ಚಿಕ್ಕಮಗಳೂರು: ಅತ್ತ ಮೈಸೂರಲ್ಲಿ ಸಾಕಾನೆಗಳ ದರ್ಬಾರ್ ನಡೆಯುತ್ತಿದ್ದರೆ, ಇತ್ತ ಮಲೆನಾಡಲ್ಲಿ ಕಾಡಾನೆಗಳ ಪರೇಡ್ ಜೋರಾಗಿದೆ. ಯಾವ ರೀತಿ ಎಂದರೆ ಕಾಡಾನೆಗಳ ಅಬ್ಬರಕ್ಕೆ ಕಾಫಿ ತೋಟಗಳು ನಾಶವಾಗಿವೆ. ಹಿಂಡು ಹಿಂಡು ಕಾಡಾನೆಗಳು ಹತ್ತಾರು ಎಕರೆ ಕಾಫಿ ತೋಟಗಳಲ್ಲಿ ಘೀಳಿಡುತ್ತಾ ದರ್ಬಾರ್ ನಡೆಸುತ್ತಿವೆ. ಒಂದಲ್ಲ-ಎರಡಲ್ಲ 23ಕ್ಕೂ ಹೆಚ್ಚು ಕಾಡಾನೆಗಳು ಕಾಫಿ ತೋಟದಲ್ಲೇ ಮೊಕ್ಕಾಂ ಹೂಡಿವೆ. ಆನೆ ನಡೆದಿದ್ದೇ ದಾರಿ ಅನ್ನೋದನ್ನು ಜನರಿಗೆ ಸಾಕ್ಷಿ ಸಮೇತ ತೋರಿಸುತ್ತಿವೆ. ಕಳೆದ ಮೂರು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಳೆಮೂಡಿಗೆರೆಯ ಹಳಸೆ ಕೃಷ್ಣೇಗೌಡರ ಕಾಫಿ ತೋಟದಲ್ಲಿ ಕಾಡಾನೆಗಳು ಮೊಕ್ಕಾಂ ಹೂಡಿದ್ದು, ಮಲೆನಾಡಿಗರು ಕಾಡಾನೆಗಳ ದಾಳಿಗೆ ಬೇಸತ್ತುಹೋಗಿದ್ದಾರೆ.
ಹೌದು, ಒಂದಲ್ಲ, ಎರಡಲ್ಲ, ಮರಿ ಆನೆಗಳು ಸೇರಿದಂತೆ ಬರೋಬ್ಬರಿ 23 ಕಾಡಾನೆಗಳು ಕಾಫಿ ತೋಟಗಳಲ್ಲಿ ದರ್ಬಾರ್ ನಡೆಸುತ್ತಿವೆ. ಹಿಂಡು ಹಿಂಡು ಕಾಡಾನೆಗಳನ್ನು ಮರಳಿ ಕಾಡಿಗೋಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಎಸಿಎಫ್ ಸೇರಿದಂತೆ 30ಕ್ಕೂ ಹೆಚ್ಚು ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಡಾನೆಗಳ ಚಲನವಲನಗಳನ್ನು ಗಮನಿಸಿ, ಮರಳಿ ಕಾಡಿಗಟ್ಟಲು ಯತ್ನಿಸುತ್ತಿದ್ದಾರೆ. ಕಾಡಾನೆಗಳ ಅಬ್ಬರಕ್ಕೆ ಕಾಫಿ, ಮೆಣಸು, ಅಡಿಕೆ, ಬಾಳೆ ಸೇರಿದಂತೆ ಇತರೆ ಬೆಳೆಗಳು ಸರ್ವನಾಶವಾಗಿವೆ. ಗಜಪಡೆಯ ದರ್ಬಾರ್ ಹಾಗೂ ಪರೇಡ್ ನ ದೃಶ್ಯಗಳು ಕ್ಯಾಮರಾ ಕಣ್ಣಲ್ಲೂ ಸೆರೆಯಾಗಿವೆ. ಇಷ್ಟೊಂದು ಕಾಡಾನೆಗಳನ್ನು ಕಂಡು ಕಾಫಿನಾಡಿಗರು ಕಂಗಾಲಾಗಿದ್ದಾರೆ.
ಇದನ್ನೂ ಓದಿ: Bangalore Crime: ಬೆಂಗಳೂರು; ಗೃಹ ಪ್ರವೇಶಕ್ಕೆ ಬೆಳ್ಳಿ ನಾಣ್ಯ ಕೊಡುವ ನೆಪದಲ್ಲಿ ಬಂದು ಚಿನ್ನದ ಸರದೊಂದಿಗೆ ಎಸ್ಕೇಪ್!
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯೆಸಲೂರು ಭಾಗದಿಂದ ಬಂದ ಈ ಹಿಂಡು-ಹಿಂಡು ಕಾಡಾನೆಗಳು ಮೂಡಿಗೆರೆ ಕಡೆ ಮುಖ ಮಾಡಿವೆ. ಹೀಗೆ ಬರುವ ಮಾರ್ಗ ಮಧ್ಯೆ ಮೂಡಿಗೆರೆ ತಾಲೂಕಿನ ಕೆಲ್ಲೂರು, ದುಂಡುಗ, ಹಳಸೆ, ಕುನ್ನಹಳ್ಳಿ, ಕೃಷ್ಣಾಪುರ ಸೇರಿದಂತೆ ಹತ್ತಾರು ಗ್ರಾಮಗಳ ಕಾಫಿ ತೋಟಗಳಲ್ಲಿ ಅಟ್ಟಹಾಸ ಸೃಷ್ಟಿಸಿರೋ ಗ್ಯಾಂಗ್ ನೋಡಿ ಬೆಳೆಗಾರರು, ರೈತರು ಆತಂಕಗೊಂಡಿದ್ದಾರೆ. ಮೂಡಿಗೆರೆ ತಾಲೂಕಿನ ಗುತ್ತಿ, ಮೂಲರಹಳ್ಳಿ, ಬೈರಾಪುರ, ಗೌಡಳ್ಳಿ ಸೇರಿದಂತೆ ಅನೇಕ ಕಡೆಗಳಲ್ಲೂ ಕಾಡಾನೆ ಆರ್ಭಟವಿದ್ದರೂ ಇಷ್ಟೊಂದು ಪ್ರಮಾಣದ ಗುಂಪು ಗುಂಪು ಕಾಡಾನೆಗಳನ್ನು ಜನರು ನೋಡಿರಲಿಲ್ಲ. ಸದ್ಯ ಈ ಕಿಲಾಡಿ ಗ್ಯಾಂಗನ್ನು ನೋಡಿ ಈ ಭಾಗದ ಜನರು ಬೆಚ್ಚಿಬಿದ್ದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ