ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಮ್ಮ‌ ಪಕ್ಷದ ಪ್ರಶ್ನಾತೀತ ನಾಯಕ; ವಸತಿ ಸಚಿವ ವಿ. ಸೋಮಣ್ಣ

ಯಡಿಯೂರಪ್ಪನವರು ವಯಸ್ಸನ್ನೂ ಲೆಕ್ಕ ಮಾಡದೆ ದಿನದ 18 ಗಂಟೆ ಕೆಲಸ ಮಾಡುತ್ತಿದ್ದಾರೆ. ಆದರೆ, ನಮ್ಮವರೇ ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿದ್ದು, ದಯವಿಟ್ಟು ಇಂತಹ ಕೆಲಸವನ್ನು ಕೈಬಿಡಿ ಎಂದು ಸ್ವತಃ ಬಿಜೆಪಿ ಮುಖಂಡರಿಗೆ ಸಚಿವ ಸೋಮಣ್ಣ ಕಿವಿಮಾತು ಹೇಳಿದ್ದಾರೆ.

news18-kannada
Updated:July 30, 2020, 4:25 PM IST
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಮ್ಮ‌ ಪಕ್ಷದ ಪ್ರಶ್ನಾತೀತ ನಾಯಕ; ವಸತಿ ಸಚಿವ ವಿ. ಸೋಮಣ್ಣ
ವಿ. ಸೋಮಣ್ಣ
  • Share this:
ಬೆಂಗಳೂರು (ಜುಲೈ 30): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸಿದೆ. ಮುಂದಿನ ಮೂರು ವರ್ಷಕ್ಕೂ ಅವರೇ ಸಿಎಂ, ಅವರೇ ನಮ್ಮ ಪಕ್ಷದ ಪ್ರಶ್ನಾತೀತ ನಾಯಕ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಇನ್ನೂ ನಾಯಕತ್ವ ಬದಲಾವಣೆ ಕುರಿತ ಚರ್ಚೆಯೇ ಇಲ್ಲ ಎಂದು ವಸತಿ ಸಚಿವ ವಿ. ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.

ವಿಕಾಸಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಎಸ್ ವೈ ಅವರ ಹೆಸರಿನಲ್ಲಿಯೇ ಪ್ರಣಾಳಿಕೆ ಮಾಡಿ ಅವರ ನಾಯಕತ್ವದಲ್ಲಿಯೇ ಚುನಾವಣೆ ಎದುರಿಸಿದ್ದೇವೆ. ಅವರ ನೇತೃತ್ವದಲ್ಲಿ ಒಂದು ವರ್ಷದಲ್ಲಿ ಬಂದಿರುವ ಸಂಕಷ್ಟಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ. ಪ್ರಕೃತಿ ವಿಕೋಪ, ಕೋವಿಡ್ ಸಮಸ್ಯೆ ಎಲ್ಲವನ್ನು ಹತೋಟಿಗೆ ತರಲು ಯಡಿಯೂರಪ್ಪ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ.

ನಾವು ಅನಗತ್ಯವಾಗಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುವುದು ಬೇಡ. ಅವರ ನಾಯಕತ್ವದಲ್ಲಿಯೇ ಬಿಜೆಪಿ ರಾಜ್ಯದಲ್ಲಿ ಮುಂದಿನ ಮೂರು ವರ್ಷ ಅಧಿಕಾರದಲ್ಲಿರಲಿದೆ. ಮುಂದಿನ ಚುನಾವಣೆಯನ್ನು ಅವರ ನೇತೃತ್ವದಲ್ಲಿಯೇ ನಾವು ಎದುರಿಸುತ್ತೇವೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಈ ವಿಚಾರದಲ್ಲಿ ಪಕ್ಷ ಹಾಗೂ ಬೇರೆಯವರೂ ಯಾರೂ ಅನಗತ್ಯ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುವುದು ಬೇಡ" ಎಂದು ವಿ. ಸೋಮಣ್ಣ ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಆಗಸ್ಟ್ ತಿಂಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಪಕ್ಕಾ; ದೆಹಲಿ ನಾಯಕರ ಇಶಾರೆಗೆ ಕಾಯುತ್ತಿರುವ ಯಡಿಯೂರಪ್ಪ

"ಯಡಿಯೂರಪ್ಪನವರು ವಯಸ್ಸನ್ನೂ ಲೆಕ್ಕ ಮಾಡದೆ ದಿನದ 18 ಗಂಟೆ ಕೆಲಸ ಮಾಡುತ್ತಿದ್ದಾರೆ. ಆದರೆ, ನಮ್ಮವರೇ ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿದ್ದು, ದಯವಿಟ್ಟು ಇಂತಹ ಕೆಲಸವನ್ನು ಕೈಬಿಡಿ ಎಂದು ಸ್ವತಃ ಬಿಜೆಪಿ ಮುಖಂಡರಿಗೆ ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ  ಹೆಚ್.ಡಿ. ಕುಮಾರಸ್ವಾಮಿ ಕುರಿತು ಮಾತನಾಡಿರುವ ಸೋಮಣ್ಣ, "ಹೆಚ್‌ಡಿಕೆ ಎರಡು ಬಾರಿ ಸಿಎಂ ಆಗಿ ಅಧಿಕಾರ ಅನುಭವಿಸಿದ್ದಾರೆ. ವಾಸ್ತವಾಂಶ ಅರಿತುಕೊಂಡು ಸರ್ಕಾರಕ್ಕೆ ಸಹಕಾರ ನೀಡುತ್ತಿದ್ದಾರೆ. ಅವರು ದೇವೇಗೌಡರ ಗರಡಿಯಲ್ಲಿ ಪಳಗಿದವರು. ಯಾವ ಸಂದರ್ಭದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂದು ಅವರಿಗೆ ಗೊತ್ತಿದೆ. ಜನರು ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ರಾಜಕಾರಣ ಮಾಡುವುದು ಒಳ್ಳೆಯದಲ್ಲ ಎಂದು ಕುಮಾರಸ್ವಾಮಿ ಅರಿತು ಮಾತನಾಡುತ್ತಿದ್ದಾರೆ" ಎಂದು ಪ್ರಶಂಸಿಸಿದ್ದಾರೆ.

ಇದನ್ನೂ ಓದಿ : IAF Rafale: ರಫೇಲ್‌ ಹಗರಣ?; ಕೇಂದ್ರ ಸರ್ಕಾರದ ಎದುರು ಮತ್ತೆ ಮೂರು ಪ್ರಶ್ನೆಗಳನ್ನಿಟ್ಟ ರಾಹುಲ್‌ ಗಾಂಧಿಕಾಂಗ್ರೆಸ್‌ ಗೆ ಸೋಮಣ್ಣ ಚಾಟಿ :

ಕೋವಿಡ್ ಉಪಕರಣಗಳ ಖರೀದಿ ಕುರಿತು ಖರ್ಚಾಗಿರುವ ಅಲ್ಪ ಹಣದ ಕುರಿತು ಸಚಿವರೇ ಎಲ್ಲ ಮಾಹಿತಿ ನೀಡಿದ್ದಾರೆ. ಬೇಕಿದ್ದರೆ ಅಧಿವೇಶನದಲ್ಲಿ ದಿನಗಟ್ಟಲೆ ಮಾತನಾಡಿ.‌ ಆದರೆ, ಬೀದಿಯಲ್ಲಿ ಚರ್ಚೆ ಯಾಕೆ? ಎಂದು ಕಾಂಗ್ರೆಸ್ ನಾಯಕರಿಗೆ ಸೋಮಣ್ಣ ಚಾಟಿ ಬೀಸಿದ್ದಾರೆ.

ಕಾಂಗ್ರೆಸ್ ನಾಯಕರು ಜನರ ಸಮಸ್ಯೆ ಅರಿತು ಕೆಲಸ ಮಾಡಬೇಕು. ಆದರೆ, ಏನೂ ಆಗದಿದ್ದರೂ ಅದನ್ನೇ ದೊಡ್ಡ ವಿಷಯವನ್ನಾಗಿ ಮಾಡುತ್ತಿದ್ದಾರೆ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ರಾಷ್ಟ್ರೀಯ ಪಕ್ಷದ ಮುಖಂಡರು ಅದರ ಗೌರವಕ್ಕೆ ತಕ್ಕಂತೆ ವರ್ತನೆ ಮಾಡಬೇಕು ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಸೋಮಣ್ಣ ವಾಗ್ದಾಳಿ ನಡೆಸಿದರು.
Published by: MAshok Kumar
First published: July 30, 2020, 4:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading