ರಾಯಚೂರು(ಡಿ.19) : ಈ ಮೊದಲು ಗ್ರಾಮ ಪಂಚಾಯತಿ ಚುನಾವಣೆಯೆಂದರೆ ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಯುವಕರು, ಗ್ರಾಮದ ಮುಖಂಡರು, ಮೀಸಲಾತಿಗಾಗಿ ಜಾತಿವಾರು ಅಭ್ಯರ್ಥಿ, ಅನಕ್ಷರಸ್ಥರು ಹೆಚ್ಚಾಗಿ ಸ್ಪರ್ಧಿಸುತ್ತಿದ್ದರು, ಆದರೆ ಈಗ ಗ್ರಾಮ ಪಂಚಾಯತಿಗಳಿಗೆ ಅಧಿಕ ಪ್ರಾತಿನಿಧ್ಯ ಸಿಕ್ಕಿದ್ದರಿಂದ ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಘಟಾನುಘಟಿಗಳು ಸ್ಪರ್ಧಿಸಿದ್ದು, ಚುನಾವಣೆ ರಂಗೇರಿದೆ. ಅದರಲ್ಲಿಯೂ ಬಿಇ, ಸ್ನಾತಕೋತರ ಪದವೀಧರರು ಕೂಡ ಸ್ಪರ್ಧಿಸುವ ಮೂಲಕ ಇನ್ನಷ್ಟು ಗಮನ ಸೆಳೆಯುತ್ತಿದ್ದಾರೆ. ಜಿಲ್ಲೆಯ ಯದ್ಲಾಪುರ ಗ್ರಾಮ ಪಂಚಾಯತಿಯ ಅಖಾಡದಲ್ಲಿ ಈ ಬಾರಿ ವಿದ್ಯಾವಂತ ಅಭ್ಯರ್ಥಿಗಳ ಕಲರವ ಹೆಚ್ಚಿದೆ. ಗ್ರಾಮದ ಮೊದಲ ವಾರ್ಡಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವೀಧರ ರಾಕೇಶ ಮಡಿವಾಳ, ಎರಡನೇ ವಾರ್ಡಿನಲ್ಲಿ ಎಂಎ ಸ್ನಾತಕೋತ್ತರ ಪದವೀಧರೆ ವನಿತಾ ಮಹಾದೇವಪ್ಪ ಸ್ಪರ್ಧಿಸಿರುವುದ್ದಾರೆ. ಜಿಲ್ಲೆಯ ಕಲಮಲ್ ಕ್ಷೇತ್ರದಲ್ಲಿ ಜೆ ಎಚ್ ಪಟೀಲರ ಸರಕಾರದಲ್ಲಿ ಸಚಿವರಾಗಿದ್ದ ದಿವಂಗತ ಮುನಿಯಪ್ಪ ಮುದ್ದಪ್ಪರ ಇಬ್ಬರು ಮಕ್ಕಳು ಸ್ಪರ್ಧಿಸಿರುವ ಮೂಲಕ ಸುದ್ದಿಯಾಗಿದ್ದಾರೆ.
ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದ ಬಳಿಕ ಸಮಾಜ ಸೇವೆಯಲ್ಲಿ ತೊಡಗಿರುವ ರಾಕೇಶ್ ಮಡಿವಾಳ, ಕ್ಷೇತ್ರದ ಗ್ರಾಮೀಣ ಜನರಿಗೆ ಸರಕಾರದ ಸೌಲಭ್ಯಗಳನ್ನು ತಲುಪಿಸುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಿರುವುದಾಗಿ ತಿಳಿಸಿದ್ದಾರೆ. ಸಾಮಾನ್ಯ ಸ್ಥಾನಕ್ಕೆ ಇವರು ಸ್ಪರ್ಧಿಸಿದ್ದು, ಚುನಾವಣಾ ಕಣದಲ್ಲಿ ಇನ್ನು 14 ಮಂದಿ ಇದ್ದಾರೆ.
ಇನ್ನು ಎರಡನೇ ವಾರ್ಡಿನಲ್ಲಿ ಮಹಿಳಾ ಮೀಸಲು ಕ್ಷೇತ್ರಕ್ಕೆ ಸ್ಪರ್ಧಿಸಿರುವ ವನಿತಾ ಯದ್ಲಾಪುರ, ಇಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಜನರ ಸೇವೆ ಜೊತೆ ಗ್ರಾಮದ ಅಭಿವೃದ್ಧಿ ಕನಸು ಕಂಡಿದ್ದಾರೆ.
ಇದರಲ್ಲಿ ವಿಶೇಷವಾಗಿ ಗಮನಸೆಳೆದ ಅಭ್ಯರ್ಥಿಗಳು ಎಂದರೆ ಮಾಜಿ ಸಚಿವ ದಿವಂಗತ, ಮುನಿಯಪ್ಪ ಮುದ್ದಪ್ಪರ ಮಕ್ಕಳು. ಬೆಂಗಳೂರು, ಚಿಕ್ಕಬಳ್ಳಾಪುರದಲ್ಲಿ ನೆಲೆಸಿರುವ ಶ್ರೀಮತಿ ನಂದಿನಿ ಹಾಗೂ ಶ್ರೀಮತಿ ಶಾರದಾ ಮರ್ಚೆಟಾಳ ಗ್ರಾಮ ಪಂಚಾಯತಿಗೆ ಸ್ಪರ್ಧಿಸಿದ್ದಾರೆ. ಮುನಿಯಪ್ಪ ನಿಧನರಾದ ನಂತರ ಅವರ ಕುಟುಂಬದವರು ರಾಜಕೀಯದಿಂದ ದೂರವಿದ್ದರು. ಈ ಮಧ್ಯೆ ಅವರ ಮಕ್ಕಳು ಈಗ ಚುನಾವಣೆಗಾಗಿ ಅಲ್ಲಿಂದ ಬಂದು ನಾಮಪತ್ರ ಸಲ್ಲಿಸಿ ಪ್ರಚಾರ ನಡೆಸುತ್ತಿದ್ದಾರೆ. ತಂದೆ ಸಮಾಜ ಸೇವೆಯನ್ನು ಮುಂದುವರಿಸುವ ಉದ್ದೇಶ, ಗ್ರಾಮಗಳ ಅಭಿವೃದ್ಧಿ, ತಮ್ಮ ತಂದೆ ಊರನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಸ್ಪರ್ಧಿಸಿದ್ದಾಗಿ ಅವರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ