ಚನ್ನಪಟ್ಟಣ (ಅ.30): ಕೊರೋನಾ ಸೋಂಕಿನ ಹಿನ್ನಲೆ ಶಾಲೆಗಳು ಆನ್ಲೈನ್ ಶಿಕ್ಷಣದ ಮೊರೆ ಹೋದವು. ಆದರೆ, ಇದರಿಂದ ಗ್ರಾಮೀಣ ಭಾಗದ ಮಕ್ಕಳು ಸಮಸ್ಯೆ ಅನುಭವಿಸಿದ್ದು ತುಸು ಹೆಚ್ಚು. ಸ್ಮಾರ್ಟ್ಫೋನ್ಗಳ ಜೊತೆ ಇಂಟರ್ನೆಟ್ ಸಮಸ್ಯೆ ಹೆಚ್ಚು ಕಾಡಿತು. ಮಕ್ಕಳ ಈ ತೊಂದರೆಯಾನ್ನು ಗಮನಿಸಿದ ಸಹೋದರರಿಬ್ಬರು ಇಡೀ ಗ್ರಾಮಕ್ಕೆ ಇಂಟರ್ನೆಟ್ ಸೇವೆ ಕಲ್ಪಿಸಿದ್ದಾರೆ. ಈ ಮೂಲಕ ಗ್ರಾಮಸ್ಥರಿಗೂ ಅಂತರ್ಜಾಲದ ಸಾಕ್ಷರತೆ ಕಲಿಸಲು ಮುಂದಾಗಿದ್ದಾರೆ. ಇವರ ಈ ಕಾರ್ಯಕ್ಕೆ ಈಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಗ್ರಾಮೀಣ ಪ್ರದೇಶದ ಮಕ್ಕಳ ಪೋಷಕರಿಗೆ ಹೆಚ್ಚಾಗಿ ಅಂತರ್ಜಾಲದ ಸೇವೆ ಬಗ್ಗೆ ತಿಳುವಳಿಕೆ ಇಲ್ಲದಿರುವುದು. ಹಾಗೂ ಆಂಡ್ರ್ಯಾಯ್ಡ್ ಫೋನ್ ಬಳಕೆ ಮಾಡದಿರುವುದರಿಂದ ಗ್ರಾಮದ ಮಕ್ಕಳು ಹೆಚ್ಚು ಕಷ್ಟ ಪಡುತ್ತಿದ್ದರು. ಇದನ್ನು ಗಮನಿಸಿದ ಮಹೇಶ್ ಮತ್ತು ಹರೀಶ್ ಎಂಬ ಇಬ್ಬರು ಸಹೋದರರು ಇಡೀ ಗ್ರಾಮಕ್ಕೆ ಅಂತರ್ಜಾಲ ಸೇವೆ ಕಲ್ಪಿಸಿದ್ದು, ಇಡೀ ಹಳ್ಳಿಯನ್ನೇ ಡಿಜಿಟಲ್ ಗ್ರಾಮವಾಗಿ ಮಾಡಿದ್ದಾರೆ.
ತಾಲೂಕಿನ ಚಿಕ್ಕೇನಹಳ್ಳಿ ಗ್ರಾಮ ಈಗ ಡಿಜಿಟಲ್ ಗ್ರಾಮವಾಗಿ ಹೊರ ಹೊಮ್ಮಿದೆ. ಇಲ್ಲಿನ ಮಕ್ಕಳು ನಿರಂತರವಾಗಿ ಆನ್ಲೈನ್ ಸೇವೆ ಪಡೆಯುವ ಮೂಲಕ ಶಿಕ್ಷಣದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದ್ದಾರೆ. ಇದಕ್ಕೆ ಕಾರಣ ಮಹೇಶ್ ಮತ್ತು ಹರೀಶ್ ಎಂಬ ಸಹೋದರರು.
ಲಾಕ್ಡೌನ್ ಬಳಿಕ ಶಾಲೆಗಳು ಆನ್ಲೈನ್ ಶಿಕ್ಷಣ ಮೊರೆಹೋದಾಗ ಇಲ್ಲಿನ ವಿದ್ಯಾರ್ಥಿಗಳು ಬಹಳ ಸಮಸ್ಯೆ ಎದುರಿಸಿದ್ದರು. ಇಂಟರ್ನೆಟ್, ಸ್ಮಾರ್ಟ್ಫೋನ್ ಇಲ್ಲದೇ ಮಕ್ಕಳು ಕಲಿಕೆಯಿಂದ ವಿಮುಖರಾಗಲು ಶುರು ಮಾಡಿದರು. ಇದನ್ನು ಗಮನಿಸಿದ ಈ ಸಹೋದರರು ಮಾತೃಭೂಮಿ ಸೇವಾ ಫೌಂಡೇಷನ್ ಸಹಾಯದಿಂದ ಇಡೀ ಗ್ರಾಮವನ್ನೇ ಡಿಜಿಟಲೀಕರಣ ಮಾಡಲು ನಿರ್ಧರಿಸಿದರು. ಇಡೀ ಗ್ರಾಮಕ್ಕೆ ವೈಫೈ ನೀಡಿದರೆ, ವಿದ್ಯಾರ್ಥಿಗಳಲ್ಲದೇ ಇತರರಿಗೂ ಉಪಯೋಗವಾಗಲಿದೆ ಎಂಬುದು ಇವರ ವಾದ. ಅಷ್ಟೇ ಅಲ್ಲದೇ ಕೆಲ ಬಡ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಹಾಗೂ ಮೂರು ನಾಲ್ಕು ಕಂಪ್ಯೂಟರ್ಗಳನ್ನು ನೀಡಿ ಔದರ್ಯ ಮೆರೆದರು.
ಇದನ್ನು ಓದಿ: ನಾಳೆ ಕೆಆರ್ಪೇಟೆ ಅಧ್ಯಕ್ಷಗಾದಿಗೆ ಚುನಾವಣೆ; ಅಧಿಕಾರ ಗದ್ದುಗೆಗಾಗಿ ಸಚಿವ ನಾರಾಯಣಗೌಡ ರಣತಂತ್ರ
ಸಹೋದರರ ಈ ಕಾರ್ಯಕ್ಕೆ ಯುತ್ ಬ್ರಾಂಡ್ ಬ್ಯಾಂಡ್ ಕೂಡ ಬೆಂಬಲ ನೀಡಿತು. ಬ್ರಾಂಡ್ ಬ್ಯಾಂಡ್ ಸಹಯೋಗದಲ್ಲಿ ಈ ಗ್ರಾಮಕ್ಕೆ ಉಚಿತ ವೈ-ಫೈ ಯನ್ನು ನೀಡಲಾಗಿದೆ. ಗ್ರಾಮದ ಅಭಿವೃದ್ಧಿಗಾಗಿ ವೈ ಫೈ ಬಳಕೆಯನ್ನು ಉತ್ತೇಜಿಸಲು ಗ್ರಾಮದ ಸಂಪನ್ಮೂಲ ಹೆಚ್ಚಿಸುವ ಉದ್ದೇಶದಿಂದ ಗ್ರಾಮದ ಜನರಿಗೆ ಉಚಿತವಾಗಿ ಈ ಸೇವೆ ನೀಡಲಾಗುತ್ತಿದೆ ಎನ್ನುತ್ತಾರೆ ಟ್ರಸ್ಟ್ ನ ಮುಖ್ಯಸ್ಥ ಮಹೇಶ್.
ಗ್ರಾಮದ 25 ಪಾಯಿಂಟ್ ಗಳಲ್ಲಿ ಇಂಟರ್ ನೆಟ್ ಲಿಂಕ್ ಸೌಲಭ್ಯ ಕಲ್ಪಿಸಲಾಗಿದೆ. ಈ ಯೋಜನೆಯು ಡಿಜಿಟಲ್ ಮಾಧ್ಯಮದ ಮೂಲಕ ಶಿಕ್ಷಣ, ಆರೋಗ್ಯ ಅಥವಾ ಹಣಕಾಸು ಸೇವೆಗಳಿಗೆ ಪ್ರವೇಶವನ್ನು ಒದಗಿಸುವ ಮೂಲಕ ಇಡೀ ಗ್ರಾಮ ಸಮುದಾಯವನ್ನು ಸಬಲೀಕರಣಗೊಳಿಸುವತ್ತ ಗಮನಹರಿಸಲಾಗುತ್ತಿದೆ. ಡಿಜಿಟಲ್ ಕಲ್ಪನೆಯ ಹಳ್ಳಿಯಲ್ಲಿ, ನಿವಾಸಿಗಳು ಡಿಜಿಟಲ್ ಸಾಕ್ಷರರಾಗಲು ಪ್ರೋತ್ಸಾಹಿಸಲಾಗುತ್ತಿದೆ.
(ವರದಿ: ಎಟಿ. ವೆಂಕಟೇಶ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ