ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರಲ್ಲಿ (Chikkamagaluru) ಗುರು-ಶಿಷ್ಯರ ಕಾಳಗ ಜೋರಾಗಿದೆ. ಅತ್ತ 18 ವರ್ಷದ ಆಪ್ತಮಿತ್ರ ತಮ್ಮಯ್ಯ (HD Thammaiah) ಕಾಂಗ್ರೆಸ್ ಸೇರುತ್ತಿದ್ದಂತೆ ಇತ್ತ ಶಾಸಕ ಸಿ.ಟಿ. ರವಿ (BJP MLA CT Ravi) ಕೂಡ ಚುನಾವಣೆಯ ರಣಕಹಳೆ ಊದಿದ್ದಾರೆ. ತಮ್ಮಯ್ಯ ಕಾಂಗ್ರೆಸ್ (Congress) ಸೇರಿದ ಬೆನ್ನಲ್ಲೇ ಜಿಲ್ಲೆಗೆ ಆಗಮಿಸಿದ ಜೆ.ಪಿ.ನಡ್ಡಾರಿಂದ ಮೂರು ಲಿಂಗಾಯಿತ ಸಮುದಾಯದ ಸ್ವಾಮಿಗಳ (Lingayat Swamiji) ಕಾಲಿಗೆ ಬೀಳಿಸಿ ಆಶೀರ್ವಾದ ಪಡೆದಿದ್ದಾರೆ. ಹಾಗಾಂತ, ಬಿಜೆಪಿ ಗರಡಿಯಲ್ಲೇ ಪಳಗಿದ ತಮ್ಮಯ್ಯ ಏನು ಸೈಲೆಂಟಾಗಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಕೈಯಲ್ಲಿ ಹಾರ ಹಾಕಿಸ್ಕೊಂಡು ಬಂದು ಸಿ.ಟಿ.ರವಿ ವಿರುದ್ಧ ಫುಲ್ ವೈಲೆಂಟಾಗಿ ಬೈಕ್ ಜಾಥಾ (Bike Rally) ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಚಿಕ್ಕಮಗಳೂರು ತಾಲೂಕಿನಲ್ಲಿ 20 ವರ್ಷಗಳಿಂದ ನಡೆದ ಚುನಾವಣೆಯೇ ಬೇರೆ ಈಗ ನಡೆಯುವ ಚುನಾವಣೆಯೇ ಬೇರೆ ಎಂಬಂತಹ ವಾತಾವರಣ ನಿರ್ಮಾಣವಾಗಿದೆ. ಯಾಕಂದ್ರೆ 18 ವರ್ಷಗಳಿಂದ ಬಿಜೆಪಿ ಕಟ್ಟಾಳುವಾಗಿದ್ದ ತಮ್ಮಯ್ಯ ಕಾಂಗ್ರೆಸ್ ಸೇರಿ ಸಿ.ಟಿ.ರವಿ ವಿರುದ್ಧ ಕಣಕ್ಕಿಯಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ.
ಉಂಡ ಮನೆಗೆ ದ್ರೋಹ ಎಂದ ಸಿ.ಟಿ.ರವಿ
ಅತ್ತ ತಮ್ಮಯ್ಯ ಕಾಂಗ್ರೆಸ್ ಸೇರುತ್ತಿದ್ದಂತೆ ಇತ್ತ ಸಿ.ಟಿ.ರವಿ ಮನೆಗೆ ಬಂದ ಜೆ.ಪಿ.ನಡ್ಡಾರಿಂದ ಮೂವರು ಲಿಂಗಾಯತ ಮಠದ ಸ್ವಾಮಿಜಿಗಳ ಆಶೀರ್ವಾದ ಪಡೆದಿದ್ದಾರೆ. ಸ್ವಾಮೀಜಿಗಳು ಕೂಡ ನಡ್ಡಾ ಹಾಗೂ ಸಿ.ಟಿ.ರವಿಗೆ ಶಾಲು ಹೊದಿಸಿ ಸನ್ಮಾನ ಮಾಡಿ, ಆಶೀರ್ವದಿಸಿದ್ದಾರೆ.
ಇದೇ ವೇಳೆ ಸಿ.ಟಿ.ರವಿ ಆಯೋಜಿಸಿದ್ದ ತುಂಬಿದ್ದ ಸಭೆಯಲ್ಲಿ, ರಾಣಿ ಚೆನ್ನಮ್ಮಳಿಗೆ ಮಲ್ಲಪ್ಪಶೆಟ್ಟಿ ಮೋಸ ಮಾಡಿದಂತೆ, ಎಲ್ಲವನ್ನೂ ಅನುಭವಿಸಿ ಉಂಡ ಮನೆಗೆ ದ್ರೋಹ ಬಗೆಯುವವರು ಇರುತ್ತಾರೆ. ಆದರೆ, ಎಲ್ಲಿಯವರೆಗೆ ಜನರ ಪ್ರೀತಿಯ ನಿಮ್ಮ ರಕ್ಷಾಕವಚ ಇರುತ್ತೋ ಅಲ್ಲಿವರೆಗೆ ಯಾರೂ ಏನೂ ಮಾಡಲಾಗದು ಎಂದು ಹೆಚ್.ಡಿ.ತಮ್ಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.
ನೀವು ಬಿಎಸ್ವೈ ಹೆಸರು ಹೇಳಿ ಗೆದ್ದಿದ್ದು
ಸಿ.ಟಿ.ರವಿ ಉಂಡ ಮನೆಗೆ ದ್ರೋಹ ಬಗೆದವರು ಎಂದಿದ್ದಕ್ಕೆ ತಮ್ಮಯ್ಯ ಕೂಡ ಕಿಡಿಕಾರಿದ್ದಾರೆ. ಒಮ್ಮೆ ಅವರು ಆತ್ಮವನ್ನ ಮುಟ್ಟಿ ನೋಡಿಕೊಳ್ಳಲಿ. ಅವರು ಪಕ್ಷದಲ್ಲೇ ಇದ್ದು ಮೂಡಿಗೆರೆ ಕ್ಷೇತ್ರದ ಬಗ್ಗೆ ಯಾವ ರೀತಿ ನಡೆದುಕೊಂಡಿದ್ದಾರೆ ಎಂದು ಆ ಶಾಸಕರೇ ಹೇಳಿದ್ದಾರೆ. 2004, 2008, 2108ರಲ್ಲಿ ಯಾರ ಹೆಸರೇಳಿಕೊಂಡು ನೀವು ಗೆದ್ದದ್ದು? ಯಡಿಯೂರಪ್ಪ ಹೆಸರೇಳಿಕೊಂಡು ಗೆದ್ದು, ಈಗ ನೀವು ಯಾರನ್ನ ಲೇವಡಿ ಮಾಡ್ತಿರೋದು ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ದೇವೇಗೌಡರು, ಸಿದ್ದರಾಮಯ್ಯ, ಯಡಿಯೂರಪ್ಪ ಈ ರಾಜ್ಯ ಕಂಡ ಮಹಾನ್ ನಾಯಕರು. ಅವರಿಂದ ನೀವು ಸಹಾಯ ಪಡೆದಿಲ್ಲವಾ? ಅವರಿಂದ ಸಹಾಯ ಪಡೆದಿಲ್ಲವಾ? ಯಡಿಯೂರಪ್ಪನ ಹೆಸರೇಳಿ ಗೆದ್ದಿಲ್ಲ ಎಂದು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.
ಇದನ್ನೂ ಓದಿ: Siddaramaiah: ಮಂತ್ರಿಯಾಗಿರುವವರು ಕೆಲವರು ಕಾಂಗ್ರೆಸ್ ಸೇರ್ತಾರೆ; ಹೊಸ ಬಾಂಬ್ ಸಿಡಿಸಿದ ಸಿದ್ದರಾಮಯ್ಯ
ಎಷ್ಟು ದಿನ ಜೀ.. ಹೂಜೂರ್ ಆಗಿರ್ತಿರಾ?
ಕತ್ತೆ ಅಡ್ಡೆ ಹೊತ್ಕಂಡು ಹೋಗ್ತಿದ್ರೆ ಕತ್ತೆಗೆ ಗೌರವ ಕೊಡ್ತಾರೆ, ಅಡ್ಡೆಗಲ್ಲ ಎಂದು ಯಡಿಯೂರಪ್ಪನವರಿಗೆ ಹೇಳಿದ್ದೋರು ನೀವು. ಕಾರ್ಯಕರ್ತರನ್ನ ಕತ್ತೆಗೆ ಹೋಲಿಸೋರು ನೀವು. ಕಾರ್ಯಕರ್ತರೇ ಇನ್ನೂ ಎಷ್ಟು ದಿನ ಜೀ... ಹೂಜೂರ್ ಆಗಿರ್ತೀರಾ ಎಂದು ಸಿ.ಟಿ.ರವಿ ವಿರುದ್ಧ ತಮ್ಮಯ್ಯ ವಾಗ್ದಾಳಿ ನಡೆಸಿದ್ದಾರೆ.
ವೈಯಕ್ತಿಕ ದಾಳಿ
ಒಟ್ಟಾರೆ, ಕಾಫಿನಾಡಲ್ಲಿ ಹೊಸದೊಂದು ರಾಜಕೀಯ ಯುಗ ಆರಂಭವಾಗಿದೆ. ಆದರೆ ತಮ್ಮಯ್ಯಗೆ ಟಿಕೆಟ್ ಸಿಗೋದೆ ಡೌಟ್ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲೇ ಬಲವಾಗಿವೆ.
ಈ ಮಧ್ಯೆ ಸಿ.ಟಿ.ರವಿ ಹಾಗೂ ತಮ್ಮಯ್ಯ ಕಾಂಗ್ರೆಸ್-ಬಿಜೆಪಿಗಿಂತ ವೈಯಕ್ತಿಕ ತೇಜೋವಧೆಗೆ ಇಳಿದಂತೆ ಕಾಣ್ತಿದೆ. ಸಿ.ಟಿ.ರವಿಗಿರುವ ಜನ ಬೆಂಬಲ, ತಮ್ಮಯ್ಯ ಬೆನ್ನಿಗಿರುವ ಜಾತಿ ಬೆಂಬಲ ಸೇರಿದಂತೆ ಎಲ್ಲವನ್ನು ಜನರು ಗಮನಿಸುತ್ತಿದ್ದಾರೆ. ಅಂತಿಮವಾಗಿ ಮತದಾರ ಪ್ರಭು ಯಾರ ಕೈಹಿಡಿಯುತ್ತಾರೆ ಅನ್ನೋದನ್ನು ಕಾದು ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ