ಗೋ ಸಾಕಣೆಯನ್ನೆ ವೃತ್ತಿಯನ್ನಾಗಿ ಮಾಡಿಕೊಂಡು ಬಂದಿರೋ ಚಿಕ್ಕಮಗಳೂರು ತಾಲೂಕಿನ ತೇಗೂರು ಗ್ರಾಮದ ಕಾಂತರಾಜು ಅಲಿಯಾಸ್ ಎಮ್ಮೆ ಕಾಂತಣ್ಣನವರಿಗೆ ಕಾಮಧೇನುಗಳೇ ಪ್ರತ್ಯಕ್ಷ ದೇವರು. ಆದರೆ, ದನಗಳ್ಳರಿಗೆ ಮಾತ್ರ ಇವರು ಸಾಕಿರೋ ಹಸುಗಳೇ ಟಾರ್ಗೆಟ್.
ಚಿಕ್ಕಮಗಳೂರು : ಕಾಫಿನಾಡಲ್ಲಿ ಆ ಗ್ಯಾಂಗೊಂದು ಮಧ್ಯರಾತ್ರಿಯಲ್ಲಿ ಅಪರೇಷನ್ ಗೆ ಇಳೀತಿದೆ. ಹಾಗೆ ಹೊತ್ತಲ್ಲದ ಹೊತ್ತಲ್ಲಿ, ಸಂಚಾರ ಮಾಡೋ ಕಿರಾಕತರು ಏನು ಮಾಡುತ್ತಾರೆ ಎಂಬುದನ್ನು ನೀವು ಕೇಳಿದರೆ ನಿಜಕ್ಕೂ ದಂಗಾಗಿ ಬಿಡ್ತೀರ. ಅಷ್ಟರ ಮಟ್ಟಿಗೆ ಕಳ್ಳತನ ಮಾಡೋದರಲ್ಲಿ ಆ ಗ್ಯಾಂಗ್ ಸೈ ಎನಿಸಿಕೊಂಡಿದೆ. ಯಾರ ಭಯವಿಲ್ಲದೇ ಕಳ್ಳರ ಗ್ಯಾಂಗ್ ಮಾಡುತ್ತಿರುವ ಕಾರ್ಯಾಚರಣೆ ಖಾಕಿಗೂ ಸವಾಲಾಗಿ ಪರಿಣಮಿಸಿದೆ. ಹಿಂದಿನಿಂದಲೂ ಗೋ ಸಾಕಣೆಯನ್ನೆ ವೃತ್ತಿಯನ್ನಾಗಿ ಮಾಡಿಕೊಂಡು ಬಂದಿರೋ ಚಿಕ್ಕಮಗಳೂರು ತಾಲೂಕಿನ ತೇಗೂರು ಗ್ರಾಮದ ಕಾಂತರಾಜು ಅಲಿಯಾಸ್ ಎಮ್ಮೆ ಕಾಂತಣ್ಣನವರಿಗೆ ಕಾಮಧೇನುಗಳೇ ಪ್ರತ್ಯಕ್ಷ ದೇವರು. ಎಮ್ಮೆಗಳನ್ನೇ ಹೆಚ್ಚಾಗಿ ಸಾಕುತ್ತಿದ್ದುದರಿಂದ ಕಾಂತರಾಜು, ಎಮ್ಮೆ ಕಾಂತಣ್ಣ ಅಂತಾನೇ ಫೇಮಸ್ಸು. ತಮ್ಮ ಜೀವಕ್ಕಿಂತಲೂ ಹೆಚ್ಚು ಪ್ರೀತಿಯಿಂದ ಗೋವುಗಳನ್ನು ನೋಡಿಕೊಳ್ಳೋ ಎಮ್ಮೆ ಕಾಂತಣ್ಣನವರಿಗೆ ಗೋವುಗಳೇ ಸರ್ವಸ್ವ. ಆದರೆ, ದನಗಳ್ಳರಿಗೆ ಮಾತ್ರ ಇತ್ತೀಚಿಗೆ ಇವರು ಸಾಕಿರೋ ಹಸುಗಳೇ ಟಾರ್ಗೆಟ್. ಕಳೆದ 10 ತಿಂಗಳುಗಳಲ್ಲಿ ಬರೋಬ್ಬರಿ 7 ಹಸುಗಳನ್ನ ಕದ್ದು ಕಣ್ಮರೆಯಾಗಿದ್ದಾರೆ ಕಟುಕರು.
ಕರುವಿನೊಂದಿಗೆ ಎಮ್ಮೆ ಕಾಂತಣ್ಣ
ಮೊನ್ನೆ ಕೂಡ ಕೊಟ್ಟಿಗೆಯಲ್ಲಿದ್ದ ಹಸುವನ್ನ ಕಟುಕರು ಸ್ಕಾರ್ಪಿಯೋ ವಾಹನದಲ್ಲಿ ಬಂದು ಹಸುವನ್ನ ಹಿಡಿದು ತುಂಬಿಕೊಂಡು ಹೋಗಿದ್ದಾರೆ. ಹೀಗೆ ಹಸುವನ್ನು ಸ್ಪಾರ್ಪಿಯೋಗೆ ತುಂಬಿಕೊಂಡು ಹೋಗುವಾಗ ಪ್ಲೀಸ್ ನನ್ನ ಅಮ್ಮನನ್ನು ಬಿಟ್ಟುಬಿಡಿ ಅಂತ ಕರು ತನ್ನದೇ ಭಾಷೆಯಲ್ಲಿ ಗೋಗರೆದು ಸ್ಕಾರ್ಪಿಯೋ ವಾಹನವನ್ನು ಚೇಸ್ ಮಾಡಿದರೂ ಕಟುಕರ ಮನಸ್ಸು ಮಾತ್ರ ಕರಗಿಲ್ಲ.
ಸದ್ಯ ತನ್ನ ಅಮ್ಮನನ್ನು ಕಳೆದುಕೊಂಡು ತಬ್ಬಲಿಯಾಗಿರುವ ಕರು ಕಾಂತಣ್ಣನ ಅಕ್ಕರೆಯಲ್ಲೇ ದಿನ ದೂಡುವಂತಾಗಿದೆ. ಖದೀಮರ ಕೈಗೆ ಸಿಲುಕಿ ಕಣ್ಮರೆಯಾಗಿರೋ ಹಸುವಿನ ಅಗಲಿಕೆ ಆಗದಂತೆ ಸಾಧ್ಯವಾದಷ್ಟು ಕರುವಿನ ಜೊತೆ ಸಮಯವನ್ನು ಕಳೆಯುತ್ತಿದ್ದಾರೆ ಎಮ್ಮೆ ಕಾಂತಣ್ಣ. ಹಲವಾರು ವರ್ಷಗಳಿಂದ ಗೋ ಸಾಕಾಣೆಯನ್ನು ನಂಬಿಕೊಂಡು ಅವುಗಳನ್ನು ಪೋಷಿಸುತ್ತಿರುವ ಎಮ್ಮೆ ಕಾಂತಣ್ಣನವರ ಬಳಿ ಸದ್ಯ 44 ಎಮ್ಮೆ, 9 ಹಸು, 10ಕ್ಕೂ ಹೆಚ್ಚು ದನ-ಕರುಗಳಿವೆ. ಕಳೆದ 10 ತಿಂಗಳುಗಳಲ್ಲಿ 7 ಹಸುಗಳನ್ನ ಐನಾತಿ ಕಳ್ಳರು ಕದ್ದರೂ ಎಮ್ಮೆ ಕಾಂತಣ್ಣ ಮಾತ್ರ ಕಿಂಚಿತ್ತೂ ಕಂಗಲಾಗಿಲ್ಲ. ಈಗ ಹಸುವನ್ನ ಕದ್ದಿರೋ ಕಳ್ಳರನ್ನ ಹಿಡಿದುಕೊಟ್ಟರೆ ನಾನೇ 50 ಸಾವಿರ ರೂ. ಕೊಡುತ್ತೇನೆ ಎಂದು ಅವರು ತಮ್ಮ ಗೋ ಪ್ರೇಮವನ್ನು ಮೆರೆದಿದ್ದಾರೆ. ಇನ್ನೊಂದೆಡೆ ಕಾಫಿನಾಡಿನಲ್ಲಿ ಈ ರೀತಿ ದನಗಳ್ಳತನವಾಗುತ್ತಿದ್ದರೂ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಅಂದಹಾಗೆ, ಇದು ಎಮ್ಮೆ ಕಾಂತಣ್ಣ ಎಂಬ ರೈತನ ಕಣ್ಣೀರ ಕಥೆಯಲ್ಲ, ಬದಲಾಗಿ ಕಾಫಿನಾಡಿನ ಅನೇಕ ಕಡೆ ಇದೇ ರೀತಿ ಕಟುಕರು ರಾತ್ರಿ ವಾಹನಗಳಲ್ಲಿ ಸಂಚರಿಸಿ ಹಸುಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದಾರೆ. ಪದೇಪದೆ ಈ ರೀತಿ ದನಗಳನ್ನು ಕದಿಯುತ್ತಿದ್ದರೂ ಪೊಲೀಸ್ ಇಲಾಖೆ ಸೈಲೆಂಟಾಗಿರೋದು ಮಾತ್ರ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಅದೇನೇ ಇರಲಿ, ಇದೀಗ ತನ್ನ ಅಮ್ಮನನ್ನು ಕಣ್ಣೆದುರೇ ಕಳೆದುಕೊಂಡಿರುವ ಕರುವಂತೂ ನಿಜಕ್ಕೂ ಮೂಕರೋದನವನ್ನು ವ್ಯಕ್ತಪಡಿಸುತ್ತಿದ್ದು ತಾಯಿ ಇಲ್ಲದೇ ತಬ್ಬಲಿಯಾಗಿದೆ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ