ಕುಮಾರಸ್ವಾಮಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದಕ್ಕೆ ನಿಖಿಲ್​ ಸೋತಿದ್ದು; ಚಲುವರಾಯಸ್ವಾಮಿ

ಸಿಎಂ ಕುಮಾರಸ್ವಾಮಿ ಹಾಗೂ ನನ್ನ ನಡುವೆ ಭಿನ್ನಾಭಿಪ್ರಾಯ ಇರುವುದು ಜಗತ್ತಿಗೇ ಗೊತ್ತಿರುವ ವಿಷಯ. ಅವರ ಅವಶ್ಯಕತೆ ನಮಗಿಲ್ಲ, ಅವರು ಬೆನ್ನಿಗೆ ಚೂರಿ ಹಾಕಿದವರು  ಎಂದು ಎಚ್​ಡಿಕೆ ನಮ್ಮ ಮೇಲೆ ಆರೋಪ ಮಾಡಿದ್ದರು.  ಅವರು ಆರೋಪ ಮಾಡಿದ ಮೇಲೂ ಹೇಗೆ ಅವರ ಪರ ಕೆಲಸ ಮಾಡುವುದು - ಚೆಲುವರಾಯಸ್ವಾಮಿ

Latha CG | news18
Updated:May 23, 2019, 5:11 PM IST
ಕುಮಾರಸ್ವಾಮಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದಕ್ಕೆ ನಿಖಿಲ್​ ಸೋತಿದ್ದು; ಚಲುವರಾಯಸ್ವಾಮಿ
ಚಲುವರಾಯಸ್ವಾಮಿ
  • News18
  • Last Updated: May 23, 2019, 5:11 PM IST
  • Share this:
ಬೆಂಗಳೂರು,(ಮೇ 23): ಮಂಡ್ಯದಲ್ಲಿ ನಿಖಿಲ್​ ಸೋಲಿಗೆ ಸಿದ್ದರಾಮಯ್ಯ ಹಾಗೂ ದಿನೇಶ್​ ಗುಂಡೂರಾವ್​ ಕಾರಣವಲ್ಲ. ಬದಲಾಗಿ ಸಿಎಂ ಕುಮಾರಸ್ವಾಮಿ  ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದೇ ನಿಖಿಲ್​ ಸುಮಲತಾ ವಿರುದ್ಧ ಸೋಲುವಂತೆ ಆಯಿತು ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ನೇರವಾಗಿ ಹೇಳಿದ್ದಾರೆ.

ಸಿಎಂ ಕುಮಾರಸ್ವಾಮಿ ಹಾಗೂ ನನ್ನ ನಡುವೆ ಭಿನ್ನಾಭಿಪ್ರಾಯ ಇರುವುದು ಜಗತ್ತಿಗೇ ಗೊತ್ತಿರುವ ವಿಷಯ. ಅವರ ಅವಶ್ಯಕತೆ ನಮಗಿಲ್ಲ, ಅವರು ಬೆನ್ನಿಗೆ ಚೂರಿ ಹಾಕಿದವರು  ಎಂದು ಎಚ್​ಡಿಕೆ ನಮ್ಮ ಮೇಲೆ ಆರೋಪ ಮಾಡಿದ್ದರು.  ಅವರು ಆರೋಪ ಮಾಡಿದ ಮೇಲೂ ಹೇಗೆ ಅವರ ಪರ ಕೆಲಸ ಮಾಡುವುದು. ಹೀಗಾಗಿ ಚುನಾವಣೆಯಿಂದ ದೂರ ಇರುತ್ತೇವೆ ಎಂದು ಹೇಳಿದ್ದೆವು. ನಾವು ನಿಖಿಲ್ ಪರವಾಗಿ ಪ್ರಚಾರ ಮಾಡುತ್ತೇವೆ ಎಂದು ಯಾವತ್ತೂ ಹೇಳಿರಲಿಲ್ಲ. ಸೋತವರನ್ನು ವಿಶ್ವಾಸಕ್ಕೆ ಪಡೆಯುವ ಅವಶ್ಯಕತೆ ಇಲ್ಲ ಎಂದು ಅವರೇ ಹೇಳಿದ್ದರು. ಹೀಗಾಗಿ ನಾವು ಅಂತರ ಕಾಯ್ದುಕೊಂಡಿದ್ದೆವು ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ನೇರಾನೇರ ವಾಗ್ದಾಳಿ ನಡೆಸಿದರು.

ಅಂಬರೀಷ್ ನಮಗೆ ಆತ್ಮೀಯ ಸ್ನೇಹಿತ. ಅವರು ಎಲ್ಲರಿಗೂ ಗೆಳೆಯರಾಗಿದ್ದರು. ಅವರ ಪತ್ನಿ ಸುಮಲತಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರಿಂದ, ಕುಮಾರಸ್ವಾಮಿ ಅವರು ತಮ್ಮ ಮಗನನ್ನು ಕಣಕ್ಕಿಳಿಸುವುದಿಲ್ಲ ಎಂದು ನಾವು ಅಂದುಕೊಂಡಿದ್ದೆವು. ಆದರೆ ಸುಮಲತಾ ವಿರುದ್ಧವೇ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರು. ಮಂಡ್ಯದಲ್ಲಿ ನಡೆದದ್ದು ಸ್ವಾಭಿಮಾನದ ಚುನಾವಣೆ.  ಸುಮಲತಾ ಗೆಲುವಿಗೆ ಮಂಡ್ಯ ಜನತೆಯೇ ಕಾರಣಕರ್ತರು ಎಂದು ಹೇಳಿದರು.

ಮಂಡ್ಯ ಫಲಿತಾಂಶದ ಬಗ್ಗೆ ನಾನು ಮೊದಲಿನಿಂದಲೂ ಹೇಳುತ್ತಿದ್ದೆ. ಮೈತ್ರಿ ಪಕ್ಷ ಒಟ್ಟಾಗಿ ಚುನಾವಣೆ ಎದುರಿಸಿದ್ದೇವೆ. ಸ್ಥಳೀಯ ಕಾರ್ಯಕರ್ತರ ಚುನಾವಣೆ ಬಂದಾಗ ಮೈತ್ರಿ ಮಾಡಲ್ಲ. ರಾಜ್ಯ, ದೇಶದ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತಾರೆ ಎಂಬ ಮಾತು ಕಾರ್ಯಕರ್ತರಿಂದ ಕೇಳಿ ಬರುತ್ತಿತ್ತು. ಕಳೆದ ಉಪಚುನಾವಣೆಯಲ್ಲಿ ಶಿವರಾಮೇಗೌಡರ ಪರ ಕೆಲಸ ಮಾಡಿದ್ದೆವು. ಆದರೆ ಈ ಚುನಾವಣೆಯಲ್ಲಿ ನಮ್ಮನ್ನು ಸೌಜನ್ಯಕ್ಕಾದರೂ ಕರೆದು ಟೀ ಕೊಟ್ಟು ಬೆಂಬಲ ಕೇಳಿಲ್ಲ. ಅವರೇ ನೇರವಾಗಿ ಚುನಾವಣೆ ಮಾಡಿದ್ದರು ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.

ನಾವು ಮಂಡ್ಯದಲ್ಲಿ ಅವರ ಪರವಾಗಿ ನಿಲ್ಲದಿದ್ದಕ್ಕೆ ಸೋತರು ಎನ್ನುವುದಾರೆ, ಮೈಸೂರು, ತುಮಕೂರು, ಬೆಂಗಳೂರು ಉತ್ತರ ಏನಾಯ್ತು? ಮಂಡ್ಯ ಬಿಟ್ಟು ಉಳಿದ ಕ್ಷೇತ್ರಗಳಲ್ಲಿ ಏಕೆ ಸೋಲಾಯಿತು ಎಂದು ಪ್ರಶ್ನಿಸಿದರು. ಕುಮಾರಸ್ವಾಮಿ ಅವರು ಮಂಡ್ಯ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದರು ಎಂದರು.

ರೋಷನ್ ಬೇಗ್ ಮತ್ತು ವಿಶ್ವನಾಥ್​​ಗೆ ಸಿದ್ದರಾಮಯ್ಯ ಬಗ್ಗೆ ಮಾತನಾಡುವ ಯೋಗ್ಯತೆ ಏನಿದೆ ? ಹಾಗೆ ಮಾತಾಡಬಾರದು ಎಂದು ಕಿಡಿಕಾರಿದರು.  ಕಾಂಗ್ರೆಸ್ ಎರಡು ಸ್ಥಾನ ಬರಲು ಕಾರಣ ಏನು ಎನ್ನುವ ಬಗ್ಗೆ ನನಗೆ ನೋವಿದೆ. ಸಿದ್ದರಾಮಯ್ಯನವರು ಅನೇಕ ಉತ್ತಮ ಕಾರ್ಯಕ್ರಮ ಕೊಟ್ಟಿದ್ದರು. ಆದರೂ ಕಾಂಗ್ರೆಸ್​​ಗೆ ಈ ಸ್ಥಿತಿ ಬಂತು. ಇದರಿಂದ ಹೊರ ಬರಬೇಕಾದ ಅವಶ್ಯಕತೆ ಇದೆ. ನಾವು ಪಕ್ಷದೊಳಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಾನು ಎಲ್ಲವನ್ನೂ ಮಾಧ್ಯಮಗಳ ಮುಂದೆ ಹೇಳಲು ಆಗಲ್ಲ ಎಂದರು.

ದೇವೇಗೌಡರ ಸೋಲು ನನಗೆ ತೀವ್ರ ನೋವು ತಂದಿದೆ. ದೇವೇಗೌಡರು ಹಾಸನದಿಂದಲೇ ಸ್ಪರ್ಧೆ ಮಾಡಬೇಕಿತ್ತು. ಆದರೆ ತುಮಕೂರಿನಿಂದ ಸ್ಪರ್ಧೆ ಮಾಡಬೇಕೆಂಬುದು ಅವರ ಕುಟುಂಬದವರದ್ದೇ ತೀರ್ಮಾನ. ಅವರ ನೋವು ನನ್ನ ಕಣ್ಣಲ್ಲಿ ನೀರು ಬರುವಂತೆ ಮಾಡಿದೆ. ಅವರು ಹಿರಿಯರು, ನನಗೆ ಸಾಕಷ್ಟು ಸಲಹೆ ನೀಡಿದ್ದಾರೆ ಎಂದು ಸ್ಮರಿಸಿಕೊಂಡರು.
First published:May 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading