ಚಿಕ್ಕಮಗಳೂರು (ನ. 3): ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು ಹೆಂಡತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ನಗರದ ಕೆಂಪನಹಳ್ಳಿ ಬಡವಾಣೆಯಲ್ಲಿ ನಡೆದಿದೆ. ಇದಕ್ಕೂ ಮೊದಲು ನಾನು ವಿಷ ಕುಡಿಯುತ್ತೇನೆ, ನೀನು ಸಾಯಿ ಎಂದು ಗಂಡನೇ ಪ್ರಚೋದನೆ ನೀಡಿದ್ದ. ಇದನ್ನ ನಂಬಿದ ಹೆಂಡತಿ ನೇಣಿಗೆ ಶರಣಾಗಿದ್ದಾಳೆ. ಆಕೆಯ ಹೆಸರು ರಂಜಿತಾ. ವಯಸ್ಸು 23. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬೀರೂರು ಸಮೀಪದ ಹೊಗರೇಹಳ್ಳಿ ನಿವಾಸಿ. ಮೂರು ವರ್ಷದ ಹಿಂದೆ ಚಿಕ್ಕಮಗಳೂರಿನ ಕೆಇಬಿಯಲ್ಲಿ ಕ್ಯಾಶಿಯರ್ ಆಗಿದ್ದ ಅರುಣ್ ಎಂಬುವವನೊಂದಿಗೆ ವಿವಾಹವಾಗಿತ್ತು. ಮದುವೆಯಾದ ಮೂರು ವರ್ಷಕ್ಕೆ ಕೇವಲ ಒಂದು ದಿನ ಮಾತ್ರ ರಂಜಿತಾಳನ್ನು ತವರಿಗೆ ಕಳಿಸಿದ್ದನಂತೆ ಅರುಣ್.
ಆಮೇಲೆ ಅದೇನಾಯ್ತೋ ಏನೋ... ಹಳ್ಳಿಯಲ್ಲಿ ಕಟ್ಟಿಸುತ್ತಿದ್ದ ಮನೆಯಲ್ಲಿದ್ದ ಅರುಣ್, ನಿನ್ನೆ ಸಂಜೆ 4 ಗಂಟೆಗೆ ಪತ್ನಿಗೆ ಫೋನ್ ಮಾಡಿ ನೀನೂ ಸಾಯಿ, ನಾನು ಸಾಯುತ್ತೇನೆ ಎಂದಿದ್ದನಂತೆ. ಗಂಡನ ಮಾತು ನಂಬಿದ ಹೆಂಡತಿ ಹಾಲು ಕುಡಿಯೋ ಎರಡು ವರ್ಷದ ಮಗು ಬಿಟ್ಟು ನೇಣಿಗೆ ಕೊರಳೊಡ್ಡಿ, ಅಣ್ಣನಿಗೆ ಫೋನ್ ಮಾಡಿದ್ದಳು. ಅಣ್ಣ ಮನೆಗೆ ಬರುವಷ್ಟರಲ್ಲಿ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು. ಗಾಬರಿಯಿಂದ ಹಳ್ಳಿಗೆ ಹೋಗಿ ಭಾವನನ್ನು ನೋಡಿದರೆ ಆತ ಒಂದು ಕೇಸ್ ಬಿಯರ್ನಲ್ಲಿ 9 ಬಾಟಲಿ ಖಾಲಿ ಮಾಡಿ, ಸಿಗರೇಟ್ ಸೇದುತ್ತ ಕುಳಿತಿದ್ದ!. ಹೆಂಡತಿಯ ಅಣ್ಣನನ್ನು ನೋಡಿ ನಾನು ಕೂಡ ವಿಷ ಕುಡಿದಿದ್ದೇನೆ ಎಂದ ಆತನನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಆತ ಸಾವಿನಿಂದ ಪಾರಾಗಿದ್ದಾನೆ. ಆದರೆ, ಮೃತ ರಂಜಿತಾ ಕುಟುಂಬದವರು ಆತನ ಮಾನಸಿಕ ಕಿರುಕುಳಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ.
ಅರುಣ್ಗೆ ಮದುವೆ ಮುಂಚೆಯೇ ಅಂದರೆ ಸುಮಾರು 10 ವರ್ಷಗಳಿಂದಲೂ ಅಕ್ರಮ ಸಂಬಂಧವಿತ್ತು ಎಂದು ಮೃತ ರಂಜಿತಾಳ ಪೋಷಕರು ಆರೋಪಿಸಿದ್ದಾರೆ. ಅರುಣ್ ಹಾಗೂ ಆಕೆಯ ಕಿರುಕುಳದಿಂದಲೇ ಬೇಸತ್ತು ರಂಜಿತಾ ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ರಂಜಿತಾ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರುಣ್ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿರೋ ಮಹಿಳೆ, ರಂಜಿತಾಗೆ ನಾನು ಅರುಣ್ನನ್ನು ಮದುವೆಯಾಗಿ ಹತ್ತು ವರ್ಷವಾಯ್ತು. ನೀನು ಏಕೆ ಮದುವೆಯಾದೆ? ಎಂದು ಆಕೆಯೂ ಕಿರುಕುಳ ನೀಡುತ್ತಿದ್ದಳು. ಅಷ್ಟೆ ಅಲ್ಲದೆ, ಅರುಣ್ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ಮಹಿಳೆ ಜೊತೆ ಇದ್ದ ಫೋಟೋ ಹಾಗೂ ವಿಡಿಯೋಗಳಿದ್ದ ಪೆನ್ಡ್ರೈವ್ ಕೂಡ ರಂಜಿತಾಗೆ ಸಿಕ್ಕಿ ಎಲ್ಲವನ್ನೂ ನೋಡಿದ್ದಳು. ಈ ಎಲ್ಲಾ ವಿಷಯವನ್ನು ಆಕೆ ಅಪ್ಪನ ಗಮನಕ್ಕೂ ತಂದಿದ್ದಳು.
ಮದುವೆಯಾದ ಮೂರು ವರ್ಷವಾದ ಬಳಿಕ ಕಳೆದ ಭಾನುವಾರ 24 ಗಂಟೆ ಮಾತ್ರ ತವರಿಗೆ ಕಳಿಸಿದ್ದಂತೆ ಅರುಣ್. ಗಂಡ ಹಾಗೂ ಆ ಮಾಯಾಂಗನೆಯಿಂದ ನನ್ನ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ, ಏನೂ ಅರಿಯದ ಎರಡು ತಿಂಗಳ ಮಗು ಅನಾಥವಾಗಿದೆ ಎಂದು ರಂಜಿತಾ ಕುಟುಂಬಸ್ಥರು ಅರುಣ್ನನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರೋ ಬಸವನಹಳ್ಳಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ