ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಲ್ಲಿ (Chikkamagaluru) ಕಳೆದ ಹದಿನೈದು ದಿನಗಳಿಂದ ಸಂಪೂರ್ಣ ಬಿಡುವು ನೀಡಿದ್ದ ವರುಣದೇವನ ಅಬ್ಬರ ಮತ್ತೆ ಮುಂದುವರೆಯುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ಎಚ್ಚರಿಕೆಯಿಂದಿರಲು (Alert) ಸೂಚನೆ ನೀಡಿದೆ. ಭಾರತೀಯ ಹವಾಮಾನ ಇಲಾಖೆಯ ಅನ್ವಯ ಚಿಕ್ಕಮಗಳೂರು ಜಿಲ್ಲಾಡಳಿತ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದ್ದು (Heavy Rain) ಜನ ಎಚ್ಚರಿಕೆಯಿಂದಿರಲು ಸೂಚನೆ ನೀಡಿದೆ. ಚಿಕ್ಕಮಗಳೂರು ಅಪರ ಜಿಲ್ಲಾಧಿಕಾರಿ ರೂಪಾ ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು ಪ್ರಕೃತಿ ವಿಕೋಪವನ್ನ ಎದುರಿಸಿಲು ಸೂಕ್ತಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲಾದ್ಯಂತ ಆಗಸ್ಟ್ ಐದರಿಂದ ಏಳರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಎರಡು ದಿನ ಆರೆಂಜ್ ಅಲರ್ಟ್ ಘೋಷಣೆ
ದಿನಾಂಕ ಐದು ಮತ್ತು ಏಳರಂದು ಆರೆಂಜ್ ಅಲರ್ಟ್ ಘೋಷಿಸಿದ್ದು, ದಿನಾಂಕ ಆರನೇ ತಾರೀಖು ಶನಿವಾರದಿಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಆರೆಂಜ್ ಅಲರ್ಟ್ ಇರುವ ದಿನಗಳಲ್ಲಿ 115 ರಿಂದ 204 ಮಿ.ಮೀ. ನಷ್ಟು ಮಳೆ ಬೀಳಲಿದೆ ಎಂದು ಎಚ್ಚರಿಕೆ ನೀಡಿದ್ದು, ಶನಿವಾರದ ರೆಡ್ ಅಲರ್ಟ್ ದಿನದಂದು 204 ಮಿ.ಮೀ.ನಷ್ಟು ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹಾಗಾಗಿ, ಪರಿಸ್ಥಿತಿ ನಿಭಾಯಿಸಲು ಸನ್ನದ್ಧವಾಗಿರುವ ಜಿಲ್ಲಾಡಳಿತ ಸಾರ್ವಜನಿಕರು ನದಿ ಅಥವಾ ತಗ್ಗುಪ್ರದೇಶಗಳಿಗೆ ಇಳಿಯದಂತೆ ಎಚ್ಚರಿಕೆ ನೀಡಿದೆ.
ಎಚ್ಚರಿಕೆಯಿಂದ ಇರುವಂತೆ ಸೂಚನೆ
ಈ ಮೂರು ದಿನಗಳ ಕಾಲ ಮಕ್ಕಳು-ಸಾರ್ವಜನಿಕರು ಅಪಾಯಕಾರಿ ವಿದ್ಯುತ್ ಕಂಬ, ಕಟ್ಟಡ, ಮರದ ಹತ್ತಿರ ಅಥವಾ ಕೆಳಗೆ ನಿಲ್ಲದೆ ಸುರಕ್ಷಿತ ಸ್ಥಳಗಲ್ಲಿ ನಿಲ್ಲುವಂತೆ ಸೂಚಿಸಿದೆ. ಜೊತೆಗೆ, ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ನಿಯೋಜನೆಗೊಂಡ ನೊಡೆಲ್ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು ಪರಿಸ್ಥಿತಿ ನಿಭಾಯಿಸಲು ತಯಾರಿ ಮಾಡಿಕೊಳ್ಳುವಂತೆಯೂ ನಿರ್ದೇಶನ ನೀಡಿದೆ.
ಇದನ್ನೂ ಓದಿ: Karnataka Rains: ಮನೆಯಿಂದ ಹೊರ ಹೋಗುವ ಮುನ್ನಎಚ್ಚರ; ಎಲ್ಲೆಲ್ಲಿ ರೆಡ್ ಅಲರ್ಟ್ ಇದೆ ಗೊತ್ತಾ?
ಕಾಫಿ ಬೆಳೆಗಾರರಲ್ಲಿ ಆತಂಕ
ಜಿಲ್ಲೆಯ ಮಲೆನಾಡು ಭಾಗದ ರೈತರು ಹಾಗೂ ಕಾಫಿ ಬೆಳೆಗಾರರು ಮಾತ್ರ ಮಳೆ ಬೇಡವೇ ಬೇಡ ಅಂತಿದ್ದಾರೆ. ಏಕೆಂದರೆ, ಜುಲೈ 2ನೇ ವಾರದ ಮಳೆ ನಿರಂತರ ಮಳೆ ಶೇಕಡ 30-40ರಷ್ಟು ಕಾಫಿಯನ್ನ ನಾಶ ಮಾಡಿದ್ದು ಮಲೆನಾಡು ಮಳೆ ಅಂದ್ರೆ ಹೆದರುವಂತಾಗಿದೆ.
ಗುಡ್ಡ ಕುಸಿತದಿಂದ ಭೀತಿ
ಕಾಫಿನಾಡಲ್ಲಿ ಕಳೆದ ಹದಿನೈದು ದಿನದಿಂದ ಬಿಡುವು ನೀಡಿದ್ದ ವರುಣದೇವ ಇಂದು ಮತ್ತೆ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಮಳೆ-ಗಾಳಿಯ ಅಬ್ಬರ ಜೋರಾದ ಪರಿಣಾಮ ಗುಡ್ಡದ ಮಣ್ಣು ಜರುಗಿ ಮನೆಯ ಮುಂದೆ ಬಂದು ಕೂತಿದ್ದು ಮನೆಯವರು ಓಡಾಡಲು ಸಾಧ್ಯವಾಗದಂತಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ಭಾಗದಲ್ಲಿ ಸಂಜೆ ಭಾರೀ ಮಳೆ ಸುರಿದಿದೆ.
ಮನೆಯ ಮುಂದೆ ಕುಸಿದ ಮಣ್ಣು
ಭಾರೀ ಮಳೆಯ ಪರಿಣಾಮ ಕಳಸ ತಾಲೂಕಿನ ಕವನಹಳ್ಳ ಗ್ರಾಮದಲ್ಲಿ ಭಾರೀ ಭೂಕುಸಿತ ಉಂಟಾಗಿದೆ. ಕವನಹಳ್ಳಿ ಗ್ರಾಮದ ವನಿತಾ-ಉದಯ್ ಎಂಬುವರ ಮನೆ ಬಳಿ ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದೆ. ಮನೆ ಮುಂದೆ ಲೋಡ್‍ಗಟ್ಟಲೇ ಮಣ್ಣಿನ ರಾಶಿ ಬಂದು ಕೂತಿದೆ. ಮನೆಯ ಒಳಗೂ ಕೆಸರು ಮಿಶ್ರಿತ ನೀರು ಹರಿದು ಸಾಕಷ್ಟು ಹಾನಿಯಾಗಿದೆ. ಅಷ್ಟೆ ಅಲ್ಲದೆ, ಮಳೆ ಪ್ರಮಾಣ ಹೆಚ್ಚಾಗುತ್ತಿದ್ದ ನಿರಂತರವಾಗಿ ಮಣ್ಣು ಜಾರುತ್ತಿರುವುದರಿಂದ ಕುಟುಂಬ ಕಂಗಾಲಾಗಿ ಹೋಗಿದೆ.
ಗುಡ್ಡದ ಮಣ್ಣು ಜರುಗುತ್ತಿದ್ದಂತೆ ಗುಡ್ಡದ ಮೇಲಿದ್ದ ಕಾಫಿತೋಟದ ಕಾಫಿ, ಅಡಿಕೆ ಮರಗಳು ಮನೆ ಮೇಲೆ ಬಂದು ಬಿದ್ದಿವೆ. ಸ್ವಲ್ಪ-ಸ್ವಲ್ಪ ಜಾರುತ್ತಾ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದಿದೆ. ಗುಡ್ಡ ಕುಸಿಯುವುದನ್ನ ಕಣ್ಣಾರೆ ಕಂಡ ಮನೆಯವರು ಹೆದರಿ ಎಲ್ಲರೂ ಮನೆಯಿಂದ ಹೊರಬಂದಿದ್ದಾರೆ. ಸ್ಥಳಿಯರು ಬಂದು ಮನೆ ಮುಂದೆ ಬಿದ್ದಿದ್ದ ಮರಗಳನ್ನ ಕಡಿದು ಹಾಕಿದ್ದಾರೆ. ಆದರೆ, ಗುಡ್ಡ ಕುಸಿತ ನಿರಂತರವಾಗಿದ್ದು ಸ್ಥಳಿಯರು ಬೆಚ್ಚಿ ಬಿದ್ದಿದ್ದಾರೆ.
ಇದನ್ನೂ ಓದಿ: Anekal: ಜಲಾವೃತವಾದ ರೈಲ್ವೆ ಸುರಂಗ ಮಾರ್ಗ; ವಾಹನ ಸವಾರರ ಪರದಾಟ
ಕಳೆದ ಹತ್ತು ದಿನಗಳ ಕಾಲ ಬಿಡುವು ಕೊಟ್ಟಿದ್ದ ಮಳೆ, ಮತ್ತೆ ಆರ್ಭಟಿಸುತ್ತಿರುವುದರಿಂದ ಕಾಫಿ ನಾಡಿಗರು ಆತಂಕಕ್ಕೆ ಒಳಗಾಗಿದ್ದಾರೆ. ಜುಲೈ 2ನೇ ವಾರದ ದಾಖಲೆ ಮಳೆಗೆ ಅಡಿಕೆ-ಮೆಣಸು-ಕಾಫಿ ಕೊಚ್ಚಿ ಹೋಗಿತ್ತು. ಈಗ ಮತ್ತೆ ಮಳೆಯ ಅಬ್ಬರ ಕಂಡು ಮಲೆನಾಡಿಗರು ಮಳೆರಾಯನಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ