ತಂದೆ-ತಾಯಿ(Father-Mother) ಅಂದರೆ ಭೂಮಿ ಮೇಲೆ ಇರುವ ಕಣ್ಣಿಗೆ ಕಾಣುವ ದೇವರು(God) ಎಂದು ಹೇಳುತ್ತಾರೆ. ಕೆಲವರು ತಂದೆ-ತಾಯಿಯನ್ನು ದೇವರಂತೆ ಆರಾಧಿಸಿದರೆ, ಮತ್ತೆ ಕೆಲವರು ಕಾಲುಕಸದಂತೆ ಕಾಣುತ್ತಾರೆ. ಇಲ್ಲೊಬ್ಬ ವ್ಯಕ್ತಿ ತನ್ನ ತಂದೆ-ತಾಯಿ ಮೇಲಿರುವ ಅದಮ್ಯ ಪ್ರೀತಿಯನ್ನು (Love) ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಹೌದು, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುರೇಶ್ ತನ್ನ ಹೆತ್ತವರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ಅವರಿಗಾಗಿ ದೇವಸ್ಥಾನ ಕಟ್ಟಿಸಿದ್ದಾನೆ. ಇದು ನಂಬಲು ಅಸಾಧ್ಯವಾದರೂ, ನಿಜವೇ.
ಸುರೇಶ್ ತಳವಾರ ಅವರು ಸುಲ್ತಾನಪುರ ಗ್ರಾಮದ ನಿವಾಸಿ. ಇವರ ತಂದೆ ಗುರಪ್ಪ ತಳವಾರ ಹಾಗೂ ತಾಯಿ ಪಾರ್ವತಿ ತಳವಾರ. ಇವರು ಕಾಲವಾದ ಬಳಿಕ ತಮ್ಮ ಜಮೀನಿನಲ್ಲಿ ಅವರ ಸಮಾಧಿ ಮೇಲೆ ಪುತ್ಥಳಿ ಸ್ಥಾಪಿಸಿ ದೇವಸ್ಥಾನ ಕಟ್ಟಿಸಿದ್ದಾರೆ. ಆ ಮೂಲಕ ತನ್ನ ತಂದೆ-ತಾಯಿ ಮೇಲಿರುವ ಅದಮ್ಯ ಪ್ರೀತಿಯನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ.
ಇವರ ಈ ಕಾರ್ಯ ಇತರರಿಗೂ ಮಾದರಿಯಾಗಿದೆ. ಸುರೇಶ್ ತಳವಾರ ಅವರು ಎಸ್ಸಿಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಹಾಗೂ ಸಮಾಜ ಸೇವಕರಾಗಿದ್ದಾರೆ. ಇವರಿಗೆ ಹಾಗೂ ಇವರ ಸಹೋದರರಿಗೆ ಮೊದಲಿನಿಂದಲೂ ತಮ್ಮ ತಂದೆ-ತಾಯಿ ಮೇಲೆ ಅಪಾರವಾದ ಪ್ರೀತಿ-ಭಕ್ತಿ ಇತ್ತು ಎನ್ನಲಾಗಿದೆ.
ಇದನ್ನೂ ಓದಿ: Bengaluru: ಅಕ್ರಮ 'A' ಖಾತಾದಾರರಿಗೆ ಬಿಬಿಎಂಪಿ ಶಾಕ್; 'B' ಖಾತಾ ಬದಲು 'A' ಖಾತಾ ಪಡೆದಿದ್ರೆ ಗುನ್ನಾ!
ಆದರೆ, ದುರಾದೃಷ್ಟವಶಾತ್ 20 ವರ್ಷಗಳ ಹಿಂದೆ ಅವರ ತಂದೆ ಗುರಪ್ಪ ಸಾವನ್ನಪ್ಪಿದ್ದರು. ಕಳೆದ 2 ವರ್ಷದ ಹಿಂದೆ ಅವರ ತಾಯಿ ಪಾರ್ವತಿ ಮರಣ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ಅವರ ಪುಣ್ಯಸ್ಮರಣೆಯಂದು ಸಾವಿರಾರು ಜನರಿಗೆ ಅನ್ನಸಂತರ್ಪನೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ ಈ ವರ್ಷ ತಂದೆ, ತಾಯಿ ಸದಾ ನಮ್ಮೊಂದಿಗೆ ಇರಬೇಕು ಎಂಬ ಭಾವನೆಯೊಂದಿಗೆ ಅವರ ದೇವಸ್ಥಾನ ನಿರ್ಮಿಸಿ ನಿತ್ಯ ಪೂಜೆ ಮಾಡುತ್ತಿದ್ದಾರೆ.
ಈ ಬಗ್ಗೆ ಸುರೇಶ್ ಮಾತನಾಡಿ, ತಂದೆ ತಾಯಿಯ ಆದರ್ಶ ಮತ್ತು ಮಾರ್ಗದರ್ಶನ ಅವರು ನಮ್ಮ ಜೊತೆಗೆ ಇದ್ದರೂ ಇಲ್ಲದ್ದಿದ್ದರೂ ಸಹ ಸದಾ ನಮ್ಮ ಮೇಲೆ ಅವರ ಆಶೀರ್ವಾದ ಇರಬೇಕು ಎಂಬ ದೃಷ್ಟಿಯಿಂದ ಅವರ ದೇವಸ್ಥಾನ ನಿರ್ಮಿಸಿದ್ದೇವೆ. ನಾವಿಂದು ಏನಾದರು ಸಾಧಿಸಿದ್ದರೆ ಅದಕ್ಕೆ ಅವರ ಉತ್ತಮ ಮಾರ್ಗದರ್ಶನ ಹಾಗೂ ಆಶೀರ್ವಾದ ಕಾರಣ. ಯಾವ ಮಕ್ಕಳು ತಂದೆ, ತಾಯಿಯನ್ನು ಕಡೆಗಣಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ