3 ಸರ್ಕಾರಿ ಶಾಲೆಗಳನ್ನು ದತ್ತು ಪಡೆದ ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ; 2.83 ಕೋಟಿ ರೂ. ವೆಚ್ಚದಲ್ಲಿ ಶಾಲಾ ಅಭಿವೃದ್ಧಿ

ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್, ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ವಾಳಕಿ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಹೊಸ ಯಡೂರ ಶಾಲೆಗಳನ್ನು ಶಾಸಕ ಗಣೇಶ ಹುಕ್ಕೇರಿ ದತ್ತು ಪಡೆದಿದ್ದಾರೆ.

ಶಾಸಕ ಗಣೇಶ್ ಹುಕ್ಕೇರಿ

ಶಾಸಕ ಗಣೇಶ್ ಹುಕ್ಕೇರಿ

  • Share this:
ಚಿಕ್ಕೋಡಿ (ಜ. 14): ಕೊರೊನಾ ಬಂದಾಗಿನಿಂದಲೂ ಸರ್ಕಾರಿ ಶಾಲೆಗೆ ಬರುವ ಮಕ್ಕಳ ಹಾಜರಾತಿ ಹೆಚ್ಚಾಗಿದೆ. ಶೇ. 20ಕ್ಕೂ ಹೆಚ್ಚಿನ ಮಕ್ಕಳು ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಯತ್ತ ಮುಖ ಮಾಡಿದ್ದಾರೆ. ಇನ್ನೂ ಹೆಚ್ಚಿನ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯಲು ಕಾಂಗ್ರೆಸ್​ನ ಚಿಕ್ಕೋಡಿ ಸದಲಗಾ ಕ್ಷೇತ್ರದ ಶಾಸಕ ಗಣೇಶ ಹುಕ್ಕೇರಿ ಮೂರು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ದಿ ಪಡಿಸಲು ಮುಂದಾಗಿದ್ದಾರೆ. ಖಾಸಗಿ ಶಾಲೆಗಳ ಹಾಗೇ ಸರ್ಕಾರಿ ಶಾಲೆಗಳು ಅಭಿವೃದ್ಧಿ ಕಾಣುವ ಕನಸು ಹೊತ್ತಿರುವ ಶಾಸಕ ಗಣೇಶ ಹುಕ್ಕೇರಿ ಚಿಕ್ಕೋಡಿ ತಾಲೂಕಿನ ಮೂರು ಶಾಲೆಗಳನ್ನು ದತ್ತು ಪಡೆದುಕೊಂಡು ಗಡಿ ಭಾಗದಲ್ಲಿ ಮಾದರಿ ಶಾಲೆಗಳನ್ನಾಗಿ ರೂಪಿಸಲು ಪಣ ತೊಟ್ಟಿದ್ದಾರೆ.

ಶಾಸಕ ಗಣೇಶ ಹುಕ್ಕೇರಿ ಪ್ರತಿನಿಧಿಸುವ ಚಿಕ್ಕೋಡಿ-ಸದಲಗಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್, ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ವಾಳಕಿ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಹೊಸ ಯಡೂರ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಡಿ ಶಾಲೆಗಳ ದುರಸ್ಥೆಗೆ ಮೂರು ಶಾಲೆಗಳ ಅಭಿವೃದ್ಧಿಗೆ 2.83 ಕೋಟಿ ರೂ ಯೋಜನೆಯ ಪ್ರಸ್ತಾವನೆ ರೂಪಿಸಿದ್ದಾರೆ.

ಶಾಸಕ ಗಣೇಶ ಹುಕ್ಕೇರಿ ಪ್ರತಿನಿಧಿಸುವ ಕ್ಷೇತ್ರದಲ್ಲಿ ರಸ್ತೆ, ಸಮುದಾಯ ಭವನ, ಚರಂಡಿ, ನೀರಾವರಿ ಯೋಜನೆ ಹೀಗೆ ಹತ್ತು ಹಲವು ಅಭಿವೃದ್ಧಿಯಾಗಿರುವುದು ಕಂಡು ಬರುತ್ತದೆ. ಸರ್ಕಾರಿ ಶಾಲೆಗಳ ದುರಸ್ಥೆಯಲ್ಲಿಯೂ ಶಾಸಕರು ಹಿಂದೆ ಬಿದ್ದಿಲ್ಲ, ಆದರೆ ನಿರೀಕ್ಷೆಗೆ ತಕ್ಕಷ್ಟು ಶಿಕ್ಷಣ ಕ್ಷೇತ್ರ ಅಭಿವೃದ್ಧಿ ಕಾಣಬೇಕಿದೆ. ಕೇರೂರ ಚಿಕ್ಕೋಡಿ ತಾಲೂಕಿನ ದೊಡ್ಡ ಗ್ರಾಮವಾಗಿದೆ. 1 ರಿಂದ 12ನೆಯ ತರಗತಿಯವರಿಗೆ ಕರ್ನಾಟಕ ಪಬ್ಲಿಕ್ ಶಾಲೆ ಆರಂಭವಾಗಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢ ಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಒಳಗೊಂಡು ಕರ್ನಾಟಕ ಪಬ್ಲಿಕ್ ಶಾಲೆ ರಚಿತವಾಗಿದೆ. ಎರಡು ಕ್ಯಾಂಪಸ್‍ದಲ್ಲಿ ನಡೆಯುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸಾಕಷ್ಟು ಅಭಿವೃದ್ಧಿಯಾಗಬೇಕಿದೆ. ಬಾಲಕ ಮತ್ತು ಬಾಲಕಿಯರಿಗೆ ಸಮರ್ಪಕ ಶೌಚಾಲಯ, ಕುಡಿಯುವ ನೀರು, ಶಾಲಾ ಕೊಠಡಿಗಳು ನಿರ್ಮಾಣವಾಗಬೇಕಿದೆ. ಮಕ್ಕಳ ಭದ್ರತೆ ದೃಷ್ಠಿಯಿಂದ ಶಾಲೆಯ ಸುತ್ತಮುತ್ತ ಕಾಂಪೌಂಡ್ ಗೋಡೆ ಅವಶ್ಯಕವಾಗಿ ನಿರ್ಮಾಣ ಮಾಡಲು ಪ್ಲಾನ್ ಮಾಡಲಾಗಿದೆ.

ಇದನ್ನೂ ಓದಿ: ಮಗನ ಒತ್ತಡದಿಂದ ಸಿಎಂ ಯಡಿಯೂರಪ್ಪ ಭ್ರಷ್ಟನಿಗೆ ಸಚಿವ ಸ್ಥಾನ ನೀಡಿದ್ದಾರೆ; ಹೆಚ್. ವಿಶ್ವನಾಥ್ ಆರೋಪ

ಕೃಷ್ಣಾ ನದಿಯ ಪ್ರವಾಹದ ಹೊಡೆತಕ್ಕೆ ನಲುಗಿ ಹೋದ ಹೊಸ ಯಡೂರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಕೊಠಡಿ ಶಿಥಿಲಾವಸ್ಥೆ ಕಂಡಿದ್ದು, ಮೂರು ಕೊಠಡಿಗಳು ನಿರ್ಮಾಣವಾಗಬೇಕಿದೆ.  ನದಿ ಬದಿಯಲ್ಲಿ ಇದ್ದರೂ ಮಕ್ಕಳು ಕುಡಿಯುವ ನೀರಿನಿಂದ ವಂಚಿತರಾಗಿದ್ದು, ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಲು ಸರ್ಕಾರದ ಮುಂದೆ ಬೇಡಿಕೆ ಇದೆ. ಮಳೆ ನೀರಿನಿಂದ ಶಿಥಿಲಾವಸ್ಥೆ ಕಂಡಿರುವ ವಾಳಕಿ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಮೂಲಸೌಕರ್ಯ ಒದಗಿಸಲು ಶಾಸಕರು ದತ್ತು ಪಡೆದುಕೊಂಡು ನಾಲ್ಕು ಕೊಠಡಿ ನಿರ್ಮಾಣಕ್ಕೆ ಮುಂದಾಗಿ ಯೋಜನೆ ರೂಪಿಸಿಕೊಂಡಿದ್ದಾರೆ.

ಕರ್ನಾಟಕ ಪಬ್ಲಿಕ್ ಸ್ಕೂಲ್, ಕೇರೂರ:
1ರಿಂದ 12ನೆಯ ತರಗತಿಯವರಿಗೆ ನಡೆಯುವ ಕೇರೂರ ಪಬ್ಲಿಕ್ ಶಾಲೆಯಲ್ಲಿ 1089 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಯ ಅಭಿವೃದ್ಧಿಗೆ ಶಾಸಕ ಗಣೇಶ ಹುಕ್ಕೇರಿ ಅವರು 1.1 ಕೋಟಿ ರೂ ಅನುದಾನದಲ್ಲಿ ದುರಸ್ಥೆ ಮಾಡಲು ಯೋಜನೆ ರೂಪಿಸಿದ್ದಾರೆ. ಶಾಲಾ ಕಟ್ಟಡ, ಕಲಿಕಾ ಉಪಕರಣಗಳು, ಶಾಶ್ವತ ಕುಡಿಯುವ ನೀರಿನ ಪೈಪಲೈನ್, ಬಾಲಕ-ಬಾಲಕಿಯರ ಶೌಚಾಲಯ ನಿರ್ಮಾಣ ಮತ್ತು ಶಾಲೆಯ ಸುತ್ತಮುತ್ತ ಕಾಂಪೌಂಡ್ ನಿರ್ಮಾಣ ಮಾಡಲು ಈ ಯೋಜನೆ ರೂಪಿಸಿದ್ದಾರೆ.

ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಹೊಸಯಡೂರ;
ಕೃಷ್ಣಾ ನದಿ ತಟದಲ್ಲಿರುವ ಈ ಗ್ರಾಮದಲ್ಲಿ 1ರಿಂದ 7ನೆಯ ತರಗತಿಯಲ್ಲಿ 120 ಮಕ್ಕಳು ಓದುತ್ತಿದ್ದಾರೆ. ಕಳೆದ 2019ರ ಭೀಕರ ಪ್ರವಾಹದಲ್ಲಿ ಈ ಶಾಲೆ ಸಂಪೂರ್ಣ ಮುಳುಗಡೆಗೊಂಡಿದೆ. ಶಾಲಾ ಕೊಠಡಿಗಳು ಶಿಥಿಲಾವಸ್ಥೆ ಕಂಡಿವೆ. ಹೀಗಾಗಿ ಈ ಶಾಲೆಯಲ್ಲಿ ಮೂರು ಕೊಠಡಿ, ಗ್ರಂಥಾಲಯ, ಕುಡಿಯುವ ನೀರು ಮತ್ತು ಶೌಚಾಲಯ ನಿರ್ಮಾಣ ಮಾಡಲು ಶಾಸಕರು 82.15 ಲಕ್ಷ ರೂ ಯೋಜನೆ ಸಿದ್ಧಪಡಿಸಿದ್ದಾರೆ.

ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ವಾಳಕಿ:
ಶಾಸಕ ಗಣೇಶ ಹುಕ್ಕೇರಿ ಪ್ರೀತಿಯ ಗ್ರಾಮ ವಾಳಕಿ. ಈ ಗ್ರಾಮದಲ್ಲಿ 1ರಿಂದ 8ನೆಯ ತರಗತಿಯವರಿಗೆ 485 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಗ್ರಾಮದಲ್ಲಿ ಮರಾಠಿ ಭಾಷಿಕರೂ ಇದ್ದರೂ ಸಹ ಕನ್ನಡ ಶಾಲೆಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಈ ಶಾಲೆಯ ಅಭಿವೃದ್ಧಿಗೆ ನಾಲ್ಕು ಕೊಠಡಿ ನಿರ್ಮಾಣವಾಗಲು 91.15 ಲಕ್ಷ ರೂ ಯೋಜನೆ ರೂಪಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ಖಾಸಗಿ ಶಾಲೆಗಳ ಹಾಗೇ ಸರ್ಕಾರಿ ಶಾಲೆಗಳು ಪ್ರಗತಿ ಕಾಣಬೇಕು. ಖಾಸಗಿ ಶಾಲೆಗಳಲ್ಲಿ ಸಿಗುವ ಮೂಲಭೂತ ಸೌಲಭ್ಯ ಸರ್ಕಾರಿ ಶಾಲೆಯಲ್ಲಿಯೂ ಸಿಗಲು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪಣ ತೊಟ್ಟು ಮಾದರಿ ಶಾಲೆ ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ಶಿಕ್ಷಣ, ಆರೋಗ್ಯ ಮತ್ತು ಕುಡಿಯುವ ನೀರಿಗೆ ಸರ್ಕಾರ ಆಧ್ಯತೆ ಕೊಡಬೇಕು ಅಂತಾರೆ ಶಾಸಕ ಗಣೇಶ ಹುಕ್ಕೇರಿ.
Published by:Sushma Chakre
First published: