HOME » NEWS » State » CHIKMAGALUR HIGHEST NUMBER OF TOURISTS VISIT CHIKKAMAGALURU SUNDAY AFTER LOCK DOWN LG

ಚಿಕ್ಕಮಗಳೂರಿನ ಸೊಬಗು ನೋಡಲು ಹರಿದು ಬಂದ ಜನ; ಒಂದೇ ದಿನ 8 ಸಾವಿರಕ್ಕೂ ಹೆಚ್ಚು ಪ್ರವಾಸಿಗರ ಭೇಟಿ

ಈಗ ಲಾಕ್‍ಡೌನ್ ಸಂಪೂರ್ಣ ತೆರವುಗೊಂಡು ಪ್ರವಾಸಿಗರ ನಿಷೇಧ ಹಿಂಪಡೆಯುತ್ತಿದ್ದಂತೆ ಜಿಲ್ಲೆಗೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ. ಮುಳ್ಳಯ್ಯನಗಿರಿ ಇತಿಹಾಸದಲ್ಲೇ ನಾಲ್ಕೈದು ತಿಂಗಳು ಪ್ರವಾಸಿಗರಿಗೆ ಸಂಪೂರ್ಣ ನಿಷೇಧ ಹೇರಿದ್ದು ಇದೇ ಮೊದಲು.

news18-kannada
Updated:September 7, 2020, 8:03 AM IST
ಚಿಕ್ಕಮಗಳೂರಿನ ಸೊಬಗು ನೋಡಲು ಹರಿದು ಬಂದ ಜನ; ಒಂದೇ ದಿನ 8 ಸಾವಿರಕ್ಕೂ ಹೆಚ್ಚು ಪ್ರವಾಸಿಗರ ಭೇಟಿ
ಮುಳ್ಳಯ್ಯನಗಿರಿ
  • Share this:
ಚಿಕ್ಕಮಗಳೂರು(ಸೆ.07): ಸರ್ಕಾರ ಲಾಕ್‍ಡೌನ್ ತೆರವು ಮಾಡಿದ್ದೇ ತಡ ಜನ ಎದ್ವೋ-ಬಿದ್ವೋ ಅಂತ ಕಾಲಿಗೆ ಚಕ್ರ ಕಟ್ಕೊಂಡು ಊರು ಬಿಟ್ಟಿದ್ರು. ಅದರ ಪರಿಣಾವೇ ಭಾನುವಾರ ಕಾಫಿನಾಡಲ್ಲಿ ಪ್ರವಾಸಿಗರ ಸಂತೆ-ಜಾತ್ರೆ ಎಲ್ಲಾ ಏರ್ಪಟ್ಟಿತ್ತು. ಇಂದೊಂದೆ ದಿನ ಕಾಫಿನಾಡಿಗೆ 8000 ಸಾವಿರಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ. 800ಕ್ಕೂ ಅಧಿಕ ಕಾರು, 420ಕ್ಕೂ ಹೆಚ್ಚು ಬೈಕ್ ಹಾಗೂ 100ಕ್ಕೂ ಹೆಚ್ಚು ಟಿಟಿಯಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ. ಬಂದವರೆಲ್ಲಾ ಬಂಧನದಿಂದ ಬಿಡುಗಡೆಗೊಂಡವರಂತೆ ಹಸಿರುಟ್ಟ ತುಂಬು ಮುತ್ತೈದೆ ಮಡಿಲಲ್ಲಿ ವಿರಮಿಸಿದ್ದಾರೆ. ಚಿಕ್ಕಮಗಳೂರಲ್ಲಿ ಆಗಾಗ್ಗೆ ಸುರಿಯುತ್ತಿರುವ ಮಳೆಯಿಂದ ಮುಳ್ಳಯ್ಯನಗಿರಿ ಇಂದ್ರನ ದೇವಲೋಕಕ್ಕೂ ಸೆಡ್ಡು ಹೊಡೆಯುವಂತಿದೆ. ತಣ್ಣನೆಯ ಗಾಳಿ, ಹಾವುಬಳುಕಿನ ಮೈಕಟ್ಟಿನ ರಸ್ತೆ. ಸ್ವಚ್ಛಂದ ಗಾಳಿಯಲ್ಲಿ ತೇಲ್ತಿರೋ ಪ್ರವಾಸಿಗರು ಮೈಮರೆತು ಕುಣಿದು ಕುಪ್ಪಳಿಸಿದ್ದಾರೆ. ಕೆಲವರು ಕೊರೋನಾಗೆ ಗುಡ್ ಬೈ ಎಂದು ಹೇಳಿ ಸಂಭ್ರಮಿಸಿ, ಕಾಫಿನಾಡ ಸೌಂದರ್ಯಕ್ಕೆ ಫಿದಾ ಆಗಿದ್ದಾರೆ.



ಡ್ರಗ್‌ ಮಾಫಿಯಾವನ್ನು ಬೇರು ಸಮೇತ ಕಿತ್ತು ಹಾಕುತ್ತೇವೆ; ಸಚಿವ ಶ್ರೀರಾಮುಲು ವಿಶ್ವಾಸ

ಸರಿಸುಮಾರು ಕಳೆದ ಐದಾರು ತಿಂಗಳಿಂದ ಕಾಫಿನಾಡಿನ ಮುಳ್ಳಯ್ಯನಗಿರಿಗೆ ಪ್ರವಾಸಿಗರನ್ನ ನಿಷೇಧಿಸಲಾಗಿತ್ತು. ಐದಾರು ತಿಂಗಳ ಅವಧಿಯಲ್ಲಿ ಆಗಾಗ್ಗೆ ಲಾಕ್‍ಡೌನ್ ಸಡಿಲಗೊಂಡಿದ್ದರಿಂದ ಪ್ರವಾಸಿಗರು ಬಂದು ಹೋಗ್ತಿದ್ರು. ಆದ್ರೆ, ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಕಳೆದ ಮೂರು ತಿಂಗಳಿಂದಂತೂ ಮುಳ್ಳಯ್ಯನಗಿರಿಗೆ ಪ್ರವಾಸಿಗರನ್ನ ಸಂಪೂರ್ಣ ನಿಷೇಧಿಸಲಾಗಿತ್ತು. ಸ್ಥಳಿಯರು ಕೂಡ ಪ್ರವಾಸಿಗರಿಗೆ ಸಂಪೂರ್ಣ ನಿಷೇಧ ಹೇರಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದರು. ಈಗ ಲಾಕ್‍ಡೌನ್ ಸಂಪೂರ್ಣ ತೆರವುಗೊಂಡು ಪ್ರವಾಸಿಗರ ನಿಷೇಧ ಹಿಂಪಡೆಯುತ್ತಿದ್ದಂತೆ ಜಿಲ್ಲೆಗೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ. ಮುಳ್ಳಯ್ಯನಗಿರಿ ಇತಿಹಾಸದಲ್ಲೇ ನಾಲ್ಕೈದು ತಿಂಗಳು ಪ್ರವಾಸಿಗರಿಗೆ ಸಂಪೂರ್ಣ ನಿಷೇಧ ಹೇರಿದ್ದು ಇದೇ ಮೊದಲು. ಆದ್ರೀಗ, ಸಾಗರೋಪಾದಿಯಲ್ಲಿ ಬರ್ತಿರೋ ಪ್ರವಾಸಿಗರ ಕಂಡು ಕಾಫಿನಾಡಿಗರು ಮತ್ತೆ ಆತಂಕ್ಕೀಡಾಗಿದ್ದಾರೆ. ಆದ್ರೆ, ಬರ್ತಿರೋ ಪ್ರವಾಸಿಗರು ನಾಲ್ಕೈದು ತಿಂಗಳು ಬಂಧಿಯಾಗಿದ್ದ ಅನುಭವದಿಂದ ಸ್ವಯಂಪ್ರೇರಿತವಾಗಿ ಕೊರೋನಾ ಮುಂಜಾಗೃತ ಕ್ರಮಗಳನ್ನ ಕೈಗೊಂಡಿರೋದು ಮಾತ್ರ ವಿಶೇಷ.



ಒಟ್ಟಾರೆ, ಆರು ತಿಂಗಳ ಬಳಿಕ ಕಾಫಿನಾಡಲ್ಲಿ ಪ್ರವಾಸಿಗರ ಚಿಲಿಪಿಲಿ ಕೇಳಿದೆ. ಪ್ರವಾಸಿ ಹಕ್ಕಿಗಳ ಚಿಲಿಪಿಲಿಗೆ ಸ್ಥಳಿಯರು ಕೂಡ ಫಿದಾ ಆಗಿದ್ದಾರೆ. ಯಾಕಂದ್ರೆ, ಕೊರೋನ ಆರಂಭವಾದಾಗಿನಿಂದಲೂ ಕೂಡ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡು ಬದುಕು ಕಟ್ಟಿಕೊಂಡಿದ್ದವರ ಬದುಕು ಬೀದಿಗೆ ಬಿದ್ದಿತ್ತು. ಆದ್ರೀಗ, ಸರ್ಕಾರ ಲಾಕ್‍ಡೌನ್ ತೆರವು ಮಾಡಿದೆ. ಪ್ರವಾಸಿ ತಾಣಗಳಿಗೆ ಇದ್ದ ನಿರ್ಭಂದವೂ ಸಡಿಲಗೊಂಡಿರೋದ್ರಿಂದ ಪ್ರವಾಸಿಗರು ಜಿಲ್ಲೆಯತ್ತ ಮುಖ ಮಾಡಿದ್ದು ವ್ಯವಹಾರದ ದೃಷ್ಠಿಯಿಂದ ಜಿಲ್ಲೆಯ ಜನ ಕೂಡ ಸಂತಸದಿಂದಿದ್ದಾರೆ. ಪ್ರವಾಸಿಗರು ಕೂಡ ಸಂತೋಷದಿಂದ ಜಿಲ್ಲೆಯ ಸೊಬಗನ್ನ ಎಂಜಾಯ್ ಮಾಡ್ತಿದ್ದಾರೆ. ಎಲ್ಲರ ಈ ಸಂತೋಷ ಹೀಗೇ ಇರಲೆಂಬುದು ನಮ್ಮ ಆಶಯ ಕೂಡ.
Published by: Latha CG
First published: September 7, 2020, 7:35 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories