ಚಿಕ್ಕಮಗಳೂರಿನ ಕಾಫಿ ಬೋರ್ಡ್ ಉಪಕೇಂದ್ರ ಮುಚ್ಚಲು ಚಿಂತನೆ; ಕೇಂದ್ರ ಸರ್ಕಾರದ ವಿರುದ್ಧ ಕಾಫಿ ಬೆಳೆಗಾರರ ಆಕ್ರೋಶ
Chikmagalur: ಸರ್ಕಾರ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕಾಫಿ ಬೋರ್ಡ್ ಅನ್ನು ಮುಚ್ಚಲು ಮುಂದಾಗಿದೆ. ಅಕಾಲಿಕ ಮಳೆಯಿಂದ ಕಳೆದ ಮೂರು ವರ್ಷಗಳಿಂದ ಕಾಫಿ ಬಹುತೇಕ ನಾಶವಾಗಿದೆ ಎಂದು ಕಾಫಿ ಬೆಳೆಗಾರರು ಅಸಮಾಧಾನ ಹೊರಹಾಕಿದ್ದಾರೆ.
ಚಿಕ್ಕಮಗಳೂರು (ಜ. 29): 1996ನೇ ಇಸವಿಯಲ್ಲೇ ನಾವು ಇಂದಿನ ಕಾಫಿ ಬೆಲೆಯನ್ನು ನೋಡಿದ್ದೇವೆ. ಆದರೆ ಇಂದೂ ಕೂಡ ಅದೇ ಬೆಲೆ ಇದೆ. ಉಳಿದೆಲ್ಲದರ ದರ ಹೆಚ್ಚಾಗಿದೆ. ಕೊರೋನಾ ಬಂದಿದ್ದಕ್ಕೆ ಆರೇ ಆರು ತಿಂಗಳು ನಿಮಗೆ ತಡೆಯಲು ಆಗಲಿಲ್ಲ. ನಾವು ಆರು ವರ್ಷ ತಡೆದುಕೊಂಡಿದ್ದೇವೆ. ನಮ್ಮಲ್ಲಿ ಈಗ ತಡೆಯುವ ಶಕ್ತಿ ಇಲ್ಲ ಎಂದು ಕಾಫಿ ಬೆಳೆಗಾರರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಚಿಕ್ಕಮಗಳೂರಿನ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಬೆಳೆಗಾರರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಾಫಿ ಬೆಳೆಗಾರರು ದೇಶಕ್ಕೆ ಕೊಡುಗೆ ಕೊಟ್ಟಿದ್ದೇವೆ. ಬೋಪೋರ್ಸ್ ಪಿರಂಗಿ ತರುವಾಗ ನಮ್ಮ ಕಾಫಿಯನ್ನು ರಷ್ಯಾಕ್ಕೆ ಮಾರಿ ಪಿರಂಗಿ ತಂದಿದ್ದರು. ಈಗ ನಮ್ಮ ಬದುಕು ಬೀದಿಗೆ ಬಂದಿದೆ ಎಂದು ಆಕ್ರೋಶ ಭರಿತರಾಗಿದ್ದಾರೆ. ಕಳೆದ ಏಳೆಂಟು ವರ್ಷಗಳಿಂದ ನಿರಂತರವಾಗಿ ಕಾಫಿ ಬೆಲೆ ಕುಸಿದಿದ್ದು ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ. ತಾವು ಬೆಳೆದ ಬೆಲೆಯನ್ನ ಅತ್ಯಂತ ಕಡಿಮೆ ದರಕ್ಕೆ ಮಾರಿದ್ದಾರೆ. ಸಿಲ್ವರ್ ಮರ, ಕಾಫಿ, ಮೆಣಸು ಯಾವುದಕ್ಕೂ ಬೆಲೆ ಇಲ್ಲ. ಮೋದಿಯವರು ಮೇಕ್ ಇನ್ ಇಂಡಿಯಾ ಘೋಷಣೆ ಮಾಡಿದ್ದಾರೆ. ಆದರೆ, ನೀವು ಮಾಡುತ್ತಿರೋ ಕೆಲಸ ದೇಶದ್ರೋಹದ ಕೆಲಸ ಎಂದು ಕೇಂದ್ರದ ವಿರುದ್ಧ ಕಿಡಿ ಕಾರಿದರು.
ಶ್ರೀಲಂಕಾ, ವಿಯೆಟ್ನಾಂ ಮೂಲಕ ಕಳ್ಳದಾರಿಯಲ್ಲಿ ಮೆಣಸನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ 700 ಇದ್ದ ಮೆಣಸಿನ ಬೆಲೆ ಇಂದು 300 ರೂಪಾಯಿಗಳಾಗಿವೆ. 30 ವರ್ಷಗಳಿಂದ ಬೆಳೆದ ಸಿಲ್ವರ್ ಮರಗಳಿಗೂ ಬೆಲೆ ಇಲ್ಲ. ಆಮದು ನೀತಿಯಿಂದ ಕಾಳು ಮೆಣಸಿಗೂ ಬೆಲೆ ಇಲ್ಲ. ಬೆಳೆಗಾರರು ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದು ತಮ್ಮ ಅಳಲನ್ನು ಹೊರಹಾಕಿದ್ದಾರೆ.
ದಿನದಿಂದ ದಿನಕ್ಕೆ ಸಾಲ ಬೆಳೆಯುತ್ತಿದೆ. ಬ್ಯಾಂಕಿನಿಂದ ಹಿಂಸೆಯಾಗುತ್ತಿದೆ. ಮೂರು ಲಕ್ಷ ಬೆಳೆಗಾರರು ಹದಿನೆಂಟು ಲಕ್ಷ ಕಾರ್ಮಿಕರನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾಕುತ್ತಿದ್ದಾರೆ. ಸರ್ಕಾರ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕಾಫಿ ಬೋರ್ಡ್ ಅನ್ನು ಮುಚ್ಚಲು ಮುಂದಾಗಿದೆ. ಇದರಿಂದ ಸಿಗುತ್ತಿದ್ದ ಸವಲತ್ತುಗಳು ಸಿಗದಂತಾಗಿದೆ. ಅಕಾಲಿಕ ಮಳೆಯಿಂದ ಕಳೆದ ಮೂರು ವರ್ಷಗಳಿಂದ ಕಾಫಿ ಬಹುತೇಕ ನಾಶವಾಗಿದೆ ಎಂದು ಕಾಫಿ ಬೆಳೆಗಾರರು ಅಸಮಾಧಾನ ಹೊರಹಾಕಿದ್ದಾರೆ.
ಈ ಜನವರಿಯಲ್ಲೂ ಸುರಿದ ಅಕಾಲಿಕ ಮಳೆಯಿಂದ ಹಣ್ಣನ್ನ ಕೊಯ್ಯುಯುವ ಮೊದಲೇ ಗಿಡ ಹೂವಾಗಿದೆ. ನಮ್ಮ ಬದುಕು ಅತಂತ್ರವಾಗಿದೆ. ಕೂಡಲೇ ಸರ್ಕಾರ ಬೆಳೆಗಾರರ ಸಾಲವನ್ನು ಮನ್ನಾ ಮಾಡಬೇಕೆಂದು ಕಾಫಿ ಬೆಳೆಗಾರರು ಆಗ್ರಹಿಸಿದ್ದಾರೆ.
(ವರದಿ: ವೀರೇಶ್ ಹೆಚ್ಜಿ)
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ