ಚಿತ್ರದುರ್ಗದ ರೈತರಿಗೆ ಸಂಕಷ್ಟ; ಮಳೆಯಿಂದ ಕೊಳೆತು ತಿಪ್ಪೆ ಸೇರುತ್ತಿದೆ ಸಾವಿರಾರು ಚೀಲ ಈರುಳ್ಳಿ

Chitradurga Rain: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮೂರು, ಚಿತ್ರದುರ್ಗ ತಾಲ್ಲೂಕಿನಲ್ಲಿ ಬೆಳೆದ  ಈರುಳ್ಳಿ ಬೆಳೆ ಮಳೆ ಹೆಚ್ಚಾಗಿ, ಕೊಳೆತು ಹೋಗಿದೆ.

news18-kannada
Updated:September 20, 2020, 8:01 AM IST
ಚಿತ್ರದುರ್ಗದ ರೈತರಿಗೆ ಸಂಕಷ್ಟ; ಮಳೆಯಿಂದ ಕೊಳೆತು ತಿಪ್ಪೆ ಸೇರುತ್ತಿದೆ ಸಾವಿರಾರು ಚೀಲ ಈರುಳ್ಳಿ
ಈರುಳ್ಳಿ ಬೆಳೆ
  • Share this:
ಚಿತ್ರದುರ್ಗ (ಸೆ. 20): ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆ ಇಲ್ಲದೆ ಪ್ರತಿ ವರ್ಷ ರಣಭೀಕರ ಬರಗಾಲ ಆವರಿಸುತಿತ್ತು. ಜಮೀನು ಹಸನು ಮಾಡಿ ಬಿತ್ತನೆ ಮಾಡಿದ ಜಿಲ್ಲೆಯ ಅನ್ನದಾತರು, ತಲೆಯ ಮೇಲೆ ಕೈ ಹೊತ್ತು, ಮಳೆರಾಯನ ಆಗಮನ ಯಾವಾಗ ಅಂತ ಮುಗಿಲು ನೋಡುತ್ತಿದ್ದರು. ಆದರೆ, ಈ ಬಾರಿ ಮಾತ್ರ ಕಳೆದ ತಿಂಗಳಿಂದ ಎಡೆಬಿಡದೆ ಸುರಿದ  ವರುಣನ ಅಬ್ಬರ ರೈತರ ಬದುಕನ್ನು ಮೂರಾಬಟ್ಟೆ ಮಾಡಿದೆ. ನೂರಾರು ಎಕರೆಗಳಲ್ಲಿ ರೈತರು ಬೆಳೆದ ಈರುಳ್ಳಿಯನ್ನು ಮಾರಾಟ ಮಾಡಲು ಆಗದೆ ತಿಪ್ಪೆಗೆ ಸುರಿಯುತ್ತಿದ್ದಾರೆ. ಲಕ್ಷಾಂತರ ರೂ. ಬಂಡವಾಳ ಹೂಡಿದ್ದ ರೈತ ಸಂಕಷ್ಠಕ್ಕೆ ಸಿಲುಕಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಬೇಡುವಂತಾಗಿದೆ. ಮಳೆಯಿಲ್ಲದೇ ಬರದ ನಾಡು ಎಂಬ ಹಣೆಪಟ್ಟಿ ಹೊತ್ತ ಚಿತ್ರದುರ್ಗ ಜಿಲ್ಲೆಯಲ್ಲಿ ಬಂಗಾರದ ಬೆಳೆಯೆಂದು ಈರುಳ್ಳಿ ಬೆಳೆದಿದ್ದ ರೈತರು ಟ್ರಾಕ್ಟರ್ ಮೂಲಕ ನಾಶ ಮಾಡಿ, ಕೊಳೆಯುತ್ತಿರುವ ಈರುಳ್ಳಿಯನ್ನ ಟ್ರಾಕ್ಟರ್​​ನಲ್ಲಿ ಹೇರಿಕೊಂಡು ಊರಾಚೆಯ ತಿಪ್ಪೆ, ಖಾಲಿ‌ ಜಮೀನಿಗೆ ಸುರಿಯುತ್ತಿದ್ದಾರೆ. ಈ ಮನ ಕಲಕುವ ದೃಶ್ಯಗಳು ಮಧ್ಯ ಕರ್ನಾಟಕದ ಹೆಬ್ಬಾಗಿಲ ಚಿತ್ರದುರ್ಗ ಜಿಲ್ಲೆಯ ರೈತರ ಪರಿಸ್ಥಿತಿಯನ್ನ ವಿವರಿಸುವಂತಿವೆ.

ಪ್ರತಿ ಬಾರಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತೀರ ಕಡಿಮೆ ಇರುತ್ತಿತ್ತು. ಜಿಲ್ಲೆಯಲ್ಲಿ ರಣ ಭೀಕರ ಬಿಸಿಲು, ಬರದ ಮಧ್ಯೆಯೂ ಅಲ್ಪ‌ ಮಳೆ ಸ್ವಲ್ಪ ಮಳೆ ಹಾಗೂ  ಬೋರ್ವೆಲ್ ಆಶ್ರಯದಿಂದ  ನೂರಾರು ಎಕರೆಯಲ್ಲಿ ರೈತರು ಈರುಳ್ಳಿ ಬೆಳೆಯನ್ನೇ ಬಂಗಾರ ಅಂತ ಬೆಳೆಯುತ್ತಿದ್ದರು. ಅಷ್ಟೇ ಅಲ್ಲದೆ, ಕೊಳವೆ ಬಾವಿಯಲ್ಲಿ ನೀರಿಲ್ಲ ಎಂದರೆ ಟ್ಯಾಂಕರ್ ಮೂಲಕ ನೀರು ಹಾಯಿಸಿ, ಕಷ್ಟಪಟ್ಟು ಈರುಳ್ಳಿ ಫಸಲು ತೆಗೆದು ಜೀವನ ಸಾಗಿಸುತ್ತಿದ್ದರು. ಆದರೆ, ಈ ವರ್ಷ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯ ರೈತರ ಬದುಕಿನ ಚಿತ್ರಣವೇ ಬದಲಾಗಿ ಹೋಗಿದೆ. ಪ್ರತಿವರ್ಷ ಅನಾವೃಷ್ಠಿ ಎದುರಿಸುತ್ತಿದ್ದ ಜಿಲ್ಲೆಯ ಈರುಳ್ಳಿ ಬೆಳೆಗಾರರು, ಈ ಬಾರಿ ಅತಿವೃಷ್ಠಿಗೆ ಸಿಲುಕಿ ನಲುಗಿ ಹೋಗಿದ್ದಾರೆ.

ಇದನ್ನೂ ಓದಿ: ಹೆಚ್​ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಡಾ. ಸೂರಜ್ ರೇವಣ್ಣ ಆಯ್ಕೆ

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮೂರು, ಚಿತ್ರದುರ್ಗ ತಾಲ್ಲೂಕಿನಲ್ಲಿ ಬೆಳೆದ  ಈರುಳ್ಳಿ ಬೆಳೆ ಮಳೆ ಹೆಚ್ಚಾಗಿ, ಕೊಳೆತು ಹೋಗಿದೆ. ಚಳ್ಳಕೆರೆ ತಾಲೂಕಿನ ಹಿರೇ ಮದುರೆ ಗ್ರಾಮದ ರೈತ ಬಸವರಾಜ್ ತನ್ನ 6 ಎಕರೆ ಜಮೀನಿನಲ್ಲಿ, ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಬೆಳೆದಿದ್ದ ಬೆಳೆ ಜಮೀನಲ್ಲಿಯೇ ಕೊಳೆತು ಹೋಗಿದ್ದು, ಸಂಪೂರ್ಣ ಬೆಳೆಯನ್ನ ಟ್ರಾಕ್ಟರ್ ಮೂಲಕ ನಾಶ ಪಡಿಸಿದ್ದಾನೆ. ಹಿರಿಯೂರು ತಾಲ್ಲೂಕಿನ ಯಳಗೊಂಡನಹಳ್ಳಿ ರೈತ ನಿಜಲಿಂಗಪ್ಪ, ತಿಪ್ಪೇಸ್ವಾಮಿ ಎಂಬ ರೈತರು ಬೆಳೆದಿದ್ದ ನೂರಾರು ಚೀಲ ಈರುಳ್ಳಿ ಸಂಪೂರ್ಣ ಕೊಳೆತಿದ್ದು, ಊರಿನ ತಿಪ್ಪೆ,ಜಮೀನಿಗೆ ಸುರಿಯುತ್ತಿದ್ದಾರೆ.ಇನ್ನೂ ಜಿಲ್ಲೆಯ ದ್ಯಾಮವ್ವನಹಳ್ಳಿ, ಕಲ್ಲಹಳ್ಳಿ, ಕಾಸವರಹಟ್ಟಿ, ಲಿಂಗಾವರಹಟ್ಟಿ ಸೇರಿದಂತೆ ಹಲವು ಕಡೆಗಳಲ್ಲಿ, ನೂರಾರು ಲೋಡ್ ಈರುಳ್ಳಿ ಕೊಳೆತು ತಿಪ್ಪೆ ಸೇರುತ್ತಿದೆ. ಜಿಲ್ಲೆಯಲ್ಲಿ ಈರುಳ್ಳಿ ಬೆಳೆದ ರೈತರು ತೀವ್ರ ಸಂಕಷ್ಠಕ್ಕೆ ಸಿಲುಕಿದ್ದು, ಸೋನೆ ಮಳೆಯಲ್ಲಿ ರೈತರ ಬದುಕು ಕೊಚ್ಚಿ ಹೋಗಿದೆ. ಅಲ್ಲದೆ, ಆರಂಭದಲ್ಲಿ ಈರುಳ್ಳಿ ಬೀಜಕ್ಕೆ, ಪ್ರತಿ ಕೆಜಿಗೆ 2000 ಕ್ಕೂ ಅಧಿಕ ಹಣ ಹಾಕಿ ಬಿತ್ತನೆ ಮಾಡಿದ್ದರು. ಸತತ ಪರಿಶ್ರಮದಿಂದ  ಲಕ್ಷಾಂತರ ಹಣ ಖರ್ಚು ಮಾಡಿ ಬೆಳೆದಿದ್ದ ಈರುಳ್ಳಿ ಬೆಳೆ ಕೈ ಸೇರುವ ಬದಲು ಕೊಳೆತು ತಿಪ್ಪೆ ಸೇರುತ್ತಿದೆ.

ಇನ್ನೇನು ಈರುಳ್ಳಿ ಲಾಭ ತಂದು ಕೊಡುತ್ತದೆ ಅನ್ನೋ ವೇಳೆಯಲ್ಲಿ ಸುರಿದ ಮಳೆಯಿಂದ ನೂರಾರು ಟನ್ ಈರುಳ್ಳಿ ಸಂಪೂರ್ಣ ಕೊಳೆತು ಹೋಗುತ್ತಿದೆ. ಇದರಿಂದ ಅನಿವಾರ್ಯವಾಗಿ ರೈತರು ಪರಿಹಾರ ನೀಡುವಂತೆ ಸರ್ಕಾರಕ್ಕೆ ಬೇಡುವಂತಾಗಿದೆ.  ಅತಿವೃಷ್ಠಿಯ ಪರಿಸ್ಥಿತಿ ಕುರಿತು ಆರೋಗ್ಯ ಮಂತ್ರಿ ಶ್ರೀರಾಮುಲು ಟ್ವೀಟ್ ಮಾಡಿದ್ದು, 7302 ಹೆಕ್ಟೇರ್​ನಷ್ಟು ಬೆಳೆ ಹಾನಿಯಾಗಿದ್ದು, 9 ಕೋಟಿ 87 ಲಕ್ಷಕ್ಕೂ ಅಧಿಕ ನಷ್ಠವಾಗಿದೆ. ಕೂಡಲೇ ಸರ್ಕಾರ ಚಿತ್ರದುರ್ಗ ಅತಿವೃಷ್ಠಿ ಹಾಗೂ ಪ್ರವಾಹ ಪೀಡಿತ ಜಿಲ್ಲೆಯ ಎಂದು ಘೋಷಿಸುವಂತೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದ್ದಾರೆ.

ಒಟ್ಟಾರೆ  ಚಿತ್ರದುರ್ಗ ಜಿಲ್ಲೆಯ ಅನ್ನದಾತರಿಗೆ ಮಳೆ ಬಂದರೂ ಕಷ್ಠ, ಬಿಟ್ಟರೂ ಕಷ್ಠ ಎಂಬಂತಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ಸರ್ಕಾರ ಎಚ್ಚೆತ್ತು ಇಲ್ಲಿನ ರೈತರ ಸಂಕಷ್ಟಕ್ಕೆ ಸ್ಪಂದಿಸಿ, ಬೆಳೆ ಹಾನಿಯಾಗಿದ್ದ ನೂರಾರು ಎಕರೆಗೆ ಈರುಳ್ಳಿ ಬೆಳೆಗೆ  ಪರಿಹಾರ ಬಿಡುಗಡೆ ಮಾಡಬೇಕಿದೆ.
Published by: Sushma Chakre
First published: September 20, 2020, 8:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading