ಮಲೆನಾಡನ್ನು ಬೆಚ್ಚಿ ಬೀಳಿಸಿದ್ದ ಶೃಂಗೇರಿ ಅತ್ಯಾಚಾರ ಪ್ರಕರಣ; ಇಬ್ಬರು ಅಪರಾಧಿಗಳಿಗೆ ಗಲ್ಲು ಶಿಕ್ಷೆ

Sringeri Rape and Murder Case: 2016ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆಯಲ್ಲಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಿ, ಕೊಂದು ಪಾಳು ಬಾವಿಗೆ ಎಸೆಯಲಾಗಿತ್ತು. ಈ ಪ್ರಕರಣದ ಇಬ್ಬರು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.

news18-kannada
Updated:January 18, 2020, 3:03 PM IST
ಮಲೆನಾಡನ್ನು ಬೆಚ್ಚಿ ಬೀಳಿಸಿದ್ದ ಶೃಂಗೇರಿ ಅತ್ಯಾಚಾರ ಪ್ರಕರಣ; ಇಬ್ಬರು ಅಪರಾಧಿಗಳಿಗೆ ಗಲ್ಲು ಶಿಕ್ಷೆ
ಶೃಂಗೇರಿ ಅತ್ಯಾಚಾರ ಪ್ರಕರಣದ ಅಪರಾಧಿಗಳಾದ ಸಂತೋಷ್ ಮತ್ತು ಪ್ರದೀಪ್
  • Share this:
ಚಿಕ್ಕಮಗಳೂರು (ಜ. 18): ಮಲೆನಾಡನ್ನು ಬೆಚ್ಚಿ ಬೀಳಿಸಿದ್ದ ಶೃಂಗೇರಿಯ ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ. ನಿರ್ಭಯಾ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಸುಪ್ರೀಂಕೋರ್ಟ್ ಮರಣದಂಡನೆ ವಿಧಿಸಿರುವ ಬೆನ್ನಲ್ಲೇ ಶೃಂಗೇರಿ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳೆಂದು ಘೋಷಿಸಲ್ಪಟ್ಟಿದ್ದ ಇಬ್ಬರು ದೋಷಿಗಳಿಗೆ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.

2016ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆಯಲ್ಲಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಿ, ಕೊಂದು ಪಾಳು ಬಾವಿಗೆ ಎಸೆಯಲಾಗಿತ್ತು. ಈ ಘಟನೆ ಚಿಕ್ಕಮಗಳೂರು ಮಾತ್ರವಲ್ಲದೆ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮೆಣಸೆಯಿಂದ ಕಾಲುದಾರಿಯಲ್ಲಿ ಮನೆಗೆ ಹೋಗುತ್ತಿದ್ದ ಬಿಕಾಂ ವಿದ್ಯಾರ್ಥಿನಿಯನ್ನು ಎಳೆದೊಯ್ದಿದ್ದ ಅದೇ ಊರಿನ ಯುವಕರು ಆಕೆಯ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿ, 50 ಅಡಿಯ ಬಾವಿಯಲ್ಲಿ ಎಸೆದು ಹೋಗಿದ್ದರು.

ತಮ್ಮ ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದ ಪೋಷಕರು ಕಣ್ಣೀರು ಹಾಕುತ್ತಿದ್ದರೆ ಅವರ ಮನೆಗೆ ಕೆಲಸಕ್ಕೆ ಬರುತ್ತಿದ್ದ ಈ ಇಬ್ಬರು ಆರೋಪಿಗಳು ತಮಗೆ ಏನೂ ಗೊತ್ತಿಲ್ಲದಂತಿದ್ದರು. ತಮ್ಮನ್ನು  ಅಣ್ಣ ಎಂದು ಕರೆಯುತ್ತಿದ್ದ ಯುವತಿಯ ಮೇಲೇ ಅತ್ಯಾಚಾರ ನಡೆಸಿದ್ದ ಪ್ರದೀಪ್​ ಮತ್ತು ಸಂತೋಷ್​ ವೇಲ್​ನಿಂದ ಆಕೆಯ ಕುತ್ತಿಗೆ ಬಿಗಿದು ಸಾಯಿಸಿದ್ದರು.

ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ವಂಚನೆ; ಚಿತ್ರದುರ್ಗದ ಪ್ರಿಯಕರನಿಗೆ ಯುವತಿಯಿಂದ ಚಪ್ಪಲಿಯೇಟು

ಆರೋಪಿಗಳಾದ ಪ್ರದೀಪ್ ಮತ್ತು ಸಂತೋಷ್ ಎಂಬ ಯುವಕರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಆ ಇಬ್ಬರೇ ಈ ಕೃತ್ಯ ಎಸಗಿರುವುದು ಸಾಬೀತಾಗಿದ್ದು, ಇಂದು ಚಿಕ್ಕಮಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದೆ.

ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಂತೋಷ್, ಪ್ರದೀಪ್ ಮೇಲಿನ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳಿಗೂ ಗಲ್ಲು ಶಿಕ್ಷೆ ವಿಧಿಸಿ ಚಿಕ್ಕಮಗಳೂರು ಪ್ರಧಾನ ನ್ಯಾಯಾಲಯ ಆದೇಶ ಹೊರಡಿಸಿದೆ. 4 ವರ್ಷಗಳಿಂದ ಈ ಪ್ರಕರಣದ ವಿಚಾರಣೆ ನಡೆದಿತ್ತು. ಇಂದು ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ತೀರ್ಪು ಪ್ರಕಟಗೊಳಿಸಿದ್ದಾರೆ. ಮೃತ ಯುವತಿಯ ಪರ ಹಿರಿಯ ವಕೀಲ ವಿ.ಜಿ. ಯಲಕೇರಿ ವಾದ ಮಂಡಿಸಿ, ಮರಣದಂಡನೆ ವಿಧಿಸುವಂತೆ ಕೋರ್ಟ್​ಗೆ ಮನವಿ ಮಾಡಿದ್ದರು. ಈ ಕುರಿತು ವಿಚಾರಣೆ ನಡೆಸಿ, ತೀರ್ಪು ಪ್ರಕಟಿಸಿರುವ ಜಿಲ್ಲಾ ನ್ಯಾಯಾಲಯ ಗಲ್ಲು ಶಿಕ್ಷೆ ಘೋಷಿಸಿದೆ.
First published:January 18, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ