ಚಿತ್ರದುರ್ಗ: ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಬಂಡಾಯ ಅಭ್ಯರ್ಥಿಗಳ (Rebel Candidates) ಸಂಖ್ಯೆ ಹೆಚ್ಚುತ್ತಿದೆ. ಇಲ್ಲಿಯವರೆಗೆ ಸೈಲೆಂಟ್ ಆಗಿದ್ದ ಟಿಕೆಟ್ ಆಕಾಂಕ್ಷಿಗಳು ತಮ್ಮ ಕ್ಷೇತ್ರದಲ್ಲಿ ತಾವೇ ಮುಂದಿನ ಅಭ್ಯರ್ಥಿ ಅನ್ನೋ ರೀತಿಯಲ್ಲಿ (Assembly Election 2023) ಕೆಲಸ ಮಾಡಿ ಮತದಾರರ ಮನವೊಲಿಲು ಪ್ರಯತ್ನ ಮಾಡಿದ್ದರು. ಇದೀಗ ಟಿಕೆಟ್ ಕೈ ತಪ್ಪುತ್ತಿದ್ದಂತೆ ಪಕ್ಷದ ವಿರುದ್ಧವೇ ರೆಬೆಲ್ ಆಗಿದ್ದಾರೆ. ಇದರ ಬಿಸಿ ಕಾಂಗ್ರೆಸ್ (Congress) ಪಕ್ಷಕ್ಕೆ ಸದ್ಯ ದೊಡ್ಡ ಮಟ್ಟದಲ್ಲಿ ತಟ್ಟುತ್ತಿದೆ.
ಕೋಟೆನಾಡು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಅನ್ನು ಎರಡನೇ ಪಟ್ಟಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ವೇಳೆ ಉದ್ಯಮಿ, ನಟ ದೊಡ್ಡಣ್ಣ ಅವರ ಅಳಿಯ ಕೆ.ಸಿ.ವಿರೇಂದ್ರ ಪಪ್ಪಿ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಪಕ್ಷದಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು, ಚುನಾವಣೆಗೆ ಸ್ಪರ್ಧಿಸಲು ಮಾನಸಿಕವಾಗಿ ಸಿದ್ಧಗೊಂಡಿದ್ದ ಆಕಾಂಕ್ಷಿಗಳು ಟಿಕೆಟ್ ಕೈ ತಪ್ಪುತ್ತಿದ್ದಂತೆ ಬೇರೆ ಪಕ್ಷದತ್ತ ಮುಖ ಮಾಡಿ ರೆಬೆಲ್ ಆಗಿದ್ದಾರೆ.
ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ರೆಬಲ್ ಆಗಿರುವ ರಘು ಆಚಾರ್ ಪಕ್ಷಕ್ಕೆ ಗುಡ್‌ಬೈ ಹೇಳಲು ಯೋಚಿಸಿದ್ದು, ಜೆಡಿಎಸ್ ಪಕ್ಷದಿಂದ ಚುನಾವಣಾ ಕಣಕ್ಕಿಳಿದು ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಲು ಯೋಜನೆ ರೂಪಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೊಂದೆಡೆ ಮತ್ತೋರ್ವ ಟಿಕೆಟ್ ಆಕಾಂಕ್ಷಿ ಎಸ್‌ಕೆ ಬಸವರಾಜನ್ ಕೂಡ ತಮಗೆ ಟಿಕೆಟ್ ಕೈ ತಪ್ಪುತ್ತಿದ್ದಂತೆ ಜೆಡಿಎಸ್ ಪಕ್ಷದತ್ತ ಮುಖ ಮಾಡಿದ್ದಾರೆ. 2008ರಲ್ಲಿ ಚಿತ್ರದುರ್ಗದ ಜೆಡಿಎಸ್ ಶಾಸಕರಾಗಿದ್ದ ಬಸವರಾಜನ್, ಪುನಃ ಮಾತೃಪಕ್ಷದತ್ತ ಹಿಂದಿರುಗಲು ಪ್ಲಾನ್ ರೂಪಿಸಿದ್ದಾರೆ ಎನ್ನಲಾಗಿದ್ದು ಈ ಸಂಬಂಧ ಬೆಂಬಲಿಗರ ಸಭೆ ನಡೆಸಿ ನಿರ್ಣಯ ಕೈಗೊಳ್ಳಲು ನಿರ್ಧಾರ ಮಾಡಿದ್ದಾರೆ ಎನ್ನಲಾಗ್ತಿದೆ.
ಇನ್ನೊಂದೆಡೆ ರಘು ಆಚಾರ್ ಬಂಡಾಯದಿಂದ ಸೋಲಿನ ಬಗ್ಗೆ ಆತಂಕಕ್ಕೆ ಒಳಗಾಗಿರುವ ವೀರೇಂದ್ರ ಪಪ್ಪಿ, ಟಿಕೆಟ್ ವಂಚಿತ ರಘು ಆಚಾರ್‌ರನ್ನು ಭೇಟಿಯಾಗಲು ಬಂದಿದ್ದು, ಸಂಧಾನಕ್ಕೆ ಯತ್ನಿಸಿದ್ದಾರೆ. ಕಾಂಗ್ರೆಸ್ ಜಿಲ್ಲಾದ್ಯಕ್ಷ ಎಂ.ಕೆ.ತಾಜಪೀರ್ ಮತ್ತು ಕೈ ಅಭ್ಯರ್ಥಿ ಕೆ.ಸಿ.ವಿರೇಂದ್ರ ಪಪ್ಪಿ ಸಂಧಾನಕ್ಕೆ ಯತ್ನಿಸಿದ್ದು, ಆದರೆ ಸಂಧಾನ ವಿಫಲವಾಗಿದೆ.
ಹೀಗಾಗಿ ವಾಪಸ್ ಆದ ವೀರೇಂದ್ರ ಪಪ್ಪಿ, ರಘು ಆಚಾರ್ ರಾಜ್ಯ ಮಟ್ಟದ ನಾಯಕರು. ಹೀಗಾಗಿ ನಾನು ಅವರ ಭೇಟಿಗೆ ಬಂದಿದ್ದೇನೆ. ಕೆಪಿಸಿಸಿ ಸೂಚನೆ ಮೇರೆಗೆ ಬಂದಿದ್ದೇವೆ. ಅವರು ಕೂಡಾ ಕೆಲವೊಂದು ಸಲಹೆ ಸೂಚನೆ ನೀಡಿದ್ದಾರೆ. ಅವರು ಕೂಡಾ ನನಗೆ ಬೆಂಬಲ ನೀಡುತ್ತಾರೆ. ಇದೇ ರೀತಿಯಲ್ಲಿ ನಾನು ಎಲ್ಲಾ ನಾಯಕರ ಮನೆಗೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದಾರೆ.
ಆದರೆ ಇತ್ತ ಕಾಂಗ್ರೆಸ್ ಮುಖಂಡರ ಭೇಟಿ ಬಳಿಕ ರಘು ಆಚಾರ್ ಭಿನ್ನ ಹೇಳಿಕೆ ನೀಡಿದ್ದು, ಸ್ನೇಹಿತನಾಗಿ ಕೆ.ಸಿ.ವಿರೇಂದ್ರ ಪಪ್ಪಿಗೆ ಶುಭ ಹಾರೈಸಿದ್ದೇನೆ. ಆದರೆ ಸ್ನೇಹ ಸಂಬಂಧ ಬೇರೆ, ರಾಜಕೀಯ ಬೇರೆ. ಏಪ್ರಿಲ್ 17ಕ್ಕೆ ನಾನು ನಾಮಿನೇಷನ್ ಮಾಡುತ್ತೇನೆ. ರಾಜಕೀಯವಾಗಿ ಕೆ.ಸಿ.ವಿರೇಂದ್ರ ಜತೆ ಜಿದ್ದಾಜಿದ್ದಿಯಿದೆ. ಜೆಡಿಎಸ್ ಜತೆ ನಾನು ಚರ್ಚೆ ಮಾಡಿಲ್ಲ. ಬೆಂಬಲಿಗರ ಅಭಿಪ್ರಾಯ ಕೇಳಿ ನಿರ್ಧಾರ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ