೆ, ಇದರಿಂದಾಗಿ ವ್ಯಾಪಾರಿಗಳಿಗೆ ಪ್ರಪಂಚದಾದ್ಯಂತ ಕಾಫಿ ಬೀನ್ಸ್ ಸಾಗಣೆಗೆ ಹೆಚ್ಚು ದುಬಾರಿಯಾಗುತ್ತಿದೆ. ಇನ್ನು, ಈ ವರ್ಷದ ಅರೇಬಿಕಾ ಉತ್ಪಾದನೆ ಕಳೆದ ವರ್ಷದ ಒಟ್ಟು ಅರ್ಧದಷ್ಟು ಇರುತ್ತದೆ ಎಂದೂ ಅಂದಾಜಿಸಲಾಗಿದೆ.
ನಿರಾಶಾದಾಯಕ ಸುಗ್ಗಿ..!
ಪ್ರಸ್ತುತ ಕಾಫಿ ಬೆಳೆಯ ಸುಗ್ಗಿಯು ಈಗಾಗಲೇ ನಿರಾಶಾದಾಯಕವಾಗಿದೆ. ಬರವು ಕಾಫಿ ಬೀನ್ಸ್ ಅನ್ನು ಹಾನಿಗೊಳಿಸಿದ್ದು, ಅವುಗಳನ್ನು ಸಣ್ಣ ಅಥವಾ ಟೊಳ್ಳಾಗಿ ಮಾಡುತ್ತಿದೆ. ಇದರ ಪರಿಣಾಮವಾಗಿ, ಸಾಮಾನ್ಯ ರೈತನು 450 ರಿಂದ 500 ಲೀಟರ್ ಬದಲಿಗೆ 60 ಕೆಜಿ ತೂಕದ ಒಂದು ಚೀಲವನ್ನು ತುಂಬಲು ಸರಾಸರಿ ರೈತರಿಗೆ 600 ಲೀಟರ್ (158.5 ಗ್ಯಾಲನ್) ಬೀನ್ಸ್ ಬೇಕಾಗುತ್ತದೆ ಎಂದು ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಮಾರುಕಟ್ಟೆಯನ್ನು ಅಧ್ಯಯನ ಮಾಡಿರುವ ಹಾಗೂ ಬ್ರೆಜಿಲ್ನಲ್ಲಿ ಕಾಫಿ ಬೆಳೆಗಳ ಸಮೀಕ್ಷೆಯ ನಡೆಸಿರುವ ಜೂಡಿ ಗೇನ್ಸ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ