ಚಿಕ್ಕಮಗಳೂರು: 90ಕ್ಕೂ ಹೆಚ್ಚು ಮಕ್ಕಳು ಓದುತ್ತಿರುವ ಚಿಕ್ಕಮಗಳೂರು ಜಿಲ್ಲೆಯ ಕಳಸ (Kalasa, Chikkamagaluru) ತಾಲೂಕಿನ ಹಿರೇಬೈಲು (Hirebailu Govt School) ಎಂಬ ಕುಗ್ರಾಮದ ಸರ್ಕಾರಿ ಶಾಲೆಯ ಸಮಸ್ಯೆ ಒಂದೆರಡಲ್ಲ. ಸರ್ಕಾರಿ ಶಾಲೆಯಲ್ಲಿ ಮಳೆ ನೀರು ಬೀಳದಂತೆ ಗೋಡೆಗೆ ಟಾರ್ಪಲ್ ಕಟ್ಟಿದ್ದಾರೆ. ಶಾಲೆ ಕಿಟಕಿಯಲ್ಲಿ ಹಾವುಗಳು ಓಡಾಡಬಹುದಂತಹಾ ಕಿಂಡಿಗಳು ಇವೆ. ಶಾಲೆಯ ಗೋಡೆಗೂ-ಕಾಂಪೌಂಡ್ಗೂ ಸಂಬಂಧವೇ ಇಲ್ಲದಂತಹಾ ಸ್ಥಿತಿ. ಈ ಶಾಲೆಯಲ್ಲಿ ಸುಮಾರು 90ಕ್ಕೂ ಹೆಚ್ಚು ಮಕ್ಕಳು (Students) ಓದುತ್ತಿದ್ದಾರೆ. ಎಲ್ಲರೂ ಕೂಡ ಕೂಲಿ ಕಾರ್ಮಿಕರ ಮಕ್ಕಳು. ಈ ಶಾಲೆಗೆ 90 ವರ್ಷದ ಇತಿಹಾಸವಿದೆ. ಆದರೆ, ಶಾಲೆ ಈಗ್ಲೋ-ಆಗ್ಲೋ ಎನ್ನುವಂತಿದೆ. ಪ್ರತಿ ಮಳೆಗಾಲವನ್ನೂ ಎದುರಿಸಿ ಉಳಿದಿರೋ ಶಾಲೆಯ ಸದ್ಯದ ಸ್ಥಿತಿ ಈ ಮಳೆಗಾಲಕ್ಕೆ ಗ್ಯಾರಂಟಿ ಇಲ್ಲ ಎಂಬಂತಾಗಿದೆ.
ಈ ಶಾಲೆ ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಕಟ್ಟಿದ ಟಾರ್ಪಲ್ನಿಂದ ಉಸಿರಾಡ್ತಿದೆ. ಆದರೆ, ಸರ್ಕಾರ ಪೋಷಕರು ಕಟ್ಟಿದ ಟಾರ್ಪಲ್ ನೋಡಿ ಕೈತೊಳೆದುಕೊಂಡಿದೆ. ಏನಾದರೂ ಹೆಚ್ಚುಕಮ್ಮಿಯಾದರೆ ಯಾರು ಜವಾಬ್ದಾರಿ ಎಂದು ಸರ್ಕಾರದ ವಿರುದ್ಧ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
90 ಮಕ್ಕಳು ಓದುತ್ತಿರುವ ಶಾಲೆ
ಇದು ಸರ್ಕಾರಿ ಶಾಲೆ ಅನ್ನೋದ್ಕಿಂತ ಬಡವರ ಶಾಲೆ. ಇಲ್ಲಿ ಓದುತ್ತಿರೋ 90 ಜನ ಮಕ್ಕಳು ಕೂಡ ಬಡಮಕ್ಕಳು. ಅಪ್ಪ-ಅಮ್ಮ ಇಡೀ ದಿನ ಕೂಲಿಗೆ ಹೋದ್ರೆ ಮಕ್ಕಳು ಇಡೀ ದಿನ ಶಾಲೆಯಲ್ಲೇ ಇರಬೇಕು. ಇದು ಕಾರ್ಮಿಕ ಮಕ್ಕಳ ಶಾಲೆ ಅಂದ್ರು ತಪ್ಪಿಲ್ಲ.
ಈ ಶಾಲೆ ಸ್ಥಿತಿ ನೋಡಿದ್ರೆ ನಮ್ಮ ಶತ್ರುಗಳ ಮಕ್ಕಳಿಗೆ ಬೇಡ ಅನ್ನಿಸುತ್ತೆ. 90 ವರ್ಷದ ಇತಿಹಾಸವಿರೋ ಈ ಶಾಲೆಯ ಸದ್ಯದ ಪರಿಸ್ಥಿತಿ ನೋಡಿದರೆ ಈ ಮಳೆಗಾಲಕ್ಕೆ ಉಳಿಯೋದು ಡೌಟು.
ಅಪಾಯ ಸ್ಥಿತಿಯಲ್ಲಿ ಶಾಲಾ ಕಟ್ಟಡ
ಮಕ್ಕಳು ಇದೇ ಶಾಲೆಯಲ್ಲಿ ಓದಬೇಕು. ಮಳೆಗಾಲದಲ್ಲಿ ಗಾಳಿ-ಮಳೆಗೆ ಹೆಚ್ಚು-ಕಮ್ಮಿಯಾದರೆ ಯಾರು ಜವಾಬ್ದಾರಿ. ಮಕ್ಕಳಿಗೆ ಏನಾದ್ರು ತೊಂದರೆಯಾದರೆ ಗತಿ ಏನೆಂದು ಸ್ಥಳೀಯರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಶಾಲೆಗೆ ಹಲವು ವರ್ಷಗಳಿಂದ ಅನುದಾನ ಸಿಕ್ಕಿಲ್ಲ. ಸರ್ಕಾರದ ಬೇಜವಾಬ್ದಾರಿ ಹಾಗೂ ವರುಣನ ರುದ್ರನರ್ತನದ ಮಧ್ಯೆ 90 ವರ್ಷದ ಇತಿಹಾಸದ ಸರ್ಕಾರಿ ಶಾಲೆ ತನ್ನ ಕೊನೆ ದಿನಗಳಲ್ಲಿ ಎಣಿಸುತ್ತಿದೆ.
ಪ್ಲಾಸ್ಟಿಕ್ ಶೀಟ್ಗಳೇ ಶಾಲೆಯ ಗೋಡೆಗಳು
ಶಾಲೆಯ ಕಚೇರಿ ಹಾಗೂ ಮತಗಟ್ಟೆ ಕೇಂದ್ರ ಬಿಟ್ಟರೆ ಉಳಿದೆಲ್ಲಾ ಕೊಠಡಿಗಳ ಗೋಡೆಗಳು ಬಿರುಕು ಬಿಟ್ಟು ಬೀಳುವ ಸ್ಥಿತಿಯಲ್ಲಿದೆ. ಕಟ್ಟಡ, ಕೊಠಡಿ, ಶೌಚಾಲಯ ಎಲ್ಲವೂ ಅಯೋಮಯ. ಮಕ್ಕಳ ಸ್ಥಿತಿ ದಯನೀಯ.
ಕಳೆದ ಮಳೆಗಾಲದಲ್ಲಿ ಶಾಲೆಯ ಗೋಡೆಗಳಿಗೆ ಪೋಷಕರು ಕಟ್ಟಿದ ಪ್ಲಾಸ್ಟಿಕ್ ಶೀಟ್ ಶಾಲೆಯ ಗೋಡೆಗಳಿಗೆ ಬೆನ್ನೆಲುಬಾಗಿ ನಿಂತಿದೆ. ಈ ವರ್ಷ ಗೋಡೆಗಳು ಮತ್ತಷ್ಟು ಅಪಾಯಕಾರಿಯಾಗಿ ಕಾಣುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಡಿಡಿಪಿಐ ಹಾಗೂ ಬಿಓ ಗಳಿಗೆ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ದುರಸ್ತಿ ಮಾಡೋದಕ್ಕೆ ಸೂಚನೆ ನೀಡುತ್ತೇನೆ ಎಂದಿದ್ದಾರೆ.
ಶಾಲೆಗೆ ಶಿಕ್ಷಕರೇ ಇಲ್ಲ
ಸಮಸ್ಯೆಯೇ ಶಾಲೆಯಲ್ಲಿದೆ. ಯಾಕಂದ್ರೆ, ಕಟ್ಟಡದ ಸ್ಥಿತಿ ಹೀಗಾದರೆ, ಇಲ್ಲಿ ಶಿಕ್ಷಕರೂ ಇಲ್ಲ. ಮಂಜೂರಾಗಿರೋ ಐವರು ಶಿಕ್ಷಕರಲ್ಲಿ ಐವರ ಸ್ಥಾನವೂ ಖಾಲಿ ಇದೆ. ಈ ಶಾಲೆಗೆ ನಿಯೋಜನೆಗೊಂಡಿರೋ ಶಿಕ್ಷಕ ಹಿರೇಬೈಲು ಹಾಗೂ ಇಡಕಣೀ ಎರಡೂ ಗ್ರಾಮದ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತ, ಎರಡೂ ಶಾಲೆಯನ್ನ ನಿರ್ವಹಣೆ ಮಾಡುವ ಸಾಹಸ ಮಾಡುತ್ತಿದ್ದಾರೆ.
ಇದನ್ನೂ ಓದಿ: DK Shivakumar: ದಿಢೀರ್ ಬೆಂಗಳೂರಿಗೆ ಆಗಮಿಸಿದ್ದೇಕೆ ಡಿಕೆಶಿ? ಪ್ರತಾಪ್ ಸಿಂಹ ಹೇಳಿಕೆಗೆ ಟಕ್ಕರ್
ಶಾಲೆಯ ಜಾಗ ಒತ್ತುವರಿ
ಬಿಇಓಗೆ ಸ್ಥಳೀಯರು ಹಲವು ಬಾರಿ ಮನವಿ ಮಾಡಿದರೂ ನೋ ಯೂಸ್. ಇನ್ನು ಶಾಲೆಗೆ ಎರಡು ಎಕೆರೆ ಜಾಗ ಇದ್ದರೂ ಅದನ್ನ ಒತ್ತುವರಿ ಮಾಡಲಾಗಿದೆ. ಸರ್ಕಾರ ಆ ಒತ್ತುವರಿ ಭೂಮಿಯನ್ನ ಶಾಲೆಗೆ ಬಿಡಿಸಿಕೊಡಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ