Siddaramaiah: ಸರ್ಕಾರದ ಗಮನಕ್ಕೆ ತಾರದೇ ಡಿಸಿ ದೇಗುಲ ಒಡೆಯುತ್ತಾರಾ?; ಧಾರ್ಮಿಕ ಕಟ್ಟಡ ಸಂರಕ್ಷಣಾ ವಿಧೇಯಕ ಚರ್ಚೆ ವೇಳೆ ಸಿದ್ದರಾಮಯ್ಯ ಪ್ರಶ್ನೆ

ಮಂತ್ರಿ ಯಾಕಾಗಿದೀರಿ? ಸರ್ಕಾರ ಯಾಕಿದೆ? ನಿಮಗೆ ಗೊತ್ತಿಲ್ದೇ ದೇವಸ್ಥಾನ ಹೇಗೆ ಒಡೆದು ಹಾಕಲಾಯ್ತು? ಎಂದು ಸಿದ್ದರಾಮಯ್ಯ ಅವರು ಸಚಿವರಾದ ಮಾಧುಸ್ವಾಮಿ, ಅಶೋಕ್ ಗೆ ಪ್ರಶ್ನೆ ಮಾಡಿದರು. ಆಗ ಅಶೋಕ್ ಅವರು, ಇದು ಡಿಸಿಯವರ ಓವರ್ ಆಕ್ಟಿಂಗ್ ಎಂದರು.  ಓವರ್ ಆಕ್ಟಿಂಗ್ ಅಂದ್ರೇನು ಎಂದು ಸಿದ್ದರಾಮಯ್ಯ ಮರುಪ್ರಶ್ನೆ ಮಾಡಿದರು.

ಸಿದ್ದರಾಮಯ್ಯ (ಫೈಲ್​ ಫೋಟೋ)

ಸಿದ್ದರಾಮಯ್ಯ (ಫೈಲ್​ ಫೋಟೋ)

  • Share this:
    ಬೆಂಗಳೂರು: ನಂಜನಗೂಡಿನಲ್ಲಿ ದೇಗುಲ ತೆರವು ವಿಚಾರ ಬಿಜೆಪಿ ಸರ್ಕಾರಕ್ಕೆ ತೀವ್ರ ಮುಜುಗರ ತರಿಸಿದೆ. ಇದೇ ಕಾರಣಕ್ಕಾಗಿ ಇಂದು ಸದನದಲ್ಲಿ 2021ನೇ ಸಾಲಿನ ಕರ್ನಾಟಕ ಧಾರ್ಮಿಕ ಕಟ್ಟಡ (ಸಂರಕ್ಷಣಾ) ವಿಧೇಯಕ ಮಂಡಿಸಿದೆ. ಸದನದಲ್ಲಿ ವಿಧೇಯಕದ ಮೇಲಿನ ಚರ್ಚೆ ವೇಳೆ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ಜಟಾಪಟಿಯೇ ನಡೆಯಿತು. ಈ ವಿಚಾರವಾಗಿ ಆಡಳಿತ ಪಕ್ಷದ ನಾಯಕರು ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಡುವೆ ಜಟಾಪಟಿ ನಡೆಯಿತು. ಬಿಲ್ ವಿಷಯವಾಗಿ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ ಅವರು, ಧಾರ್ಮಿಕ ಕಟ್ಟಡಗಳಿಗೆ ಸಂರಕ್ಷಣೆ ಕೊಡಲು ಈ ಬಿಲ್ ತಂದಿದ್ದೇವೆ. ರಾಜ್ಯದಲ್ಲಿ ಸ್ಪಷ್ಟವಾದ ತೀರ್ಮಾನ ಇದೆ. ಸಾರ್ವಜನಿಕ ಸ್ಥಳಗಳಲ್ಲಿರುವ ಧಾರ್ಮಿಕ ಕಟ್ಟಡಗಳನ್ನು ರಕ್ಷಿಸಬೇಕು. ಅಧಿಕಾರಿಗಳು ಅಂಥ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡ್ತಿರೋದು ಕಂಡು ಬಂದಿದೆ. ಇವುಗಳ ರಕ್ಷಣೆ ಆಗಬೇಕು ಅಂತ ಈ ಬಿಲ್ ತಂದಿದ್ದೇವೆ ಎಂದು ಹೇಳಿದರು.

    ಆಗ ಶಾಸಕ ಬಂಡೆಪ್ಪ ಕಾಶಂಪೂರ್ ಮಾತನಾಡಿ, ಉತ್ತರ ಕರ್ನಾಟಕ ಕಡೆ ಮಹಾತ್ಮರ, ಗಣ್ಯರ ಪ್ರತಿಮೆಗಳನ್ನು ತೆರವು ಮಾಡಲಾಗ್ತಿದೆ. ರಸ್ತೆಗಳಲ್ಲಿರುವ ಪ್ರತಿಮೆಗಳನ್ನು ತೆರವು ಮಾಡಲು ಯಾರು ಹೇಳಿದ್ದು? ಪ್ರಾರ್ಥನಾ ಮಂದಿರಗಳನ್ನು ರಕ್ಷಣೆ ಮಾಡಿ ಬೇಡ ಅನ್ನಲ್ಲ. ಈ ಹಿಂದೆ ತೆರವು ಮಾಡಿರುವ ಪ್ರಾರ್ಥನಾ ಮಂದಿರಗಳನ್ನು ಮರು ನಿರ್ಮಾಣ ಮಾಡಿ. ಅದನ್ನೂ ವಿದೇಯಕದಲ್ಲಿ ಸೇರಿಸಿ ಎಂದು ಆಗ್ರಹಿಸಿದರು.

    ಬಳಿಕ ಮಾತನಾಡಿದ ಸಿದ್ದರಾಮಯ್ಯ, ನಂಜನಗೂಡಿನಲ್ಲಿ ನಿಮ್ಮ ಸರ್ಕಾರ ಒಂದು ದೇವಸ್ಥಾನ ಒಡೆದಿದೆ. ಸರ್ಕಾರದ ಗಮನಕ್ಕೆ ಬರದೇ ಡಿಸಿ ಹೇಗೆ ದೇವಸ್ಥಾನ ಒಡೀತಾರೆ? ಸರ್ಕಾರದ ಗಮನಕ್ಕೆ ಬಂದಿರಲೇಬೇಕು, ಬರದೇ ಇರೋಕ್ಕೆ ಸಾಧ್ಯವೇ ಇಲ್ಲ. ನೀವೇ ದೇಗುಲ ಒಡೆಸಿ ಹಾಕಿ, ಈಗ ರಕ್ಷಣೆಗೆ ಮುಂದಾಗಿದೀರಿ. 12 ವರ್ಷಗಳ ಹಿಂದೆಯೇ ಆದೇಶ ಬಂತು. ಹಿಂದೆ ಎಲ್ಲ ಹಲವು ದೇವಸ್ಥಾನ ಒಡೆದು ಹಾಕಿದ್ದಾರೆ. ಹಿಂದೆ ಒಡೆದು ಹಾಕಿದ ದೇವಸ್ಥಾನಗಳ ಬಗ್ಗೆ ಏನು ನಿರ್ಧಾರ ಮಾಡ್ತೀರಿ? ದೇವಸ್ಥಾನ ಒಡೆದಿದ್ದಕ್ಕೆ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ ಮಾಡ್ತು. ಸರ್ಕಾರವನ್ನು ವೇದಿಕೆ ತೀವ್ರವಾಗಿ ಅಟ್ಯಾಕ್ ಮಾಡ್ತು. ಹಿಂದೂ ಜಾಗರಣ ವೇದಿಕೆಯ ಒತ್ತಡಕ್ಕೆ ಸರ್ಕಾರ ಮಣಿದು ಈ ವಿಧೇಯಕ ತಂದಿದೆ ಎಂದು ಆರೋಪ ಮಾಡಿದರು. ಜಿಲ್ಲಾಧಿಕಾರಿ ಸರ್ಕಾರಕ್ಕೆ ಹೇಳದೇ ದೇಗುಲ ಒಡೆದಿದ್ದಾರಾ? ಹಾಗಿದ್ದರೆ ಡಿಸಿ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಪ್ರಶ್ನೆ ಮಾಡಿದರು.

    ಮಂತ್ರಿ ಯಾಕಾಗಿದೀರಿ? ಸರ್ಕಾರ ಯಾಕಿದೆ? ನಿಮಗೆ ಗೊತ್ತಿಲ್ದೇ ದೇವಸ್ಥಾನ ಹೇಗೆ ಒಡೆದು ಹಾಕಲಾಯ್ತು? ಎಂದು ಸಿದ್ದರಾಮಯ್ಯ ಅವರು ಸಚಿವರಾದ ಮಾಧುಸ್ವಾಮಿ, ಅಶೋಕ್ ಗೆ ಪ್ರಶ್ನೆ ಮಾಡಿದರು. ಆಗ ಅಶೋಕ್ ಅವರು, ಇದು ಡಿಸಿಯವರ ಓವರ್ ಆಕ್ಟಿಂಗ್ ಎಂದರು.  ಓವರ್ ಆಕ್ಟಿಂಗ್ ಅಂದ್ರೇನು ಎಂದು ಸಿದ್ದರಾಮಯ್ಯ ಮರುಪ್ರಶ್ನೆ ಮಾಡಿದರು.

    ಬಳಿಕ ಮಾತನಾಡಿದ ಮಾಧುಸ್ವಾಮಿ, ಕೋರ್ಟ್ ಆದೇಶದಂತೆ ಜಿಲ್ಲಾಧಿಕಾರಿ ಕ್ರಮ ತೆಗೆದುಕೊಂಡಿದ್ದಾರೆ. ಡಿಸಿ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲು ಅವಕಾಶ ಇಲ್ಲ ಎಂದು ಹೇಳಿದಾಗ ಸದನದಲ್ಲಿ ಗದ್ದಲ, ಕೋಲಾಹಲ, ವಾಕ್ಸಮರ ಉಂಟಾಯಿತು.

    ಇದನ್ನು ಓದಿ: Assembly Session Talk: ಎಲ್ಲೆಲ್ಲಿ ಬೇಕೋ ಅಲ್ಲಿ ಮಕ್ಕಳು ಹುಟ್ಟಿಸಿ ಹೋಗ್ಬಿಟ್ರೆ ಅವ್ರಿಗೆಲ್ಲ ಆಸ್ತಿ ಹಂಚೋರು ಯಾರು?; ಅನುದಾನ ವಿಷಯವಾಗಿ ರೇವಣ್ಣಗೆ ಸಚಿವ ಮಾಧುಸ್ವಾಮಿ ಉತ್ತರ

    ಆಗ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು,  2009 ರಲ್ಲಿ ಕೋರ್ಟ್ ತೀರ್ಪು ಬಂತು. 2009 ರ ಬಳಿಕ ಅನಧಿಕೃತ ಮಂದಿರಗಳು ನಿರ್ಮಾಣ ಆಗಬಾರದು ಅನ್ನೋದು ಸುಪ್ರೀಂ ಕೋರ್ಟ್ ಆದೇಶದ ತಿರುಳು. 2009 ರ ಬಳಿಕ‌ವೂ ಅನೇಕ ಅನಧಿಕೃತ ದೇಗುಲಗಳು ನಿರ್ಮಾಣ ಆಗಿವೆ. ಮೂಲ ಪ್ರಶ್ನೆ ಇರೋದು ಸುಪ್ರೀಂ ಕೋರ್ಟ್ ಆದೇಶ ಹೇಗೆ ಜಾರಿ ಮಾಡೋದು ಅನ್ನೋದು? ಅದಕ್ಕಾಗಿ ನಾವು ಈ ವಿಧೇಯಕದ ಮೂಲಕ‌ ಪರಿಹಾರ ಕಂಡ್ಕೊಂಡಿದೀವಿ. ಕೊರತೆ ನೀಗಿಸುವ ಸಲುವಾಗಿ ವಿಧೇಯಕ ತಂದಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
    Published by:HR Ramesh
    First published: