ವಿನಯ್ ಗುರೂಜಿ ಭೇಟಿ ಮಾಡಿದ ಬಿಎಸ್​ವೈ; ಸಿಎಂ ಗಾದಿ ಮೇಲಿದೆಯಾ ಯಡಿಯೂರಪ್ಪ ಚಿತ್ತ?


Updated:August 30, 2018, 2:31 PM IST
ವಿನಯ್ ಗುರೂಜಿ ಭೇಟಿ ಮಾಡಿದ ಬಿಎಸ್​ವೈ; ಸಿಎಂ ಗಾದಿ ಮೇಲಿದೆಯಾ ಯಡಿಯೂರಪ್ಪ ಚಿತ್ತ?
ವಿನಯ್ ಗುರೂಜಿ ಮಠದ ಆವರಣದಲ್ಲಿ ಯಡಿಯೂರಪ್ಪ, ಬಿವೈ ರಾಘವೇಂದ್ರ ಮತ್ತಿತರರು

Updated: August 30, 2018, 2:31 PM IST
- ವೀರೇಶ್ ಜಿ. ಹೊಸೂರ್, ನ್ಯೂಸ್18 ಕನ್ನಡ

ಚಿಕ್ಕಮಗಳೂರು(ಆ. 30): ನಡೆದಾಡುವ ದೈವ ಎಂದೇ ಖ್ಯಾತಿಯಾಗಿರುವ, ಹಾಗೂ ಹಲವು ವಿವಾದಗಳಿಗೆ ಕಾರಣವಾಗಿರುವ ಅವಧೂತ ವಿನಯ್ ಗುರೂಜಿ ಅವರನ್ನು ಬಿಎಸ್​ವೈ ಸೇರಿದಂತೆ ಹಲವು ಬಿಜೆಪಿ ಮುಖಂಡರು ಭೇಟಿಯಾಗಿದ್ದಾರೆ. ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ಗ್ರಾಮದಲ್ಲಿರುವ ಸ್ವರ್ಣ ಪೀಠಿಕೇಶ್ವರಿ ಮಠಕ್ಕೆ ಗುರುವಾರ ಬೆಳಗ್ಗೆ 10:30ಕ್ಕೆ ಭೇಟಿ ನೀಡಿದ ಯಡಿಯೂರಪ್ಪ, ಶೋಭಾಕರಂದ್ಲಾಜೆ, ಬಿ.ವೈ. ರಾಘವೇಂದ್ರ ಮತ್ತು ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಅವರು ವಿನಯ್ ಗುರೂಜಿ ಜೊತೆ ಎರಡು ಗಂಟೆ ಕಾಲ ಮಾತನಾಡಿದ್ದಾರೆ.

ಸಮ್ಮಿಶ್ರ ಸರಕಾರದ ಹಗ್ಗಜಗ್ಗಾಟಗಳ ನಡುವೆ, ಅತಿವೃಷ್ಟಿ, ಅನಾವೃಷ್ಟಿಯ ಸಂಕಷ್ಟಗಳು ರಾಜ್ಯ ಸರಕಾರವನ್ನು ಸುತ್ತಿಕೊಂಡಿರುವ ಈ ಸಂದರ್ಭದಲ್ಲಿ ವಿನಯ್ ಗುರೂಜಿ ಅವರನ್ನು ಬಿಜೆಪಿ ನಾಯಕರು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ ಬಿಎಸ್​ವೈ ಅವರು ತಮ್ಮ ಸಿಎಂ ಗಾದಿಯ ಕನಸನ್ನು ನನಸು ಮಾಡಿಕೊಳ್ಳಲು ವಿನಯ್ ಗುರೂಜಿ ಅವರನ್ನು ಭೇಟಿಯಾಗಿರಬಹುದಾ ಎಂಬ ಪ್ರಶ್ನೆಗಳೆದ್ದಿವೆ.

ವಿನಯ್ ಗುರೂಜಿ ಜೊತೆ ಸರವಣ


ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ಸಾಕಷ್ಟು ರಾಜಕಾರಣಿಗಳು ವಿನಯ್ ಗುರೂಜಿ ಅವರನ್ನು ಭೇಟಿಯಾಗಿದ್ದುಂಟು. ಕಳೆದ ಚುನಾವಣೆಯ ವೇಳೆ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಈ ಅವಧೂತರ ಪಾದಪೂಜೆ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಹಾಗೆಯೇ ನೇರಾನೇರ ರಾಜಕಾರಣಿ ರಮೇಶ್ ಕುಮಾರ್ ಅವರು ಗುರೂಜಿ ಅವರಿಗೆ ಆರತಿ ಎತ್ತುತ್ತಿದ್ದ ದೃಶ್ಯಗಳೂ ವೈರಲ್ ಆಗಿದ್ದವು. ಕೇಂದ್ರ ಸಚಿವ ನಿತಿನ್ ಗಡ್ಕರಿ, ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಮೊದಲಾದವರೂ ವಿನಯ್ ಗುರೂಜಿ ಅವರ ಬಳಿ ಹೋಗಿ ಆಶೀರ್ವಾದ ಪಡೆದಕೊಂಡಿದ್ದರಂತೆ. ಹಾಗೆಯೇ, ಸಿಎಂ ಹೆಚ್​ಡಿಕೆ ಪದಗ್ರಹಣ ಕಾರ್ಯಕ್ರಮದಲ್ಲೂ ಗುರೂಜಿ ಅವರಿದ್ದರು. ಈ ವೇಳೆ, ಗುರೂಜಿ ಅವರಿಂದ ಪವಾಡವೂ ಆಯಿತೆಂದು ಜೆಡಿಎಸ್ ಮುಖಂಡ ಸರವಣ ಹೇಳಿಕೊಂಡಿದ್ದುಂಟು.

ಸ್ಪೀಕರ್ ರಮೇಶ್ ಕುಮಾರ್ ಅವರು ಗುರೂಜಿಗೆ ಆರತಿ ಮಾಡುತ್ತಿರುವುದು.


ಆದರೆ, ಗುರೂಜಿ ಪವಾಡ ಮತ್ತು ಶಕ್ತಿಗಳ ಬಗ್ಗೆ ಸಂಶಯ ಮೂಡಿಸುವಂಥ ಘಟನೆಗಳೂ ಹಲವು ಇವೆ. ಬೆಂಗಳೂರಿನ ತಿಪ್ಪಗೊಂಡನಹಳ್ಳಿ ಜಲಾಶಯದ ಬಳಿ ದುನಿಯಾ ವಿಜಿ ಅಭಿನಯದ ಮಾಸ್ತಿಗುಡಿ ಚಿತ್ರದ ಶೂಟಿಂಗ್ ವೇಳೆ ಇಬ್ಬರು ಪ್ರತಿಭಾನ್ವಿತ ಕನ್ನಡ ಖಳನಟರು ದುರ್ಮರಣವನ್ನಪ್ಪಿದ ಸಂದರ್ಭದಲ್ಲಿ ಇದೇ ಗುರೂಜಿ ಸ್ಥಳದಲ್ಲೇ ಇದ್ದರೆನ್ನಲಾಗಿದೆ. ಇವರಿಬ್ಬರು ಸಾವನ್ನಪ್ಪುವ ಮುನ್ಸೂಚನೆ ಇವರಿಗೆ ಯಾಕೆ ಸಿಗಲಿಲ್ಲ ಎಂಬ ಪ್ರಶ್ನೆಗಳು ಇವರ ಅವಧೂತ ಶಕ್ತಿಯ ಮೇಲೆ ಸಂದೇಹ ಬರಲು ಕಾರಣವಾಗಿತ್ತು. ಅಷ್ಟಾದರೂ 30 ವರ್ಷದ ವಿನಯ್ ಗುರೂಜಿ ಅವರಿಗೆ ಭಕ್ತರು ಮತ್ತು ಅಭಿಮಾನಿಗಳ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಚುನಾವಣೆಯ ವೇಳೆಯಂತೂ ರಾಜಕಾರಣಿಗಳು ತಾ ಮುಂದು ನೀ ಮುಂದು ಎಂದು ಗೌರಿಗದ್ದೆ ಗುರುಗಳ ಎಡತಾಕುತ್ತಿದ್ದ ದೃಶ್ಯ ಮಾಮೂಲಿಯಾಗಿತ್ತು.
Loading...

ಇನ್ನು, ಯಡಿಯೂರಪ್ಪ ಅವರು ರಾಜ್ಯ ಸರಕಾರದ ವಿರುದ್ಧ ನಡೆಸುತ್ತಿರುವ ವಾಗ್ದಾಳಿ ಇತ್ತೀಚೆಗೆ ಇನ್ನಷ್ಟು ತೀವ್ರಗೊಂಡಿದೆ. ತಮ್ಮ ಹಾಗೂ ಸಿದ್ದರಾಮಯ್ಯ ಸೇರಿದಂತೆ ಹಲವರ ಫೋನ್​ಗಳನ್ನ ಟ್ಯಾಪ್ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಯಡಿಯೂರಪ್ಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಪರವಾಗಿ ಮಾತನಾಡುವ ಮೂಲಕ ಯಡಿಯೂರಪ್ಪನವರು ಸಮ್ಮಿಶ್ರ ಸರಕಾರದಲ್ಲಿ ಬಿರುಕು ಹೆಚ್ಚಿಸುವ ಪ್ರಯತ್ನದಲ್ಲಿದ್ದಂತಿದೆ. ರಾಚೇನಹಳ್ಳಿ ಡೀನೋಟಿಫಿಕೇಶನ್ ಪ್ರಕರಣವನ್ನು ಕೋರ್ಟ್ ನಿನ್ನೆ ವಜಾಗೊಳಿಸಿದ ಬಳಿಕ ಯಡಿಯೂರಪ್ಪನವರ ಉತ್ಸಾಹ ಇನ್ನಷ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ವಿನಯ್ ಗುರೂಜಿ ಜೊತೆ ಯಡಿಯೂರಪ್ಪ ಮಾಡಿರುವ ಭೇಟಿ ಕುತೂಹಲ ಮೂಡಿಸಿದೆ.
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ