ಮಂಡ್ಯ ಹೈಕ್ಳಿಗೆ ಮೀಸೆ ಮೂಡೋ ಮೊದಲೇ ಮದುವೆ.. ಕೊರೊನಾ ಭಯವೇ ಬಾಲ್ಯವಿವಾಹಕ್ಕೆ ಕಾರಣವಾಯ್ತಾ?

ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ತಮಗೆ ಅರಿವೇ ಇಲ್ಲದೆ ಅಪರಿಚಿತರ ಜೊತೆ ಸ್ನೇಹ ಮಾಡ್ತಿದ್ದಾರೆ. ಆ ಸ್ನೇಹ ಪ್ರೀತಿಯಾಗಿ ಬಾಲ್ಯ ವಿವಾಹಗಳಿಗೆ ದಾರಿಯಾಗುತ್ತಿದೆಯಂತೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಮಂಡ್ಯ: ಕಳೆದ ವರ್ಷದಿಂದ ಕೊರೊನಾ ಎಲ್ಲರ ಬದುಕುಗಳನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಮಹಾಮಾರಿ ಕೊರೊನಾ ಸೃಷ್ಟಿಸಿರೋ ಅವಾಂತರ ಒಂದಾ? ಎರಡಾ..? ಈ ಕ್ರೂರಿಯಿಂದ ಅದೆಷ್ಟೋ ಜನ ನರಕ ಯಾತನೆಯನ್ನ ಅನುಭವಿಸಿದ್ರು. ಅದೆಷ್ಟೋ ಜನರು ಹಸಿವಿನಿಂದ ಕಂಗಾಲಾಗಿ ಅಸುನೀಗಿದ್ರು. ಹೀಗೆ ಹೇಳ್ತಾ ಹೋದ್ರೆ ಕೊರೊನಾಯಿಂದ ಆದ ಅನಾಹುತಗಳು ಸಾಕಷ್ಟು ನಮ್ಮ ಕಣ್ಣ ಮುಂದೆ ಇವೆ. ಸದ್ಯ ಕೊರೊನಾ ಸಕ್ಕರೆನಾಡು ಮಂಡ್ಯದಲ್ಲಿ ಹೊಸ ಸಮಸ್ಯೆಯನ್ನು ಸೃಷ್ಟಿಸಿದೆ.  

  ಕೊರೊನಾಗೆ ಹೆದರಿ ಬಾಲ್ಯ ವಿವಾಹಕ್ಕೆ ಮುಂದಾದ್ರಾ ಜನ?

  ಮಂಡ್ಯದಲ್ಲಿ ಈಗ ಎಲ್ಲೆಡೆ ಕೊರೊನಾದ್ದೇ ಮಾತು. ಕೊರೊನಾ ಬಂದ್ರೆ ವಯಸ್ಸಾದವರು ಸತ್ತೊಗ್ತರಂತೆ ಅನ್ನೋದು. ಇಂತ್ತಾದ್ದೊಂದು ವಿಚಾರ ಮಂಡ್ಯದ ಕೆಲ ತಾಲೂಕುಗಳಲ್ಲಿ ಈಗ ಹರಿದಾಡ್ತಿದೆ. ಇದಕ್ಕೆ ಹೆದರಿದ ಹಿರಿಕರು ಕಣ್ಮುಚ್ಚಿಬಿಡುವ ಆತಂಕದಲ್ಲಿದ್ದಾರೆ. ಹೀಗಾಗಿಯೇ ಕಣ್ಮುಚ್ಚುವ ಮೊದಲು ಮನೆಯಲ್ಲಿರುವ ಹೆಣ್ಣು ಮಕ್ಕಳ ಮದುವೆ ಮಾಡಿ ಮುಗಿಸಿ ಬಿಡುವ ದಾವಂತದಲ್ಲಿದ್ದಾರಂತೆ. ಮದುವೆ ಮಾಡಿಬಿಟ್ರೆ ಅಲ್ಲಿಗೆ ತಮ್ಮ ಜವಬ್ದಾರಿಗಳು ಕಳೆದಂತೆ. ನಿಶ್ಚಿಂತೆಯಿಂದ ಪ್ರಾಣ ಬಿಡಬಹುದು ಅಂತ ಅಂದುಕೊಳ್ತಿದ್ದಾರಂತೆ. ಹೀಗಾಗಿಯೇ ಮಂಡ್ಯ ಜಿಲ್ಲೆಯಲ್ಲಿ ಈ ವರ್ಷ ಅತಿ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳು ಪತ್ತೆಯಾಗಿವೆ.

  ಈ ವರ್ಷ ಕಂಪ್ಲೀಟ್ ಆಗೋ ಮೊದಲೆ ಮಂಡ್ಯದಲ್ಲಿ ಕಳೆದ 5 ವರ್ಷಗಳಲ್ಲಿ ನಡೆದಿದ್ದ ಬಾಲ್ಯ ವಿವಾಹದ ದಾಖಲೆಯನ್ನ ಈ ವರ್ಷ ಮುರಿದು ಬಿಟ್ಟಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 245 ಬಾಲ್ಯ ವಿವಾಹ ಪ್ರಕರಣ ದಾಖಲಾಗಿರೋದಾಗಿ ವಿಕಸನ ಗ್ರಾಮೀಣಾಭಿವೃದ್ಧಿ ಸಂಸ್ಥೆ ದಾಖಲೆ ನೀಡಿದೆ. ಅದರಲ್ಲಿ ತಾಲೂಕುವಾರು ನೋಡೋದಾದ್ರೆ, ಮಂಡ್ಯ ತಾಲೂಕು - 54, ಮದ್ದೂರು - 24, ಶ್ರೀರಂಗಪಟ್ಟಣ - 35, ನಾಗಮಂಗಲ - 25, ಕೆಆರ್ ಪೇಟೆ - 58, ಪಾಂಡವಪುರ - 39, ಹಾಗೂ ಮಳವಳ್ಳಿ ತಾಲ್ಲೂಕಿನಲ್ಲಿ -10 ಪ್ರಕರಣಗಳು ದಾಖಲಾಗಿವೆ.

  ಬಾಲ್ಯ ವಿವಾಹ ಹೆಚ್ಚಾಗಲು ಲಾಕ್​ಡೌನ್​ ಕಾರಣ?

  ಮಂಡ್ಯ ವಿಕಸನ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ಮಹೇಶ್ ಚಂದ್ರಗುರು ಅವರು ಹೇಳುವ ಪ್ರಕಾರ ಈ ಬಾರಿಯ ಲಾಕ್​​ಡೌನ್​​ನಿಂದ ಕೂಡ ಬಾಲ್ಯ ವಿವಾಹ ಹೆಚ್ಚಾಗಲು ಕಾರಣವಾಗಿದೆ ಅಂತಿದ್ದಾರೆ. ಲಾಕ್​​​ಡೌನ್​​​ ಆದ ಕಾರಣ ಮಕ್ಕಳು ಮನೆ ಸೇರಿದ್ದಾರೆ. ಶಾಲಾ ಕಾಲೇಜುಗಳು ಬಂದ್ ಆದ ಕಾರಣ ಆನ್ಲೈನ್ ಕ್ಲಾಸ್ ಗಳನ್ನ ಮಾಡಲಾಗ್ತಿದೆ. ಹಿಗಾಗಿ ಮಕ್ಕಳ ಕೈಗೆ ಪೋಷಕರು ಮೊಬೈಲ್ ಕೊಡೊದ್ರ ಜೊತೆಗೆ ಇಂಟರ್ನೆಟ್ ಕೂಡ ಹಾಕಿಸಿಕೊಡುತ್ತಿದ್ದಾರೆ.  ಹಿಗಾಗಿ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ತಮಗೆ ಅರಿವೇ ಇಲ್ಲದೆ ಅಪರಿಚಿತರ ಜೊತೆ ಸ್ನೇಹ ಮಾಡ್ತಿದ್ದಾರೆ. ಆ ಸ್ನೇಹ ಪ್ರೀತಿಯಾಗಿ ಬಾಲ್ಯ ವಿವಾಹಗಳಿಗೆ ದಾರಿಯಾಗುತ್ತಿದೆ ಅಂತ ಮಹೇಶ್ ತಿಳಿಸಿದ್ದಾರೆ.

  ಇದನ್ನೂ ಓದಿ: ಮದುವೆಯ ಬಳಿಕವೂ ದೂರವಾದ ಪ್ರೇಮಿಗಳು: ಅಪ್ರಾಪ್ತನೊಂದಿಗೆ 20ರ ಯುವತಿಯ ಮದುವೆಗೆ ಕಾನೂನಿನ ತಡೆ

  ಕೊರೊನಾ ತಂದ ಅವಾಂತರದಿಂದ ಮಂಡ್ಯ ಜಿಲ್ಲೆಯಲ್ಲಿ ಸದ್ಯ ಬಾಲ್ಯ ವಿವಾಹ ಹೆಚ್ಚಾಗಿದ್ದು, ಕೆಲ ಪ್ರಜ್ಞಾವಂತರಲ್ಲಿ ಬೇಸರ ತರಿಸಿದೆ. ಅತ್ತ ಸೋಂಕು ಇಳಿಕೆ ಕಂಡಿದೆ ಅನ್ನೋದು ಜನರಲ್ಲಿ ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿದೆ. ಇನ್ನಾದ್ರೂ ಮಂಡ್ಯ ಜಿಲ್ಲಾಡಳಿತ ಬಾಲ್ಯ ವಿವಾಹಗಳಿಗೆ ಬ್ರೇಕ್ ಹಾಕಿ, ಹಿರಿಯರು ಹಾಗೂ ಪೊಷಕರಲ್ಲಿ ಬಾಲ್ಯ ವಿವಾಹದ ಅರಿವು ಮೂಡಿಸಬೇಕಾಗಿದೆ.

  ವರದಿ : ಸುನೀಲ್ ಗೌಡ
  Published by:Kavya V
  First published: