ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೋದರೂ ರೌಡಿ ಶೀಟರ್ಸ್ಗಳಿಗೆ ಭಯ ಇಲ್ಲದಂತಾಗಿದೆ. ಜೈಲಿನ ಒಳಗಿದ್ದರೂ ಅವರ ಆಟಾಟೋಪಗಳು ಮಾತ್ರ ಕಡಿಮೆಯಾಗಿಲ್ಲ. ಜೈಲಿನ ಒಳಗೆ ಕುಳಿತುಕೊಂಡೇ ಮತ್ತೊಬ್ಬರ ಹತ್ಯೆಗೆ ಸುಪಾರಿ ಕೊಡುವ ಹಂತಕ್ಕೆ ಬಂದಿದೆ. ಇದಲ್ಲದೆ ರೌಡಿಗಳು ಹೇಳಿದಂತೆ ಸಾಮಾನ್ಯ ಕೈದಿಗಳಿಂದ ಕೆಲಸ ಮಾಡುವುದು ಸಹ ಬೆಳಕಿಗೆ ಬಂದಿತ್ತು. ಇದೀಗ ರೌಡಿಶೀಟರ್ಸ್ಗಳು ಜೈಲಿನ ಆವರಣದಲ್ಲಿ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ.
ಸದ್ದಿಲ್ಲದೇ ಜೈಲಿನೊಳಕ್ಕೆ ಸಿಗರೇಟು ,ಮದ್ಯ ಸರಬರಾಜು ಆಗುತ್ತಿರುವ ಬಗ್ಗೆಯೂ ಆರೋಗಳು ಕೇಳಿ ಬಂದಿತ್ತು. ಈ ನಡುವೆ ಇವತ್ತು ಜೈಲಿನಲ್ಲಿರುವ ರೌಡಿಶೀಟರ್ಗಳ ನಡುವೆ ಮತ್ತೆ ಮಾರಾಮಾರಿ ನಡೆದಿದೆ ಎನ್ನಲಾಗಿದೆ. ಕುಖ್ಯಾತ ರೌಡಿಶೀಟರ್ ಬಾಂಬೆ ಸಲೀಂ ತಮ್ಮನಿಂದ ರೋಹಿತ್ ಗೌಡ ಎಂಬುವನ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಸಲೀಂ ಸಹೋದರನನ್ನು ಇಂದು ನ್ಯಾಯಾಲಯಕ್ಕೆ ಕರೆದೊಯ್ಯಲು ಜೈಲು ಸಿಬ್ಬಂದಿ ಮುಂದಾಗಿದ್ದರು. ಈ ವೇಳೆ ಬೇರೆ ಪಕ್ಕದ ಬ್ಯಾರಕ್ ನಲ್ಲಿದ್ದ ರೋಹಿತ್ ಗೌಡ ಎಂಬಾತ ಗುರಾಯಿಸಿದ ಎಂಬ ಕಾರಣಕ್ಕೆ ಎರಡು ಗುಂಪಿನ ನಡುವೆ ಮಾರಾಮಾರಿ ನಡೆದಿದೆ. ಸಿಬ್ಬಂದಿ ಜೊತೆಯಲ್ಲೇ ರೌಡಿಗಳು ತಳ್ಳಾಡಿ ಬಡಿದಾಡಿಕೊಂಡಿದ್ದಾರೆ. ಈ ಮಧ್ಯೆ ಸಿಬ್ಬಂದಿ ಎರಡೂ ಟೀಂ ನಿಯಂತ್ರಿಸಲು ಪರದಾಡಿದ್ದು,ಜೈಲಾಧಿಕಾರಿಗಳು ಎಂಟ್ರಿ ಆಗಿದ್ದಾರೆ.
ಇದನ್ನು ಓದಿ: ಹೊಡಿಬಡಿ ಅನ್ನೋರು ರಾಜಕೀಯಕ್ಕೆ ಬಂದ ಮೇಲೆ ಮೌಲ್ಯಗಳು ಹೇಗೆ ಉಳಿಯುತ್ತವೆ?; ಸಿದ್ದರಾಮಯ್ಯ ಅಸಮಾಧಾನ
ಕೊಲೆ ಕೇಸ್ ಆರೋಪದಡಿ ಬಾಂಬೆ ಸಲೀಂ ಹಾಗೂ ಸಹೋದರ ಸೇರಿದಂತೆ ಆರು ಮಂದಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಸದ್ಯ ಪರಪ್ಪನ ಅಗ್ರಹಾರ ಠಾಣೆಯಲ್ಲಿ ರೌಡಿ ಶೀಟರ್ ಬಾಂಬೆ ಸಲೀಂ ತಮ್ಮನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈ ಮಧ್ಯೆ ಎಲ್ಲಾ ರೌಡಿ ಶೀಟರ್ಸ್ ಗಳನ್ನು ಕರೆಸಿದ ಜೈಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಮತ್ತೊಮ್ಮೆ ಘಟನೆ ರಿಪೀಟ್ ಆದ್ರೆ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಬ್ಯಾರಕ್ ಗಳಲ್ಲಿ ಮೊದಲಿದ್ದ ರೌಡಿ ಶೀಟರ್ಸ್ ಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಭಯ ಮತ್ತು ಬೆದರಿಕೆ ಇರುವ ಬಗ್ಗೆ ಯಾರಾದರೂ ಹೇಳಿದರೆ ಅಂತವರನ್ನು ಸ್ಥಳಾಂತರ ಮಾಡಲಾಗುತ್ತೆ ಎಂದಿದ್ದಾರೆ. ಇನ್ನು ರೌಡಿ ಶೀಟರ್ಸ್ ಗಳ ಹಾವಳಿ ಜಾಸ್ತಿ ಇರುವ ಬ್ಯಾರಕ್ಗಳಲ್ಲಿ ಸಿಬ್ಬಂದಿಗಳನ್ನು ಹೆಚ್ಚಿಸಲಾಗಿದೆ.
ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಕೇಸ್ ನಲ್ಲಿ ಸಲೀಂನನ್ನು ಬಂಧಿಸಿ ಜೈಲಿಗಟ್ಟಿದ್ದರು. ಈ ವೇಳೆ ಪತ್ನಿ ಜೊತೆ ಪೀಣ್ಯದ ಪೃಥ್ವಿರಾಜ್ ಚಾಟಿಂಗ್ ಮಾಡುತ್ತಿದ್ದ ಎಂಬ ಕಾರಣಕ್ಕಾಗಿ ಅಸಮಾಧಾನಗೊಂಡು ಜಾಮೀನು ಪಡೆದು ಹೊರಬಂದು ಕಳೆದ ವರ್ಷ ಚಿಕ್ಕಬಳ್ಳಾಪುರ ಬಾಗೇಪಲ್ಲಿ ಠಾಣಾ ವ್ಯಾಪ್ತಿಯಲ್ಲಿ ಸಲೀಂ ಹಾಗೂ ಆತನ ಸಹಚರರು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದರು. ಬಳಿಕ ಆರು ತಿಂಗಳ ಬಳಿಕ ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದರು. ಸಲೀಂ ವಿರುದ್ದ ಬೆಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಜೈಲಿನಲ್ಲಿ ಇದ್ದುಕೊಂಡೇ ಮನೆಗಳ್ಳತನ ಮಾಡಿಸುವುದು, ಮನೆಗಳ್ಳರ ಗ್ಯಾಂಗ್ ಕಟ್ಟುವುದರಲ್ಲಿ ಪಳಗಿರುವ ಈತನ ವಿರುದ್ಧ ಹೈದರಾಬಾದ್, ಮುಂಬಯಿ, ತಮಿಳುನಾಡು ಸೇರಿದಂತೆ ನಾನಾ ರಾಜ್ಯಗಳಲ್ಲೂ ಈತನ ವಿರುದ್ಧ ಪ್ರಕರಣಗಳು ದಾಖಲಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ