ಕಾಂಗ್ರೆಸ್ ಕಸರತ್ತು ಮತ್ತು ಅಸಲೀಯತ್ತು: ಹೀಗಿದೆ 'ಕೈ' ಅಭ್ಯರ್ಥಿಗಳ ಆಯ್ಕೆ ಹಿಂದಿನ ಚಿತ್ರಣ


Updated:April 16, 2018, 6:37 PM IST
ಕಾಂಗ್ರೆಸ್ ಕಸರತ್ತು ಮತ್ತು ಅಸಲೀಯತ್ತು: ಹೀಗಿದೆ 'ಕೈ' ಅಭ್ಯರ್ಥಿಗಳ ಆಯ್ಕೆ ಹಿಂದಿನ ಚಿತ್ರಣ

Updated: April 16, 2018, 6:37 PM IST
-ಧರಣೀಶ್ ಬೂಕನಕೆರೆ, ನ್ಯೂಸ್ 18 ಕನ್ನಡ

ನ್ಯೂಸ್ 18

ನವದೆಹಲಿ(ಏ.16): ಕಾಂಗ್ರೆಸ್ ಪಕ್ಷ ತನ್ನ ಹುರಿಯಾಳುಗಳ ಪಟ್ಟಿ ಸಿದ್ದಗೊಳಿಸಲು ರಾಜ್ಯದಲ್ಲಿ ಮಾತ್ರವಲ್ಲದೆ ದೆಹಲಿಯಲ್ಲಿ ನಾಲ್ಕು ದಿನ ನಡುರಾತ್ರಿವರೆಗೆ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಸಿದೆ. ಎರಡು ದಿನ‌ ಚುನಾವಣಾ ಸಮಿತಿ ಸಭೆ ನಡೆಸಿದೆ. ಇಷ್ಟು ದೀರ್ಘ ಪ್ರಕ್ರಿಯೆಯ ಬಳಿಕ ಗಜಪ್ರಸವ ಆದಂತೆ ಕಾಂಗ್ರೆಸ್ ಕದನಕಲಿಗಳ ಪಟ್ಟಿ ಹೊರಬಂದಿದೆ. ಜೊತೆಗೆ ಬಸಿರಲ್ಲಿದ್ದ ಬಂಡಾಯವೂ ಹೊರಬಿದ್ದಿದೆ. ಈ ಸುದೀರ್ಘ ಪ್ರಕ್ರಿಯೆ ಮತ್ತು ಬಿರುಸುಗೊಂಡ ಬಂಡಾಯಗಳು ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಅಭ್ಯರ್ಥಿಗಳ ಪಟ್ಟಿಯನ್ನು ಅಖೈರುಗೊಳಿಸುವ ಇಡೀ ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಜಕ್ಕೂ ಮೇಲುಗೈ ಸಾಧಿಸಿದ್ದಾರಾ? ಮುಖ್ಯಮಂತ್ರಿ ಹುದ್ದೆ ಎಂಬ ಮಾಯಜಿಂಕೆಯ ಬೆನ್ನತ್ತಿ ಬೇಸತ್ತಿರುವ ಲೋಕಸಭೆಯ ಪ್ರತಿಪಕ್ಷದ ನಾಯಕರೂ ಆದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಿಮ್ಮತ್ತು ಸಿಕ್ಕಿದೆಯಾ? ಕಾಂಗ್ರೆಸ್ ಇತಿಹಾಸದಲ್ಲೇ ಅತಿ ದೀರ್ಘ ಅವಧಿಗೆ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿರುವ ಡಾ. ಜಿ. ಪರಮೇಶ್ವರ್ ಕಡೆಪಕ್ಷ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸುವುದರಲ್ಲಿ ಸಫಲರಾಗಿದ್ದಾರಾ? ಪಕ್ಷದ ಸಂರಚನೆಯಲ್ಲಿ ಬದಲಾವಣೆ ಬಯಸಿರುವ ಶತಮಾನದ ಇತಿಹಾಸವುಳ್ಳ ಪಕ್ಷದ ನೂತನ ಅಧ್ಯಕ್ಷ ರಾಹುಲ್ ಗಾಂಧಿ ಟಿಕೆಟ್ ಕೊಡುವಂತಹ ನಿರ್ಣಾಯಕ ಹಂತದಲ್ಲಿ ಯಾವುದೇ ಲಾಬಿಗೆ ಮಣಿಯದೆ ಪಕ್ಷದ ಸಿದ್ದಾಂತ ಮತ್ತು ಗೆಲುವೇ ಮಾನದಂಡ ಎಂಬ ಮಾದರಿ ರೂಪಿಸಿದ್ದಾರಾ?

ಈಗ ಉತ್ತರಗಳ ಸರದಿ. ಸಿದ್ದರಾಮಯ್ಯ ಅಂದುಕೊಂಡಿದ್ದನ್ನು ಸಿದ್ಧಿಸಿಕೊಂಡಿದ್ದಾರೆ.

ಮೊದಲನೆಯದಾಗಿ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರ ತೀವ್ರ ವಿರೋಧದ ನಡುವೆಯೂ ಜೆಡಿಎಸ್ ನಿಂದ ಮುತುವರ್ಜಿ ವಹಿಸಿ ಕರೆತಂದ ಶಾಸಕ ಗಣಕ್ಕೆ ಟಿಕೆಟ್ ಕೊಡಿಸಿದ್ದಾರೆ. ಅದಲ್ಲದೆ ಗೆಲುವೊಂದೇ ಮಾನದಂಡ ಎಂದು ಆನಂದ್ ಸಿಂಗ್, ನಾಗೇಂದ್ರ ಮತ್ತು ಅಶೋಕ್ ಖೇಣಿಗೆ ಟಿಕೆಟ್ ಕೊಡಿಸಿದ್ದಾರೆ. ಇದೇ ಮಾನದಂಡದಡಿ ಹಾಲಿ ಶಾಸಕರಿಗೆ ಟಿಕೆಟ್ ತಪ್ಪಿಸಿದ್ದಾರೆ. ಆ ಪೈಕಿ ತಮ್ಮದೇ  ಸಮುದಾಯದ ತರಿಕೆರೆ ಕ್ಷೇತ್ರದ ಶ್ರೀನಿವಾಸ್ ಮತ್ತು ಬ್ಯಾಡಗಿ ಕ್ಷೇತ್ರದ ಶಿವಣ್ಣ ಮತ್ತು ಬಾದಾಮಿ ಕ್ಷೇತ್ರದ ಬಿ.ಬಿ. ಚಿಮ್ಮನಕಟ್ಟಿ ಅವರಿಗೆ ಟಿಕೆಟ್ ತಪ್ಪಿಸಿದ್ದಾರೆ. ತಮ್ಮ ಪುತ್ರ ಡಾ.‌ ಯತೀಂದ್ರಗೆ ಟಿಕೆಟ್ ಕೊಡಿಸಿದ್ದಾರೆ. ‌ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡು ಕಡೆಯಿಂದ ಕಣಕ್ಕಿಳಿಯುತ್ತಾರೆ ಎನ್ನುವ ತಮ್ಮದೇ ಬಗ್ಗೆ ಎದ್ದಿದ್ದ ಗೊಂದಲಕ್ಕೆ ತೆರೆಎಳೆದಿದ್ದಾರೆ. ಇದಲ್ಲದೆ ತಮ್ಮ ನಿಷ್ಟರೂ ಮತ್ತು ಬೆಂಬಲಿಗರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಒಂದು ಭಾರಿಗೆ ಇಷ್ಟೆಲ್ಲವೂ ಸಿದ್ದರಾಮಯ್ಯ ಪರವಾಗಿ ಆದದ್ದು ಕಡಿಮೆ ಸಾಧನೆಯಲ್ಲ.

ಮಲ್ಲಿಕಾರ್ಜುನ ಖರ್ಗೆಯವರ ವಿಷಯವನ್ನು ನೋಡುವುದಾದರೆ ತಮ್ಮದೇ ಜಿಲ್ಲೆಯ ಗುಲ್ಬರ್ಗ ಉತ್ತರ ಕ್ಷೇತ್ರದಲ್ಲಿ ಇತ್ತೀಚೆಗೆ ನಿಧನರಾದ ಮಾಜಿ‌ ಸಚಿವ ಖಮರುಲ್ಲಾ ಇಸ್ಲಾಂ ಪತ್ನಿ ಫಾತಿಮಾ ಅವರಿಗೆ ಟಿಕೆಟ್ ಕೊಡಬೇಡಿ ಎಂದು ಖರ್ಗೆ ಪಟ್ಟುಹಿಡಿದಿದ್ದರು. ಅದು ಸಾಧ್ಯವಾಗಲಿಲ್ಲ. ಮಾಜಿ ಶಾಸಕ ಪ್ರಸನ್ನಕುಮಾರ್ ಮೇಲಿನ ಪ್ರೀತಿಗಿಂತ ಸಿದ್ದರಾಮಯ್ಯ ಮೇಲಿನ ಹಿಡಿತ ಸಾಧಿಸಬೇಕೆಂಬ ಹಠದಿಂದ ಅಖಂಡ ಶ್ರೀನಿವಾಸಮೂರ್ತಿಗೆ ಟಿಕೆಟ್ ಕೊಡಬಾರದೆಂದು ಬಿಗಿಪಟ್ಟು ಹಾಕಿದ್ದರು. ಆದರೆ ಅವರ ಪಟ್ಟಿಗೆ ಪೆಟ್ಟುಬಿದ್ದಿದೆ. ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ತಮ್ಮ‌ ನೆಚ್ಚಿನ ಶಿಷ್ಯ ಛಲವಾದಿ ನಾರಾಯಣಸ್ವಾಮಿಗೆ ಟಿಕೆಟ್ ಕೊಡಿಸಬಯಸಿದ್ದರು. ಅದೂ ಸಾಧ್ಯವಾಗಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರ ಮಾತಿಗೆ ಇಡೀ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಎಷ್ಟರಮಟ್ಟಿಗೆ ಬೆಲೆ ಸಿಕ್ಕಿದೆ ಎಂಬುದಕ್ಕೆ ಇವಿಷ್ಟು ಉದಾಹರಣೆಗಳು ಸಾಕು.
Loading...

ಕೆಪಿಸಿಸಿ ಅಧ್ಯಕ್ಷರಾದ ಡಾ. ಜಿ. ಪರಮೇಶ್ವರ್, ಸಿದ್ದರಾಮಯ್ಯ ಮೇಲಿನ‌ ಜಿದ್ದಿಗೆ ಎರಡು ಕಡೆ ನಿಲ್ಲಲು ಪ್ರಯತ್ನಿಸಿದರು. ಹೈಕಮಾಂಡ್ ಅವಕಾಶ ಕೊಟ್ಟಿಲ್ಲ. ಜಯನಗರದಿಂದ ತಮ್ಮ ಪರಮಾಪ್ತ ಎಂ.ಸಿ. ವೇಣುಗೋಪಾಲ್ ಅವರಿಗೆ ಅವಕಾಶ ಕೊಡಿಸಲು ಪ್ರಯತ್ನಿಸಿದರು. ಅದೂ ಸಾಧ್ಯವಾಗಲಿಲ್ಲ. ಮಹದೇವಪುರ ಕ್ಷೇತ್ರದಲ್ಲಿ ತಮ್ಮ ಬೆಂಬಲಿಗ ಎ.ಸಿ. ಶ್ರೀನಿವಾಸ್ ಗೆ ಟಿಕೆಟ್ ಕೊಡಿಸುವುದರಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ. ಅಷ್ಟರಮಟ್ಟಿಗೆ ಮಾತ್ರ ಪರಮೇಶ್ವರ್ ಸಮಾಧಾನ ಪಟ್ಟುಕೊಳ್ಳಬೇಕಾಗಿದೆ.

ಕಡೆಗೆ ಸಿದ್ದರಾಮಯ್ಯ ಅವರನ್ನು ಮೀರಿ ಯಶಸ್ಸು ಸಾಧಿಸಿರುವುದು ರಾಹುಲ್ ಗಾಂಧಿ, ಕಾಂಗ್ರೆಸ್ ಹೈಕಮಾಂಡ್. ಇಷ್ಟು ವರ್ಷ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಹೈರಾಣ ಆಗಿಬಿಟ್ಟಿರುತ್ತಿತ್ತು. ನಾನಾ ರೀತಿಯ ಒತ್ತಡಗಳಿಗೆ ಸಿಲುಕಿ ಕಡೆಗಳಿಗೆವರೆಗೂ ಪಟ್ಟಿ ಬಿಡುಗಡೆ ಮಾಡದೆ ಕಾದು ಕುಳಿತಿರುತ್ತಿತ್ತು. ಕಂತು ಕಂತುಗಳಲ್ಲಿ ಬಿಡುಗಡೆ ಮಾಡುತ್ತಿತ್ತು. ಟಿಕೆಟ್ ಗಳನ್ನು ದುಡ್ಡಿಗೆ ಮಾರಿಕೊಂಡರು ಎನ್ನುವ ಆರೋಪ ದಂಡಿಯಾಗಿ ಕೇಳಿಬರುತ್ತಿತ್ತು. ಆದರೀಗ ಬಹಳಷ್ಟು ಸುಧಾರಣೆ ಕಂಡಿದೆ. ಯಾವುದೇ ಒತ್ತಡಗಳಿಗೆ ಮಣಿಯುವುದಿಲ್ಲ ಎಂಬ ಸಂದೇಶ ರವಾನಿಸಿದೆ. ಜಾತಿಬಲಕ್ಕೆ, ಹಣದ ಪ್ರಭಾವಕ್ಕೆ ಸೊಪ್ಪು ಹಾಕುವುದಿಲ್ಲ ಎಂಬ ಸಂದೇಶ ಕಳುಹಿಸಿದೆ. ಹಾಲಿ ಶಾಸಕರಿಗೆ ಟಿಕೆಟ್ ತಪ್ಪಿಸುವ ಮೂಲಕ ಅಸಮರ್ಥರನ್ನು ಸಹಿಸುವುದಿಲ್ಲ ಎಂಬ ಸಂದೇಶ ಕಳುಹಿಸಿದೆ. ನಾಯಕರ ಬಾಲ ಹಿಡಿದು ದೆಹಲಿಗೆ ಬರುವ ಬದಲು ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಮೈಮುರಿದು ಕೆಲಸ ಮಾಡಿ ಎನ್ನುವ ಸಂದೇಶ ಕಳುಹಿಸಿದೆ. ಜೊತೆಜೊತೆಗೆ ಸಮಾಜಿಕ ನ್ಯಾಯ ಮತ್ತು ಗೆಲುವಿಗೆ ಸಮಾನ ಮಾನ್ಯತೆ ನೀಡಲಾಗಿದೆ.

 
First published:April 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ