HOME » NEWS » State » CHANNAPATNA TRADITIONAL TOY DEMAND COME DOWN IN DASARA SESR ATVR

ದಸರಾ ಸಂಭ್ರಮದಲ್ಲಿಯೂ ಚನ್ನಪಟ್ಟಣದ ಗೊಂಬೆಗಳಿಗಿಲ್ಲ ಬೇಡಿಕೆ; ಸಂಕಷ್ಟದಲ್ಲಿ ಕುಶಲಕರ್ಮಿಗಳು

ದಸರಾ ಸಂಭ್ರಮ ಶುರುವಾಗುವ ಮೊದಲೇ ಬೇಡಿಕೆ ಪಡೆಯುತ್ತಿದ್ದ ಇಲ್ಲಿನ ಸಾಂಪ್ರದಾಯಿಕ ಗೊಂಬೆಗಳು ಈ ಬಾರಿ ಬೇಡಿಕೆ ಕಳೆದುಕೊಂಡಿವೆ

news18-kannada
Updated:October 22, 2020, 6:44 PM IST
ದಸರಾ ಸಂಭ್ರಮದಲ್ಲಿಯೂ ಚನ್ನಪಟ್ಟಣದ ಗೊಂಬೆಗಳಿಗಿಲ್ಲ ಬೇಡಿಕೆ; ಸಂಕಷ್ಟದಲ್ಲಿ ಕುಶಲಕರ್ಮಿಗಳು
ಚನ್ನಪಟ್ಟಣದ ಗೊಂಬೆಗಳು
  • Share this:
ಚನ್ನಪಟ್ಟಣ (ಅ.22): ನವರಾತ್ರಿ ಬಂತೆಂದರೆ ಸಾಕು ಗೊಂಬೆಗಳನ್ನು ಪಟ್ಟಕ್ಕೆ ಕೂರಿಸಲಾಗುವುದು. ಸಂಪ್ರದಾಯಿಕವಾಗಿ ರೂಢಿಕೊಂಡಿರುವ ಈ ಗೊಂಬೆ ಕೂರಿಸುವ ಪದ್ಧತಿ ಕೇವಲ ಕರ್ನಾಟಕ ಮಾತ್ರವಲ್ಲದೇ ದೇಶದ ವಿವಿಧ ಮೂಲೆ ಹಾಗೂ ವಿದೇಶಗಳಲ್ಲಿಯೂ ಆಚರಣೆ ಇದೆ. ಇದೇ ಕಾರಣಕ್ಕೆ ನವರಾತ್ರಿ ಸಮಯದಲ್ಲಿ ಚನ್ನಪಟ್ಟಣದ ಗೊಂಬೆಗಳಿಗೆ ಬೇಡಿಕೆ ಹೆಚ್ಚು. ಹಳೆ ಮೈಸೂರು ಭಾಗದ ಈ ವಿಶಿಷ್ಠ ಗೊಂಬೆ ಕೂರಿಸಲು ಜನರು ತಿಂಗಳು ಮುಂಚೆ ಬುಕಿಂಗ್​ ಕೂಡ ನಡೆಸುತ್ತಾರೆ. ಆದರೆ, ಈ ಬಾರಿ ಕೊರೋನಾ ಪರಿಣಾಮ ಗೊಂಬೆಗಳ ಬೇಡಿಕೆ ಕುಗ್ಗಿದೆ. ಅಲ್ಲದೇ ಮೈಸೂರು ದಸರಾ ವೀಕ್ಷಣೆಗೆ ಆಗಮಿಸುವವರು ಪ್ರವಾಸಿಗರನ್ನು ಈ ಗೊಂಬೆಗಳು ಸೆಳೆಯುತ್ತಿದ್ದವು. ಆದರೆ, ಈ ಬಾರಿ ಸರಳ ದಸರಾ ಆಚರಣೆಯಾಗುತ್ತಿದ್ದು, ದುಪ್ಪಟ್ಟು ಮಾರಾಟವಾಗುತ್ತಿದ್ದ ಗೊಂಬೆಗಳನ್ನು ಕೊಳ್ಳುವವರಿಲ್ಲದೇ ಕುಶಲಕರ್ಮಿಗಳು, ಮಾರಾಟಗಾರರು ಸೊರಗಿದ್ದಾರೆ.

ದಸರಾ ಸಂಭ್ರಮ ಶುರುವಾಗುವ ಮೊದಲೇ ಇಲ್ಲಿನ ಕುಶಲಕರ್ಮಿಗಳಿಗೆ ಬಿಡುವಿಲ್ಲದ ಕೆಲಸ ಆರಂಭವಾಗುತ್ತಿತ್ತು. ಆದರೆ, ಕೊರೋನಾ ಏಟಿಗೆ ಗೊಂಬೆನಾಡಿನ ಕುಶಲಕರ್ಮಿಗಳು, ತಯಾರಕರು, ಮಾರಾಟಗಾರರು ಬೊಂಬೆ ಮಾರಾಟವಾಗದೇ ಮರಗುತ್ತಿದ್ದಾರೆ.

ವಿಶ್ವದ ಮೂಲೆಮೂಲೆಗೂ ರಫ್ತಾಗುತ್ತಿದ್ದ ಇಲ್ಲಿನ ಗೊಂಬೆಗಳು ಈಗ ಗೊಂಬೆ ಮಳಿಗೆಗಳಲ್ಲಿಯೇ ಧೂಳು ಹಿಡಿಯುತ್ತಿವೆ. ಕಳೆದ 6 ತಿಂಗಳಿನಿಂದ ಅವರೆಲ್ಲರ ಬದುಕು ಬೀದಿಗೆ ಬಿದ್ದಿದೆ. ದಸರಾ ಆರಂಭಕ್ಕೆ ಎರಡು ತಿಂಗಳು ಇದ್ದಂತೆ ಇಲ್ಲಿನ ಗೊಂಬೆಗಳಿಗೆ ಸಾಕಷ್ಟು ಬೇಡಿಕೆ ಇರುತ್ತಿತ್ತು, ಆದರೆ ಈ ಬಾರಿಯ ಸರಳ ದಸರಾದಿಂದಾಗಿ ಇಲ್ಲಿನ ಮಾರಟಗಾರರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಧೂಳು ಇಡಿದಿದ್ದ ಎಲ್ಲಾ ಗೊಂಬೆಗಳನ್ನ ಇಟ್ಟುಕೊಂಡೇ ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಇದನ್ನು ಓದಿ: ನವರಾತ್ರಿ ಸಂಭ್ರಮದಲ್ಲಿ ನವದುರ್ಗೆಯ ಅವತಾರದಲ್ಲಿ ಕಾಣಿಸಿಕೊಂಡ ಬಾಲೆ; ಇಲ್ಲಿದೆ ಅದ್ಭುತ ಚಿತ್ರಗಳು

ಇಲ್ಲಿನ ರಾಮನಗರ - ಚನ್ನಪಟ್ಟಣ ಮಧ್ಯೆ ಇರುವ ಗೊಂಬೆ ಮಳಿಗೆಗಳಿಗೆ ಪ್ರವಾಸಿಗರು ಖರೀದಿಗೆ ಮುಗಿಬೀಳುತ್ತಿದ್ದರು. ಆದರೆ ಈ ರೀತಿಯ ಸನ್ನಿವೇಶಗಳು ಕಂಡುಬರುತ್ತಿಲ್ಲ.ಇಲ್ಲಿನ ಕುಶಲಕರ್ಮಿಗಳು ಇದೀಗ ದಸರಾ ಗೊಂಬೆಗಳಿಗೆ ಬೇಡಿಕೆ ಇಲ್ಲದೇ ಕಂಗಲಾಗಿ ಹೋಗಿದ್ದಾರೆ. ಇನ್ನು ಪ್ರವಾಸಿಗರಿಲ್ಲದೇ ಶೋ ರೂಮ್‌ಗಳಲ್ಲಿ ವ್ಯಾಪಾರವೂ ಇಲ್ಲದಂತೆ ಆಗಿದೆ. ಜೊತೆಗೆ ತಯಾರಾದ ಗೊಂಬೆಗಳನ್ನ ಅತೀಕಡಿಮೆ ಬೆಲೆಗೆ ವ್ಯಾಪಾರವಾಗುತ್ತಿರುವುದು ಕೂಡ ಮತ್ತೊಂದುಸಂಕಟ ತಂದಿದೆ.

ವಿಶ್ವದಲ್ಲಿಯೇ ಹೆಸರುವಾಸಿಯಾಗಿರುವ ಇಲ್ಲಿನ ಬೊಂಬೆಗಳು ಈಗ ಬೇಡಿಕೆ ಕಳೆದುಕೊಂಡಿವೆ. ಕೊರೋನಾ ಸಂಕಷ್ಟದಲ್ಲಿ ನಲುಗಿರುವ ಇಲ್ಲಿನ ಕುಶಲಕರ್ಮಿಗಳಿಗೆ ಇದೀಗ ಗೊಂಬೆ ಮಾರಾಟವಾಗದಿರುವುದು ಅವರ ಜೀವನದ ಮೇಲೆ ಮತ್ತಷ್ಟು ಬರೆ ಎಳೆದಿದೆ. ಸದ್ಯ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ತಮ್ಮ ಸಹಾಯಕ್ಕೆ ಸರ್ಕಾರವೇ ಸೂಕ್ತ ಕ್ರಮವಹಿಸಬೇಕು ಎಂದು ಇಲ್ಲಿನ ಕುಶಲಕರ್ಮಿ, ವ್ಯಾಪಾರಿಗಳ ಕೂಗಾಗಿದೆ
Published by: Seema R
First published: October 22, 2020, 6:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories