PSI Recruitment Scam: ಹಾಸನದಲ್ಲಿ ತಂದೆ-ಮಗ ಸೇರಿ ಮೂವರ ಬಂಧನ; ಒಂದೇ ಕುಟುಂಬದ ಮೂವರು ಪೊಲೀಸ್ ಅಧಿಕಾರಿಗಳ ವಿಚಾರಣೆ

ಪಿಎಸ್ಐ ಹಗರಣದ ನಂಟು ಈಗ ಹಾಸನಕ್ಕೂ ಅಂಟಿದ್ದು, ಹಾಸನ ಜಿಲ್ಲೆಯ ಒಂದೇ ಕುಟುಂಬದ ಮೂವರು ಪೊಲೀಸ್ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆಯೇ ಎಂಬುದು ತನಿಖೆಯಿಂದ ಬಯಲಾಗಬೇಕಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಾಸನ (ಮೇ 8) : ಪಿಎಸ್ಐ ನೇಮಕಾತಿ ಅಕ್ರಮ (PSI Recruitment Scam) ಸಂಬಂಧ ಹಾಸನ ಜಿಲ್ಲೆಯ ಮೂವರು ವ್ಯಕ್ತಿಗಳನ್ನು ಸಿಐಡಿ ಅಧಿಕಾರಿಗಳು ಬಂಧಿಸಿ (Arrest) ವಿಚಾರಣೆ ನಡೆಸುತ್ತಿದ್ದಾರೆ. ಹಾಸನ ಜಿಲ್ಲೆಯ ಶ್ರವಣಬೆಳಗೊಳ ತಾಲೂಕಿನ ಬೆಕ್ಕ ಗ್ರಾಮಪಂಚಾಯಿತಿಯ ಕೇಶವ ಹಾಗೂ ಅದೇ ಗ್ರಾಮದ ನಾರಾಯಣಪ್ಪ (Narayanppa) ಮತ್ತು ಪರೀಕ್ಷೆ ಬರೆದಿದ್ದ ಆತನ ಮಗ ವೇಣುಗೋಪಾಲರನ್ನ ಸಿಐಡಿ ಅಧಿಕಾರಿಗಳು (CID Officer) ಇಂದು ಬೆಳಗ್ಗೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪಿಎಸ್ಐ ಹಗರಣದಲ್ಲಿ ದಿನದಿಂದ ದಿನಕ್ಕೆ ಒಬ್ಬಬ್ಬರು ಸಿಐಡಿ ಅಧಿಕಾರಿಗಳಿಗೆ ಸಿಕ್ಕಿ ಬೀಳುತ್ತಿದ್ದಾರೆ. ಅದೇ ರೀತಿ ಹಾಸನ ಜಿಲ್ಲೆಯಲ್ಲಿ ಕೂಡ ಪಿಎಸ್ಐ ಹಗರಣದ ಕಿಂಗ್ ಪಿನ್ (King Pin) ಇದ್ದಾರೆ ಎಂಬ ಮಾಹಿತಿಯನ್ನು ಮೂರು ದಿನದ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ (H.D Kumaraswamy) ಪತ್ರಿಕಾಗೋಷ್ಠಿಯಲ್ಲಿ ಮಾರ್ಮಿಕವಾಗಿ ನುಡಿದಿದ್ದರು.

ಮೂವರು ಪೊಲೀಸ್ ಅಧಿಕಾರಿಗಳ ವಿಚಾರಣೆ

ಇನ್ನು ಈ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆರೋಪಿ ಕೇಶವ ಅವರ ಸಂಬಂಧಿಕರೊಬ್ಬರು ಈ ಹಿಂದೆ ಹಾಸನದಲ್ಲಿ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸಿದ್ದರು. ಅದಲ್ಲದೆ ಈಗ ಮತ್ತೊಬ್ಬ ಸಂಬಂಧಿಕ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು ಮತ್ತೊಬ್ಬ ಮಹಿಳಾ ಸಂಬಂಧಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹೀಗಾಗಿ ಕೇಶವ ಅವರ ಕುಟುಂಬದ ಸಾಕಷ್ಟು ಮಂದಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಇತ್ತೀಚೆಗೆ ಪರೀಕ್ಷೆ ಬರೆದಿದ್ದ ವೇಣುಗೋಪಾಲ್, ಆಯ್ಕೆ ಪ್ರಕ್ರಿಯೆಯಲ್ಲಿ ಕೇಶವ ಎಂಬುವವರು ಹಣದ ಮೂಲಕ ಡೀಲ್ ಮಾಡಿ ಪರೀಕ್ಷೆ ಪಾಸು ಮಾಡಿಸಿದ್ದರು ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ:  BasanaGowda Patil Yatnal: ಸಿಎಂ ಸ್ಥಾನಕ್ಕೆ 2500 ಕೋಟಿ ಹೇಳಿಕೆ; ಯು ಟರ್ನ್ ಹೊಡೆದ ಶಾಸಕ ಯತ್ನಾಳ್, ಈಗ ಹೇಳಿದ್ದೇನು?

ಒಂದೇ ಕುಟುಂಬದ ಮೂವರು ಪೊಲೀಸರು

ಹೀಗಾಗಿ ಪಿಎಸ್ಐ ಹಗರಣದ ನಂಟು ಈಗ ಹಾಸನಕ್ಕೂ ಅಂಟಿದ್ದು, ಹಾಸನ ಜಿಲ್ಲೆಯ ಒಂದೇ ಕುಟುಂಬದ ಮೂವರು ಪೊಲೀಸ್ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆಯೇ ಎಂಬುದು ತನಿಖೆಯಿಂದ ಬಯಲಾಗಬೇಕಿದೆ. ಸದ್ಯ ಬೆಕ್ಕ ಗ್ರಾಮ ಪಂಚಾಯತಿಯ ಅಧ್ಯಕ್ಷ ಕೇಶವ ರವರನ್ನು ಸಿಐಡಿ ಅಧಿಕಾರಿಗಳು ವಿಚಾರಣೆಗೊಳಪಡಿಸಿ ತನಿಖೆ ನಡೆಸುತ್ತಿದ್ದು, ಈ ಪ್ರಕರಣದಲ್ಲಿ ಜಿಲ್ಲೆಯ ಇನ್ನೆಷ್ಟು ಜನ ಸಿಕ್ಕಿಬಿಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

16 ಅಭ್ಯರ್ಥಿಗಳ ಬಂಧನ

ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧ ಬೆಂಗಳೂರಿನ ಕೇಂದ್ರಗಳಲ್ಲಿ ನಡೆದಿರುವ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಮತ್ತಿಬ್ಬರು ಅಭ್ಯರ್ಥಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದಿರುವುದನ್ನು ಪತ್ತೆ ಮಾಡಿದ್ದ ಸಿಐಡಿ ಪೊಲೀಸರು 92 ಅಭ್ಯರ್ಥಿಗಳಿಗೆ ನೋಟಿಸ್ ನೀಡಿದ್ದರು. ಪರೀಕ್ಷೆಯಲ್ಲಿ ಅಕ್ರಮ ಎಸಗಿರುವುದು ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆಯಲ್ಲಿ ಕಂಡು ಬಂದ ಬೆನ್ನಲ್ಲೇ 12 ಆರೋಪಿಗಳನ್ನು ಬಂಧಿಸಿದ್ದರು. ಈ ಕುರಿತು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದರು.

ಇದೀಗ ಮಧು ಹಾಗೂ ಯಶವಂತಗೌಡ ಎಂಬ ಇಬ್ಬರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಪರೀಕ್ಷಾ ಕೇಂದ್ರಗಳಲ್ಲಿ ನಡೆದಿರುವ ಅಕ್ರಮ ಸಂಬಂಧ ಈವರೆಗೂ 16 ಅಭ್ಯರ್ಥಿಗಳನ್ನು ಬಂಧಿಸಿದಂತಾಗಿದೆ.

ಇದನ್ನೂ ಓದಿ:  PSI Recruitment ಅಕ್ರಮದ ಬೆನ್ನತ್ತಿದೆ ಸಿಐಡಿ ಸೈಬರ್ ಟೀಂ; 1000 ಮಂದಿಯ ಶಾರ್ಟ್ ಲಿಸ್ಟ್ ರೆಡಿ

ಹದಿನಾಲ್ಕನೇ ಆರೋಪಿ ಆಗಿರುವ ಮಧು

ಹದಿನಾಲ್ಕನೇ ಆರೋಪಿ ಆಗಿರುವ ಮಧು, (ರೋಲ್ ನಂಬರ್ 9245556) ಮೊದಲ ಪತ್ರಿಕೆಯಲ್ಲಿ 17 ಅಂಕ ಗಳಿಸಿದ್ದ. ಪೇಪರ್ 2 ರಲ್ಲಿ 129. ಒಟ್ಟಾರೆ ಶೇ 75 ಅಂಕ ಗಳಿಸಿ ಪಿಎಸ್ಐ ಆಗಿ ಆಯ್ಕೆಯಾಗಿದ್ದ. ಅದೇ ರೀತಿ ಯಶವಂತಗೌಡ ( ರೋಲ್ ನಂಬರ್: 9244198 ) ಓಎಂಆರ್ ಶೀಟ್ ನಲ್ಲಿ ತಿದ್ದುಪಡಿ ಮಾಡಿರುವುದು ಬೆಳಕಿಗೆ ಬಂದಿತ್ತು. ಇಬ್ಬರು ಆರೋಪಿಗಳು ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದರು. ಇದೀಗ ಇಬ್ಬರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಉಳಿದ 6 ಮಂದಿ ಆರೋಪಿತ ಅಭ್ಯರ್ಥಿಗಳಿಗಾಗಿ ಸಿಐಡಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
Published by:Pavana HS
First published: