news18-kannada Updated:January 10, 2021, 7:18 AM IST
ತನ್ಮಯಿ
ಚಿಕ್ಕಮಗಳೂರು : ಆಕೆ 13ರ ಬಾಲಕಿ. ಆ ವಯಸ್ಸಲ್ಲಿ ಸಂಸ್ಕೃತವನ್ನ ಹೇಳುವುದಿರಲಿ, ಅರ್ಥೈಸಿಕೊಳ್ಳುವದೇ ಸಾಧನೆ. ಆದರೆ, ಮನೆಯಲ್ಲಿ ಅಪ್ಪನ ಜೊತೆ ಓದುತ್ತಿದ್ದ ಆ ಸಂಸ್ಕೃತದ ಶ್ಲೋಕಗಳೇ ಆಕೆಯನ್ನ ವಯಸ್ಸಿಗೆ ಮೀರಿದ ಸಾಧನೆಗೆ ಕೊಂಡೊಯ್ದಿದೆ. ಆ ಪುಟ್ಟ ಬಾಯಲ್ಲಿ ಸಂಸ್ಕೃದ ಶ್ಲೋಕಗಳನ್ನ ಅರಳು ಹುರಿದಂತೆ ಹೇಳುವ ಮೂಲಕ ಆಕೆಯ ಸಾಧನೆ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಗಿದೆ. ಆಕೆಯ ಸಾಧನೆ ಕಂಡು ಕಾಫಿನಾಡಿನ ಜನರು ಕೂಡ ಭೇಷ್ ಎಂದಿದ್ದಾರೆ. ಪಟ-ಪಟನೆ ಅರಳು ಹುರಿದಂತೆ ಹನುಮಾನ್ ಚಾಲೀಸನ್ನ ಹೇಳುವ ಈ ಬಾಲಕಿ ಹೆಸರು ತನ್ಮಯಿ. ಓದುತ್ತಿರುವುದು ಎಂಟನೇ ಕ್ಲಾಸು. ವಯಸ್ಸು 13. ಚಿಕ್ಕಮಗಳೂರಿನ ವಿಜಯಪುರ ನಿವಾಸಿ. ಎಳೆ ವಯಸ್ಸಿಗೆ ಒಂದು ನಿಮಿಷವನ್ನೂ ವ್ಯರ್ಥ ಮಾಡದೇ ಸದಾ ಏನಾದರೂ ಕೆಲಸದಲ್ಲಿ ತೊಡಗಿಸಿಕೊಳ್ಳುವ ಚೂಟಿ ಹುಡುಗಿ. ಶಾಲೆಯ ಓದಿನಲ್ಲೂ ಮುಂದು. ಸದ್ಯಕ್ಕೆ ಚಿಕ್ಕಮಗಳೂರಿನ ಕೇಂದ್ರೀಯ ವಿದ್ಯಾಲಯದಲ್ಲಿ 8ನೇ ತರಗತಿ ಓದುತ್ತಿರುವ ಈ ಬಾಲಕಿ ಜಿ.ತನ್ಮಯಿ ವಸಿಷ್ಠ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಗೆ ಭಾಜನಳಾಗಿದ್ದಾಳೆ.
1 ನಿಮಿಷ 10 ಸೆಕೆಂಡ್ಗಳಲ್ಲಿ ವೇಗವಾಗಿ ಹನುಮಾನ್ ಚಾಲೀಸಾ ಹೇಳುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ತನ್ನ ಹೆಸರನ್ನು ಬರೆದಿದ್ದಾಳೆ. ಕೊರೋನಾ ಸಮಯದಲ್ಲಿ ಮನೆಯಲ್ಲೇ ಓದುತ್ತಿದ್ದ ತನ್ಮಯಿ ಚಿತ್ರ ಬಿಡಿಸುವುದು, ಶ್ಲೋಕ ಹೇಳುವುದು, ಹಾಡು ಹೇಳುವುದು, ಕವನ ರಚಿಸುವುದನ್ನ ಹವ್ಯಾಸ ಮಾಡಿಕೊಂಡಿದ್ದಳು. ಈ ಹನುಮಾನ್ ಚಾಲೀಸನ್ನೂ ಯಾರಿಂದಲೂ ಕಲಿತಿಲ್ಲ. ಕೇವಲ ಬುಕ್ ನಲ್ಲಿ ಓದಿ ಕಲಿತಿದ್ದಾಳೆ. ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಹೇಳುವ ಮೂಲಕ ಎಳೆ ವಯಸ್ಸಿಗೆ ಈ ಸಾಧನೆ ಮಾಡಿದ್ದಾಳೆ. ಬುಕ್ ಆಫ್ ರೆಕಾರ್ಡ್ ಸಂಸ್ಥೆ ನನ್ನನ್ನ ಗುರುತಿಸಿ ಈ ಪ್ರಶಸ್ತಿ ನೀಡಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ ಅಂತಾಳೆ ಪುಟ್ಟ ಬಾಲಕಿ.
ಈಕೆಯ ಸಾಧನೆಯನ್ನ ಕಂಡು ಸ್ಥಳಿಯರು ಹಾಗೂ ಜಿಲ್ಲೆಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಗಳ ಸಾಧನೆ ಕಂಡು ಅಪ್ಪ ಕೂಡ ಮೂಕವಿಸ್ಮಿತರಂತಾಗಿದ್ದಾರೆ. ತಾಯಿ ಕೃಪಾ ಮಗಳು ರೀತಿಯ ಸಾಧನೆ ಮಾಡುತ್ತಾಳೆ ಎಂದು ಭಾವಿಸಿರಲಿಲ್ಲ ಎಂದು ಸಂತಸ ತೋರಿದ್ದಾರೆ. ಈ ಪುಟ್ಟ ಬಾಲಕಿಯ ಸಾಧನೆಗೆ ಜಿಲ್ಲೆಯ ಜನ ಕೂಡ ಹೆಮ್ಮೆ ಪಡುವಂತಾಗಿದೆ. ಕೊರೊನಾ ಲಾಕ್ಡೌನ್ ಸಮಯದಲ್ಲಿ ಯಾವುದೇ ಸಮಯ ವ್ಯರ್ಥ ಮಾಡದೆ ಮನೆಯಲ್ಲೇ ಹನುಮಾನ್ ಚಾಲೀಸ್ ಕಲಿತ್ತಿದ್ದಾಳೆ. ಇದರಲ್ಲಿಯೂ ರೆಕಾರ್ಡ್ ಮಾಡಬಹುದು ಎಂಬುದು ಅವಳು ಯೋಚನೆ ಮಾಡಿದ್ದಳು ಅಂತಾರೆ ಹೆತ್ತವರು. ಮಗಳ ಸಾಧನೆ ಬಗ್ಗೆ ತಂದೆ-ತಾಯಿಗೂ ಹೆಮ್ಮೆ ಇದೆ. ಈ ರೀತಿಯಾ ಸಾಧನೆ ಮಾಡಿರುವುದು ಕಂಡು ಖುಷಿಯಾಯ್ತು ಅಂತಾರೆ ಅಮ್ಮ ಕೃಪಾ.
ಒಟ್ಟಾರೆ, ತನ್ಮಯಿ ಜಿಲ್ಲಾ ಮಟ್ಟದ ಅನೇಕ ಸ್ಫರ್ಧೆಗಳಲ್ಲಿ ಭಾಗವಹಿಸಿ ಈಗಾಗಲೇ ಹಲವಾರು ಪ್ರಶಸ್ತಿಗಳನ್ನ ಪಡೆದಿದ್ದಾಳೆ. ನಚಿಕೇತ ಮತ್ತು ಸೀತಾ ಸಂಭ್ರಮ ಆನ್ಲೈನ್ ಸ್ಫರ್ಧೆಯಲ್ಲೂ ಭಾಗವಹಿಸಿ ಬಹುಮಾನ ಪಡೆದಿದ್ದಾಳೆ. ಈಗ ಈ ವಿದ್ಯಾರ್ಥಿನಿಯು ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆ ಮಾಡಿದ್ದಾಳೆ. ಈ ಪುಟ್ಟ ಬಾಲಕಿಯ ಬಾಯಲ್ಲಿ ನಿರರ್ಗಳವಾಗಿ ಹನುಮಾನ್ ಚಾಲೀಸನ್ನ ಕೇಳೋ ಜಿಲ್ಲೆಯ ಜನ ಕೂಡ ಭೇಷ್ ಅಂದಿದ್ದಾರೆ.
Published by:
Seema R
First published:
January 10, 2021, 7:18 AM IST