Charmadi Ghat: ಚಿಕ್ಕಮಗಳೂರಿನ ಕೊಟ್ಟಿಗೆಹಾರದ ಯುವಕರಿಂದ 'ಚಾರ್ಮಾಡಿ ಉಳಿಸಿ' ಅಭಿಯಾನ

Save Charmadi: ಚಿತ್ರದುರ್ಗದಿಂದ ಪೋರ್ಟ್ ಏರಿಯಾಗೆ ಸಂಪರ್ಕ ಕಲ್ಪಿಸುವ 7000 ಕೋಟಿಯ ಗೋಲ್ಡನ್ ಟ್ರೈ ಆ್ಯಂಗಲ್ ರೋಡ್ ಶಿಶಿಲ-ಬೈರಾಪುರ ರಸ್ತೆಗೂ ಹೈಕೋರ್ಟ್ ತಡೆಯೊಡ್ಡಿದೆ. ಹಾಗಾಗಿ, ಸ್ಥಳೀಯರು ಇದೀಗ, 'ಚಾರ್ಮಾಡಿ ಉಳಿಸಿ' ಅಭಿಯಾನ ಆರಂಭಿಸಿದ್ದಾರೆ.

ಕೊಟ್ಟಿಗೆಹಾರ ಯುವಕರಿಂದ ಚಾರ್ಮಾಡಿ ಉಳಿಸಿ ಅಭಿಯಾನ

ಕೊಟ್ಟಿಗೆಹಾರ ಯುವಕರಿಂದ ಚಾರ್ಮಾಡಿ ಉಳಿಸಿ ಅಭಿಯಾನ

  • Share this:
ಚಿಕ್ಕಮಗಳೂರು: ಚಾರ್ಮಾಡಿ ಘಾಟ್  ಎಂದೊಡನೆ ಥಟ್ಟನೆ ನೆನಪಾಗೋದು ಸದಾ ಮಳೆ. ಮುಗಿಲೆತ್ತರದ ಬೆಟ್ಟಗುಡ್ಡಗಳು. ಕಣ್ಣು ಕೋರೈಸೋ ಪ್ರಕೃತಿ ಸೊಬಗು. ಆದರೆ, ಚಾರ್ಮಾಡಿ ಅಂದರೆ ಅಷ್ಟೇ ಅಲ್ಲ. ಈ ರಸ್ತೆಯದ್ದು ಸೌಂದರ್ಯವನ್ನೂ ಮೀರಿದ ಸೌಂದರ್ಯ. ಈ ರಸ್ತೆ ಉಳಿಸಿರೋ ಜೀವಗಳ ಸಂಖ್ಯೆ ಅಗಣಿತ. ಈ ರಸ್ತೆ ಕೂಡ ಪ್ರಾಣ ಉಳಿಸೋ ಡಾಕ್ಟ್ರು ಅಂದ್ರು ತಪ್ಪಿಲ್ಲ. ಯಾಕಂದರೆ, ತುರ್ತು ಸಂದರ್ಭದಲ್ಲಿ ಶೀಘ್ರವೇ ಮಂಗಳೂರು ಹಾಗೂ ಉಡುಪಿಗೆ ತಲುಪುವ ಏಕೈಕ ಮಾರ್ಗ ಇದೊಂದೇ. ಆದರೀಗ ಕಳೆದ ವರ್ಷದ ಭಾರೀ ಮಳೆಗೆ ಈ ರಸ್ತೆ ಮೂವತ್ತಕ್ಕೂ ಹೆಚ್ಚು ಕಡೆ ಕುಸಿದಿದೆ. ಸರ್ಕಾರ ಅದನ್ನು ದುರಸ್ಥಿಪಡಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಈ ಮಧ್ಯೆ ಚಿತ್ರದುರ್ಗದಿಂದ ಪೋರ್ಟ್ ಏರಿಯಾಗೆ ಸಂಪರ್ಕ ಕಲ್ಪಿಸುವ 7000 ಕೋಟಿಯ ಗೋಲ್ಡನ್ ಟ್ರೈ ಆ್ಯಂಗಲ್ ರೋಡ್ ಶಿಶಿಲ-ಬೈರಾಪುರ ರಸ್ತೆಗೂ ಹೈಕೋರ್ಟ್ ತಡೆಯೊಡ್ಡಿದೆ. ಹಾಗಾಗಿ, ಸ್ಥಳೀಯರು ಇದೀಗ, 'ಚಾರ್ಮಾಡಿ ಉಳಿಸಿ' ಅಭಿಯಾನ ಆರಂಭಿಸಿದ್ದಾರೆ.

ಇದು ಬ್ರಿಟಿಷರ ಕಾಲದ ರಸ್ತೆ, ಈ ರಸ್ತೆಯನ್ನ ನಂಬಿಕೊಂಡಿರೋರು ಕೊಟ್ಯಾಂತರ ಜನ. ಹಾಗಾಗಿ, ರಸ್ತೆಯನ್ನ ಸಮರ್ಪಕ ರೀತಿಯಲ್ಲಿ ದುರಸ್ಥಿ ಮಾಡಿ ಉಳಿಸುವಂತೆ ಸ್ಥಳಿಯರು ಆಭಿಯಾನ ಆರಂಭಿಸಿದ್ದಾರೆ. ಈ ರಸ್ತೆ ಸಂಪೂರ್ಣ ಹಾಳಾದ್ರೆ, ತುರ್ತು ಸಂದರ್ಭದಲ್ಲಿ ಆಸ್ಪತ್ರೆ ಹೋಗೋದು ಅಸಾಧ್ಯ. ಕುದುರೆಮುಖ ಹಾಗೂ ಶಿರಾಡಿ ಘಾಟ್ ಮೇಲೆ ತುಂಬಾ ದೂರವಾಗಲಿದ್ದು, ಆಸ್ಪತ್ರೆಗೆ ಹೋಗುವಷ್ಟರಲ್ಲಿ ಸಾವೇ ಸಂಭವಿಸಬಹುದು. ಹಾಗಾಗಿ, ಸರ್ಕಾರ ಇದೇ ಮಾರ್ಗವನ್ನ ಸಮರ್ಪಕವಾಗಿ ದುರಸ್ಥಿ ಮಾಡಿ, ಚಾರ್ಮಾಡಿ ಘಾಟ್ ರಸ್ತೆಯನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ದುರಸ್ಥಿ ಮಾಡಿ ಈ ಮಾರ್ಗವನ್ನು ಉಳಿಸಿಕೊಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Chikmagaur Kottigehara Youths Started Save Charmadi Ghat Campaign.
ಚಾರ್ಮಾಡಿ ಘಾಟ್


ಇದನ್ನೂ ಓದಿ: Bengaluru Weather: ಬೆಂಗಳೂರಿನಲ್ಲಿ ಬುಧವಾರ ಅಬ್ಬರಿಸಿದ ವರುಣ; ಎಷ್ಟು ದಿನ ಮಳೆ ಮುಂದುವರಿಯಲಿದೆ ಗೊತ್ತಾ?

ಈ ಹಿನ್ನೆಲೆಯಲ್ಲಿ ಮೂಡಿಗೆರೆ, ಕೊಟ್ಟಿಗೆಹಾರ, ಬಣಕಲ್ ಸೇರಿದಂತೆ ಸುತ್ತಮುತ್ತಲಿನ ಜನ ಅಭಿಯಾನ ಆರಂಭಿಸಿದ್ದಾರೆ. ಶಿಶಿಲ-ಭೈರಾಪುರ ರಸ್ತೆಯಲ್ಲಿ ನೈಸರ್ಗಿಕ ಅರಣ್ಯದಲ್ಲಿರೋ ಲಕ್ಷಾಂತರ ಮರಗಳನ್ನ ಕಡಿದು ರಸ್ತೆ ನಿರ್ಮಾಣದ ಬದಲು ಚಾರ್ಮಾಡಿ ರಸ್ತೆಯನ್ನೇ ಆಧುನಿಕ ತಂತ್ರಜ್ಞಾನಿದಿಂದ ದುರಸ್ಥಿ ಮಾಡಿ ಉಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಮಾರ್ಗ ಧಾರ್ಮಿಕತೆಗೂ ಸಂಪರ್ಕ ಸೇತುವೆಯಾಗಿದೆ. ಶೃಂಗೇರಿ, ಹೊರನಾಡು, ಧರ್ಮಸ್ಥಳಕ್ಕೆ ಹೋಗುವ ಭಕ್ತರು ಈ ಮಾರ್ಗವನ್ನು ಅವಲಂಬಿಸಿದ್ದಾರೆ. ಹಾಗಾಗಿ, ಸರ್ಕಾರ ಈ ರಸ್ತೆಯನ್ನು ಉಳಿಸುವಂತೆ ಮನವಿ ಮಾಡಿದ್ದಾರೆ.

ಒಟ್ಟಾರೆ, ಚಾರ್ಮಾಡಿ ಘಾಟ್ ಅಂದ್ರೆ ಬರೀ ರಸ್ತೆಯಲ್ಲ. ಪ್ರಕೃತಿ ಪ್ರಿಯರಿಗೆ ವರ. ಪ್ರವಾಸಿಗರಿಗೆ ಭೂಲೋಕದ ಸ್ವರ್ಗ. ರೋಗಿಗಳಿಗೆ ಆಪತ್ಭಾಂಧವ. ಆಸ್ತಿಕರಿಗೆ ವನದೇವಿಯ ಬಳಿಕ ದೇವತೆಗಳನ್ನ ದರ್ಶನ ಭಾಗ್ಯ ಕಲ್ಪಿಸೋ ಮಾರ್ಗ. ಹಾಗಾಗಿ, ಚೈನ್ ಲಿಂಕ್​ನಂತೆ ಈ ರಸ್ತೆ ಹಲವು ವಿಚಾರಗಳಲ್ಲಿ ಜನಸಮಾನ್ಯರಿಗೆ ಬಹುಪಯೋಗಿ ರಸ್ತೆಯಾಗಿದೆ. ಆದ್ದರಿಂದಲೇ ಸ್ಥಳೀಯರು ಈ ರಸ್ತೆಯ ಲೋಪದೋಷಗಳನ್ನು ಸರಿಪಡಿಸಿ ಸರ್ಕಾರ ಹಾಗೂ ಅಧಿಕಾರಿಗಳು ಈ ರಸ್ತೆಯನ್ನ ಉಳಿಸಿಕೊಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದರೆ, ಮತ್ತೊಂದು ರಸ್ತೆಯ ಬಗ್ಗೆ ಒಲವು ತೋರಿರೋ ಸರ್ಕಾರ ಚಾರ್ಮಾಡಿಗೆ ಹಾಲು-ತುಪ್ಪ ಬಿಡುತ್ತೋ ಅಥವಾ ಅದರ ಕೈಹಿಡಿಯುತ್ತೋ ಕಾದು ನೋಡಬೇಕು.
Published by:Sushma Chakre
First published: