• Home
  • »
  • News
  • »
  • state
  • »
  • ಕಲಬುರ್ಗಿಯಲ್ಲಿ ಮಕ್ಕಳ ಸ್ನೇಹಿ ಗ್ರಂಥಾಲಯ ಅಭಿಯಾನ; ಪುಸ್ತಕ ಪ್ರೇಮಿಗಳಿಂದ ವ್ಯಾಪಕ ಬೆಂಬಲ

ಕಲಬುರ್ಗಿಯಲ್ಲಿ ಮಕ್ಕಳ ಸ್ನೇಹಿ ಗ್ರಂಥಾಲಯ ಅಭಿಯಾನ; ಪುಸ್ತಕ ಪ್ರೇಮಿಗಳಿಂದ ವ್ಯಾಪಕ ಬೆಂಬಲ

ಗ್ರಂಥಾಲಯ ಅಭಿಯಾನ

ಗ್ರಂಥಾಲಯ ಅಭಿಯಾನ

ಗ್ರಾಮೀಣ ಭಾಗದಲ್ಲಿ ಗ್ರಂಥಾಲಯಗಳಿದ್ದರೂ ಅಲ್ಲಿ ಮಕ್ಕಳು ಓದುವಂತಹ ಪುಸ್ತಕಗಳಿಲ್ಲ. ಹೀಗಾಗಿ ಪಂಚಾಯಿತಿ ಗ್ರಂಥಾಲಯಗಳಲ್ಲಿ ಮಕ್ಕಳು ಓದುವ ಪುಸ್ತಕ ಇಡಬೇಕೆಂದು ಶಿಕ್ಷಣ ಇಲಾಖೆ ಅಪರ ಆಯುಕ್ತ ನಲಿನ್ ಅತುಲ್ ಅಭಿಯಾನ ಆರಂಭಿಸಿದ್ದಾರೆ

  • Share this:

ಕಲಬುರ್ಗಿ (ಜ. 27):  ಗ್ರಂಥಾಲಯಗಳಲ್ಲಿ ಮಕ್ಕಳಿಗೆ ಪೂರಕವಾಗ ಪುಸ್ತಕಗಳು ಸಿಗುವುದು ಅಷ್ಟಕ್ಕಷ್ಟೆ. ಇನ್ನು ಗ್ರಾಮೀಣ ಪ್ರದೇಶದ ಗ್ರಂಥಾಲಯಗಳಲ್ಲಿಯಂತೂ ಮಕ್ಕಳ ಪುಸ್ತಕಗಳು ಗಗನಕುಸುಮವೇ ಆಗಿವೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶ ಮಕ್ಕಳ ಬೌದ್ಧಿಕ ವಿಕಾಸಕ್ಕೆ ಪೂರಕವಾದ ಪುಸ್ತಕಗಳು ಸಿಗಲೆಂದು ಜಿಲ್ಲಾ ಶಿಕ್ಷಣ ಇಲಾಖೆ ಅಪರ ಆಯುಕ್ತ ನಲಿನ್ ಅತುಲ್ ಅವರು ಪುಸ್ತಕ ಅಭಿಯಾನ ಆರಂಭಿಸಿದ್ದು, ಇದಕ್ಕೆ ಪುಸ್ತಕ ಪ್ರೇಮಿಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಲಾರಂಭಿಸಿದೆ. ಅಭಿಯಾನಕ್ಕೆ ಸ್ಪಂದಿಸಿ ಭಾರತ ಜ್ಞಾನ ವಿಜ್ಞಾನ ಸಮಿತಿ ಮಕ್ಕಳಿಗಾಗಿ ಉಪಯುಕ್ತ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದೆ. ಮಕ್ಕಳ ಸ್ನೇಹಿ ಗ್ರಂಥಾಲಯಕ್ಕೆ ಉಪಯೋಗಕ್ಕಾಗಿ 70 ಸಾವಿರ ರೂಪಾಯಿ ಮೌಲ್ಯದ ಉಪಯುಕ್ತ ಪುಸ್ತಕಗಳನ್ನು ಮಕ್ಕಳಿಗೆ ಕೊಡುಗೆಯಾಗಿ ನೀಡಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಭಾಗದ ಅಪರ ಆಯುಕ್ತ ನಲಿನ್ ಅತುಲ್ ಅವರಿಗೆ ಪುಸ್ತಕಗಳನ್ನು ಹಸ್ತಾಂತರಿಸಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜೊತೆಗೂಡಿ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನವನ್ನು ಹಮ್ಮಿಕೊಂಡಿದೆ. ಅದರ ಭಾಗವಾಗಿ ಮಕ್ಕಳ ಸ್ನೇಹಿ ಗ್ರಂಥಾಲಯಕ್ಕೆ ಮಕ್ಕಳ ಉಪಯುಕ್ತ ಪುಸ್ತಕಗಳನ್ನು ಶಿಕ್ಷಣ ಇಲಾಖೆ ಸಂಗ್ರಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಸಮಿತಿ, ನವಕರ್ನಾಟಕ ಪ್ರಕಾಶನ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕುವೆಂಪು ಭಾಷಾ ಭಾರತಿ, ಪುಸ್ತಕ ಪ್ರಾಧಿಕಾರದ ಪುಸ್ತಕಗಳ ಜೊತೆಗೆ, ಜ್ಞಾನ ವಿಜ್ಞಾನ ರಾಜ್ಯ ಸಮಿತಿ ಪ್ರಕಟಿಸಿದ ಕೆಲವು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದೆ. 


ಪಿಯು ಮಂಡಳಿ ಉಪ ನಿರ್ದೇಶಕ ಶಿವಶರಣಪ್ಪ ಮೋಳೆಗಾಂವ ಅವರು ಮಕ್ಕಳ ಪುಸ್ತಕಗಳನ್ನು ನಲಿನ್ ಅತುಲ್ ಅವರಿಗೆ ಹಸ್ತಾಂತರಿಸಿದರು. ಭಾರತ ಜ್ಞಾನ ವಿಜ್ಞಾನ ಸಮಿತಿ ಮುಖಂಡರಾದ ಆರ್ ಕೆ ಹುಡುಗಿ, ಪ್ರಭು ಖಾನಾಪುರೆ, ಶ್ರೀಶೈಲ ಘೂಳಿ,  ನೀಲಾ ಕೆ, ನಾಗೇಂದ್ರಪ್ಪ ಅವರಾದ ಮತ್ತಿತರರು ಉಪಸ್ಥಿತರಿದ್ದರು. ಗ್ರಾಮೀಣ ಭಾಗದಲ್ಲಿ ಗ್ರಂಥಾಲಯಗಳಿದ್ದರೂ ಅಲ್ಲಿ ಮಕ್ಕಳು ಓದುವಂತಹ ಪುಸ್ತಕಗಳಿಲ್ಲ. ಹೀಗಾಗಿ ಪಂಚಾಯಿತಿ ಗ್ರಂಥಾಲಯಗಳಲ್ಲಿ ಮಕ್ಕಳು ಓದುವ ಪುಸ್ತಕ ಇಡಬೇಕೆಂದು ಶಿಕ್ಷಣ ಇಲಾಖೆ ಅಪರ ಆಯುಕ್ತ ನಲಿನ್ ಅತುಲ್ ಅಭಿಯಾನ ಆರಂಭಿಸಿದ್ದಾರೆ. ಅವರಿಗೆ ಬೆಂಬಲವಾಗಿ ನಾವು ಪುಸ್ತಕ ಸಂಗ್ರಹಿಸಿ ಕೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪುಸ್ತಕಗಳನ್ನು ಸಂಗ್ರಹಿಸುವ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಿಸಲು ನೆರವಾಗೋದಾಗಿ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಸಮಿತಿ ಸದಸ್ಯ ನಾಗೇಂದ್ರಪ್ಪ ಅವರಾದಿ ತಿಳಿಸಿದ್ದಾರೆ. ಈ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ಅವರು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.


ಇದನ್ನು ಓದಿ: ಬೆಳಗಾವಿ ಮರಾಠಿಗರದ್ದಲ್ಲ, ವೀರ ಕನ್ನಡಿಗರದ್ದು: ಠಾಕ್ರೆಗೆ ಎಚ್​ಡಿ ಕುಮಾರಸ್ವಾಮಿ ತಿರುಗೇಟು


ಬಸ್ ಸಂಚಾರಿ ಲೈಬ್ರರಿ ಉದ್ಘಾಟನೆ


ಮತ್ತೊಂದೆಡೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಸಂಚಾರಿ ಗ್ರಂಥಾಲಯ ಆರಂಭಿಸಲಾಗಿದೆ. ನೂತನ ಸಂಚಾರಿ ಗ್ರಂಥಾಲಯ ವಾಹನಕ್ಕೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ ಚಾಲನೆ ನೀಡಿದರು. ಕಲಬುರ್ಗಿಯ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಚಾರಿ ಗ್ರಂಥಾಲಯ ವಾಹನದ ಜೊತೆಗೆ, ಬೀದರ್ ಜಿಲ್ಲಾಡಳಿತ ನೀಡಿರುವ ಸಂಚಾರಿ ಸಭಾ ವಾಹನ ವನ್ನೂ ಉದ್ಘಾಟಿಸಲಾಯಿತು.


ಇದೇ ವೇಳೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಇಂದು ವಿವಿಧ ಯೋಜನೆಗಳಿಗೆ ಚಾಲನೆ ನೀಡಲಾಯಿತು. ಸೇವಾಸಿಂಧು ಮೂಲಕ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ವಿತರಣೆ, ಅಪಘಾತ ರಹಿತ ವಾಹನ ಚಲಾಯಿಸಿದ ಚಾಲಕರಿಗೆ ಸನ್ಮಾನ, ಪಿಸಿಆರ್ ಎ ಪುರಸ್ಕಾರ ಪ್ರಧಾನ ಮುಂತಾದ ಕಾರ್ಯಕ್ರಮಗಳು ನಡೆದವು. ಶಾಸಕ ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ್,  ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೂರ್ಮಾರಾವ್ ಎಂ., ಜಿ.ಪಂ. ಅಧ್ಯಕ್ಷೆ ಸುವರ್ಣಾ ಮಾಲಾಜಿ, ಜಿಲ್ಲಾ ಪಂಚಾಯತ್ ಸಿಇಓ ಪಿ.ರಾಜಾ ಮುಂತಾದವರು ಹಾಜರಿದ್ದರು.


(ವರದಿ - ಶಿವರಾಮ ಅಸುಂಡಿ)

Published by:Seema R
First published: