ಸಾಲ ತೀರಿಸದೆ ಚಿಕ್ಕಮಗಳೂರಿನ ಕಾಫಿ ಎಸ್ಟೇಟ್ ಮಾಲೀಕ ಪರಾರಿ; ಬ್ಯಾಂಕ್​ನಿಂದ 200 ಎಕರೆ ಕಾಫಿ ತೋಟ ಮುಟ್ಟುಗೋಲು

Chikmagalur: ಚಿಕ್ಕಮಗಳೂರು ತಾಲೂಕಿನ ಹಿರೇಕೊಳಲೆಯ ವಾಟೇಖಾನ್ ಎಸ್ಟೇಟ್​ನ ಮಾಲೀಕ ರಮೇಶ್ ರಾವ್ ಯೂನಿಯನ್ ಬ್ಯಾಂಕ್​ನಲ್ಲಿ ಸಾಲ ಪಡೆದು, ಬ್ಯಾಂಕ್ ಎಷ್ಟೇ ನೋಟಿಸ್ ನೀಡಿದರೂ ತಲೆಕೆಡಿಸಿಕೊಂಡಿರಲಿಲ್ಲ

ಚಿಕ್ಕಮಗಳೂರಿನ ಕಾಫಿ ಎಸ್ಟೇಟ್ ನೌಕರರು

ಚಿಕ್ಕಮಗಳೂರಿನ ಕಾಫಿ ಎಸ್ಟೇಟ್ ನೌಕರರು

  • Share this:
ಚಿಕ್ಕಮಗಳೂರು (ಫೆ. 11): ಕಾಫಿ ತೋಟದ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಸಾಲ ಮಾಡಿದ ಅಸಾಮಿಯೊಬ್ಬ ಇದೀಗ ಬ್ಯಾಂಕ್ ಗೂ ಸಾಲ ತೀರಿಸದೇ, ಕಾರ್ಮಿಕರಿಗೂ ಸಂಬಳ ನೀಡದೆ ಎಸ್ಕೇಪ್ ಆಗಿರೋ ಘಟನೆ ಚಿಕ್ಕಮಗಳೂರು ತಾಲೂಕಿನ ಹಿರೇಕೊಳಲೆಯ ವಾಟೇಖಾನ್ ಎಸ್ಟೇಟ್​ನಲ್ಲಿ ನಡೆದಿದೆ.

ಕಾಫಿ ತೋಟದ  ಮಾಲೀಕ ರಮೇಶ್ ರಾವ್ ಚಿಕ್ಕಮಗಳೂರಿನ ಯೂನಿಯನ್ ಬ್ಯಾಂಕ್​ನಲ್ಲಿ ಸಾಲ ಪಡೆದು, ಬ್ಯಾಂಕ್ ಎಷ್ಟೇ ನೋಟಿಸ್ ನೀಡಿದರೂ ತಲೆಕೆಡಿಸಿಕೊಂಡಿರಲಿಲ್ಲ. ನೋಡೋ ತನಕ ನೋಡಿದ ಬ್ಯಾಂಕ್ ಅಧಿಕಾರಿಗಳು ಕೋರ್ಟ್ ಮೂಲಕ ಕಾಫಿ ಎಸ್ಟೇಟ್ ಜಪ್ತಿ ಆದೇಶ ತಂದು ನಿನ್ನೆ ವಾಟೇಖಾನ್ ಕಾಫಿ ಎಸ್ಟೇಟ್ ಮೇಲೆ ದಾಳಿ ನಡೆಸಿದರು. ಬಿಗಿ ಪೊಲೀಸ್ ಬಂದೋಬಸ್ತ್ ಜೊತೆ ಕಾಫಿ ಎಸ್ಟೇಟ್ ಗೆ ದಾಳಿ ಮಾಡಿದ ಅಧಿಕಾರಿಗಳನ್ನು, ಪೊಲೀಸರನ್ನು ಕಂಡು ಕಾರ್ಮಿಕರು ಕಂಗಾಲಾಗಿ ಹೋಗಿದ್ದಾರೆ.

ನೀವು ಈ ಕೂಡಲೇ, ಈಗಿಂದೀಗಲೇ ಮನೆ ಖಾಲಿ ಮಾಡಬೇಕು ಎಂದು ಹೇಳಿದಾಗ ಕಾರ್ಮಿಕರಿಗೆ ಆಕಾಶವೇ ತಲೆ ಮೇಲೆ ಬಿದ್ದ ಅನುಭವ ಆಗಿದೆ. ಯಾಕಂದರೆ ಇದೇ ಕಾಫಿ ತೋಟದಲ್ಲಿ 20-30 ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದ ಇವರಿಗೆ ಈ ಅನುಭವ ಎಂದೂ ಆಗಿರಲಿಲ್ಲ. ಕಳೆದ ನಾಲ್ಕೈದು ವರ್ಷಗಳಿಂದ ಸಂಬಳ ಪಡೆಯದೇ ಗಾಣದ ಎತ್ತುಗಳಂತೆ ದುಡಿಯುತ್ತಿದ್ದರು. ಸದ್ಯ ಮೂವತ್ತಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ಕೆಲಸ ಮಾಡಿಕೊಂಡಿದ್ದು, ಒಂದೊಂದು ಕುಟುಂಬಕ್ಕೂ 5 ಲಕ್ಷಕ್ಕೂ ಅಧಿಕ ಹಣ ಬರಬೇಕಾಗಿದೆಯಂತೆ. ಇದೀಗ ಕಾರ್ಮಿಕರಿಗೂ ಹಣ ನೀಡದೇ, ಬ್ಯಾಂಕಿಗೂ ಸಾಲ ತೀರಿಸದೆ ರಮೇಶ್ ರಾವ್ ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ: ರಾಜಸ್ಥಾನದ ಸರ್ಕಾರಿ ಆಸ್ಪತ್ರೆ ಐಸಿಯುನಲ್ಲಿ ನರ್ಸ್​ಗಳ ಡ್ಯಾನ್ಸ್​ ವಿಡಿಯೋ ವೈರಲ್: ಆಸ್ಪತ್ರೆಯಿಂದ ತನಿಖೆಗೆ ಆದೇಶ

ಬ್ಯಾಂಕ್ ನವರು ಸಾಲ ತೀರಿಸಿಲ್ಲ ಅಂತ ಕಾಫಿ ತೋಟ, ಬಂಗಲೆ, ಮನೆ, ಎಲ್ಲವನ್ನೂ ಜಪ್ತಿ ಮಾಡ್ತಿದ್ದಾರೆ. ಇನ್ನು ಕಾಫಿ ತೋಟದಲ್ಲಿ ಎಲ್ಲಾ ಕಡೆಗಳಲ್ಲೂ ಪತ್ರ ಅಂಟಿಸಿದ್ದಾರೆ. ಬ್ಯಾಂಕ್ನವರು ನೀವು ಹೋಗಿ ಅಂತಾ ಹೆದರಿಸುತ್ತಿದ್ದಾರೆ, ಮೂರು ತಿಂಗಳ ಮಕ್ಕಳಿದ್ದಾರೆ, ಹಾಸಿಗೆ ಹಿಡಿದಿರೋ ವೃದ್ಧರಿದ್ದಾರೆ. ಕೈಯಲ್ಲಿ ಬಿಡಿಗಾಸಿಲ್ಲ, ನಾವು ಎಲ್ಲಿಗೆ ಹೋಗೋದು ಎಂದು ಇಷ್ಟು ವರ್ಷ ಕಾಫಿ ತೋಟದಲ್ಲಿ ಬೆವರಿಳಿಸಿದ್ದ ಕಾರ್ಮಿಕರ ಅಳಲು ತೋಡಿಕೊಂಡಿದ್ದಾರೆ.

ಕಾರ್ಮಿಕರು ಎಷ್ಟೇ ಬೇಡಿಕೊಂಡರೂ ಬ್ಯಾಂಕ್​ನವರು ಮಾತ್ರ ಕೇರ್ ಮಾಡಲಿಲ್ಲ. ಸಾಲ ಕಟ್ಟದೇ ಇದ್ದದ್ದು ಕಾಫಿ ತೋಟದ ಮಾಲೀಕನ ತಪ್ಪು. ಹಾಗಾಗಿ, ನಾವು ಏನೂ ಕೂಡ ಮಾಡಲು ಸಾಧ್ಯವಿಲ್ಲ. ಕೋರ್ಟ್ ಆರ್ಡರ್ ಆಗಿದೆ ಅನ್ನೋದು ಬ್ಯಾಂಕ್​ವರ ಸಮಜಾಯಿಷಿ. ಆದರೆ, ಇಷ್ಟು ವರ್ಷಗಳು ಕತ್ತೆಗಳಂತೆ ದುಡಿದ ನಮ್ಮ ಶ್ರಮಕ್ಕೆ ಬೆಲೆ ಇಲ್ವಾ..? ನಮ್ಮ ಮುಂದಿನ ಭವಿಷ್ಯ ಹೇಗೆ. ಅನ್ನೋದು ಕಾರ್ಮಿಕರ ಅಳಲು. ಒಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯವರು ಬೀದಿಗೆ ಬಿದ್ದಿರೋ ಕಾರ್ಮಿಕರ ಪರ ಹೋರಾಟ ಮಾಡಿ ನ್ಯಾಯ ಕೊಡಿಸುವ ಮನಸು ಮಾಡಬೇಕಿದೆ.

(ವರದಿ: ವೀರೇಶ್ ಹೆಚ್ .ಜಿ)
Published by:Sushma Chakre
First published: