ಚಿಕ್ಕಮಗಳೂರಿನ ಕಡೂರು ರಾಗಿ ಕೇಂದ್ರದಲ್ಲಿ ರೈತರ ಪರಿಪಾಟಲು; ರಾಗಿ ಮಾರಾಟ ಸಾಧ್ಯವಾಗದೇ ಹೈರಾಣಗೊಂಡ ಅನ್ನದಾತರು

ಅವರಿಗೆ ರಸ್ತೆಯೇ ಮನೆ ಮಠ ಎಲ್ಲ. ಅಲ್ಲೇ ಊಟ.. ನಿದ್ರೆ ಮಾತ್ರ ಮಾಡೊಂಗಿಲ್ಲ. ನಿದ್ರೆ ಮಾಡದೇ ಕಣ್ ಮುಚ್ಚದೇ ಎಚ್ಚರವಿರಬೇಕಾದ ಅನಿವಾರ್ಯತೆ. ಅದು ಒಂದೆರಡು ದಿನವಲ್ಲ, ಬರೋಬ್ಬರಿ ಒಂದು ವಾರ.

ರಾಗಿ ಲೋಡ್ ಹೊತ್ತಿರುವ ಟ್ರಕ್​ಗಳು

ರಾಗಿ ಲೋಡ್ ಹೊತ್ತಿರುವ ಟ್ರಕ್​ಗಳು

  • Share this:
ಚಿಕ್ಕಮಗಳೂರು(ಮಾ. 18): ಜಿಲ್ಲೆಯ ಕಡೂರು ಪಟ್ಟಣದ ಎಪಿಎಂಸಿ ಪಕ್ಕದಲ್ಲಿ ಕಳೆದೊಂದು ವಾರದಿಂದ ನೂರಾರು ಟ್ರಾಕ್ಟರ್​ಗಳಲ್ಲಿ ಮೂಟೆಯಲ್ಲಿ ರೈತರು ರಾಗಿ ತುಂಬಿಸಿಕೊಂಡು ಬಂದಿದ್ದಾರೆ. ಆದರೆ, ಅದನ್ನು ಮಾರಾಟ ಮಾಡೋಕೆ ಸಾಧ್ಯವಾಗದೇ ರೈತರು ಪರದಾಡುತ್ತಿದ್ದಾರೆ.

ಕಳೆದ ಕೆಲ ದಿನಗಳಿಂದ ಕಡೂರು ಎಪಿಎಂಸಿಯಲ್ಲಿ ರಾಗಿ ಖರೀದಿ ಕೇಂದ್ರವನ್ನ ಸರ್ಕಾರ ತೆರೆದಿದೆ. ಆದ್ರೆ ರಾಗಿ ಖರೀದಿ ಕೇಂದ್ರದಲ್ಲಿ ಇದೀಗ ಅಧ್ವಾನ ಸೃಷ್ಠಿಯಾಗಿದೆ. ತಮ್ಮ ತಮ್ಮ ಹಳ್ಳಿಗಳಿಂದ ಟ್ರಾಕ್ಟರ್​ಗಳಲ್ಲಿ ರಾಗಿಯನ್ನ ತಂದಿರೋ ರೈತರು, ರಾಗಿಯನ್ನ ಮಾರಾಟ ಮಾಡಲು ಪಡ್ತಿರೋ ಕಷ್ಟ ಹೇಳತೀರದಾಗಿದೆ. ಸದ್ಯ ಒಬ್ಬ ರೈತ ತಾನು ತಂದಿರೋ ರಾಗಿ ಬೆಳೆಯನ್ನ ಮಾರಾಟ ಮಾಡಬೇಕೆಂದ್ರೆ ಬರೋಬ್ಬರಿ ಒಂದು ವಾರದ ಕಾಲ ಲೋಡ್ ಆಗಿರೋ ಟ್ರಾಕ್ಟರ್ ಜೊತೆ ಎಪಿಎಂಸಿ ಸಮೀಪ ಕಾಯಲೇಬೇಕಾದ ದುಸ್ಥಿತಿ ಎದುರಾಗಿದೆ. ಕಳ್ಳರ ಕಾಟ ಕೂಡ ಹೆಚ್ಚಿರೋದ್ರಿಂದ ರಾತ್ರಿಯೂ ಕೂಡ ಕಣ್ ಮುಚ್ಚದೇ ಕಾಯಬೇಕಾದ ಅನಿವಾರ್ಯತೆ ರೈತರದ್ದು. ಊಟ ತಿಂಡಿ ಎಲ್ಲಾ ಬಿಟ್ಟು ಒಮ್ಮೆ ತಂದಿರೋ ರಾಗಿಯನ್ನ ಹೇಗಾದ್ರೂ ಮಾಡಿ ಮಾರಾಟ ಮಾಡಬೇಕು ಅಂತಾ ಅನ್ನದಾತರು ಪಡುತ್ತಿರುವ ಪಡಿಪಾಟಲು ಅಷ್ಟಿಷ್ಟಲ್ಲ.. ಕೊರೊನಾ ಸೋಂಕಿನ ಭೀತಿ ಇರೋದ್ರಿಂದ ಕಡೂರು ಪಟ್ಟಣದ ಹೋಟೆಲ್ ಗಳು ಬಂದ್ ಆಗಿದ್ದು, ಒಪ್ಪೊತ್ತಿನ ಊಟಕ್ಕೂ ರೈತರು ಪರದಾಡುವಂತಾಗಿದೆ.

ಇದನ್ನೂ ಓದಿ: ನಿರ್ಭಯಾ ಪ್ರಕರಣ: ಮರಣದಂಡನೆ ರದ್ದುಗೊಳಿಸಲು ಅಪರಾಧಿಗಳಿಂದ ಮತ್ತೆ ಕೋರಿಕೆ; ಪೊಲೀಸರಿಗೆ ಕೋರ್ಟ್ ನೋಟೀಸ್

ಅಷ್ಟಕ್ಕೂ ನಮ್ಮ ಈ ದುಸ್ಥಿತಿಗೆ ಕಾರಣ ಎಪಿಎಂಸಿಯಲ್ಲಿ ಇರುವ ಅಧಿಕಾರಿಗಳು ಅನ್ನೋದು ರೈತರ ಆಕ್ರೋಶ. ನಾವು ವಾರಗಟ್ಟಲೇ ಟ್ರಾಕ್ಟರ್​ನಲ್ಲಿ ರಾಗಿ ಇಟ್ಕೊಂಡ್ ಕಾಯ್ತಿದ್ರೂ ಮಧ್ಯವರ್ತಿಗಳಿಗೆ ಮಣೆ ಹಾಕಿ ಅವರಿಗೆ ಪ್ರಾಶಸ್ತ್ಯ ನೀಡಲಾಗ್ತಿದೆ ಅನ್ನೋದು ರೈತರ ಆರೋಪ. ಹೀಗಾಗಿ ನಮಗೆ ಡೇಟ್ ಕೊಟ್ಟು ಆರೇಳು ದಿನ ಕಳೆದರೂ ಮಾರಾಟ ಮಾಡಲು ಸಾಧ್ಯವಾಗ್ತಿಲ್ಲ. ಅಲ್ಲದೇ ಲೋಡ್ ತುಂಬಿಕೊಂಡು ನಿಂತಿರೋ ಟ್ರಾಕ್ಟರ್​ಗಳಿಗೆ ಪ್ರತಿನಿತ್ಯ ಬಾಡಿಗೆ ನೀಡಬೇಕು. ಅವರ ಪ್ರತಿನಿತ್ಯದ ಖರ್ಚು ಸೇರಿದಂತೆ ನಮ್ಮ ಊಟ ತಿಂಡಿಯನ್ನ ಇಲ್ಲೇ ಮಾಡಿಕೊಳ್ಳಬೇಕಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಆದ್ರೆ ಈ ಕುರಿತು ಅಧಿಕಾರಿಗಳನ್ನ ಪ್ರಶ್ನೆ ಮಾಡಿದ್ರೆ ಏನೂ ಸಮಸ್ಯೆಯಿಲ್ಲ, ಎಲ್ಲವೂ ಎರಡು ದಿನದಲ್ಲಿ ಬಗೆಹರಿಯುತ್ತೆ ಅಂತಾ ಹಾರಿಕೆ ಉತ್ತರ ಸಿಗುತ್ತೆ.

ಕ್ವಿಂಟಾಲ್ ರಾಗಿಗೆ ಮಾರುಕಟ್ಟೆಯಲ್ಲಿ 1,800 ರಿಂದ 2,000 ರೂ ಬೆಲೆಯಿದೆ. ಸರ್ಕಾರ ಬೆಂಬಲ ಬೆಲೆ ಘೋಷಿಸಿರುವುದರಿಂದ ರಾಗಿ ಕೇಂದ್ರದಲ್ಲಿ 3,150 ರೂಪಾಯಿ ರೈತರಿಗೆ ಸಿಗ್ತಿದೆ. ಅದೂ ಕೂಡ ಎರಡು ತಿಂಗಳು ಬಿಟ್ಟು ರೈತರ ಖಾತೆಗಳಿಗೆ ಜಮೆ ಮಾಡ್ತೇವೆ ಅಂತಾ ಸರ್ಕಾರ ಹೇಳಿದೆ. ಆದ್ರೆ ಕಡೂರು ರಾಗಿ ಖರೀದಿ ಕೇಂದ್ರದಲ್ಲಿ ಅಧ್ವಾನ ಸೃಷ್ಟಿಯಾಗಿರೋದ್ರಿಂದ ರೈತರು ತಮ್ಮ ಬೆಳೆಯನ್ನ ಮಾರಾಟ ಮಾಡಲು ಇನ್ನಿಲ್ಲದ ಕಷ್ಟ ಪಡಬೇಕಾಗಿ ಬಂದಿದೆ. ಮಧ್ಯವರ್ತಿಗಳಿಗೆ ಮಣೆ ಹಾಕದೇ ನಮ್ಮಿಂದ ಬೇಗ ರಾಗಿ ಖರೀದಿಯನ್ನ ಮಾಡಿ ಇಲ್ಲಾ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಅಂತಾ ರೈತರು ಆಗ್ರಹಿಸಿದ್ದಾರೆ. ಇನ್ನಾದ್ರೂ ರೈತರಿಗೆ ಮಾರಾಟ ಮಾಡಲು ಸರ್ಕಾರ ಸೂಕ್ತ ವ್ಯವಸ್ಥೆ ಮಾಡಬೇಕಾಗಿದ್ದು, ಈ ಬಗ್ಗೆ ಸಂಬಂಧಪಟ್ಟವರು ಗಮನ ವಹಿಸ್ತಾರ ಅನ್ನೋದನ್ನ ಕಾದು ನೋಡಬೇಕು.

- ವೀರೇಶ್ ಜಿ. ಹೊಸೂರ್

First published: