ಚಿಕ್ಕಮಗಳೂರು: ಅಭಿಮಾನಿಗಳೇ (Fans) ನನ್ನ ದೇವರುಗಳು (God). ಬೇರೆಯವರಿಗೆ ಟಿಕೆಟ್ ನೀಡಿರುವುದಕ್ಕೆ ನನ್ನ ಆಕ್ಷೇಪಣೆ ಇಲ್ಲ. ನನಗೆ ಯಾವುದೇ ಅಸೂಹೆಯೂ ಇಲ್ಲ, ಟಿಕೆಟ್ ಪಡೆದವರಿಗೆ ಒಳ್ಳೆದಾಗಲಿ ಎಂದು ಕಡೂರಿನ ಯಗಟಿಯಲ್ಲಿ ನ್ಯೂಸ್ 18 ಕನ್ನಡಕ್ಕೆ ಮಾಜಿ ಶಾಸಕ ವೈಎಸ್ ವಿ ದತ್ತಾ (YSV Datta) ಪ್ರತಿಕ್ರಿಯೆ ನೀಡಿದ್ದಾರೆ. ಜೆಡಿಎಸ್ (JDS) ತೊರೆದು ಕಾಂಗ್ರೆಸ್ (Congress) ಸೇರ್ಪಡೆಯಾಗಿದ್ದ ದತ್ತಾ ಅವರು ಕಡೂರು (Kadur) ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಕೆ.ಎಸ್.ಆನಂದ್ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ದತ್ತಾ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ವರಿಷ್ಠರ ನಿರ್ಧಾರದಿಂದ ಬೇಸರಗೊಂಡು ಅಸಮಾಧಾನ ಹೊರ ಹಾಕಿದ್ದಾರೆ. ಅಲ್ಲದೆ, ಪಕ್ಷೇತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ದತ್ತಾ ಅವರ ಮೇಲೆ ಒತ್ತಡ ಹಾಕಿದ್ದಾರೆ.
ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ತುಂಬಾ ನೋವಾಗಿದೆ
ಈ ನಡುವೆ ನ್ಯೂಸ್18 ಕನ್ನಡದೊಂದಿಗೆ ಮಾತನಾಡಿದ ದತ್ತಾ ಅವರು, ಪಕ್ಷದ ನಾಯಕರು sಟಿಕೆಟ್ ನೀಡುವುದಕ್ಕೂ ಮುಂಚೆ ಬೇರೆ ಕ್ಷೇತ್ರಗಳಲ್ಲಿ ನಡೆಸಿದ ಪ್ರಕ್ರಿಯೆ ನಮ್ಮಲ್ಲೂ ನಡೆಸಬಹುದಿತ್ತು. ಟಿಕೆಟ್ ಘೋಷಣೆಯಾದ ಬಳಿಕವೂ ನನ್ನನ್ನು ಯಾರು ಸಂಪರ್ಕ ಮಾಡಿಲ್ಲ. ನಾನು ಬಾಡಿಗೆ ಕಾರಿನಲ್ಲಿ ತಿರುಗುತ್ತೇನೆ, ಬೆಂಗಳೂರಿನಲ್ಲಿ ಆಟೋದಲ್ಲಿ ಪ್ರವಾಸ ಮಾಡುತ್ತೇನೆ. ನನ್ನನ್ನ ಹೇಗೆ ಬೇಕಾದರೂ ಸಂಪರ್ಕ ಮಾಡಬಹುದಿತ್ತು.
ನನ್ನನ್ನು ವರಿಷ್ಠರು ಸಂಪರ್ಕ ಮಾಡಬಹುದಿತ್ತು, ಆದರೆ ಮಾಡಲಿಲ್ಲ. ದತ್ತಾ ಶಕ್ತಿ ಭಾರೀ ಗೌಣ, ಏನು ತೊಂದರೆ ಆಗುವುದಿಲ್ಲ ಎಂದು ಭಾವಿಸಿರಬಹುದು. ಆದರೆ ನನ್ನ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ತುಂಬಾ ನೋವಾಗಿದೆ. ನಿಮ್ಮನ್ನು ಕರೆಸಿ ಮಾತನಾಡದ ಕಾರಣ ಇದು ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕರ್ತರು ಮಾತಿನ ಹಿನ್ನೆಲೆಯಲ್ಲಿ ಸ್ವಾಭಿಮಾನದ ಪದ ಬಳಕೆ ಮಾಡಿದ್ದೇನೆ. ನಾನು ಯಾವುದೇ ಷರತ್ತು ಹಾಕಿ ಪಕ್ಷಕ್ಕೆ ಸೇರಿದವನಲ್ಲ. ಸಮೀಕ್ಷೆಯಲ್ಲಿ ಹಾಗೂ ಜನ ಅಭಿಪ್ರಾಯದಲ್ಲಿ ನನ್ನ ಹೆಸರು ಬರಬಹುದು ಎಂದು ಭಾವಿಸಿದ್ದೆ. ಸಮೀಕ್ಷೆ ಆಧಾರದ ಮೇಲೆ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡುತ್ತಾರೆ ಎಂದು ತಿಳಿದಿದ್ದೆ. ಸಮೀಕ್ಷೆ ಬಗ್ಗೆ ಪೂರ್ಣವಾಗಿ ನಂಬಿಕೆ ಇಟ್ಟಿದ್ದೆ. ನಾನು ಸಾಮಾನ್ಯರಲ್ಲಿ ಸಾಮಾನ್ಯ. ನನಗೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ, ಹಣ ಬಲವಿಲ್ಲ. ನಾನು ನನ್ನ ಜನರನ್ನು ನಂಬಿ ಕೊಂಡಿದ್ದೇನೆ.
ನನ್ನ ಅಭಿಮಾನಿಗಳು ಹಾಗೂ ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ನನ್ನ ಕುಟುಂಬದಲ್ಲಿ ಸೂತಕ ಆವರಿಸಿದ ರೀತಿ ವಾತಾವರಣ ನಿರ್ಮಾಣವಾಗಿದೆ. ಅವರ ಪ್ರೀತಿ ನನ್ನನ್ನು ಮಡ ಗಟ್ಟುವಂತೆ ಮಾಡಿದೆ. ನನ್ನನ್ನು ನಂಬಿದವರಿಗೆ ಅನ್ಯಾಯ ಮಾಡಲು ನಾನು ತಯಾರಿಲ್ಲ. ನನ್ನ ನಿರ್ಧಾರ ಭಾನುವಾರ ಕಾರ್ಯಕರ್ತರ ಸಮ್ಮುಖದಲ್ಲಿ ಮಾಡುತ್ತೇನೆ ಎಂದರು.
ದತ್ತಾ ನಿವಾಸಕ್ಕೆ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್ ಆನಂದ್
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸುಳಿವು ನೀಡಿದ್ದ ವೈಎಸ್‌ವಿ ದತ್ತಾ ಅವರ ನಿವಾಸಕ್ಕೆ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್.ಆನಂದ್ ಭೇಟಿ ನೀಡಿದ್ದಾರೆ. ಕಡೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್.ಆನಂದ್, ದತ್ತಾ ಜೊತೆ ಬಂಡಾಯ ಶಮನಕ್ಕೆ ಸಭೆ ನಡೆಸಿದ್ದಾರೆ. ದತ್ತ ಜೊತೆಗೆ ಆನಂದ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ದತ್ತಾ ಆಕ್ರೋಶ ಹಿನ್ನೆಲೆ ಬಂಡಾಯ ಶಮನಕ್ಕೆ ಯತ್ನಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ