PSI Recruitment Scam: ಸಚಿವ ಅಶ್ವತ್ಥ್ ನಾರಾಯಣ ಪರ ಸಿಎಂ ಬ್ಯಾಟಿಂಗ್, ಕಾಂಗ್ರೆಸ್ ವಿರುದ್ಧ ಬಸವರಾಜ ಬೊಮ್ಮಾಯಿ ಕಿಡಿ

ನಾವು ಈ ಪ್ರಕರಣದ ತನಿಖೆ ವಿಚಾರದಲ್ಲಿ ಮುಕ್ತವಾಗಿದ್ದೇವೆ. ನಿಷ್ಪಕ್ಷಪಾತವಾಗಿ ನಿಷ್ಟುರವಾಗಿ ತನಿಖೆಯಾಗಬೇಕು ಎಂದು ಸೂಚಿಸಿದ್ದೇವೆ. ಕಲಬುರಗಿಯ ದಿವ್ಯ ಹಾಗರಗಿ ಮಾತ್ರವಲ್ಲ, ಇನ್ನೂ ಹಲವರಿದ್ದಾರೆ. ಎಲ್ಲರನ್ನೂ ಬಂಧಿಸುತ್ತೇವೆ ಎಂದು ಸಿಎಂ ಖಡಕ್​ ಸಂದೇಶ ರವಾನಿಸಿದರು.

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

  • Share this:
ಬೆಂಗಳೂರು (ಮೇ 5) : ಪಿಎಸ್‌ಐ ನೇಮಕಾತಿ (PSI Recruitment Scam) ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಸಚಿವ ಅಶ್ವತ್ಥ ನಾರಾಯಣ್ (Ashwath Narayan) ವಿರುದ್ಧ ಕಾಂಗ್ರೆಸ್ ನಿರಾಧಾರ ಆರೋಪ ಮಾಡಿದ್ದು, ತಮ್ಮ ಪಕ್ಷದವರ ಬಣ್ಣ ಬಯಲಾಗಲಿದೆ ಎನ್ನುವ ಕಾರಣಕ್ಕೆ ಕಾಂಗ್ರೆಸ್ (Congress)​ ಹಿಟ್ ಆ್ಯಂಡ್ ರನ್  ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ತಿರುಗೇಟು ನೀಡಿದರು.  ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಯಾವ ಯಾವ ದೂರುಗಳು (Complaint) ಬರುತ್ತವೆಯೋ?, ಯಾರು ಕೊಡುತ್ತಾರೋ ಅವೆಲ್ಲವನ್ನೂ ಪರಿಗಣಿಸುತ್ತೇವೆ. ಕೊಟ್ಟಿರುವ ದಾಖಲೆಗಳನ್ನು ಪರಿಶೀಲನೆ ಮಾಡುತ್ತೇವೆ. ಅದರ ತನಿಖೆಯನ್ನೂ ಮಾಡಿಸುತ್ತೇವೆ. ಅಕ್ರಮದಲ್ಲಿ ಸಹಕಾರ, ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದರೆ ಅಂತವರ ವಿರುದ್ಧ ಪ್ರಕರಣ ದಾಖಲು ಮಾಡುತ್ತೇವೆ ಎಂದರು.ಆರೋಪಿಗಳನ್ನು ಬಂಧಿಸದೇ ಬಿಡಲ್ಲ

ನಾವು ಈ ಪ್ರಕರಣದ ತನಿಖೆ ವಿಚಾರದಲ್ಲಿ ಮುಕ್ತವಾಗಿದ್ದೇವೆ. ನಿಷ್ಪಕ್ಷಪಾತವಾಗಿ ನಿಷ್ಟುರವಾಗಿ ತನಿಖೆಯಾಗಬೇಕು ಎಂದು ಸೂಚಿಸಿದ್ದೇವೆ. ಹಲವಾರು ಅಧಿಕಾರಿಗಳ ವಿರುದ್ಧ ಕಾರ್ಯಾಚರಣೆ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿ. ಕಲಬುರಗಿಯ ದಿವ್ಯ ಹಾಗರಗಿ ಮಾತ್ರವಲ್ಲ, ಇನ್ನೂ ಹಲವರಿದ್ದಾರೆ. ಎಲ್ಲರನ್ನೂ ಬಂಧಿಸುತ್ತೇವೆ ಎಂದು ಸಿಎಂ ಖಡಕ್​ ಸಂದೇಶ ರವಾನಿಸಿದರು.

ಕಾಂಗ್ರೆಸ್​​ ಹಿಟ್ ಅಂಡ್​​ ರನ್ ಮಾಡುತ್ತಿದೆ

ಸಚಿವ ಅಶ್ವತ್ಥ್​ ನಾರಾಯಣ್ ಬಗ್ಗೆ ಕಾಂಗ್ರೆಸ್​ನವರು ಆಧಾರ ರಹಿತವಾದ ಆರೋಪ ಮಾಡುತ್ತಿದ್ದಾರೆ. ಜವಾಬ್ದಾರಿಯುತ ಪ್ರತಿ ಪಕ್ಷವದರು ಬೇರೆಯವರ ಮೇಲೆ ಆರೋಪ ಮಾಡುವಾಗ ಸಾಕ್ಷಿ ಇರಬೇಕು ಎನ್ನುವುದು ಇವರಿಗೆ ತಿಳಿದಿಲ್ಲ. ಇವರು ಹಿಟ್-ಆ್ಯಂಡ್-ರನ್ ಮಾಡಲು ಹೊರಟಿದ್ದಾರೆ. ಇದು ನಡೆಯುವುದಿಲ್ಲ, ಅವರ ಕಾಲದಲ್ಲಿ ಸಾಕಷ್ಟು ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದವು. ಹಲವಾರು ಬಾರಿ ಪಿಎಸ್‌ಐ, ಪಿಯುಸಿ ಎಲ್ಲಾ ಪ್ರಶ್ನೆ ಪತ್ರಿಕೆ ಹೊರಗೆ ಬಂದಿದ್ದವು. ಆಗ ಅವರು ಏನೂ ಕ್ರಮ ಕೈಗೊಂಡಿರಲಿಲ್ಲ. ಈಗ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ.

ಇದನ್ನು ಓದಿ: PSI Recruitment Scam: ಸಿಐಡಿ ವಿಚಾರಣೆಗೆ ಹಾಜರಾಗ್ತಾರಾ ಪ್ರಿಯಾಂಕ್ ಖರ್ಗೆ?

ಕಾಂಗ್ರೆಸ್ ಆರೋಪಕ್ಕೆ ಸಿಎಂ ತಿರುಗೇಟು

ಬಂಧಿತರಲ್ಲಿ ಕೆಲವರು ಅವರ ಪಕ್ಷದವರು. ಅವರ ಕಡೆಯವರು ಬಂಧನಕ್ಕೆ ಒಳಗಾಗಿದ್ದಾರೆ, ಅವರ ಮುಖಾಂತರ ಇವರ ಬಣ್ಣ ಬಯಲಾಗಲಿದೆ ಎಂದು ಈ ರೀತಿ ಆರೋಪ ಮಾಡುತ್ತಿದ್ದಾರೆ. ಜನ ಇದನ್ನೆಲ್ಲ ಒಪ್ಪುವುದಿಲ್ಲ, ಅವರ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರವಿಲ್ಲ. ಹಾಗಾಗಿ, ಅವರ ಮಾತಿಗೆ ಕಿಂಚಿತ್ತು ಬೆಲೆ ಇಲ್ಲ ಎಂದು ಕಾಂಗ್ರೆಸ್ ಆರೋಪಕ್ಕೆ ಸಿಎಂ ತಿರುಗೇಟು ನೀಡಿದರು.

ಛೋಟಾ ಪಾಕಿಸ್ತಾನ ಘೋಷಣೆ ಬಗ್ಗೆ ಎಸ್​ಪಿ ಜೊತೆ ಮಾತುಕತೆ

ನಂಜನಗೂಡಿನ ಕವಲಂದೆಯಲ್ಲಿ ಛೋಟಾ ಪಾಕಿಸ್ತಾನ ಘೋಷಣೆ ಕೂಗಿದ ಪ್ರಕರಣದ ಕುರಿತು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜತೆ ಮಾತುಕತೆ ನಡೆಸುತ್ತೇನೆ. ಅದರ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ತಿಳಿಸಿದರು.

 ರಾಗಿ ಖರೀದಿಗೆ ನೋಂದಣಿ

ನಾಳೆ ರಾಗಿ ಖರೀದಿಗೆ ನೋಂದಣಿ ಪ್ರಕ್ರಿಯೆ ಆರಂಭಿಸಲು ಆದೇಶ ಕೊಟ್ಟಿದ್ದೇನೆ. ಎರಡು ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿಯಾಗಿ ರಾಗಿ ಖರೀದಿ ಮಾಡಲು ರಾಜ್ಯದ ಪ್ರಮುಖ ರಾಗಿ ಬೆಳೆಯುವ ಜಿಲ್ಲೆಗಳಲ್ಲಿ ಖರೀದಿಗೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ನಂತರ ಖರೀದಿ ಪ್ರಕ್ರಿಯೆ ಮಾಡಲಾಗುತ್ತದೆ ಎಂದು ಹೇಳಿದರು.

ಇದನ್ನು ಓದಿ: Ashwath Narayan ಪರೀಕ್ಷೆ ಬರೆಯದವರಿಗೂ ಸರ್ಟಿಫಿಕೇಟ್ ಕೊಡಿಸಿದ್ರು: HD Kumaraswamy ಆರೋಪ

ಡಿ.ಕೆ ಶಿವಕುಮಾರ್​ ಹಗರಣದಲ್ಲಿ ಜೈಲಿಗೆ ಹೋದವರು

ಪಿಎಸ್​ಐ ಹಗರಣದಲ್ಲಿ ಸಚಿವ ಅಶ್ವತ್ಥ್​ ನಾರಾಯಣ ಅವರ ಮೇಲೆ ಕಾಂಗ್ರೆಸ್ ​ ಗಂಭೀರ ಆರೋಪ ಹೊರಿಸಿದ್ದು, ಸಚಿವರ ರಾಜೀನಾಮೆಗೆ ಒತ್ತಾಯಿಸಿದೆ. ಈ ನಡುವೆ ಕಾಂಗ್ರೆಸ್​ ಸಿದ್ದರಾಮಯ್ಯ ಸಚಿವ ಅಶ್ವತ್ಥ್​ ನಾರಾಯಣ ಅವರ ವಿರುದ್ಧ ಸರಣಿ ವಾಗ್ದಾಳಿ ನಡೆಸಿದೆ. ಈ ಬೆನ್ನಲ್ಲೆ ಸಚಿವರ ಬೆಂಬಲಕ್ಕೆ ಇದೀಗ ಬಿಜೆಪಿ ನಾಯಕರು ಮುಂದಾಗಿದ್ದಾರೆ.

ಈ ಸಂಬಂಧ ಇಂದು ಮಾತನಾಡಿದ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ, ಕಾಂಗ್ರೆಸ್ ಅಂದ್ರೆ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಹೆಸರು. ಆರೋಪ ಮಾಡುತ್ತಿರುವ ಡಿಕೆ ಶಿವಕುಮಾರ್​ ಹಗರಣದಲ್ಲಿ ಸ್ವತಃ ಜೈಲಿಗೆ ಹೋದವರು. ಇವರಿಗೆ ನಮ್ಮ ಪಕ್ಷದವರ ಯಾರ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎಂದು ಕಿಡಿಕಾರಿದ್ದಾರೆ.


Published by:Pavana HS
First published: