HOME » NEWS » State » CHIKMAGALUR RAIN HEAVY RAIN IN CHIKMAGALUR AND SHIVAMOGGA MANGALORE MUDIGERE ROAD CLOSED SCT

Chikmagalur Rain: ಮಲೆನಾಡಿನ ಮಳೆಗೆ ಚಿಕ್ಕಮಗಳೂರಿನಲ್ಲಿ ಮೊದಲ ಬಲಿ; ಮೂಡಿಗೆರೆ-ಮಂಗಳೂರು ಸಂಚಾರ ಸ್ಥಗಿತ

Karnataka Rain Updates: ಚಿಕ್ಕಮಗಳೂರಿನ ಬಾಳೆಹೊನ್ನೂರು-ಕಳಸ ಸಂಚಾರ ಬಂದ್ ಆಗಿದ್ದು, ಮಲ್ಗೋಡ್ ಸೇತುವೆ ಜಲಾವೃತವಾಗಿದೆ. ರಸ್ತೆಗೆ ಅಡ್ಡಲಾಗಿ ಮರಗಳು ಬಿದ್ದಿವೆ. ಇದರಿಂದ ರಾಷ್ಟ್ರೀಯ ಹೆದ್ದಾರಿ 173 ಬಂದ್ ಆಗಿದ್ದು, ಮೂಡಿಗೆರೆ-ಮಂಗಳೂರು ಸಂಚಾರ ಸ್ಥಗಿತವಾಗಿದೆ. ಚಿಕ್ಕಮಗಳೂರು-ಮೂಡಿಗೆರೆ ಸಂಚಾರವೂ ಬಂದ್ ಆಗಿದೆ.

news18-kannada
Updated:August 6, 2020, 8:33 AM IST
Chikmagalur Rain: ಮಲೆನಾಡಿನ ಮಳೆಗೆ ಚಿಕ್ಕಮಗಳೂರಿನಲ್ಲಿ ಮೊದಲ ಬಲಿ; ಮೂಡಿಗೆರೆ-ಮಂಗಳೂರು ಸಂಚಾರ ಸ್ಥಗಿತ
ಮಳೆಯಿಂದ ಮುಳುಗಿರುವ ಚಿಕ್ಕಮಗಳೂರಿನ ಕಳಸ ಬಳಿಯ ಹೆಬ್ಬಾಳೆ ಸೇತುವೆ
  • Share this:
ಚಿಕ್ಕಮಗಳೂರು (ಆ. 6): ಕಳೆದ ಒಂದು ವಾರದಿಂದ ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಬಹುತೇಕ ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿವೆ. ಮಳೆಯಿಂದಾಗಿ ಗುಡ್ಡ ಕುಸಿದು, ಮರ ಉರುಳಿ, ರಸ್ತೆಗಳೂ ಬಂದ್ ಆಗಿವೆ. ಮಲೆನಾಡಿನ ಮಳೆಯಿಂದ ಚಿಕ್ಕಮಗಳೂರಿನ ರೈತ ನಿನ್ನೆ ಸಂಜೆ ಸಾವನ್ನಪ್ಪಿದ್ದಾರೆ.

ಈ ಮೂಲಕ ಮಲೆನಾಡಿನ ಮಳೆಗೆ ಮೊದಲ ಬಲಿಯಾದಂತಾಗಿದೆ. ವಿದ್ಯುತ್ ತಂತಿ ತುಳಿದು ವ್ಯಕ್ತಿ ಸಾವನ್ನಪ್ಪಿದ್ದು, ಭಾರೀ ಗಾಳಿ-ಮಳೆಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ತೋಟದಿಂದ ಹಿಂತಿರುಗುವಾಗ ವಿದ್ಯುತ್ ತಂತಿ ತುಳಿದು ಪರಮೇಶ್ವರಪ್ಪ ಎಂಬ 38 ವರ್ಷ ರೈತ ಸಾವನ್ನಪ್ಪಿದ್ದಾರೆ. ಕಡೂರು ತಾಲೂಕಿನ ಜಕ್ಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

Heavy Rain in Chikmagalur and Shivamogga Mangalore Mudigere Road Closed.
ಚಿಕ್ಕಮಗಳೂರು ಮಳೆ


ಚಿಕ್ಕಮಗಳೂರಿನಲ್ಲಿ ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಭದ್ರಾ ನದಿ ಇಕ್ಕೆಲಗಳ ಗದ್ದೆ ತೋಟಗಳು ಜಲಾವೃತವಾಗಿವೆ. ಅಡಿಕೆ ತೋಟದಲ್ಲಿ 2-3 ಅಡಿ ನೀರು ನಿಂತಿದೆ. ಮೈದುಂಬಿ ಹರಿಯುತ್ತಿರುವ ತುಂಗಾ-ಭದ್ರಾ, ಹೇಮಾವತಿ ನದಿಗಳಿಂದ ಅಕ್ಕಪಕ್ಕದ ಗ್ರಾಮಗಳಲ್ಲಿ ಭೀತಿ ಶುರುವಾಗಿದೆ. ಬಾಳೆಹೊನ್ನೂರು-ಕಳಸ ಸಂಚಾರ ಬಂದ್ ಆಗಿದ್ದು, ಮಲ್ಗೋಡ್ ಬಳಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಭಾರೀ ಮಳೆಗೆ ಮಲ್ಗೋಡ್ ಸೇತುವೆ ಜಲಾವೃತವಾಗಿದೆ.

ಇದನ್ನೂ ಓದಿ: ಸಿಎಂ ಯಡಿಯೂರಪ್ಪ, ಸಿದ್ದರಾಮಯ್ಯ ಆರೋಗ್ಯ ಸ್ಥಿರ; ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ

ರಸ್ತೆಗೆ ಅಡ್ಡಲಾಗಿ ಮರಗಳು ಬಿದ್ದಿವೆ. ಇದರಿಂದ ರಾಷ್ಟ್ರೀಯ ಹೆದ್ದಾರಿ 173 ಬಂದ್ ಆಗಿದ್ದು, ಮೂಡಿಗೆರೆ-ಮಂಗಳೂರು ಸಂಚಾರ ಸ್ಥಗಿತವಾಗಿದೆ. ಚಿಕ್ಕಮಗಳೂರು-ಮೂಡಿಗೆರೆ ಸಂಚಾರವೂ ಬಂದ್ ಆಗಿದೆ. ಮೂಡಿಗೆರೆ ತಾಲೂಕಿನ ಕುದ್ರೆಗುಂಡಿ ಬಳಿ ರಾತ್ರಿ ಮೂರು ಗಂಟೆಯಿಂದ ವಾಹನಗಳು ನಿಂತಲ್ಲೇ ನಿಂತಿವೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಸಂಕ್ಲಾಪುರದಲ್ಲಿ ಮನೆ ಮೇಲೆ ಬೃಹತ್ ಮರ ಉರುಳಿ ಬಿದ್ದಿದೆ. ಇದರಿಂದಾಗಿ ನಾಗೇಶ್ ಗೌಡ ಎಂಬುವವರಿಗೆ ಸೇರಿದ ಮನೆ ಸಂಪೂರ್ಣ ಧ್ವಂಸವಾಗಿದೆ. ಶೃಂಗೇರಿ, ಕೆರೆಕಟ್ಟೆ, ಕಿಗ್ಗಾ ಭಾಗದಲ್ಲೂ ಭಾರೀ ಮಳೆಯಾಗುತ್ತಿದೆ. ಮಲೆನಾಡಿನ ಮಳೆಗೆ ಮಲೆನಾಡಿಗರು ಬೆಚ್ಚಿಬಿದ್ದಿದ್ದಾರೆ. ತುಂಗಾ ನದಿ ಮೈದುಂಬಿ ಹರಿಯುತ್ತಿದ್ದು, ಶೃಂಗೇರಿಯ ಗಾಂಧಿ ಮೈದಾನ ಜಲಾವೃತವಾಗಿದೆ. ಪ್ರವಾಸಿಗರ ವಾಹನ ನಿಲುಗಡೆಯ ಮೈದಾನ ಸಂಪೂರ್ಣ ನೀರಿನಿಂದ ತುಂಬಿದೆ.ಇದನ್ನೂ ಓದಿ: Shivamogga Rain : ಶಿವಮೊಗ್ಗ ಜಿಲ್ಲೆಯಲ್ಲಿ ಅಬ್ಬರಿಸುತ್ತಿದೆ ಮುಂಗಾರು ಮಳೆ ; ಮೈದುಂಬಿ ಹರಿಯುತ್ತಿದೆ ತುಂಗಾ ನದಿ

Heavy Rain in Chikmagalur and Shivamogga Mangalore Mudigere Road Closed.
ಚಿಕ್ಕಮಗಳೂರು ಮಳೆ


ಶಿವಮೊಗ್ಗದಲ್ಲೂ ಭಾರೀ ಮಳೆ:

ಶಿವಮೊಗ್ಗದಲ್ಲೂ ಮಳೆ ಹೆಚ್ಚಾಗಿದ್ದು, ನಾಲ್ಕೈದು ದಿನಗಳಿಂದ ಒಂದೇ ಸಮನೆ ಬಿಡುವಿಲ್ಲದೆ ಸುರಿಯುತ್ತಿರುವ ಮಳೆಗೆ ಜನರು ತತ್ತರಿಸಿದ್ದಾರೆ. ಶಿವಮೊಗ್ಗದ ತೀರ್ಥಹಳ್ಳಿ, ಸಾಗರ ಹೊಸನಗರ ತಾಲೂಕಿನಲ್ಲಿ ಧಾರಾಕಾರ ಮಳೆಯಾಗಿದೆ. ತುಂಗಾ ಅಣೆಕಟ್ಟಿನಿಂದ 58 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಪ್ರಮುಖ ಅಣೆಕಟ್ಟುಗಳ ಒಳಹರಿವು ಏರಿಕೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಧಾರಾಕಾರ ಮಳೆ ಹಿನ್ನೆಲೆ ನದಿ, ಕೆರೆ ಕಟ್ಟೆಗಳ ಬಳಿ ತೆರಳದಂತೆ ಹಾಗೂ ನದಿ ದಂಡೆಯಲ್ಲಿರುವವರು ಜಾಗರೂಕರಾಗಿರುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಶಿವಕುಮಾರ್ ಸೂಚನೆ ನೀಡಿದ್ದಾರೆ.



ಯಾವುದೇ ಕಾರಣಕ್ಕೂ ನದಿ ಅಥವಾ ಕೆರೆಗಳ ಸಮೀಪ ತೆರಳದಂತೆ ಸೂಚನೆ ನೀಡಲಾಗಿದೆ. ಅತಿವೃಷ್ಟಿ ಪರಿಸ್ಥಿತಿಯನ್ನು ಎದುರಿಸಲು ಶಿವಮೊಗ್ಗ ಜಿಲ್ಲಾಡಳಿತ‌ ಸಿದ್ಧತೆ ನಡೆಸಿದೆ. ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಲು ಸೂಚನೆ ನೀಡಲಾಗಿದೆ.
Published by: Sushma Chakre
First published: August 6, 2020, 8:25 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories