Chikmagalur Crime: ಚಿಕ್ಕಮಗಳೂರಿನ ಪಾಳುಬಿದ್ದ ಕಟ್ಟಡದಲ್ಲಿ ನಿಗೂಢ ಸಾವು; ಕುಟುಂಬಸ್ಥರಿಂದ ಕೊಲೆ ಆರೋಪ

Chikmagalur Crime News: ಗಾರೆ ಕೆಲಸದ ಮೇಸ್ತ್ರಿಯಾಗಿದ್ದ 28ರ ಹರೆಯದ ಕುಮಾರ್​ಗೆ ಕೈ ತುಂಬಾ ಕೆಲಸ-ಹಣ ಎರಡೂ ಇತ್ತು. ಮೃತ ಕುಮಾರ್​ ಅವರಿಗೆ ಎರಡು ವರ್ಷ ಹಾಗೂ ಮೂರು ತಿಂಗಳ ಹೆಣ್ಣು ಮಕ್ಕಳಿದ್ದಾರೆ.

ಸಾವನ್ನಪ್ಪಿದ ಕುಮಾರ್

ಸಾವನ್ನಪ್ಪಿದ ಕುಮಾರ್

  • Share this:
ಚಿಕ್ಕಮಗಳೂರು : ಪಾಳುಬಿದ್ದ ಕಟ್ಟಡದಲ್ಲಿ ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ಸಾವನಪ್ಪಿರೋ ಘಟನೆ ಚಿಕ್ಕಮಗಳೂರು ತಾಲೂಕಿನ ಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ. 28 ವರ್ಷದ ಕುಮಾರ್ ಮೃತ ದುರ್ದೈವಿ. ಕುಮಾರ್  ಚಿಕ್ಕಮಗಳೂರು ತಾಲೂಕಿನ ಗೌಡನಹಳ್ಳಿ ನಿವಾಸಿಯಾಗಿದ್ದರು.

ಕುಮಾರ್ ಐದು ದಿನದ ಹಿಂದೆ ಕೆಲಸಕ್ಕೆ ಹೋದವರು ಮನೆಗೆ ಬಂದಿರಲಿಲ್ಲ. 2 ದಿನ ನೋಡಿದ ಮನೆಯವರು ಹುಡುಕದ ಜಾಗವಿಲ್ಲ, ಕೇಳದ ಜನರಿಲ್ಲ. ಹುಡುಕಾಡುತ್ತಿರುವಾಗಲೇ ಪಕ್ಕದ ಕದ್ರಿಮಿದ್ರಿಯ ಪಾಳುಬಿದ್ದ ಕಟ್ಟಡದಲ್ಲಿ 28ರ ಹರೆಯದ ಕುಮಾರ್ ಶವವಾಗಿದ್ದ. ಗಾರೆ ಕೆಲಸದ ಮೇಸ್ತ್ರಿಯಾಗಿದ್ದ ಕುಮಾರ್​ಗೆ ಕೈ ತುಂಬಾ ಕೆಲಸ-ಹಣ ಎರಡೂ ಇತ್ತು. ಒಂದು ದಿನವನ್ನೂ ಹಾಳು ಮಾಡ್ತಿರಲಿಲ್ಲ. ಬೆವರು ಹರಿಸಿಯೇ ಆರ್ಥಿಕವಾಗಿ ಚೆನ್ನಾಗಿದ್ದು, ಸೈಟು ಮಾಡಿ ಒಂದಷ್ಟು ಹಣವನ್ನೂ ಉಳಿಸಿದ್ದರು. ಕಷ್ಟಜೀವಿ ಕಷ್ಟ ಅಂದವರಿಗೆ ಕರಗುತ್ತಿದ್ದರು. ಆದರೀಗ, ಇದ್ದಕ್ಕಿದ್ದಂತೆ ಸಾವನ್ನಪ್ಪಿರೋದು ಕುಟುಂಬಸ್ಥರಿಗೆ ಅರಗಿಸಿಕೊಳ್ಳಲಾಗ್ತಿಲ್ಲ. ಮೃತಪಟ್ಟ ಸ್ಥಳದಲ್ಲಿ ರಕ್ತದ ಕಲೆ ಪತ್ತೆಯಾಗಿ, ಕಿವಿ-ಬಾಯಲ್ಲಿ ರಕ್ತ ಬಂದಿರೋದನ್ನ ಕಂಡು ಕುಟುಂಬಸ್ಥರು ಇದೊಂದು ವ್ಯವಸ್ಥಿತ ಕೊಲೆ ಅಂತ ಆರೋಪಿಸಿದ್ದಾರೆ.

ಇದನ್ನೂ ಓದಿ: Bangalore Murder: ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣ; ಮತ್ತೆ ಮೂವರು ಆರೋಪಿಗಳ ಬಂಧನ

ಮೃತ ಕುಮಾರ್​ ಅವರಿಗೆ ಎರಡು ವರ್ಷ ಹಾಗೂ ಮೂರು ತಿಂಗಳ ಹೆಣ್ಣು ಮಕ್ಕಳಿದ್ದಾರೆ. ಮೂರು ತಿಂಗಳ ಬಾಣಂತಿಯಾಗಿರೋ ಕುಮಾರ್ ಪತ್ನಿಗೆ ಗಂಡನ ಸಾವಿನಿಂದ ಬರಸಿಡಿಲು ಬಡಿದಂತಾಗಿದೆ. ಮೃತದೇಹವನ್ನ ಮನೆ ಬಳಿ ತಂದಾಗ ಪತ್ನಿ ಪ್ರಜ್ಞಾಹೀನರಾಗಿದ್ದರು. ಇನ್ನು ಆ ಎರಡು ಪುಟ್ಟ ಕಂದಮ್ಮಗಳಿಗೆ ಅಪ್ಪನ ದೇಹ ಚಿತೆ ಉರಿಯುತ್ತಿದ್ದರೂ ಏನಾಗ್ತಿದೆ ಅನ್ನೋ ಅರಿವೇ ಇರಲಿಲ್ಲ. ಮಕ್ಕಳ ಮುಖದಲ್ಲಿನ ಮುಗ್ಧತೆ ಕಂಡು ಊರಿನ ಜನ ಕಣ್ಣೀರಿಟ್ಟಿದ್ದಾರೆ. ಕುಮಾರ್ ತಾಯಿ ಸೇರಿದಂತೆ ಸಂಬಂಧಿಕರ ಆಕ್ರಂದನವಂತೂ ಮುಗಿಲು ಮುಟ್ಟಿತ್ತು. ಇಡೀ ಊರೇ ಈ ಸಾವನ್ನ ಅರಗಿಸಿಕೊಳ್ಳಲಾಗದೇ ಮಮ್ಮುಲು ಮರುಗಿತು.

ಇನ್ನು ಈ ಅನುಮಾನಾಸ್ಪದ ಸಾವಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್, ಸಾವಿನ ಕುರಿತು ಸಂಶಯವಿದ್ದು, ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಒಟ್ಟಾರೆ, ಹರಿಹರೆಯದ ಯುವಕನ ಸಾವಿಗೆ ಊರೇ ಕೊರಗಿದೆ. ಕಣ್ಣೀರಿಟ್ಟಿದೆ. ಯಾರ ಬಾಯಲ್ಲಿ ನೋಡಿದ್ರು ಕುಮಾರ್ ಬಗ್ಗೆ ಒಳ್ಳೆಯ ಮಾತುಗಳೇ ಇವೆ. ಆ ಅತಿಯಾದ ಒಳ್ಳೆತನವೇ ಆತನಿಗೆ ಮುಳ್ಳಾಯ್ತೋ ಏನೋ ಅನ್ನೋ ಪ್ರಶ್ನೆ ಕೂಡ ಜನರಲ್ಲಿ ಮೂಡಿದೆ. ಈ ಅನುಮಾನಸ್ಪಾದ ಸಾವಿಗೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮೇಲ್ನೋಟಕ್ಕೆ ಇದು ಕೊಲೆ ಅಂತ ಕಂಡ್ರು ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬರಬೇಕಿದೆ. ಅದೇನೆ ಇದ್ದರೂ ಆ ನೊಂದ ಕುಟುಂಬಕ್ಕೆ ನ್ಯಾಯ ಸಿಗಬೇಕಿದೆ. ಉಪ್ಪು ತಿಂದವರು ನೀರು ಕುಡಿಯಬೇಕಿದೆ.

(ವರದಿ: ವೀರೇಶ್​ ಹೆಚ್​.ಜಿ)
Published by:Sushma Chakre
First published: