news18-kannada Updated:December 28, 2020, 7:29 AM IST
ಚಿತ್ರ ಬಿಡಿಸುತ್ತಿರುವ ಯುವಕರ ತಂಡ
ಕಾರವಾರ(ಡಿಸೆಂಬರ್. 28): ಶಾಲಾ- ಕಾಲೇಜು ಕೊರೋನಾದಿಂದಾಗಿ ಮುಚ್ಚಿದ್ದರಿಂದ ಯುವಜನತೆ ಫೇಸ್ ಬುಕ್, ವಾಟ್ಸಪ್ ನಂಥ ಸಾಮಾಜಿಕ ಜಾಲತಾಣಗಳಲ್ಲಿ, ಪಬ್ ಜಿ, ಫ್ರೀ ಫ್ರೈರ್ ನಂಥ ಗೇಮ್ಸ್ ಗಳಲ್ಲಿ ನಿರತರಾಗಿದ್ದಾರೆ. ಇನ್ನು, ಉದ್ಯೋಗ ಮಾಡುತ್ತಿದ್ದವರಂತೂ ಕೊರೋನಾ ಲಾಕ್ ಡೌನ್ ನಿಂದಾಗಿ ಊರಿಗೆ ವಾಪಸ್ಸಾಗಿ ವರ್ಕ್ ಫ್ರಮ್ ಹೋಮ್ ನಲ್ಲಿ ಮುಳುಗಿ, ಒಂದಷ್ಟು ವಿರಾಮಕ್ಕಾಗಿ ಕಾಯುತ್ತಿದ್ದಾರೆ. ಈ ಎರಡೂ ಕಡೆಯವರನ್ನು ಒಟ್ಟುಗೂಡಿಸಿಕೊಂಡು 'ಬೆಟರ್ ಕಾರವಾರ' ತಂಡವೊಂದು ಕಾರವಾರ ನಗರವನ್ನು ಅಂದಗೊಳಿಸುವ ಕಾರ್ಯಕ್ಕೆ ಇಳಿದಿದೆ. ಅಕ್ಟೋಬರ್ 2ರಿಂದ ಸ್ವಚ್ಛತಾ ಅಭಿಯಾನದ ಮೂಲಕ ಸಾಮಾಜಿಕ ಕಾರ್ಯಕ್ಕೆ ಇಳಿದಿದ್ದ ಬೆಟರ್ ಕಾರವಾರ ತಂಡ, ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಜಿಲ್ಲಾಧಿಕಾರಿ ಕಚೇರಿಯ ಗೋಡೆಗಳನ್ನು ಬಣ್ಣ ಬಣ್ಣದ ಚಿತ್ತಾರಗಳ ಮೂಲಕ ಅಂದಗೊಳಿಸಿದೆ. ಜತೆಗೆ ಪ್ರವಾಸಿ ಆಕರ್ಷಿತ ತಾಣಗಳನ್ನ ಕೂಡಾ ಬಣ್ಣಬಣ್ಣದ ಚಿತ್ತಾರ ಬಿಡಿಸಿ ಪ್ರವಾಸಿಗರ ಆಕರ್ಷಣೆಗೆ ಕಾರಣರಾಗಿದ್ದಾರೆ.
ಕಾರವಾರ ಮೂಲದ ಪ್ರೀತೇಶ್ ರಾಣೆ, ಸೂರಜ್ ಗೋವೇಕರ್, ನಿತೇಶ್ ನಾಯ್ಕ, ಪ್ರಸಾದ್ ಸಾದಿಯೆ, ಅಮಾನ್ ಶೇಖ್ ಹಾಗೂ ಉಮಾ ಶಂಕರ್ ಎನ್ನುವವರು ಸ್ಥಾಪಿಸಿದ ಈ ಬೆಟರ್ ಕಾರವಾರ ತಂಡ, ಗಾಂಧಿ ಜಯಂತಿಯಂದು ಸ್ವಚ್ಛತಾ ಕಾರ್ಯ ಆರಂಭಿಸಿ 12 ವಾರಗಳ ಕಾಲ ಕಾರವಾರ ನಗರದ ವಿವಿಧೆಡೆ ಸ್ವಚ್ಛಗೊಳಿಸಿದ್ದಾರೆ.
ಈ ನಡುವೆ ಜಿಲ್ಲಾಧಿಕಾರಿ ಕಚೇರಿಯ ಗೋಡೆಗೆ ಬಣ್ಣ ಬಳಿಯಬೇಕೆಂಬ ಯೋಜನೆಯನ್ನು ರಚಿಸಿ, ತಮ್ಮ ಇನ್ ಸ್ಟಾಗ್ರಾಂ, ಫೇಸ್ ಬುಕ್ ನಂಥ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಆಸಕ್ತ ಕಲಾವಿದರಿಗೆ ಆಹ್ವಾನಿಸಿದ್ದರು. ನಿರೀಕ್ಷೆಗೂ ಮೀರಿ 30 ಕಲಾವಿದರು ಬೆಟರ್ ಕಾರವಾರ ತಂಡದೊಂದಿಗೆ ಕೈಜೋಡಿಸಿದ್ದಾರೆ.

ಯುವಕನೊಬ್ಬ ಚಿತ್ರ ಬಿಡಿಸುತ್ತಿರುವುದು
ಅಲ್ಲದೇ, ಕೇವಲ ಒಂದೇ ದಿನದಲ್ಲಿ 30 ಕಲಾವಿದರು ಸೇರಿಕೊಂಡು ಜಿಲ್ಲಾಧಿಕಾರಿ ಕಚೇರಿಯ 40 ಗೋಡೆಗಳಲ್ಲಿ 40 ಚಿತ್ರ ಬಿಡಿಸಿ ಬಣ್ಣ ತುಂಬಿದ್ದಾರೆ. ಭಾವೈಕ್ಯತೆ, ಒಗ್ಗಟ್ಟು, ಕಲೆ- ಸಂಸ್ಕೃತಿ, ಪ್ರವಾಸೋದ್ಯಮ, ಜಾಗೃತಿ ಸಂದೇಶಗಳನ್ನು ಕಲಾವಿದರು ಗೋಡೆಗಳಲ್ಲಿ ಚಿತ್ರಿಸಿದ್ದಾರೆ.
ಈ ಕಲಾವಿದರ ಪೈಕಿ ಹಲವಾರು ಮಂದಿ ವಿವಿಧ ಶಾಲಾ- ಕಾಲೇಜಿನ ವಿದ್ಯಾರ್ಥಿಗಳಿದ್ದರೆ, ವರ್ಕ್ ಫ್ರಾಮ್ ಹೋಮ್ ನಲ್ಲಿರುವ ಉದ್ಯೋಗಿಗಳು, ಗೃಹಿಣಿಯರು, ಎನ್ ಸಿಸಿ ಕೆಡೆಟ್ಸ್ ಗಳು ಭಾಗವಹಿಸಿದ್ದಾರೆ.
ಇದನ್ನೂ ಓದಿ :
ಖರ್ಗೆಗೆ ಸಿಎಂ ಸ್ಥಾನ ತಪ್ಪಿಸಿದ್ದು ಯಾರು ಅಂತ ಹೆಸರು ಹೇಳಿಬಿಡಿ: ದೇವೇಗೌಡರಿಗೆ ಸಿದ್ದು ಸವಾಲ್ಉತ್ತರ ಕನ್ನಡ ಜಿಲ್ಲೆ ಸಾಂಸ್ಕ್ರತಿಕ ಪರಂಪರೆ ಸಾರುವ ಜಿಲ್ಲೆ. ಒಂದೆಡೆ ಕದಂಬರ ನಾಡು, ಇನ್ನೊಂದೆಡೆ ಸದಾಶಿವನಾಯಕನ ಕೋಟೆ. ಸ್ವಾತಂತ್ರ್ಯ ಹೋರಾಟದಲ್ಲಿ ಉಪ್ಪಿನ ಸತ್ಯಾಗ್ರಹ ಹೀಗೆ ಹತ್ತು ಹಲವು ಇತಿಹಾಸವನ್ನ ಹೊಂದಿದೆ ಈ ಇತಿಹಾಸ ಸಾರುವ ಚಿತ್ರಗಳು ಈಗ ಬೆಟರ್ ಕಾರವಾರ ಕಲಾ ತಂಡದಿಂದ ಪ್ರವಾಸಿ ತಾಣಗಳ ಕ್ಷೇತ್ರದಲ್ಲಿ ಅರಳಿವೆ.ಜತೆಗೆ ಜಿಲ್ಲೆಯ ಪ್ರವಾಸೋದ್ಯಮ ಪ್ರಮೋಟ್ ಮಾಡಲು ಕೂಡಾ ಇದು ಉತ್ತಮ ಬೆಳವಣಿಗೆಯಾಗಿದೆ.
ಒಟ್ಟಾರೆಯಾಗಿ, ಕೊರೋನಾ ಲಾಕ್ ಡೌನ್ ನಿಂದಾಗಿ ಮನೆಯಲ್ಲೇ ಕೂತು ಆಲಸ್ಯದಲ್ಲಿದ್ದ ಮಂದಿ ಈಗ ಬೆಟರ್ ಕಾರವಾರದ ಮೂಲಕ ಚಟುವಟಿಕೆ ನಿರತರಾಗಿದ್ದಾರೆ. ಬಣ್ಣ ಮಾಸಿದ್ದ ಜಿಲ್ಲಾಧಿಕಾರಿ ಕಚೇರಿಯ ಗೋಡೆ ಈಗ ಅಂದಗೊಂಡಿದ್ದು, ರಸ್ತೆಯಲ್ಲಿ ಸಂಚರಿಸುವವರು, ವಾಹನ ಸವಾರರು ಗೋಡೆಚಿತ್ರಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
Published by:
G Hareeshkumar
First published:
December 28, 2020, 7:29 AM IST