news18-kannada Updated:January 15, 2021, 2:23 PM IST
ಮೂಡಿಗೆರೆಯಲ್ಲಿ ಬೆಳ್ಳಕ್ಕಿಗಳ ಕಲರವ
ಚಿಕ್ಕಮಗಳೂರು (ಜ. 15): ಆಕಾಶದಲ್ಲೋ, ಮರಗಳ ಮೇಲೋ ಒಂದೆರೆಡು ಬೆಳಕ್ಕಿಗಳನ್ನು ನೋಡಿದರೆ ಮನಸಿಗೆ ಖುಷಿಯಾಗುತ್ತದೆ. ಆದರೆ, ಕಾಫಿನಾಡನಲ್ಲಿ ಸೃಷ್ಠಿಯಾಗುತ್ತಿರುವ ಬೆಳ್ಳಕ್ಕಿ ಪ್ರಪಂಚವನ್ನು ನೋಡಿದರೆ ನಿಜಕ್ಕೂ ನೀವು ಕಳೆದೇ ಹೋಗುತ್ತೀರ! ಇಲ್ಲಿನ ಬೆಳ್ಳಕ್ಕಿಯ ವೈಭವವನ್ನು ನೀವೊಮ್ಮೆ ನೋಡಿದರೆ ನಿಮಗೂ ಹಕ್ಕಿಗಳಂತೆ ಆಕಾಶದಲ್ಲಿ ಹಾರಾಡಬೇಕೆಂಬ ಆಸೆ ಶುರುವಾಗುತ್ತದೆ. ಆಗಸದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಾ, ಕಣ್ಣಿಗೆ ರಸದೌತಣ ನೀಡುತ್ತಾ, ಸಾವಿರಾರು ಬೆಳ್ಳಕ್ಕಿಗಳು ಹೊಸದಾದ ಪಕ್ಷಿಲೋಕವನ್ನೇ ಸೃಷ್ಟಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದ ಪಕ್ಕದ ಮರಗಳಲ್ಲಿ ನೆಲೆಸಿರೋ ಬೆಳ್ಳಕ್ಕಿಗಳ ಹಿಂಡು ನೋಡುಗರ ಮನಸ್ಸಿಗೆ ಮುದ ನೀಡುತ್ತಿದೆ. ಪ್ರತಿ ವರ್ಷವೂ ಚಳಿಗಾಲದಲ್ಲಿ ಸುತ್ತಮುತ್ತಲ ಭತ್ತದಗದ್ದೆ, ಹಳ್ಳ-ಕೊಳ್ಳಗಳಲ್ಲಿ ಮೀನು, ಸಣ್ಣ-ಪುಟ್ಟ ಕೀಟಗಳನ್ನ ತಿಂದು ಸಂಜೆಯಾಗುತ್ತಲೇ ಮರಗಳ ಮೇಲೇರಿ ಸಾವಿರಾರು ಬೆಳ್ಳಕ್ಕಿಗಳು ಆಶ್ರಯ ಪಡೆಯುತ್ತಿವೆ. ಬೆಳಗಿನ ಜಾವ 6 ಗಂಟೆ ಹಾಗೂ ಸಂಜೆ 6ರ ವೇಳೆಯ ಅಸುಪಾಸಿನಲ್ಲಿ ಹಸಿರು ಚೆಲ್ಲಿ ನಿಂತಿರೋ ಮರಗಳ ಮೇಲೆ ಒಮ್ಮೆಲೆ ಸಾವಿರಾರು ಬೆಳ್ಳಕ್ಕಿಗಳು ಹಾರಾಡೋ ದೃಶ್ಯ ನೋಡುಗರ ಮನಸ್ಸಿಗೆ ಮುದ ನೀಡುತ್ತಿದೆ. ಚಿವ್ ಚಿವ್ ಅನ್ನೋ ಮರಿ ಹಕ್ಕಿಗಳ ನಿನಾದದ ಜೊತೆ ಅತ್ತಿಂದಿತ್ತ ಇತ್ತಿಂದಿತ್ತ ಮರದಿಂದ ಮರಕ್ಕೆ ಹಾರಾಡೋ ಬೆಳ್ಳಕ್ಕಿಗಳ ರಂಗಿನಾಟ ಮತ್ತಷ್ಟು ಸುಂದರ.
ಇನ್ನು, ಮುಸ್ಸಂಜೆಯಲ್ಲಿ ರವಿ ಮೆಲ್ಲಗೆ ಮರೆಯಾಗುತ್ತಿದ್ದಂತೆ ಬೆಳ್ಳಕ್ಕಿಗಳ ಬಳಗ ಎಲ್ಲೇ ಇದ್ದರೂ ಇದೇ ಮರಗಳನ್ನು ಹುಡುಕಿಕೊಂಡು ಬರೋದು ವಿಶೇಷ. ಹನಿ-ಹನಿಗೂಡಿದರೆ ಹಳ್ಳ ಎಂಬಂತೆ ಒಂದು ಎರಡು ಮೂರು ಎಂದು ಲೆಕ್ಕ ಹಾಕುವುದರಲ್ಲಿ ಒಮ್ಮೆಲೆ ಸಾವಿರಾರು ಬೆಳ್ಳಕ್ಕಿಗಳು ಕಣ್ಣಿಗೆ ಹಬ್ಬದೂಟ ಬಡಿಸುತ್ತವೆ. ಮರಗಳ ಮೇಲೆ ಒಟ್ಟೊಟ್ಟಾಗಿ ಆಟವಾಡೋ ಹಕ್ಕಿಗಳು ಕತ್ತಲು ಆವರಿಸುತ್ತಿದ್ದಂತೆ ಫುಲ್ ಸೈಲೆಂಟಾಗಿ ಮರದ ರೆಂಬೆಯನ್ನ ಆಶ್ರಯಿಸಿಕೊಂಡು ನಿದ್ರೆಗೆ ಜಾರುತ್ತವೆ. ಪ್ರತಿ ಬಾರಿ ಡಿಸೆಂಬರ್ ವೇಳೆಗೆ ನಾನಾ ಪ್ರದೇಶಗಳಿಂದ ಬರುತ್ತಿದ್ದ ಬೆಳ್ಳಕ್ಕಿಗಳು, ಜನವರಿ ತಿಂಗಳು ಕಳೆದು ಫೆಬ್ರವರಿ ಬಳಿಕ ಬೇರೆಡೆಗೆ ಜಾಗ ಬದಲಾಯಿಸುತ್ತವೆ.
ಇದನ್ನೂ ಓದಿ: ಶಾಸಕರ ಅಸಮಾಧಾನ, ಸಿ.ಡಿ ಸದ್ದಿನಿಂದ ಸರ್ಕಾರಕ್ಕೆ ಡ್ಯಾಮೇಜ್; ನಾಳೆ ಮಹತ್ವದ ಬಿಜೆಪಿ ಕೋರ್ ಕಮಿಟಿ ಸಭೆ
ಮಲೆನಾಡು ಭಾಗದಲ್ಲಿ ಈ ವೇಳೆ ಭತ್ತದ ಕಟಾವು ನಡೆಯುವುದರಿಂದ ಸಹಜವಾಗಿಯೇ ಬೆಳಕ್ಕಿಗಳು ಇಲ್ಲಿ ನೆಲೆಸಿ ವಂಶಾಭಿವೃದ್ಧಿ ನಡೆಸಿ ಬೇರೆ ಸ್ಥಳಕ್ಕೆ ಪಯಣ ಮುಂದುವರಿಸುತ್ತವೆ. ಹೀಗೆ ಒಂದೆಡೆ ಸಾವಿರಾರು ಬೆಳ್ಳಕ್ಕಿಗಳು ಒಟ್ಟಿಗೆ ಸೇರಿ ಮಲೆನಾಡಿನ ಚುಮು-ಚುಮು ಚಳಿಯ ಮಂಜಿಗೆ ಮತ್ತಷ್ಟು ರಂಗು ನೀಡಿರೋದು ಸ್ಥಳೀಯರು ಸೇರಿದಂತೆ ಪಕ್ಷಿಪ್ರಿಯರ ಪಾಲಿನ ನೆಚ್ಚಿನ ತಾಣವಾಗಿ ಇದೀಗ ಕೃಷಿ ಪತ್ತಿನ ಸಹಕಾರ ಸಂಘ ಮಾರ್ಪಟ್ಟಿದೆ.
ಕಳೆದ ಕೆಲ ವರ್ಷಗಳಿಂದಲೂ ಇದೇ ಮರಗಳನ್ನ ಆಶ್ರಯಿಸಿಕೊಂಡಿರೋ ಈ ಬೆಳ್ಳಕ್ಕಿಗಳು ಎಲ್ಲೇ ಇದ್ದರೂ ಕೂಡ ಪ್ರತಿ ವರ್ಷವೂ ಇತ್ತ ಬರೋದನ್ನು ಮಿಸ್ ಮಾಡೋದಿಲ್ಲ. ಮರಗಳ ಕೊಂಬೆಗಳ ಮೇಲೆ ಕುಳಿತು ಅವುಗಳು ರಿಲ್ಯಾಕ್ಸ್ ಮಾಡೋ ಪರಿ ನಿಜಕ್ಕೂ ಕಣ್ಣಿಗೆ ಹಬ್ಬ. ಈ ನಯನ ಮನೋಹರ ದೃಶ್ಯವನ್ನು ನೋಡಲೆಂದೇ ಪಕ್ಷಿಪ್ರಿಯರು ಸಂಜೆಯಾಗುತ್ತಲೇ ಇತ್ತ ಮುಖ ಮಾಡಿ ಬೆಳ್ಳಕ್ಕಿಗಳ ವೈಯಾರವನ್ನು, ಚಿಲಿಪಿಲಿ ಕಲರವವನ್ನ ಕಣ್ತುಂಬಿಕೊಳ್ಳುತ್ತಾರೆ.
Published by:
Sushma Chakre
First published:
January 15, 2021, 2:21 PM IST