ದಶಕಗಳ ಬಳಿಕ ತುಂಬಿದ ಬೆಳವಾಡಿ ಕೆರೆ, ರೈತರ ಮೊಗದಲ್ಲಿ ಮಂದಹಾಸ

ಈ ಬಾರಿಯೇನೋ ನೆರೆಯ ಜಿಲ್ಲೆಯ ಮಳೆ ವರದಾನವಾಗಿದೆ. ಆದರೆ, ಪ್ರತಿ ಬಾರಿ ಕೂಡ ಹೀಗೆ ಆಗಲೂ ಸಾಧ್ಯವಿಲ್ಲ. ಈ ಹಿನ್ನಲೆ ಕಳೆದೆರಡು ದಶಕದಿಂದ ಸಾಗುತ್ತಿರುವ ಕರಗಡ ಯೋಜನೆ ಮುಗಿಸಿ ಇಲ್ಲಿನ ಜನರಿಗೆ ಶಾಶ್ವತ ನೀರಿನ ಸೇವೆ ಕಲ್ಪಿಸಬೇಕಿದೆ.

ಭರ್ತಿಯಾದ ಕೆರೆ

ಭರ್ತಿಯಾದ ಕೆರೆ

  • Share this:
 ಚಿಕ್ಕಮಗಳೂರು (ಅ.14): ಕಾಫಿನಾಡಿನ ಈ ಜಿಲ್ಲೆ ಮಲೆನಾಡಿನ ಜೊತೆ ಬರಗಾಲದ ಪ್ರದೇಶಗಳನ್ನು ಹೊಂದಿದೆ. ಇಲ್ಲಿನ ಕೊಪ್ಪ, ಕಳಸ ಮತ್ತಿತ್ತರ ಮಲೆನಾಡು ಪ್ರದೇಶಗಳು ಪ್ರತಿಬಾರಿ ಹೆಚ್ಚಿನ ಮಳೆ ಪಡೆದು ಅತಿವೃಷ್ಠಿಗೆ ತುತ್ತಾದರೆ, ಕಡೂರು, ಬೀರೂರು ಸೇರಿದಂತೆ ಹಲವು ಗ್ರಾಮಗಳು ನೀರಿಲ್ಲದೇ ಬರ ಪೀಡಿತ ಪ್ರದೇಶಗಳಾಗಿವೆ. ಈ ನಡುವೆ ಸಂತಸ ಸುದ್ದಿಯಂಬಂತೆ ತಾಲೂಕಿನ ಬೆಳವಾಡಿ, ಕಳಸಾಪುರ ಬೃಹತ್​ ಕೆರೆ ದಶಕಗಳ ಬಳಿಕ ತುಂಬುವ ಮೂಲಕ ಇಲ್ಲಿನ ಗ್ರಾಮಸ್ಥರಲ್ಲಿ ಮಂದಹಾಸ ಮೂಡಿಸಿದೆ. 15 ವರ್ಷಗಳ ಬಳಿಕ ಈ ಕೆರೆ ತುಂಬಿರುವುದು ಸುತ್ತಮುತ್ತಲಿನ ಹತ್ತಾರು ರೈತರ ಮಂದಹಾಸಕ್ಕೆ ಕಾರಣವಾಗಿದೆ.  

ಬೆಳವಾಡಿಯ ಈ ಬೃಹತ್​  ಕೆರೆಗೆ ನೀರು ಬಂದಿದ್ದು ರೈತರಿಗೆ ಮರುಳುಗಾಡಲ್ಲಿ ಓಯಾಸಿಸ್ ಸಿಕ್ಕಂತಾಗಿದೆ. ತಾಲೂಕಿನ ಬೆಳವಾಡಿ, ಕಳಸಾಪುರ ಸೇರಿದಂತೆ ಈ ಭಾಗದ ಹತ್ತಾರು ಹಳ್ಳಿಗಳು ಶಾಶ್ವತ ಬರಗಾಲಕ್ಕೆ ತುತ್ತಾದ ಗ್ರಾಮಗಳು. ಈ ಭಾಗದ ಹತ್ತಾರು ಹಳ್ಳಿಯ ಸಾವಿರಾರು ಜನ-ಜಾನುವಾರುಗಳು ಕುಡಿಯುವ ನೀರಿಗೂ ಹಾಹಾಕಾರ ಅನುಭವಿಸಿದ್ದರು. ಕಳೆದ ಮೂರ್ನಾಲ್ಕು ವರ್ಷಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಊರಿಗೆ ಊರೇ ಕೊಚ್ಚಿ ಹೋಗುವಂತಹಾ ಮಳೆ ಬಂದಿದ್ದರೂ ಈ ಭಾಗದಲ್ಲಿ ಮಳೆ ಇರಲಿಲ್ಲ. ಮಲೆನಾಡಿಗರು ಮಳೆ ನಿಲ್ಲಲಿ ಎಂದು ಆಕಾಶ ನೋಡುತ್ತಿದ್ದರೆ, ಈ ಭಾಗದ ರೈತರು ಮಳೆಗಾಗಿ ಆಕಾಶ ನೋಡುತ್ತಿದ್ದರು.

ಇದನ್ನು ಓದಿ: ಸಚಿವ ನಾಗೇಶ್​ ವಿರುದ್ಧ ಚುನಾವಣಾ ತಯಾರಿ ನಡೆಸಿದ ಬಿಇಒ; ವರ್ಗಾವಣೆಗೆ ಶಿಫಾರಸು

ಇದರಿಂದಾಗಿ ಸುಮಾರು 800 ಎಕರೆ ವಿಸ್ತೀರ್ಣದ ಈ ಬೃಹತ್ ಬೆಳವಾಡಿ ಕೆರೆ ಕಳೆದ 15 ವರ್ಷಗಳಿಂದ ಖಾಲಿಯಾಗಿತ್ತು. ಮಳೆಯೂ ಇಲ್ಲದೇ, ಕೆರೆಗೆ ಬೇರಾವ  ಮೂಲದಿಂದಲೂ ಈ  ನೀರು ಬಂದಿರಲಿಲ್ಲ. ಆದರೆ, ಈ ಬಾರಿ ಕೆರೆಗೆ ನೀರು ಬಂದಿದೆ.  ಹಾಸನ ಜಿಲ್ಲೆ ಬೇಲೂರು ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ಹಳೇಬೀಡು ಕೆರೆ ಕೋಡಿ ಬಿದ್ದಿದೆ. ಇದರ ಪರಿಣಾಮ ಇಲ್ಲಿಗೆ ನೀರು ಸೇರಿದೆ. ಇದರಿಂದಾಗಿ ಇಲ್ಲಿಯ ಜನರ ನೀರಿನ ಸಮಸ್ಯೆ ನಿವಾರಣೆಯಾಗಿದೆ.

ಇನ್ನು ಈ ಕೆರೆಗೆ ನೀರು ತುಂಬಿಸಲು ಕರಗಡ ನೀರಾವರಿ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಸುಮಾರು 20 ಕೋಟಿಯಷ್ಟು ಖರ್ಚು ಮಾಡಲಾಗಿದೆ. ಆದರೆ, ಈ ಯೋಜನೆ ಸಫಲವಾಗಲಿಲ್ಲ. ಈ  ಯೋಜನೆ ಮುಗಿಸಿ ಎಂದು ಇಲ್ಲಿನ ಜನರು ದಶಕಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಆದರೆ, ಯೋಜನೆಯಿಂದ ನೀರು ಮಾತ್ರ ಬರಲೇ ಇಲ್ಲ. ಇದೀಗ, ಯಾವುದೋ ಒಂದು ಮೂಲೆಯಿಂದ ಕೆರೆಗೆ ನೀರು ಬಂದಿರುವುದು ರೈತರ ಖುಷಿ ಹೆಚ್ಚಿಸಿದೆ. ಈ ಬಾರಿಯೇನೋ ನೆರೆಯ ಜಿಲ್ಲೆಯ ಮಳೆ ವರದಾನವಾಗಿದೆ. ಆದರೆ, ಪ್ರತಿ ಬಾರಿ ಕೂಡ ಹೀಗೆ ಆಗಲೂ ಸಾಧ್ಯವಿಲ್ಲ. ಈ ಹಿನ್ನಲೆ ಕಳೆದೆರಡು ದಶಕದಿಂದ ಸಾಗುತ್ತಿರುವ ಕರಗಡ ಯೋಜನೆ ಮುಗಿಸಿ ಇಲ್ಲಿನ ಜನರಿಗೆ ಶಾಶ್ವತ ನೀರಿನ ಸೇವೆ ಕಲ್ಪಿಸಬೇಕಿದೆ.
Published by:Seema R
First published: