ಚಿತ್ರದುರ್ಗದಲ್ಲಿ ಮೂರು ಪಕ್ಷಗಳಿಗೂ ಬಹುಮತ ಅನುಮಾನ; ಶುರುವಾಗಿದೆ ಮೈತ್ರಿ ಲೆಕ್ಕಾಚಾರ

news18
Updated:August 28, 2018, 2:37 PM IST
ಚಿತ್ರದುರ್ಗದಲ್ಲಿ ಮೂರು ಪಕ್ಷಗಳಿಗೂ ಬಹುಮತ ಅನುಮಾನ; ಶುರುವಾಗಿದೆ ಮೈತ್ರಿ ಲೆಕ್ಕಾಚಾರ
news18
Updated: August 28, 2018, 2:37 PM IST
ವಿನಾಯಕ ತೊಡರನಾಳ್, ನ್ಯೂಸ್ 18 ಕನ್ನಡ

ಚಿತ್ರದುರ್ಗ (ಆ.28): ಸ್ಥಳಿಯ ಸಂಸ್ಥೆಗಳ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪುರಸಭೆ , ಚಿತ್ರದುರ್ಗ ಹಾಗೂ ಚಳ್ಳಕೆರೆ ನಗರಸಭೆ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಾ ಇದೆ.

ಜಿಲ್ಲೆಯ ಚಿತ್ರದುರ್ಗ ನಗರಸಭೆ 35 ವಾರ್ಡ್‍ಗಳು ಹಾಗೂ ಚಳ್ಳಕೆರೆ ನಗರಸಭೆಯ 31 ವಾರ್ಡ್ ಮತ್ತು ಹೊಸದುರ್ಗ ಪುರಸಭೆ 23 ವಾರ್ಡ್‍ಗಳಿಗೆ ಚುನಾವಣೆ ನಡೆಯುತ್ತಿದ್ದು, ಚುನಾವಣಾ ಕಣದಲ್ಲಿ ಅಂತಿಮವಾಗಿ 358 ಅಭ್ಯರ್ಥಿಗಳು ಉಳಿದಿದ್ದಾರೆ. ಚಿತ್ರದುರ್ಗ ನಗರಸಭೆ 35 ವಾರ್ಡ್‍ಗಳಲ್ಲಿ 161 ಅಭ್ಯರ್ಥಿಗಳು ಕಣದಲ್ಲಿದ್ದು ಇದರಲ್ಲಿ 34 ವಾರ್ಡ್ ಗಳಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಬಿಜೆಪಿ ಅದರ ರಾಜಕೀಯ ಲೆಕ್ಕಾಚಾರದಂತೆ 29 ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿದೆ. ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ವರ್ಚಸ್ಸನ್ನು ಕೂಡಿ ಕಳೆದಿರುವ ಜೆಡಿಎಸ್ 26 ವಾರ್ಡ್​ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸಿದೆ. ಇನ್ನುಳಿದಂತೆ 2 ಬಿಎಸ್​ಪಿ ಹಾಗೂ 70 ಪಕ್ಷೇತರ ಅಭ್ಯರ್ಥಿಗಳು ಚುನಾವಣ ಅಖಾಡದಲ್ಲಿದ್ದಾರೆ.

ಕಳೆದ ಬಾರಿ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬರದೆ ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರ ವಹಿಸಿಕೊಂಡಿದ್ದವು. ಸದ್ಯ ಮೂರು ಪಕ್ಷಗಳಿಗೂ ಬಹುಮತ ಸಿಗುವ ಲಕ್ಷಣಗಳು ಇಲ್ಲ. ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ತೆರೆಮರೆಯಲ್ಲಿ ಮೈತ್ರಿ ರಾಜಕೀಯ  ಶುರುಮಾಡಿವೆ. ಒಳಒಪ್ಪಂದದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ತಮ್ಮ ರಾಜಕೀಯ ಲೆಕ್ಕಾಚಾರಗಳಂತೆ ಅಲ್ಲಲ್ಲಿ ಡಮ್ಮಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಕೆಲವೆಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಯೇ ಇಲ್ಲ. ಇದನ್ನೆಲ್ಲ ಗಮನಿಸಿರುವ ಬಿಜೆಪಿಯೂ ಕೂಡ ಪಕ್ಷೇತರನ್ನು ಕಣಕ್ಕಿಳಿಸಿ ಅವರನ್ನು ಗೆಲ್ಲಿಸುವ ಮೂಲಕ ಅಧಿಕಾರ ಪಡೆಯಲು  ಬಿಜೆಪಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ತಂತ್ರ ರೂಪಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ, ಮತದಾರರು ಯಾರಿಗೆ ಮಣೆ ಹಾಕುತ್ತಾರೆ ಎಂಬುದು ಮತ ಎಣಿಕೆ ಬಳಿಕವಷ್ಟೆ ತಿಳಿಯಲಿದೆ.

ಇನ್ನು ಚಳ್ಳಕೆರೆ ನಗರಸಭೆಯಲ್ಲಿ 31 ವಾರ್ಡ್‍ಗಳಿದ್ದು, ಇದರಲ್ಲಿ ಕಾಂಗ್ರೆಸ್ 30, ಅಭ್ಯರ್ಥಿಗಳನ್ನು ಕಣಕ್ಕಿಸಿದೆ ಬಿಜೆಪಿ 23 ಅಭ್ಯರ್ಥಿಗಳನ್ನು, ಜೆಡಿಎಸ್ 25 ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಿದೆ. ಇನ್ನು ಬಿಎಸ್​ಪಿ 1, ಸಿಪಿಐಎಂ 1, ಸಿಪಿಐ 1, ಪಕ್ಷೇತರ 19 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ. ಒಟ್ಟು 31 ವಾರ್ಡ್​ಗಳಲ್ಲಿ ವಾರ್ಡ್ ಸಂಖ್ಯೆ 19 ರಲ್ಲಿ ಕಾಂಗ್ರೆಸ್ ಪಕ್ಷದ ಕವಿತಾ ವೀರೇಶ್ ಒಬ್ಬರೇ ಅಭ್ಯರ್ಥಿಯಾಗಿದ್ದಾರೆ. ಚಳ್ಳಕೆರೆ ನಗರಸಭೆಯಲ್ಲಿ ಕಳೆದ ಬಾರಿ ಬಿಜೆಪಿ ಮತ್ತು ಜೆಡಿಎಸ್ ಎರಡು ಪಕ್ಷದ ಸದಸ್ಯರು ಸೇರಿ ಮೈತ್ರಿ ಮಾಡಿಕೊಂಡು ಅಧಿಕಾರದ ಗದ್ದುಗೆ ಹಿಡಿದಿದ್ದರು. ಈ ಎರಡು ಪಕ್ಷಗಳಿಗಿಂತ ಹೆಚ್ಚು ಸ್ಥಾನವನ್ನು ಗೆದ್ದಿದ್ದ ಕಾಂಗ್ರೆಸ್ ಅಧಿಕಾರ ಗಿಟ್ಟಿಸುವಲ್ಲಿ ವಿಫಲವಾಗಿತ್ತು, ಆದರೆ, ಈ ಬಾರಿ ಸಂಪೂರ್ಣ ಬಹುಮತ ಸಾಧಿಸಿ ನಗರಸಭೆ ಅಧಿಕಾರವನ್ನು ಕಾಂಗ್ರೆಸ್ ಪಡೆದುಕೊಳ್ಳಬೇಕು ಅನ್ನುವ ಲೆಕ್ಕಾಚಾರದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿರುವ ಟಿ. ರಘುಮೂರ್ತಿ ಪ್ಲಾನ್ ರೂಪಿಸಿ, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಅಭ್ಯರ್ಥಿಗಳಿಗಿಂತ ರಾಜಕೀಯ ವರ್ಚಸ್ಸಿನಲ್ಲಿ ಬಲಿಷ್ಠವಾಗಿರುವ ಅಭ್ಯರ್ಥಿಗಳನ್ನು ಸ್ಪರ್ಧೆಗೆ ಇಳಿಸಿದ್ದಾರೆ. ಈ ಚುನಾವಣೆಯಲ್ಲಿ ಚಳ್ಳಕೆರೆಯ ಉಸ್ತುವಾರಿಯನ್ನು ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮು ನೋಡಿಕೊಳ್ಳುತ್ತಿರುವುದರಿಂದ ಯಾವ ಮೈತ್ರಿ ಇಲ್ಲದೆ ಬಿಜೆಪಿ ಸ್ಪಷ್ಟ ಬಹುಮತ ಗಳಿಸುತ್ತದೆ ಅನ್ನುವುದು ಬಿಜೆಪಿ ಲೆಕ್ಕಾಚಾರ. ಇಷ್ಷೆಲ್ಲ ರಾಜಕೀಯ ದಾಳಗಳನ್ನು ಉರುಳಿಸಿರುವ ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ತನ್ನದೇ ಪೊಲಿಟಿಕಲ್ ಪ್ಲಾನ್ ರೂಪಿಸುತ್ತಿದೆ. ಆದರೆ,  ಇಲ್ಲಿಯೂ ಮೈತ್ರಿ ಮಾಡಿಕೊಳ್ಳುವ ಸೂಚನೆಯಿದ್ದು, ಕಡೆ ಕ್ಷಣದಲ್ಲಿ ಯಾವ ಪಕ್ಷದವರು ಯಾರ ಜೊತೆ ಮೈತ್ರಿ ಮಾಡಿಕೊಳ್ಳುತ್ತಾರೆ ಕಾದು ನೋಡಬೇಕಿದೆ.

ಇನ್ನು ಹೊಸದುರ್ಗ ಪುರಸಭೆಯ 23 ವಾರ್ಡ್​ಗಳಲ್ಲಿ 23 ರಲ್ಲಿ ಕಾಂಗ್ರೆಸ್ 23 ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿದೆ. ಬಿಜೆಪಿಯೂ 23 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು  ಕಣಕ್ಕಿಳಿಸಿದ್ದು, ಜೆಡಿಎಸ್ ಕೇವಲ 16 ವಾರ್ಡ್​ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇನ್ನುಳಿದಂತೆ 36 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಪಕ್ಷೇತರರನ್ನು ಜೊತೆಗೂಡಿಸಿಕೊಂಡು ಪುರಸಭೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಈ ಬಾರಿಯೂ ಸ್ಪಷ್ಟ ಬಹುಮತಕ್ಕಾಗಿ ಹೋರಾಟ ಮಾಡುತ್ತಿವೆ. ಆದರೆ, ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ಶಾಸಕರಾಗಿರೋ ಗೂಳಿಹಟ್ಟಿ ಡಿ.ಶೇಖರ್ ತನ್ನ ವರ್ಚಿಸ್ಸಿನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ತಂತ್ರವನ್ನು ರೂಪಿಸಿದ್ದಾರೆ. ಇನ್ನು ಕೆಲವೇ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಜೆಡಿಎಸ್ ಎಷ್ಟು ಸ್ಥಾನ ಗೆಲ್ಲುತ್ತದೆ ಅನ್ನುವುದು ಯಕ್ಷ ಪ್ರಶ್ನೆ. ಕಾರಣ ಇಲ್ಲಿ ಈ ಪಕ್ಷ ಅಷ್ಟಾಗಿ ಪ್ರಬಲವಾಗಿಲ್ಲ. ಒಟ್ಟಾರೆ ಏನಾದರೂ ಕಸರತ್ತು ಮಾಡಿ ಅಧಿಕಾರದ ಕುರ್ಚಿ ಹಿಡಿಬೇಕು ಅನ್ನುವ ಓಟದಲ್ಲಿ ಯಾರು ಜಯಗಳಿಸುತ್ತಾರೆ ಅಥವಾ ಯಾರು ಯಾರ ಜೊತೆ ಮೈತ್ರಿ ಮಾಡಿಕೊಳ್ಳುತ್ತಾರೆ ಅನ್ನೋದು ಪ್ರಶ್ನೆಯಾಗಿದೆ.
ಒಟ್ಟಾರೆ ಚಿತ್ರದುರ್ಗ ಜಿಲ್ಲೆಯ ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ರಣ ತಂತ್ರದ ದಾಳವನ್ನು ಮೂರು ಪಕ್ಷಗಳು ಉರುಳಿಸಿವೆಯಾದರೂ, ಯಾವ ಪಕ್ಷಕ್ಕೂ ಬಹುಮತ ಬರದಿದ್ದಲ್ಲಿ ಯಾರು ಯಾರ ಜೊತೆ ಒಪ್ಪಂದದ ಮಾಡಿಕೊಳ್ಳುತ್ತಾರೆ ಎಂಬುದು ಸದ್ಯದ ಕುತೂಹಲವಾಗಿದೆ.
Loading...

ಚಿತ್ರದುರ್ಗ ನಗರಸಭೆ (ಕಳೆದ ಬಾರಿ ಕಾಂಗ್ರೆಸ್ ಅಧಿಕಾರ)

ವಾರ್ಡ್​ಗಳ ಸಂಖ್ಯೆ     -   35

ಕಾಂಗ್ರೆಸ್                      -     34

ಬಿಜೆಪಿ                           -      29

ಜೆಡಿಎಸ್                    -    26

ಬಿಎಸ್​ಪಿ                    -      02

ಪಕ್ಷೇತರರು               -    70

ಒಟ್ಟು                          -   161

 

ಚಳ್ಳಕೆರೆ ನಗರಸಭೆ (ಕಳೆದ ಬಾರಿ ಜೆಡಿಎಸ್-ಬಿಜೆಪಿ ಮೈತ್ರಿ)

ವಾರ್ಡ್​ಗಳ ಸಂಖ್ಯೆ      -         31

ಕಾಂಗ್ರೆಸ್                      -           30

ಬಿಜೆಪಿ                         -             23

ಜೆಡಿಎಸ್                    -           25

ಬಿಎಸ್​ಪಿ                   -            01

ಸಿಪಿಐಎಂ                  -          01

ಸಿಪಿಐ                        -           01

ಪಕ್ಷೇತರರು            -            19

ಒಟ್ಟು                       -         100

 

ಹೊಸದುರ್ಗ ಪುರಸಭೆ (ಕಳೆದ ಬಾರಿ ಕಾಂಗ್ರೆಸ್ ಅಧಿಕಾರ)

ವಾರ್ಡ್​ಗಳ ಸಂಖ್ಯೆ           -   23

ಕಾಂಗ್ರೆಸ್                             - 23

ಬಿಜೆಪಿ                                  - 23

ಜೆಡಿಎಸ್                           - 16

ಪಕ್ಷೇತರರು                     -  36

ಒಟ್ಟು                               - 98
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...