ಬೆಂಗಳೂರು (ಡಿ. 9): ದೂರಶಿಕ್ಷಣ ಪದ್ಧತಿಯನ್ನು ಮೈಸೂರಿನಲ್ಲಿರುವ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ ಮಾತ್ರ ಸೀಮಿತಗೊಳಿಸುವ ಹಾಗೂ ಬೆಂಗಳೂರು ವಿವಿ ಹೆಸರನ್ನು ಬದಲಾಯಿಸುವ ಅಂಶವೂ ಸೇರಿದಂತೆ ಉನ್ನತ ಶಿಕ್ಷಣ ಸುಧಾರಣೆಗೆ ಸಂಬಂಧಿಸಿದ ಮಹತ್ವದ ಆಡಳಿತಾತ್ಮಕ, ಕಾನೂನಾತ್ಮಕ ಸುಧಾರಣೆಗಳುಳ್ಳ ಮಸೂದೆಗೆ ವಿಧಾನಸಭೆ ಒಪ್ಪಿಗೆ ನೀಡಿದೆ. ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ಇಂದು ಸದನದಲ್ಲಿ ಈ ಅಂಶಗಳನ್ನೊಳಗೊಂಡ ʼಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಮತ್ತು ಕೆಲವು ಇತರೆ ಕಾನೂನು (ಎರಡನೇ ತಿದ್ದುಪಡಿ) ವಿಧೇಯಕ-2020ʼಯನ್ನು ಮಂಡಿಸಿದರು.
ಈ ಮಸೂದೆಯಲ್ಲಿರುವ ಅಂಶಗಳು ಹೀಗಿವೆ:
ಈ ಮೊದಲು ದೂರಶಿಕ್ಷಣವು ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿಯೂ ಲಭ್ಯವಿತ್ತು. ಇನ್ನು ಮುಂದೆ ದೂರಶಿಕ್ಷಣಕ್ಕೆಂದೇ ಮೀಸಲಾಗಿರುವ ಮೈಸೂರಿನಲ್ಲಿರುವ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ವತಿಯಿಂದ ಮಾತ್ರ ನೀಡಲಾಗುತ್ತದೆ. ಮುಕ್ತ ವಿವಿಯ ವ್ಯಾಪ್ತಿಯೂ ರಾಜ್ಯಾದ್ಯಂತ ಇದ್ದು, ಇನ್ನು ಮುಂದೆ ಇತರೆ ವಿವಿಗಳಲ್ಲಿ ದೂರಶಿಕ್ಷಣ ನೀಡುವುದನ್ನು ನಿಲ್ಲಿಸಲಾಗುವುದು.
ಬೆಂಗಳೂರಿನಲ್ಲಿ ಕೇಂದ್ರಸ್ಥಾನ ಹೊಂದಿರುವ ಸರಕಾರಿ ವಿಜ್ಞಾನ ಕಾಲೇಜು ಸಂಸ್ಥೆಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರತ್ಯೇಕಗೊಳಿಸಿ ʼಏಕಾತ್ಮಕ ಸ್ವರೂಪದ ನೃಪತುಂಗಾ ವಿವಿʼಯನ್ನು ಸ್ಥಾಪಿಸಲಾಗುತ್ತಿದ್ದು, ಇದರ ಕೇಂದ್ರಸ್ಥಾನವು ಬೆಂಗಳೂರು ನಗರದಲ್ಲೇ ಇರುತ್ತದೆ. ಗುಣಮಟ್ಟದ ಶಿಕ್ಷಣ ಹಾಗೂ ಸಂಪನ್ಮೂಲ ಕೊರತೆ ಆಗದಂತೆ ಎಲ್ಲ ವಿಶ್ವವಿದ್ಯಾಲಯಗಳಿಗೆ ಆದಾಯ ತರಿಗೆ ವಿನಾಯಿತಿ ಪ್ರಯೋಜನಗಳನ್ನು ಪಡೆದುಕೊಳ್ಳಲು ಅವಕಾಶ ನೀಡುವುದು. ಇದರಿಂದ ಎಲ್ಲ ವಿವಿಗಳಿಗೂ ಆರ್ಥಿಕ ಬಲ ಸಿಗಲಿದೆ.
ಮಹಾರಾಣಿ ಕ್ಲಸ್ಟರ್, ಬೆಂಗಳೂರು ಮತ್ತು ಮಂಡ್ಯ ಏಕೀಕೃತ ವಿವಿಗಳಿಗೆ ಉಪ ಕುಲಪತಿಗಳನ್ನು ಸರಕಾರದಿಂದಲೇ ನೇಮಕ ಮಾಡುವುದು. ಎಲ್ಲ ವಿವಿಗಳಿಗೆ ಆಡಳಿತಾಧಿಕಾರಿ ಅಥವಾ ಕುಲಸಚಿವರನ್ನಾಗಿ ಐಎಎಸ್ ಅಥವಾ ಕೆಎಎಸ್ ಅಧಿಕಾರಿಗಳನ್ನು ನೇಮಕ ಮಾಡಲು ಅವಕಾಶ ಕಲ್ಪಿಸುವುದು.
ಇದನ್ನು ಓದಿ: ಸದನವನ್ನು ಕೇಸರಿಮಯ ಮಾಡಿದರು; ನಾಳೆಯಿಂದ ಎಲ್ಲಾ ಕಲಾಪ ಬಹಿಷ್ಕಾರ: ಸಿದ್ದರಾಮಯ್ಯ
ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಹೆಸರನ್ನು ʼಬೆಂಗಳೂರು ನಗರ ವಿಶ್ವವಿದ್ಯಾಲಯʼ ಎಂದು ಮರು ನಾಮಕರಣ ಮಾಡುವುದು.
ವಿವಿಗಳಲ್ಲಿ ಕೆಲಸ ಮಾಡುವ ಲೆಕ್ಕಪತ್ರ ನಿಯಂತ್ರಕರ ಪದನಾಮವನ್ನು ʼಪ್ರಧಾನ ನಿರ್ದೇಶಕರು, ಕರ್ನಾಟಕ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆʼ ಎಂದು ಬದಲಿಸಲಾಗುವುದು.
ಸುಗ್ರೀವಾಜ್ಞೆ ಹೊರಡಿಸಲಾಗಿತ್ತು:
ಈ ಹಿಂದೆಯೇ ಸುಗ್ರೀವಾಜ್ಞೆ ಜಾರಿಗೆ ತರುವ ಮೂಲಕ ಮಸೂದೆಯಲ್ಲಿದ್ದ ಪ್ರಸ್ತಾಪಿಸಲಾಗಿರುವ ಬಹುತೇಕ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಮಹಾರಾಣಿ ಕ್ಲಸ್ಟರ್, ರಾಯಚೂರು, ಬೆಂಗಳೂರು-ಮಂಡ್ಯ ಏಕೀಕೃತ ವಿವಿಗಳಿಗೆ ಕುಲಪತಿಗಳನ್ನು ನೇಮಕ ಮಾಡಲಾಗಿತ್ತು. ಆದರೆ, ಈ ವಿವಿಗಳಿಗೆ ಕುಲ ಸಚಿವರು ಹಾಗೂ ಆಡಳಿತಾಧಿಕಾರಿಗಳನ್ನು ಸರ್ಕಾರ ನೇಮಕ ಮಾಡಬೇಕಿದೆ. ಉನ್ನತ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಇನ್ನು ಮುಂದೆ ಹೆಚ್ಚು ಶಕ್ತಿ ಬರಲಿದೆ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು. ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಮಂಡಿಸಿದ ವಿಶ್ವ ವಿದ್ಯಾಲಯ ಗಳಮಸೂದೆಗೆ ವಿಧಾನಸಭೆ ಅಂಗೀಕಾರ ನೀಡಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ