ಗ್ರಾಮಸ್ಥರಿಂದ ಚಂದಾ ಎತ್ತಿ ಸರ್ಕಾರಿ ಶಾಲೆ ಗೆ ಹೊಸ ರೂಪ; ಗ್ರಾಮದ ಜನರ ಕಾರ್ಯಕ್ಕೆ ಮೆಚ್ಚುಗೆ

ದೇವಸ್ಥಾನಕ್ಕೆ ಮೀಸಲಿಟ್ಟಿದ್ದ ಹಣವನ್ನು ಮಕ್ಕಳು ಓದುವ ಶಾಲೆಯೇ ದೇವರ ಗುಡಿ ಎಂದು ಗ್ರಾಮಸ್ಥರು ನೀಡಿದ್ದಾರೆ.

ಶಾಲೆ

ಶಾಲೆ

 • Share this:
  ಚಿಕ್ಕಮಗಳೂರು (ಏ. 3):  ನಮ್ಮೂರ ದೇವಸ್ಥಾನ ಬೇರೆ ಅಲ್ಲ, ನಮ್ಮ ಮಕ್ಕಳು ಓದುವ ಶಾಲೆ ಬೇರೆ ಅಲ್ಲ ಎಂದು ಶಾಲೆಯ ಅಭಿವೃದ್ಧಿಗೆ ಗ್ರಾಮಸ್ಥರು ದೇಣಿಗೆ ನೀಡಿ ಮಾದರಿಯಾಗಿದ್ದಾರೆ.  ತಾಲೂಕಿನ ಗಡಿ ಸಿರಿಬಡಿಗೆ ಗ್ರಾಮದ ಶಾಲೆಗೆ ಸರ್ಕಾರದಿಂದ ಹಣ ಬರುತ್ತಿಲ್ಲ. ಶಾಲೆ ಕೂಡ ಶಿಥಿಲಾವಸ್ಥೆ ತಲುಪಿದ್ದು, ಇದನ್ನು ಕಂಡ ಗ್ರಾಮಸ್ಥರೇ ತಮ್ಮೂರ ಶಾಲೆ ಅಭಿವೃದ್ಧಿಗೆ ಪಣತೊಟ್ಟಿ, ಮನೆ ಮನೆಯಿಂದ ಚಂದಾ ಸಂಗ್ರಹಿಸಿ ಅಭಿವೃದ್ಧಿ ಮಾಡಿದ್ದಾರೆ.  ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸರ್ಕಾರದಿಂದ ವರ್ಷಕ್ಕೆ 6 ಸಾವಿರ ಹಣ ಬರ್ತಿತ್ತು. ಅದು ಎರಡು ಕಂತಿನಲ್ಲಿ. ಕೊರೊನಾ ವರ್ಷದಲ್ಲಿ ಅದೂ ಬಂದಿಲ್ಲ. ಹೀಗೆ ಬಿಟ್ರೆ ಶಾಲೆ ಬಿದ್ದೇ ಹೋಗುತ್ತೆ ಎಂದು ಹಳ್ಳಿಗರೇ ತಮ್ಮೂರು ಶಾಲೆಗೆ ಹೊಸ ರೂಪ ಕೊಟ್ಟಿದ್ದಾರೆ. ಕೆಳಸಿರಿಬಡಿಗೆ ಹಾಗೂ ಮೇಲಿನ ಸಿರಿಬಡಿಗೆ ಗ್ರಾಮದಲ್ಲಿ ಸುಮಾರು 150 ಮನೆಗಳಿವೆ. ಎಲ್ಲರೂ ಸೇರಿ 100 ರಿಂದ 1000ದವರೆಗೂ ಅವರ ಕೈಲಾದಷ್ಟು ಹಣ ಹಾಕಿ 35 ಸಾವಿರ ಹಣವನ್ನು ಶಾಲಾ ಶಿಕ್ಷಕರಿಗೆ ಕೊಟ್ಟಿದ್ದಾರೆ. ಆ ಹಣಕ್ಕೆ ಶಿಕ್ಷಕರು ಮತ್ತಷ್ಟು ಸೇರಿಸಿ ಮೇಲ್ಛಾವಣಿ ದುರಸ್ಥಿ ಮಾಡಿದ್ದಾರೆ. ಮಕ್ಕಳು ಕುರುವುದಕ್ಕೆ ಕುರ್ಚಿ ವ್ಯವಸ್ಥೆ ಮಾಡಿದ್ದಾರೆ. 1 ರಿಂದ 7ನೇ ತರಗತಿವರೆಗಿನ 48 ಮಕ್ಕಳು ಓದುವ ಎಂಟು ರೂಂಗಳಿಗೂ ಸುಣ್ಣ-ಬಣ್ಣ ಹೊಡೆಸಿ  ಶೃಂಗರಿಸಿದ್ದಾರೆ. ಶಾಲೆಯಲ್ಲಿನ ಉತ್ತಮ ಶಿಕ್ಷಣ ವ್ಯವಸ್ಥೆ ಕಂಡು ಖಾಸಗಿ ಶಾಲೆಗೆ ಹೋಗುತ್ತಿದ್ದ ಸುಮಾರು 20 ಮಕ್ಕಳು ಈ ಶಾಲೆಗೆ ಸೇರಿದ್ದಾರೆ.

  ಊರಲ್ಲಿ ಕೇವಲ ಚಂದಾ ಎತ್ತಿ ಮಾತ್ರ ಶಾಲೆಗೆ ಹೊಸ ರೂಪ ನೀಡಿಲ್ಲ. ಊರಲ್ಲಿ ಎರಡು ಎಕರೆ ಗ್ರಾಮ ಠಾಣಾ ಜಾಗವಿತ್ತು. ಆ ಜಾಗವನ್ನ 11 ಸಾವಿರಕ್ಕೆ ಹರಾಜು ಕೂಗಿದ್ದಾರೆ. ಆ ಹಣವನ್ನ ಕೆಳಸಿರಬಡಿಗೆ ಹಾಗೂ ಮೇಲಿನ ಸಿರಿಬಡಿಗೆ ಗ್ರಾಮದ ದೇವಸ್ಥಾನಕ್ಕೆಂದು 5500 ರೂಪಾಯಿಯನ್ನ ಪಾಲು ಮಾಡಿಕೊಂಡಿದ್ದರು. ಆದರೆ, ಯಾವಾಗ ಶಿಕ್ಷಕರು ಈ ರೀತಿ ಮಾಡೋಣ ಎಂದರೋ ಆಗ ದೇವಸ್ಥಾನಕ್ಕೆ ಇಟ್ಟಿದ್ದ ಹಣವನ್ನೂ ನಮ್ಮ ಮಕ್ಕಳು ಓದುವ ಶಾಲೆ ಕೂಡ ನಮಗೆ ದೇವಸ್ಥಾನ ಎಂದು ಶಾಲೆ ಅಭಿವೃದ್ಧಿಗೆ ನೀಡಿದ್ದಾರೆ.

  ಊರಿನ ಮುಖಂಡರ ಜೊತೆ ಶಿಕ್ಷಕರು ಹೋದ ಕೂಡಲೇ ಯಾರೂ ಕೂಡ ಬರೀಗೈಲಿ ಕಳಿಸಿಲ್ಲ. ಎರಡೇ ಗಂಟೆಗೆ 35 ಸಾವಿರ ಹಣವನ್ನ ಹೊಂದಿಸಿ ಕೊಟ್ಟಿದ್ದಾರೆ. ಇದರಿಂದ ಇಂದು ಶಾಲೆ ನಳನಳಿಸ್ತಿದೆ. ಊರಿನ ಜನರ ಸಹಕಾರಕ್ಕೆ ಶಿಕ್ಷಕ ವೃಂದ ಕೂಡ ಅಭಿನಂದನೆ ಸಲ್ಲಿಸಿದೆ.

  ರಾಜ್ಯದ ಪ್ರತಿಯೊಂದು ಹಳ್ಳಿಯ ಜನ ಸರ್ಕಾರದ ದಾರಿ ಕಾಯದೆ ತಮ್ಮೂರ ಶಾಲೆಗಳನ್ನ ಉಳಿಸಿಕೊಳ್ಳಲು ಮುಂದಾದರೆ ಯಾವ ಸರ್ಕಾರಿ ಶಾಲೆಗಳು ಬಾಗಿಲು ಹಾಕಲ್ಲ.  ರೈತರೇ ಹೆಚ್ಚಿರುವ ಈ ಬಯಲುಸೀಮೆ ಹಳ್ಳಿಯಲ್ಲಿ ಶಿಕ್ಷಕರು ಕೇಳಿದ ಕೂಡಲೇ 35 ಸಾವಿರ ಹಣ ಕೊಟ್ಟು, ದೇವಸ್ಥಾನಕ್ಕೆ ಎಂದು ಮೀಸಲಿಟ್ಟ ಹಣವನ್ನೂ ಕೊಟ್ಟ ಈ ಹಳ್ಳಿ ಜನರ ಹೃದಯಶ್ರೀಮಂತಿಕೆಗೆ  ಮೆಚ್ಚುಗೆ ವ್ಯಕ್ತಪಡಿಸಬೇಕು
  Published by:Seema R
  First published: