ಗಂಗಾಧರ ಚಡಚಣ ನಿಗೂಢ ಸಾವು ಪ್ರಕರಣ: 15 ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಕೆ


Updated:September 7, 2018, 6:44 PM IST
ಗಂಗಾಧರ ಚಡಚಣ ನಿಗೂಢ ಸಾವು ಪ್ರಕರಣ: 15 ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಕೆ
ಇಂಡಿ ಕೋರ್ಟ್ ಆವರಣದಲ್ಲಿ ಸಿಐಡಿ ಅಧಿಕಾರಿಗಳು
  • Share this:
- ಮಹೇಶ್ ವಿ. ಶಟಗಾರ, ನ್ಯೂಸ್18 ಕನ್ನಡ

ವಿಜಯಪುರ(ಸೆ. 07): ಭೀಮಾ ತೀರದ ಗಂಗಾಧರ ಚಡಚಣ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಇಂದು ಕೋರ್ಟ್​ನಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ. ಇಂಡಿಯ ಜೆಎಂಎಫ್​ಸಿ ಕೋರ್ಟ್​ನ ನ್ಯಾಯಾಧೀಶ ಅರವಿಂದ್ ಹಾಗರಗಿ ಅವರಲ್ಲಿ ಪ್ರಕರಣದ 15 ಆರೋಪಿgಳ ವಿರುದ್ಧ 373 ಪುಟಗಳ ಚಾರ್ಜ್​ಶೀಟ್ ಸಲ್ಲಿಕೆಯಾಗಿದೆ. ಇದರೊಂದಿಗೆ ಕೋರ್ಟ್​ನಲ್ಲಿ ಪ್ರಕರಣದ ವಿಚಾರಣೆಗೆ ಇನ್ನಷ್ಟು ವೇಗ ಸಿಗಲಿದೆ.

ಗಂಗಾಧರ ಚಡಚಣ ಅವರು ಇಂಡಿ ತಾಲೂಕಿನ ಕುಖ್ಯಾತ ಚಡಚಣ ಗ್ಯಾಂಗ್​ಗೆ ಸೇರಿದ ರೌಡಿಶೀಟರ್ ಆಗಿದ್ದರು. ಇತ್ತೀಚೆಗಷ್ಟೇ ಎನ್​ಕೌಂಟರ್​ನಲ್ಲಿ ಹತ್ಯೆಯಾಗಿದ್ದ ಧರ್ಮರಾಜ ಚಡಚಣ ಅವರ ಸಹೋದರರಾದ ಗಂಗಾಧರ ಚಡಚಣ ಅವರು 2017ರ ಅಕ್ಟೋಬರ್ 30ರಂದು ಶಂಕಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಅವರನ್ನು ನಕಲಿ ಎನ್​ಕೌಂಟರ್​ನಲ್ಲಿ ಹತ್ಯೆಗೈಯಲಾಗಿದೆ ಎಂಬುದು ಗಂಗಾಧರ ಚಡಚಣ ಅವರ ತಾಯಿ ವಿಮಲಾಬಾಯಿ ಅವರ ಆರೋಪವಿದೆ.

ಇಂಡಿ ತಾಲೂಕಿನ ಕೊಂಕಣಗಾಂವ ಬಳಿ ತೋಟದ ಮನೆಯೊಂದರಲ್ಲಿ ಧರ್ಮರಾಜ ಚಡಚಣನ ಎನ್​ಕೌಂಟರ್ ಆಗಿತ್ತು. ಆಗ ಅವರ ಸೋದರ ಗಂಗಾಧರ ಚಡಚಣನನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಆ ಬಳಿಕ ಗಂಗಾಧರ ಮತ್ತೆ ಕಾಣಿಸಲೇ ಇಲ್ಲ. ತಾನು ಆತನನ್ನು ಬಿಟ್ಟುಕಳುಹಿಸಿದ್ದಾಗಿ ಪೊಲೀಸರು ತಿಳಿಸಿದ್ದರೂ, ಆತನ ಕುರುಹು ಇನ್ನೂ ಸಿಕ್ಕಿಲ್ಲ. ಗಂಗಾಧರ ಚಡಚಣನನ್ನು ಪೊಲೀಸರ ನಕಲಿ ಎನ್​ಕೌಂಟರ್​ನಲ್ಲಿ ಕೊಂದು ಹಾಕಲಾಗಿದೆ ಎಂಬ ಶಂಕೆಗಳಿವೆ. ಜೂನ್ 9ರಂದು ಗಂಗಾಧರ ಚಡಚಣನ ತಾಯಿ ವಿಮಾಲಾಬಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಯಿತು. ಮಹಾದೇವ ಭೈರಗೊಂಡ, ಹನುಮಂತ ಪೂಜಾರಿ ಸೇರಿ ನಾಲ್ಕೈದು ಮಂದಿ ವಿರುದ್ಧ ವಿಮಾಲಾಬಾಯಿ ಸಂಶಯ ವ್ಯಕ್ತಪಡಿಸಿ ದೂರು ನೀಡಿದ್ದರು.

ಈ ಪ್ರಕರಣದಲ್ಲಿ ಚಡಚಣ ಪಿಎಸ್​ಐ ಗೋಪಾಲ ಹಳ್ಳೂರ, ಇಬ್ಬರು ಪಿಸಿಗಳು, ರೌಡಿಶೀಟರ್ ಮಹದೇವ ಭೈರಗೊಂಡ, ಜಾಧವ್ ಸೇರಿ ಹಲವು 15 ಮಂದಿಯನ್ನು ಸಿಐಡಿ ಪೊಲೀಸರು ಬಂಧಿಸಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪವಿರುವ ಧರ್ಮರಾಜ ಚಡಚಣನ ಬಲಗೈ ಬಂಟ ಶಿವಾನಂದ ಬಿರಾದಾರನನ್ನು ಕಳೆದ ತಿಂಗಳಷ್ಟೇ ಬಂಧಿಸಲಾಗಿತ್ತು. ಪ್ರಕರಣದ ಒಬ್ಬ ಆರೋಪಿ ಎಂ.ಬಿ. ಅಸೋಡೆ ಮಾತ್ರ ಇನ್ನೂ ಸಿಕ್ಕಿಲ್ಲ.

ನಾಲ್ಕು ತಿಂಗಳ ಹಿಂದೆ ಈ ಪ್ರಕರಣದ ತನಿಖೆಯ ಹೊಣೆ ಹೊತ್ತ ಸಿಐಡಿ ಅಧಿಕಾರಿಗಳು ತನಿಖೆಯಲ್ಲಿ ಸಾಕಷ್ಟು ಪ್ರಗತಿ ತೋರಿದ್ದಾರೆ. ಗಂಗಾಧರ ಚಡಚಣನ ಹತ್ಯೆ ನಡೆಯಿತೆನ್ನಲಾದ ಶಂಕಿತ ಸ್ಥಳದಲ್ಲಿ ಕಲ್ಲುಮಣ್ಣಿನಲ್ಲಿ ಮಾನವ ರಕ್ತವಿರುವುದು ಪತ್ತೆಯಾಗುವ ಮೂಲಕ ಪ್ರಕರಣಕ್ಕೆ ಪುಷ್ಟಿ ಸಿಕ್ಕಿತ್ತು. ಎಫ್​ಎಸ್​ಎಲ್ ತಂಡವನ್ನು ಸ್ಥಳಕ್ಕೆ ಕರೆಸಿ ಬೆಂಝೈಡ್ ಪರೀಕ್ಷೆ ನಡೆಸಲಾಗಿತ್ತು.
First published: September 7, 2018, 6:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading