ಪಿಯುಸಿ ಪರೀಕ್ಷೆ (PUC Exam) ಇರುವ ಕಾರಣ ಮಾರ್ಚ್ 9 ರಂದು ಬೆಳಗ್ಗೆ 9 ಗಂಟೆಗೆ ಕರೆದಿದ್ದ ಕರ್ನಾಟಕ ಬಂದ್ (Karnataka Bandh) ವಾಪಸ್ ಪಡೆಯುತ್ತಿರುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು ಈ ಮೊದಲು ಭ್ರಷ್ಟಾಚಾರ (Corruption) ವಿರೋಧಿಸಿ ನಾಳೆ ಕಾಂಗ್ರೆಸ್‍ನಿಂದ 2 ಗಂಟೆಗಳ ಕಾಲ ಬಂದ್ ಮಾಡಲು ನಿರ್ಧರಿಸಿದ್ದೆವು. ಆದರೆ ನಾಳೆ ಪಿಯುಸಿ ಪರೀಕ್ಷೆ ಇದೆ. ಹೀಗಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಈ ಬಂದ್ ವಾಪಸ್ ಪಡೆದಿದ್ದೇವೆ ಎಂದು ಹೇಳಿದ್ದಾರೆ.
ಕಳೆದ ಭಾನುವಾರವಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ಬಿಜೆಪಿಯ ಭ್ರಷ್ಟಾಚಾರ ಖಂಡಿಸಿ ಮಾರ್ಚ್ 9 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 11 ಗಂಟೆವರೆಗೆ ಎಲ್ಲಾ ವ್ಯಾಪಾರಿಗಳು ಬಂದ್‌ಗೆ ಬೆಂಬಲ ನೀಡುವಂತೆ ಕೋರಿದ್ದರು.
ಮುಜುಗರದಿಂದ ತಪ್ಪಿಸಿಕೊಳ್ಳಲು ಬಂದ್ ವಾಪಸ್?
ಇನ್ನು ಈ ಬಂದ್ ಏಕಾಏಕಿ ಹಿಂಪಡೆದಿರುವುದಕ್ಕೆ ಪಕ್ಷದ ಹಿರಿಯ ನಾಯಕರ ಅಸಮಾಧಾನವೇ ಕಾರಣ ಎನ್ನಲಾಗುತ್ತಿದೆ. ಹೌದು ಈ ಹಿಂದೆ ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮಿಸುವ ಹಿನ್ನೆಲೆ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಈ ವಿಚಾರವಾಗಿ ಅಂದು ಕಾಂಗ್ರೆಸ್ ರಾಜ್ಯ ಸರ್ಕಾರವನ್ನು ವ್ಯಾಪಕವಾಗಿ ಟೀಕೆ ಮಾಡಿತ್ತು.
ಹೀಗಿರುವಾಗ ನಾಳೆ ಪಿಯುಸಿ ವಿಧ್ಯಾರ್ಥಿಗಳ ಪರೀಕ್ಷೆ ನಡೆಯುತ್ತಿರುವಾಗಲೇ ಬಂದ್ ಮಾಡಿದ್ರೆ ತಮಗೇ ಮುಜುಗರ ಉಂಟಾಗುತ್ತದೆ. ಆಡಳಿತ ಪಕ್ಷ ಅಸ್ತ್ರ ಕೊಟ್ಟಂತಾಗುತ್ತದೆ. ಅಂದು ವಿರೋಧ ಮಾಡಿದವರು ಇಂದು ಪರೀಕ್ಷೆ ದಿನ ಬಂದ್ ಮಾಡ್ತಾರೆ ಎಂದು ಪ್ರಚಾರ ಮಾಡಬಹುದು, ಹಾಗಾಗಿ ಬಂದ್ ಬೇಡ ಎಂದು ಹಿರಿಯ ನಾಯಕರು ಸಲಹೆ ನೀಡಿದ್ದಾರೆನ್ನಲಾಗಿದೆ. ಈ ನಿಟ್ಟಿನಲ್ಲೇ ಡಿಕೆಶಿ ಈ ಬಂದ್ ಹಿಂಪಡೆದಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ