ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಸಾಮಾನ್ಯಸಭೆಯಲ್ಲಿ ಕೋಲಾಹಲ; ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅಮಾನತು

ಅಧ್ಯಕ್ಷೆ ಸುಜಾತ ಕೃಷ್ಣಪ್ಪ ವಿರುದ್ಧ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯ ಬಾವಿಗಿಳಿದು ಧಿಕ್ಕಾರ ಕೂಗಿದರು

ಜಿಲ್ಲಾ ಪಂಚಾಯತ್ ಸಾಮಾನ್ಯಸಭೆ

ಜಿಲ್ಲಾ ಪಂಚಾಯತ್ ಸಾಮಾನ್ಯಸಭೆ

  • Share this:


ಚಿಕ್ಕಮಗಳೂರು(ನ.18): ಜಿಲ್ಲಾ ಪಂಚಾಯತಿ ಅಧ್ಯಕ್ಷೆ ರಾಜೀನಾಮೆ ನೀಡುವಂತೆ ಆಗ್ರಹಿಸಿ, ಸಾಮಾನ್ಯ ಸಭೆಯಿಂದ ಸ್ವಪಕ್ಷಿಯ ಬಿಜೆಪಿ ಸದಸ್ಯರೇ ಹೊರನಡೆದ ಘಟನೆ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿಯಲ್ಲಿ ನಡೆದಿದೆ. ಅಧ್ಯಕ್ಷೆ ಸುಜಾತ ಕೃಷ್ಣಪ್ಪ ವಿರುದ್ಧ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯ ಬಾವಿಗಿಳಿದು ಧಿಕ್ಕಾರ ಕೂಗಿದರು. ಪಕ್ಷದ ಆಂತರಿಕ ಒಪ್ಪಂದದಂತೆ ನೀವು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕೆಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಸಾಮಾನ್ಯ ಸಭೆ ಮುಂದುವರೆಸಲು ಅವಕಾಶ ಕೊಡಿ ಎಂದು ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಪರಿ ಪರಿಯಾಗಿ ಮನವಿ ಮಾಡಿಕೊಂಡರೂ ಬಿಜೆಪಿ ಸದಸ್ಯರು ಅವಕಾಶ ನೀಡಲಿಲ್ಲ. ಈ ವೇಳೆ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ನಡೆಯಿತು. ಜಿಲ್ಲಾ ಪಂಚಾಯಿತಿ ಸದಸ್ಯರ ನಡುವೆ ಮಾತಿನ ಚಕಮಕಿ ಜೋರಾಗಿ, ಸಭೆಯಲ್ಲಿ ಕೋಲಾಹಲವೇ ಸೃಷ್ಟಿಯಾಗಿತ್ತು. 

ಕೊನೆಗೆ ಬಿಜೆಪಿ ಸದಸ್ಯರು ಸಭೆ ಬಹಿಷ್ಕರಿಸಿ ಹೊರನಡೆದರು. ಈ ಮೂಲಕ ಸತತ ಮೂರನೇ ಬಾರಿಗೆ ಜಿಲ್ಲಾ ಪಂಚಾಯಿತಿ ಸಭೆಯನ್ನು ಬಿಜೆಪಿ ಸದಸ್ಯರು ಬಹಿಷ್ಕರಿಸಿದಂತಾಗಿದೆ. ಒಂದೆಡೆ ನಾನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲ್ಲ ಅಂತಾ ಸುಜಾತ ಕೃಷ್ಣಪ್ಪ ಪಟ್ಟು ಹಿಡಿದಿದರೆ, ಇನ್ನೊಂದೆಡೆ ರಾಜಿನಾಮೆ ನೀಡಲೇಬೇಕು ಅಂತಾ ತಿರುಗಿ ಬಿದ್ದಿರುವ ಸ್ವಪಕ್ಷಿಯ ಸದಸ್ಯರು ಆಗ್ರಹಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಖುದ್ದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸೂಚನೆ ನೀಡಿದ್ರೂ ಕೂಡ ಸುಜಾತ ಕೃಷ್ಣಪ್ಪ ಸೊಪ್ಪು ಹಾಕಿಲ್ಲ. ಇನ್ನು ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಕಮಲ ಶಾಸಕರಾದ ಬೆಳ್ಳಿ ಪ್ರಕಾಶ್, ಡಿ.ಎಸ್ ಸುರೇಶ್, ಕೈ ಶಾಸಕ ರಾಜೇಗೌಡ ಭಾಗವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅಮಾನತು

ಪಕ್ಷದ ತೀರ್ಮಾನ ಉಲ್ಲಂಘನೆ, ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಅಧ್ಯಕ್ಷರನ್ನು ಅಮಾನತು ಮಾಡಿ ಬಿಜೆಪಿ ಅಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಆದೇಶಿಸಿದ್ದಾರೆ. ಪಕ್ಷದ ಆಂತರಿಕ ಒಪ್ಪಂದದಂತೆ ಅಧ್ಯಕ್ಷ ಗಿರಿಗೆ ರಾಜೀನಾಮೆ ನೀಡದ ಸುಜಾತ ಕೃಷ್ಣಪ್ಪ ವಿರುದ್ದ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನು ಓದಿ: ಬರದ ತಾಲೂಕಿನ ಬತ್ತಿದ ಕೆರೆಗಳಿಗೆ ಸಿಗಲಿದೆ ಜೀವ ಸೆಲೆ;197 ಕೆರೆಗಳಿಗೆ ನೀರು ತುಂಬಿಸಲು ಮುಂದಾದ ಸರ್ಕಾರ

ಒಂದು ನಿಮಿಷದಲ್ಲಿ ಅನುಮೋದನೆ!

ಜಿಲ್ಲಾ ಪಂಚಾಯಿತಿ ರಾಜೀನಾಮೆ ವಿಚಾರದಲ್ಲಿ ಬೆಳಗ್ಗೆ 11.30 ರಿಂದ ಮಧ್ಯಾಹ್ನ  1 ರವರೆಗೂ ಚರ್ಚೆ ನಡೆಯಿತು. ಕೋರಂ ಕೊರತೆ ಕಾರಣಕ್ಕೆ ಸಭೆಯನ್ನು 15 ನಿಮಿಷಗಳ ಕಾಲ ಮುಂದೂಡಲಾಗಿತ್ತು. ಮತ್ತೆ ಸಭೆ ಸೇರಿದಾಗ ಸಭತ್ಯಾಗ ಮಾಡಿದ್ದ ಸದಸ್ಯರು ಕೂಡ ಆಗಮಿಸಿದರು. ಹಿರಿಯ ಸದಸ್ಯ ಎಸ್.ಎನ್.ರಾಮಸ್ವಾಮಿ ಮಾತನಾಡಿ, ಸಾಮಾನ್ಯಸಭೆಯಲ್ಲಿ ಪ್ರಸ್ತಾಪಿಸಿರುವ ಎಲ್ಲ ಕ್ರಿಯಾ ಯೋಜನೆಗಳಿಗೆ ಷರತ್ತುಬದ್ಧ ಒಪ್ಪಿಗೆ ಕೊಡುತ್ತಿದ್ದೇವೆ. ಅನುದಾನವನ್ನು ಸಮಾನ ಹಂಚಿಕೆ ಮಾಡಬೇಕು. 30-54, ಶಾಸನಬದ್ಧ ಅನುದಾನ, 15ನೇ ಹಣಕಾಸು, ಸ್ಥಾಯಿ ಸಮಿತಿಗಳ ಎಲ್ಲ ನಿರ್ಣಯಗಳಿಗೆ ಒಕ್ಕೊರಲ ಅನುಮೋದನೆ ಕೊಡುತ್ತಿದ್ದೇವೆ ಎಂದರು. ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಮೇಜು ಕುಟ್ಟಿ ಒಪ್ಪಿಗೆ ಸೂಚಿಸಿದರು. ಎರಡೇ ನಿಮಿಷದಲ್ಲಿ ಸಭೆ ಮುಗಿಸಿ ಸದಸ್ಯರು ಹೊರನಡೆದರು.
Published by:Seema R
First published: