ಒಂದೇ ವಾರದಲ್ಲಿ ಕಾಫಿನಾಡಿನಲ್ಲಿ 3 ಕಾಳಿಂಗ ಸರ್ಪ ಸೆರೆ; ಮಲೆನಾಡಲ್ಲಿ ಹೆಚ್ಚುತ್ತಿದೆ ಕಾಳಿಂಗಗಳ ಸಂಖ್ಯೆ

ಉರಗ ಸಂತತಿಯಲ್ಲೇ ಗೂಡು ಕಟ್ಟಿ, ಮರಿ ಮಾಡಿದ ಬಳಿಕ ಮರಿಗಳನ್ನ ಜಗತ್ತಿಗೆ ಪರಿಚಯಿಸೋದು ಕಾಳಿಂಗ ಸರ್ಪಗಳ ಗುಣ. ಹಾಗಾಗಿ, ಮಳೆಗಾಲದಲ್ಲಿ ಸಂತಾನಕ್ರಿಯೆಗೆ ಒಳಗಾಗಿರೋ ಕಾಳಿಂಗ ಸರ್ಪಗಳು ಈಗ ಬೆಚ್ಚನೆಯ ಜಾಗ ಹುಡುಕಿ, ಗೂಡು ಕಟ್ಟಿ, ಮರಿ ಮಾಡುವ ಕಾಲವಾದ್ದರಿಂದ ಅಲ್ಲಲ್ಲೇ ಕಾಳಿಂಗ ಸರ್ಪಗಳು ಸೆರೆಯಾಗಿದ್ದು ಮಲೆನಾಡಿಗರು ಭಯದಿಂದ ಬದುಕುವಂತಾಗಿದೆ.

ಸೆರೆ ಸಿಕ್ಕ ಕಾಳಿಂಗ ಸರ್ಪ

ಸೆರೆ ಸಿಕ್ಕ ಕಾಳಿಂಗ ಸರ್ಪ

  • Share this:
ಚಿಕ್ಕಮಗಳೂರು(ಡಿ.07): ಶೆಡ್ ನಲ್ಲಿ ಅವಿತು ಕೂತಿದ್ದ 15 ಅಡಿದ ಉದ್ದದ ಕಾಳಿಂಗ ಸರ್ಪ ಸೆರೆ ಹಿಡಿದಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಂಕೇನಹಳ್ಳಿಯಲ್ಲಿ ನಡೆದಿದೆ.  ಕಾಫಿತೋಟದಲ್ಲಿ ಕೆಲಸ ಮಾಡುವ ಲೈನ್ ಮನೆಯಲ್ಲಿ ಸುಮಾರು 15 ಅಡಿ ಉದ್ದದ ಕಾಳಿಂಗ ಸರ್ಪವೊಂದು ಅಡಗಿ ಕೂತಿತ್ತು. ಸಂಜೆ ಕೆಲಸ ಮುಗಿಸಿ ಬಂದ ಕಾರ್ಮಿಕ ಬಾಗಿಲು ತೆಗೆಯುತ್ತಿದ್ದಂತೆ ಕಾಳಿಂಗನನ್ನ ಕಂಡು ಬೆಚ್ಚಿ ಬಿದ್ದು ಚೀರಿಕೊಂಡು ಹೊರಬಂದಿದ್ದರು. ಕೂಡಲೇ ತೋಟದ ಮಾಲೀಕ ಸ್ನೇಕ್ ಆರೀಫ್​​ಗೆ ಕರೆ ಮಾಡಿ ವಿಷಯ ಹೇಳಿದ್ದರು. ಸ್ಥಳಕ್ಕೆ ಬಂದ ಆರೀಫ್ ಸುಮಾರು ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕಾಳಿಂಗನನ್ನ ಸೆರೆ ಹಿಡಿದಿದ್ದಾರೆ. ಸೆರೆಯಾದ ಕಾಳಿಂಗನನ್ನ ಹೊರತಂದಾಗ ಇದರ ಗಾತ್ರ ಹಾಗೂ ಉದ್ದ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದರು. ನಂತರ ಕಾಳಿಂಗ ಸರ್ಪ ಸೆರೆ ಹಿಡಿದ ಬಳಿಕ ಸ್ಥಳೀಯರು ಫೋಟೋ ತೆಗೆಸಿಕೊಂಡು ಖುಷಿಪಟ್ರು. ಬಳಿಕ ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ಕಾಳಿಂಗನನ್ನ ಸುರಕ್ಷಿತವಾಗಿ ಚಾರ್ಮಾಡಿ ಘಾಟ್ ಅರಣ್ಯಕ್ಕೆ ಬಿಡಲಾಗಿದೆ.

ಕೆರೆ ಹಾವಿನ ಆಸೆಗೆ ಬಂದು ಕಾಳಿಂಗ ಸೆರೆ :

ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಕೊಗ್ರೆ ಗ್ರಾಮದ ಚೇತನ್ ಎಂಬುವರ ಮನೆಗೆ ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ಕೆರೆ ಹಾವನ್ನ ಅಟ್ಟಿಸಿಕೊಂಡು ಬಂದ ಕಾಳಿಂಗ ಅಲ್ಲೇ ವಾಸ್ತವ್ಯ ಹೂಡಿತ್ತು. ಕಾಳಿಂಗ ಸರ್ಪಗಳಿಗೆ ಕೆರೆ ಹಾವು ಅಂದರೆ ಬಲು ಇಷ್ಟದ ಆಹಾರ. ಹಾಗಾಗಿ, ಕೆರೆ ಹಾವಿನ ಆಸೆಗೆ ಬಂದು ಚೇತನ್ ಅವರ ಮನೆಯ ಮೇಲ್ಛಾವಣಿಯಲ್ಲಿ ಅವಿತು ಕೂತಿದ್ದ ಕಾಳಿಂಗನನ್ನ ಶೃಂಗೇರಿಯ ಸ್ನೇಕ್ ಅರ್ಜುನ್ ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ. ಕಾಳಿಂಗನನ್ನ ಸೆರೆ ಹಿಡಿಯುವ ಮುನ್ನ ಸುಮಾರು ಒಂದು ಗಂಟೆಗಳ ಕಾಲ ಅರ್ಜುನ್ ಕಾಳಿಂಗನನ್ನ ಮನೆಯ ಮೇಲ್ಛಾವಣಿಯಿಂದ ಕೆಳಗಿಳಿಸಲು ಹರಸಾಹಸ ಪಟ್ಟಿದ್ದಾರೆ.

Farmers Protest: ದೆಹಲಿ ಗಡಿಯಲ್ಲಿ 12 ದಿನದಿಂದ ರೈತರ ಪ್ರತಿಭಟನೆ; ಇಂದಿನಿಂದ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ

ಮನೆಯ ಹಟ್ಟವನ್ನೇ ಮನೆ ಮಾಡಿಕೊಂಡಿದ್ದ ಕಾಳಿಂಗ :

ಇನ್ನು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಹಂದಿಹಡ್ಲು ಗ್ರಾಮದ ಸುಜಯ್ ಭಟ್ ಎಂಬುವರ ಮನೆಯ ಹಟ್ಟವನ್ನೆ ಮನೆ ಮಾಡಿಕೊಂಡಿದ್ದ ಸುಮಾರು 10 ಅಡಿ ಉದ್ದದ ಕಾಳಿಂಗನನ್ನ ಸೆರೆ ಹಿಡಿದು ಅರಣ್ಯಕ್ಕೆ ಬಿಡಲಾಗಿದೆ. ಮನೆಯ ಹಟ್ಟದ ಮೇಲೆ ಗೋಡೆಯೊಳಗೆ ಮನೆ ಮಾಡಿಕೊಂಡು ವಾಸವಿದ್ದ ಕಾಳಿಂಗನನ್ನ ಮನೆಯವರು ನೋಡಿ ಇವತ್ತು-ನಾಳೆಯಲ್ಲಿ ಹೋಗುತ್ತೆಂದು ಸುಮ್ಮನಾಗಿದ್ದರು. ಆದರೆ, ದಿನದಿಂದ ದಿನಕ್ಕೆ ಕಾಳಿಂಗನ ಅಬ್ಬರ ಜೋರಾಗಿದ್ದರಿಂದ ಮನೆಯವರು ಹೆದರಿ ಸ್ನೇಕ್ ರಿಜ್ವಾನ್ಗೆ ವಿಷಯ ಮುಟ್ಟಿಸಿದ್ದರು. ಸ್ಥಳಕ್ಕೆ ಬಂದು ಸ್ನೇಕ್ ರಿಜ್ವಾನ್ ಕಾಳಿಂಗನ್ನ ಸೆರೆ ಹಿಡಿದು ಸ್ಥಳಿಯ ಅರಣ್ಯಕ್ಕೆ ಬಿಟ್ಟಿದ್ದಾರೆ.

ಇನ್ನು ಜಿಲ್ಲೆಯ ಮಲೆನಾಡು ಭಾಗದಲ್ಲಿ ಒಂದು ವಾರದಲ್ಲಿ 3 ಬೃಹತ್ ಕಾಳಿಂಗ ಸರ್ಪಗಳನ್ನ ಸೆರೆ ಹಿಡಿದಿದ್ದು ಎಲ್ಲೆಂದರಲ್ಲಿ ಕಾಳಿಂಗ ಸರ್ಪಗಳು ಕಾಣಿಸಿಕೊಳ್ಳುತ್ತಿರುವುದರಿಂದ ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ. ಮಳೆಗಾಲ ಮುಗಿದ ಬಳಿಕ ತಣ್ಣನೆಯ ಗಾಳಿ ಬೀಸುವುದರಿಂದ ಅವು ಬೆಚ್ಚನೆಯ ಜಾಗಗಳನ್ನ ಹುಡುಕಿಕೊಂಡು ಮನೆಗಳಿಗೆ ಬರುತ್ತವೆ. ಹೀಗಾಗಿ ಬೃಹತ್ ಕಾಳಿಂಗಗಳನ್ನ ಕಂಡ ಜನ ಆತಂಕಕ್ಕೀಡಾಗಿದ್ದಾರೆ. ಇಷ್ಟೆ ಅಲ್ಲದೇ, ಆಹಾರ ಅರಸಿಯೂ ಕಾಳಿಂಗ ಸರ್ಪಗಳು ನಾಡಿಗೆ ಬರುತ್ತಿದ್ದು ಮಲೆನಾಡಲ್ಲಿ ದಿನಕ್ಕೊಂದು ಭಾಗದಲ್ಲಿ ಕಾಳಿಂಗ ಸರ್ಪಗಳು ಸೆರೆ ಸಿಗುತ್ತಿದ್ದು ಜನ ಆತಂಕದಲ್ಲಿ ಬದುಕುತ್ತಿದ್ದಾರೆ.

ಉರಗ ಸಂತತಿಯಲ್ಲೇ ಗೂಡು ಕಟ್ಟಿ, ಮರಿ ಮಾಡಿದ ಬಳಿಕ ಮರಿಗಳನ್ನ ಜಗತ್ತಿಗೆ ಪರಿಚಯಿಸೋದು ಕಾಳಿಂಗ ಸರ್ಪಗಳ ಗುಣ. ಹಾಗಾಗಿ, ಮಳೆಗಾಲದಲ್ಲಿ ಸಂತಾನಕ್ರಿಯೆಗೆ ಒಳಗಾಗಿರೋ ಕಾಳಿಂಗ ಸರ್ಪಗಳು ಈಗ ಬೆಚ್ಚನೆಯ ಜಾಗ ಹುಡುಕಿ, ಗೂಡು ಕಟ್ಟಿ, ಮರಿ ಮಾಡುವ ಕಾಲವಾದ್ದರಿಂದ ಅಲ್ಲಲ್ಲೇ ಕಾಳಿಂಗ ಸರ್ಪಗಳು ಸೆರೆಯಾಗಿದ್ದು ಮಲೆನಾಡಿಗರು ಭಯದಿಂದ ಬದುಕುವಂತಾಗಿದೆ.
Published by:Latha CG
First published: