• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಚಿಕ್ಕಮಗಳೂರು - ಮುಂದುವರೆದ ಚುನಾವಣಾ ಬಹಿಷ್ಕಾರ; ರಾಜಕೀಯಕ್ಕಿಂತ ಬದುಕೇ ಮುಖ್ಯ ಎಂದು ಸಿಡಿದೆದ್ದ ಕಾಫಿನಾಡಿಗರು

ಚಿಕ್ಕಮಗಳೂರು - ಮುಂದುವರೆದ ಚುನಾವಣಾ ಬಹಿಷ್ಕಾರ; ರಾಜಕೀಯಕ್ಕಿಂತ ಬದುಕೇ ಮುಖ್ಯ ಎಂದು ಸಿಡಿದೆದ್ದ ಕಾಫಿನಾಡಿಗರು

ಚಿಕ್ಕಮಗಳೂರಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರ

ಚಿಕ್ಕಮಗಳೂರಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರ

Chikmagalur News: ಚಿಕ್ಕಮಗಳೂರಿನಲ್ಲಿ ಕಸ್ತೂರಿ ರಂಗನ್ ವರದಿ ಯೋಜನೆ ವಿರೋಧಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಚಿಕ್ಕಮಗಳೂರು ತಾಲೂಕಿನ ಜಾಗರ, ಖಾಂಡ್ಯ, ಆವತಿ ಹೋಬಳಿಯ 50ಕ್ಕೂ ಹೆಚ್ಚು ಗ್ರಾಮ ಪಂಚಾಯ್ತಿಗಳಲ್ಲಿ ಇಲ್ಲಿವರೆಗೂ ನಾಮಪತ್ರ ಸಲ್ಲಿಸೋಕೆ ಅಭ್ಯರ್ಥಿಗಳು ಮನಸು ಮಾಡುತ್ತಿಲ್ಲ.

ಮುಂದೆ ಓದಿ ...
  • Share this:

ಚಿಕ್ಕಮಗಳೂರು (ಡಿ. 10): ಇದು ಕೇವಲ ಚುನಾವಣೆ ಬಹಿಷ್ಕಾರವಲ್ಲ. ಕಾಫಿನಾಡಿನಲ್ಲಿ ನಡೀತಿರೋದು ಅಕ್ಷರಶಃ ಚಳವಳಿ. ಯಾಕಂದರೆ ಚುನಾವಣೆ ಸಮಯದಲ್ಲಿ ಸರ್ಕಾರವನ್ನು ಎಚ್ಚರಿಸಲು, ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಲು ಇರುವ ಅಸ್ತ್ರವೆಂದರೆ ಚುನಾವಣೆ ಬಹಿಷ್ಕಾರ. ಆದರೆ, ಬಹುತೇಕ ಸಂದರ್ಭದಲ್ಲಿ ಅಧಿಕಾರಿಗಳ, ಜನಪ್ರತಿನಿಧಿಗಳ ಬಣ್ಣದ ಮಾತಿನಿಂದ ಮನವೊಲಿಕೆಯಾಗಿ, ಸಂಧಾನ ಏರ್ಪಟ್ಟು ಚುನಾವಣೆ ಸುಸೂತ್ರವಾಗಿ ನಡೆಯತ್ತದೆ. ಯಾಕೆಂದರೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿರುತ್ತಾರೆ. ಜನ ಮತ್ತದೇ ಭರವಸೆಯನ್ನು ಸತ್ಯ ಅಂತ ನಂಬಿ ಮೋಸ ಹೋಗುತ್ತಾರೆ. ಆದರೆ, ಈ ಬಾರಿ ಹಾಗೆ ಆಗೋಕೆ ಚಾನ್ಸೇ ಇಲ್ಲ. ಏಕೆಂದರೆ ಕಾಫಿನಾಡಲ್ಲಿ ಅಭ್ಯರ್ಥಿಗಳೇ ನಾಮಪತ್ರ ಸಲ್ಲಿಸಲು ಮುಂದೆ ಬರುತ್ತಿಲ್ಲ.


ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಸ್ವತಃ ಜನರೇ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಕೇವಲ ಚುನಾವಣಾ ಬಹಿಷ್ಕಾರ ಮಾತ್ರವಲ್ಲ, ಯಾರೂ ನಾಮಪತ್ರವನ್ನೇ ಸಲ್ಲಿಸಬಾರದು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ರಾಜಕೀಯಕ್ಕಿಂತ ನಮಗೆ ಬದುಕೇ ಮುಖ್ಯ ಅಂತ ನಿರ್ಧಾರ ಮಾಡಿ ಪಕ್ಷಾತೀತವಾಗಿ ಜನರು ಚುನಾವಣೆಯ ವಿರುದ್ಧ ಗುಡುಗಿದ್ದಾರೆ. ಒಂದಲ್ಲ, ಎರಡಲ್ಲ, ನೂರಾರು ಹಳ್ಳಿಗಳಲ್ಲಿ ಚುನಾವಣೆ ಬಹಿಷ್ಕಾರದ ಕಹಳೆ ಮೊಳಗಿದೆ. ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಚುನಾವಣೆ ಬಹಿಷ್ಕಾರದ ಬ್ಯಾನರ್ ಹಾಕಿ, ಭವಿಷ್ಯಕ್ಕಾಗಿ ಜನರೇ ಸೆಟೆದು ನಿಂತಿದ್ದಾರೆ. ಅಲ್ಲಲ್ಲಿ ಪಂಜಿನ ಮೆರಮಣಿಗೆ ಕೂಡ ನಡೆಯುತ್ತಿದ್ದು, ಚುನಾವಣೆ ಬಹಿಷ್ಕಾರ ಜಿಲ್ಲಾಡಳಿತಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.


Chikmagalur: chikmagalur People Protesting against Kasturirangan Report and not Filing Nomination for Grama Panchayath Election.
ಚಿಕ್ಕಮಗಳೂರಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರ


ಅಷ್ಟಕ್ಕೂ ಕಾಫಿನಾಡಿನಲ್ಲಿ ಈ ಪರಿ ಚುನಾವಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಕಾರಣ, ಮಲೆನಾಡಿಗರ ಮೇಲೆ ತೂಗುಗತ್ತಿಯಂತೆ ತೂಗುತ್ತಿರುವ ಕಸ್ತೂರಿ ರಂಗನ್ ವರದಿ, ಹುಲಿ ಯೋಜನೆ, ಪರಿಸರ ಸೂಕ್ಷ್ಮವಲಯ ಯೋಜನೆಯ ಕರಿನೆರಳು. ಪರಿಸರ ಉಳಿಸುವ ನೆಪದಲ್ಲಿ ಬೆವರು ಸುರಿಸಿ ತಲೆ ತಲಾಂತರಗಳಿಂದ ಕಟ್ಟಿಕೊಂಡಿರುವ ಬದುಕಿಗೆ ಎಳ್ಳುನೀರು ಬಿಡಲು ಮುಂದಾಗುತ್ತಿರುವ ಸರ್ಕಾರದ ವ್ಯವಸ್ಥೆ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ.


ಇದನ್ನೂ ಓದಿ: ಉತ್ತರ ಕರ್ನಾಟಕದ ಸಹ್ಯಾದ್ರಿ, ಕಪ್ಪತಗುಡ್ಡದಲ್ಲಿ ಬೆಳೆದುನಿಂತ ಸಸ್ಯರಾಶಿ; ಈ ಬೇಸಿಗೆಯಲ್ಲಿ ಬೆಂಕಿ ಆತಂಕ!


ಸದ್ಯ ಕಾಫಿನಾಡಿನಲ್ಲಿ ಕಸ್ತೂರಿ ರಂಗನ್ ವರದಿ ಯೋಜನೆ ವಿರೋಧಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ವಾಟ್ಸಾಪ್ ಗ್ರೂಪ್ ನಲ್ಲೂ ಕೂಡ ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್ ಪುರ, ಚಿಕ್ಕಮಗಳೂರು ತಾಲೂಕಿನ ಜನರಂತೂ ಅರಣ್ಯ ಇಲಾಖೆಯ ವ್ಯವಸ್ಥೆ ವಿರುದ್ಧ ಕೊತ ಕೊತ ಕುದಿಯುತ್ತಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಜಾಗರ, ಖಾಂಡ್ಯ, ಆವತಿ ಹೋಬಳಿಯ 50ಕ್ಕೂ ಹೆಚ್ಚು ಗ್ರಾಮ ಪಂಚಾಯ್ತಿಗಳಲ್ಲಿ ಇಲ್ಲಿವರೆಗೂ ನಾಮಪತ್ರ ಸಲ್ಲಿಸೋಕೆ ಅಭ್ಯರ್ಥಿಗಳು ಮನಸು ಮಾಡುತ್ತಿಲ್ಲ. ಎನ್.ಆರ್ ಪುರ ತಾಲೂಕಿನ ಮಾಗುಂಡಿ, ಬಿ. ಕಣಬೂರು, ಬಾಳೆ, ಗಡಿಗೇಶ್ವರ ಹೋಬಳಿಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಚುನಾವಣೆ ಬಹಿಷ್ಕಾರ ಮಾಡಲಾಗಿದೆ. ಮೂಡಿಗೆರೆ ತಾಲೂಕಿನ ಊರುಬಗೆ ಗ್ರಾಮ ಪಂಚಾಯಿತಿ ಸೇರಿದಂತೆ ಹಲವು ಕಡೆ ಬಹಿಷ್ಕಾರದ ಕಾವು ಜೋರಾಗಿದೆ. ಜನರ ಈ ನಡೆ ಜನಪ್ರತಿನಿಧಿಗಳಿಗೆ ಉಗಿಯೋಕೂ ಆಗದೇ, ನುಂಗಕ್ಕೂ ಆಗದೇ ಇರುವಂತಹ ಬಿಸಿತುಪ್ಪವಾಗಿ ಪರಿಣಮಿಸಿದೆ. ಚುನಾವಣೆ ಬಹಿಷ್ಕಾರದ ತೀರ್ಮಾನ ಬಿಟ್ಟು ಚುನಾವಣೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡಿದ್ದಾರೆ.


ಬದುಕಿನ ಪ್ರಶ್ನೆ, ಭವಿಷ್ಯದ ಆತಂಕ ಜನರಲ್ಲಿ ಮನೆಮಾಡಿರುವಾಗ ಚುನಾವಣೆ ದೊಡ್ಡ ವಿಚಾರವೇ ಅಲ್ಲ ಅಂತ ಯಾರೂ ಕೂಡ ನಾಮಪತ್ರವನ್ನೇ ಸಲ್ಲಿಸೋ ಮನಸು ಮಾಡುತ್ತಿಲ್ಲ. ಅಪ್ಪಿತಪ್ಪಿ ಯಾರಾದರೂ ಗ್ರಾಮ ಪಂಚಾಯ್ತಿ ಕಡೆ ಸುಳಿಯೋ ಸೂಚನೆ ಕೊಟ್ಟರೂ, ಅಲ್ಲೇ ಮೊಕ್ಕಾಂ ಹೂಡಿರೋ ಸ್ಥಳೀಯ ಕಾರ್ಯಪಡೆ ಅದಕ್ಕೆ ಅವಕಾಶವನ್ನೇ ನೀಡುತ್ತಿಲ್ಲ. ಒಟ್ಟಿನಲ್ಲಿ, ಕಾಫಿನಾಡಿನಲ್ಲಿ ಸದ್ಯ ಚುನಾವಣೆ ಬಹಿಷ್ಕಾರ ಕೇವಲ ನೆಪಮಾತ್ರಕ್ಕೆ ಆಗುತ್ತಿಲ್ಲ. ಬದಲಾಗಿ ಜನಾಂದೋಲನವಾಗಿ ಮಾರ್ಪಡುತ್ತಿದೆ. ಎಲ್ಲೇ ನೋಡಿದರೂ ಚುನಾವಣೆ ಬಹಿಷ್ಕಾರದ ಸಭೆಗಳು ನಡೆಯುತ್ತಿವೆ. ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಚುನಾವಣೆ ಬಹಿಷ್ಕಾರದ ಬ್ಯಾನರ್​ಗಳು ಕಣ್ಣಿಗೆ ರಾರಾಜಿಸುತ್ತಿದ್ದು, ಚಳವಳಿಯಾಗಿ ಮಾರ್ಪಟ್ಟಿದೆ.

top videos
    First published: